ಮತ್ತಾಯ 14:1-36

  • ದೀಕ್ಷಾಸ್ನಾನ ಮಾಡಿಸ್ತಿದ್ದ ಯೋಹಾನನ ತಲೆ ಕಡಿದ್ರು (1-12)

  • 5,000 ಜನ್ರಿಗೆ ಯೇಸು ಊಟ ಕೊಟ್ಟನು (13-21)

  • ಯೇಸು ನೀರಿನ ಮೇಲೆ ನಡೆದನು (22-33)

  • ಗೆನೆಜರೇತ್‌ ಊರಲ್ಲಿ ವಾಸಿ ಮಾಡಿದನು (34-36)

14  ಆ ಸಮಯದಲ್ಲಿ ಗಲಿಲಾಯ ಪ್ರದೇಶದ ಅಧಿಪತಿಯಾಗಿದ್ದ ಹೆರೋದ ಯೇಸು ಬಗ್ಗೆ ಕೇಳಿಸ್ಕೊಂಡ.+  ಹೆರೋದ ತನ್ನ ಸೇವಕರಿಗೆ “ದೀಕ್ಷಾಸ್ನಾನ ಮಾಡಿಸ್ತಿದ್ದ ಯೋಹಾನ ಮತ್ತೆ ಬದುಕಿ ಬಂದಿದ್ದಾನೆ. ಅವನೇ ಯೇಸು. ಅದಕ್ಕೇ ಇಂಥ ಅದ್ಭುತಗಳನ್ನ ಮಾಡೋ ಶಕ್ತಿ ಅವನಿಗಿದೆ” ಅಂದ.+  ಈ ಹೆರೋದ* ತನ್ನ ಅಣ್ಣ ಫಿಲಿಪ್ಪನ ಹೆಂಡತಿಯಾಗಿದ್ದ ಹೆರೋದ್ಯಳ ಕಾರಣ ಯೋಹಾನನನ್ನ ಹಿಡಿದು ಸರಪಳಿಯಿಂದ ಕಟ್ಟಿ ಜೈಲಿಗೆ ಹಾಕಿಸಿದ್ದ.+  ಯಾಕಂದ್ರೆ ಯೋಹಾನ ಹೆರೋದನಿಗೆ “ನೀನು ಹೆರೋದ್ಯಳನ್ನ ಮದುವೆ ಆಗಿರೋದು ತಪ್ಪು” ಅಂತ ತುಂಬ ಸಲ ಹೇಳಿದ್ದ.+  ಹೆರೋದ ಯೋಹಾನನನ್ನ ಕೊಲ್ಲಬೇಕಂತ ಇದ್ದ. ಆದ್ರೆ ಜನ ಅವನನ್ನ ಪ್ರವಾದಿ ಅಂತ ನಂಬ್ತಿದ್ದ ಕಾರಣ ಜನ್ರಿಗೆ ಹೆದ್ರಿ ಕೊಲ್ಲಲಿಲ್ಲ.+  ಹೆರೋದ ತನ್ನ ಹುಟ್ಟುಹಬ್ಬ+ ಆಚರಿಸ್ತಿದ್ದಾಗ ಹೆರೋದ್ಯಳ ಮಗಳು ನರ್ತಿಸಿ ಹೆರೋದನನ್ನ ಖುಷಿಪಡಿಸಿದಳು.+  ಆಗ ಅವನು ‘ನೀನು ಏನು ಕೇಳಿದ್ರೂ ಕೊಡ್ತೀನಿ’ ಅಂತ ಮಾತುಕೊಟ್ಟ.  ಆಗ ಅವಳ ಅಮ್ಮ ಹೇಳಿಕೊಟ್ಟ ಹಾಗೆ “ದೊಡ್ಡ ತಟ್ಟೆಯಲ್ಲಿ ಯೋಹಾನನ* ತಲೆ ತಂದುಕೊಡು”+ ಅಂದಳು.  ಇದನ್ನ ಕೇಳಿ ಅವನಿಗೆ ದುಃಖವಾದ್ರೂ ಅತಿಥಿಗಳ ಮುಂದೆ ಮಾತು ಉಳಿಸ್ಕೊಳ್ಳೋಕೆ ಯೋಹಾನನ ತಲೆ ತಂದು ಕೊಡು ಅಂತ ಅಪ್ಪಣೆ ಕೊಟ್ಟ. 10  ಒಬ್ಬ ಸೇವಕನನ್ನ ಕಳಿಸಿ ಜೈಲಲ್ಲಿ ಯೋಹಾನನ ತಲೆ ಕತ್ತರಿಸಿದ. 11  ಅದನ್ನ ದೊಡ್ಡ ತಟ್ಟೆಯಲ್ಲಿ ತಂದು ಹುಡುಗಿಗೆ ಕೊಟ್ಟ. ಅವಳು ಅದನ್ನ ಅವಳ ಅಮ್ಮನಿಗೆ ಕೊಟ್ಟಳು. 12  ಆಮೇಲೆ ಯೋಹಾನನ ಶಿಷ್ಯರು ಬಂದು ಶವ ತಗೊಂಡು ಹೋಗಿ ಹೂಣಿಟ್ಟು ಯೇಸುಗೆ ವಿಷ್ಯ ತಿಳಿಸಿದ್ರು. 13  ಇದನ್ನ ಕೇಳಿ ಯೇಸು ದೋಣಿ ಹತ್ತಿ ಏಕಾಂತವಾಗಿರೋಕೆ ದೂರದ ಸ್ಥಳಕ್ಕೆ ಹೋದನು. ಬೇರೆಬೇರೆ ಊರಲ್ಲಿದ್ದ ಜನ್ರಿಗೆ ಇದು ಗೊತ್ತಾದಾಗ ಅವರು ನಡ್ಕೊಂಡೇ ಆತನ ಹತ್ರ ಹೋದ್ರು.+ 14  ಆತನು ದಡ ಸೇರಿದಾಗ ಅಲ್ಲಿ ತುಂಬ ಜನ ಬಂದಿದ್ರು. ಅವ್ರನ್ನ ನೋಡಿ ಕನಿಕರಪಟ್ಟು+ ರೋಗಿಗಳನ್ನ ವಾಸಿಮಾಡಿದನು.+ 15  ಸಂಜೆ ಆದಾಗ ಶಿಷ್ಯರು ಆತನ ಹತ್ರ ಬಂದು “ನಾವು ತುಂಬ ದೂರ ಬಂದುಬಿಟ್ಟಿದ್ದೀವಿ. ಈಗಾಗಲೇ ತುಂಬ ಹೊತ್ತಾಗಿದೆ. ಈ ಜನ್ರನ್ನ ಕಳಿಸಿಬಿಡು. ಅವರು ಅಕ್ಕಪಕ್ಕದ ಹಳ್ಳಿಗೆ ಹೋಗಿ ಏನಾದ್ರೂ ತಗೊಂಡು ತಿನ್ನಲಿ” ಅಂದ್ರು.+ 16  ಅದಕ್ಕೆ ಯೇಸು “ಅವರು ಹೋಗೋದು ಬೇಡ. ನೀವೇ ಏನಾದ್ರೂ ತಿನ್ನೋಕೆ ಕೊಡಿ” ಅಂದನು. 17  ಶಿಷ್ಯರು ಅದಕ್ಕೆ “ನಮ್ಮ ಹತ್ರ ಐದು ರೊಟ್ಟಿ, ಎರಡು ಮೀನು ಬಿಟ್ಟು ಬೇರೇನೂ ಇಲ್ಲ” ಅಂದ್ರು. 18  ಯೇಸು “ಅದನ್ನ ತಗೊಂಡು ಬನ್ನಿ” ಅಂದನು. 19  ಜನ್ರಿಗೆ ಹುಲ್ಲಿನ ಮೇಲೆ ಕೂರೋಕೆ ಹೇಳಿದನು. ಆ ಐದು ರೊಟ್ಟಿ, ಎರಡು ಮೀನನ್ನ ತಗೊಂಡು ಆಕಾಶದ ಕಡೆ ನೋಡಿ ಪ್ರಾರ್ಥಿಸಿ+ ರೊಟ್ಟಿಗಳನ್ನ ಮುರಿದು ಶಿಷ್ಯರಿಗೆ ಕೊಟ್ಟನು. ಅವರು ಜನ್ರಿಗೆ ಹಂಚಿದ್ರು. 20  ಎಲ್ರೂ ತೃಪ್ತಿ ಆಗುವಷ್ಟು ತಿಂದ್ರು. ಶಿಷ್ಯರು ಉಳಿದ ರೊಟ್ಟಿ ತುಂಡುಗಳನ್ನ ಕೂಡಿಸಿದಾಗ 12 ಬುಟ್ಟಿ ತುಂಬ್ತು.+ 21  ಅಲ್ಲಿ ಊಟ ಮಾಡಿದವ್ರಲ್ಲಿ ಗಂಡಸರೇ ಸುಮಾರು 5,000 ಇದ್ರು. ಹೆಂಗಸ್ರೂ ಮಕ್ಕಳೂ ಇದ್ರು.+ 22  ಆಮೇಲೆ ತಕ್ಷಣ ಯೇಸು ಶಿಷ್ಯರಿಗೆ ‘ನಾನು ಈ ಜನ್ರನ್ನ ಕಳಿಸಿ ಬರ್ತೀನಿ, ನೀವು ದೋಣಿ ಹತ್ತಿ ಆಚೆದಡಕ್ಕೆ ನನಗಿಂತ ಮುಂಚೆ ಹೋಗಿ’ ಅಂದನು.+ 23  ಜನ್ರನ್ನ ಕಳಿಸಿದ ಮೇಲೆ ಯೇಸು ಪ್ರಾರ್ಥನೆ ಮಾಡೋಕೆ ಒಬ್ಬನೇ ಬೆಟ್ಟಕ್ಕೆ ಹೋದನು.+ ರಾತ್ರಿ ತುಂಬ ಹೊತ್ತಾದ್ರೂ ಆತನು ಅಲ್ಲೇ ಇದ್ದನು. 24  ಅಷ್ಟೊತ್ತಿಗಾಗಲೇ ಶಿಷ್ಯರು ದೋಣಿಯಲ್ಲಿ ದಡದಿಂದ ತುಂಬ ದೂರ ಹೋಗಿದ್ರು.* ಜೋರಾಗಿ ಗಾಳಿ ಬೀಸ್ತಾ ಇತ್ತು. ದೊಡ್ಡ ದೊಡ್ಡ ಅಲೆ ದೋಣಿಗೆ ಬಡಿತಾ ಇತ್ತು. 25  ನಸುಕಲ್ಲಿ* ಯೇಸು ಸಮುದ್ರದ ನೀರಿನ ಮೇಲೆ ನಡಿತಾ ಶಿಷ್ಯರ ಹತ್ರ ಬಂದನು. 26  ನೀರಿನ ಮೇಲೆ ನಡಿತಿರೋದು ಯಾರು ಅಂತ ಗೊತ್ತಾಗದೆ ಶಿಷ್ಯರು ಭಯಪಟ್ಟು “ಅಯ್ಯೋ ಅಲ್ಲಿ ಏನೋ ಇದೆ” ಅಂತ ಚೀರಿದ್ರು. 27  ತಕ್ಷಣ ಯೇಸು ಅವ್ರಿಗೆ “ನಾನೇ, ಭಯಪಡಬೇಡಿ” ಅಂದನು.+ 28  ಆಗ ಪೇತ್ರ “ಸ್ವಾಮಿ, ಅದು ನೀನೇ ಆಗಿದ್ರೆ ನೀರಿನ ಮೇಲೆ ನಡ್ಕೊಂಡು ನಿನ್ನ ಹತ್ರ ಬರೋಕೆ ನಂಗೆ ಅಪ್ಪಣೆಕೊಡು” ಅಂದ. 29  ಯೇಸು “ಬಾ” ಅಂದಾಗ ಪೇತ್ರ ದೋಣಿ ಇಳಿದು ನೀರಿನ ಮೇಲೆ ನಡಿತಾ ಯೇಸು ಕಡೆ ಹೋದ. 30  ಆದ್ರೆ ಬಿರುಗಾಳಿ ನೋಡಿ ಪೇತ್ರನಿಗೆ ಭಯ ಆಗಿ ನೀರಲ್ಲಿ ಮುಳುಗ್ತಾ “ಸ್ವಾಮಿ ನನ್ನನ್ನ ಕಾಪಾಡು” ಅಂತ ಚೀರಿದ. 31  ತಕ್ಷಣ ಯೇಸು ಕೈಚಾಚಿ ಅವನನ್ನ ಹಿಡಿದು “ನಂಬಿಕೆ ಕೊರತೆ ಇರುವವನೇ, ಯಾಕೆ ಸಂಶಯಪಟ್ಟೆ?” ಅಂತ ಕೇಳಿದನು.+ 32  ಅವರಿಬ್ರು ದೋಣಿ ಹತ್ತಿದಾಗ ಬಿರುಗಾಳಿ ನಿಂತುಹೋಯ್ತು. 33  ಆಗ ದೋಣಿಯಲ್ಲಿ ಇದ್ದವರು “ನೀನು ನಿಜವಾಗ್ಲೂ ದೇವರ ಮಗ” ಅಂತ ಹೇಳ್ತಾ ಬಗ್ಗಿ ನಮಸ್ಕರಿಸಿದ್ರು. 34  ಅವರು ಸಮುದ್ರ ದಾಟಿ ಗೆನೆಜರೇತ್‌ ಊರಿಗೆ ಬಂದ್ರು.+ 35  ಆ ಊರಿನವರು ಯೇಸುವನ್ನ ಗುರುತಿಸಿ ಸುತ್ತಮುತ್ತ ಇರೋ ಊರುಗಳಿಗೆ ಯೇಸು ಬಂದಿದ್ದಾನೆ ಅನ್ನೋ ಸುದ್ದಿ ಮುಟ್ಟಿಸಿದ್ರು. ಆಗ ಜನ ಕಾಯಿಲೆ ಬಿದ್ದವ್ರನ್ನೆಲ್ಲ ಆತನ ಹತ್ರ ಕರ್ಕೊಂಡು ಬಂದ್ರು. 36  ಅವರು ಯೇಸುಗೆ ‘ನಿನ್ನ ಬಟ್ಟೆ ತುದಿಯನ್ನಾದ್ರೂ ಮುಟ್ಟೋಕೆ ನಮಗೆ ಅವಕಾಶ ಕೊಡು’+ ಅಂತ ಬೇಡ್ಕೊಂಡ್ರು. ಆ ರೀತಿ ಮುಟ್ಟಿದವರಿಗೆಲ್ಲ ಪೂರ್ತಿ ವಾಸಿ ಆಯ್ತು.

ಪಾದಟಿಪ್ಪಣಿ

ಇವನು ಹೆರೋದ ಅಂತಿಪ. ಪದವಿವರಣೆ ನೋಡಿ.
ಅಥವಾ “ದೀಕ್ಷಾಸ್ನಾನ ಮಾಡಿಸ್ತಿದ್ದ ಯೋಹಾನನ.”
ಅಕ್ಷ. “ಎಷ್ಟೋ ಸ್ಟೇಡಿಯ.” ಒಂದು ಸ್ಟೇಡಿಯಂ=185 ಮೀ (606.95 ಅಡಿ)
ಅಕ್ಷ. “ನಾಲ್ಕನೇ ಜಾವ.” ನಾಲ್ಕನೇ ಜಾವ ಅಂದ್ರೆ ಬೆಳಿಗ್ಗೆ ಸುಮಾರು 3 ಗಂಟೆಯಿಂದ 6 ಗಂಟೆ.