ಯೋಹಾನನಿಗೆ ಕೊಟ್ಟ ಪ್ರಕಟನೆ 13:1-18

  • ಸಮುದ್ರದಿಂದ ಬಂದ ಏಳು ತಲೆಯ ಕಾಡುಪ್ರಾಣಿ (1-10)

  • ಭೂಮಿಯಿಂದ ಬಂದ ಎರಡು ಕೊಂಬಿನ ಕಾಡುಪ್ರಾಣಿ (11-13)

  • ಏಳು ತಲೆಯ ಕಾಡುಪ್ರಾಣಿಯ ಮೂರ್ತಿ (14, 15)

  • ಕಾಡುಪ್ರಾಣಿಯ ಗುರುತು ಮತ್ತು ಸಂಖ್ಯೆ (16-18)

13  ಆ ಘಟಸರ್ಪ ಸಮುದ್ರದ ಮರಳಿನ ಮೇಲೆ ಅಲ್ಲಾಡದೆ ನಿಲ್ತು. ಆಗ ಒಂದು ಕಾಡುಪ್ರಾಣಿ+ ಸಮುದ್ರದಿಂದ ಮೇಲೆ ಬರೋದನ್ನ ನೋಡ್ದೆ.+ ಅದಕ್ಕೆ ಹತ್ತು ಕೊಂಬು, ಏಳು ತಲೆ, ಕೊಂಬುಗಳ ಮೇಲೆ ಹತ್ತು ಕಿರೀಟ ಇತ್ತು. ಅದ್ರ ತಲೆಗಳ ಮೇಲೆ ದೇವರಿಗೆ ಅವಮಾನ ಮಾಡೋ ಹೆಸ್ರುಗಳು ಇದ್ವು.  ನಾನು ನೋಡಿದ ಆ ಕಾಡುಪ್ರಾಣಿ ಚಿರತೆ ತರ ಇತ್ತು. ಅದ್ರ ಕಾಲುಗಳು ಕರಡಿ ತರ, ಬಾಯಿ ಸಿಂಹದ ತರ ಇತ್ತು. ಘಟಸರ್ಪ+ ಆ ಪ್ರಾಣಿಗೆ ತನ್ನ ಶಕ್ತಿ, ತನ್ನ ಸಿಂಹಾಸನ ಮತ್ತು ತುಂಬ ಅಧಿಕಾರ ಕೊಡ್ತು.+  ಆ ಕಾಡುಪ್ರಾಣಿಯ ಒಂದು ತಲೆಗೆ ಜೋರಾಗಿ ಏಟಾಗಿದ್ದನ್ನ ನಾನು ನೋಡ್ದೆ. ಆದ್ರೆ ಆ ಗಾಯ ವಾಸಿಯಾಗಿತ್ತು.+ ಭೂಮಿಯಲ್ಲಿರೋ ಜನ್ರೆಲ್ಲ ಆ ಕಾಡುಪ್ರಾಣಿಯನ್ನ ಮೆಚ್ಚಿ ಅದ್ರ ಹಿಂದೆ ಹೋದ್ರು.  ಘಟಸರ್ಪ ಆ ಕಾಡುಪ್ರಾಣಿಗೆ ತುಂಬ ಅಧಿಕಾರ ಕೊಟ್ಟಿದ್ರಿಂದ ಜನ ಆ ಘಟಸರ್ಪವನ್ನ ಆರಾಧಿಸಿದ್ರು. ಅಷ್ಟೇ ಅಲ್ಲ ಅವರು “ಈ ಕಾಡುಪ್ರಾಣಿ ತರ ಯಾರಿದ್ದಾರೆ? ಇದ್ರ ಜೊತೆ ಯಾರಿಗೆ ಯುದ್ಧ ಮಾಡಕ್ಕಾಗುತ್ತೆ?” ಅಂತ ಹೇಳಿ ಆ ಕಾಡುಪ್ರಾಣಿಯನ್ನೂ ಆರಾಧಿಸಿದ್ರು.  ಈ ಕಾಡುಪ್ರಾಣಿಗೆ 42 ತಿಂಗಳ ತನಕ ಕೊಚ್ಕೊಳ್ಳೋಕೆ ಶಕ್ತಿ ಸಿಕ್ತು. ದೇವರಿಗೆ ಅವಮಾನ ಮಾಡೋ ಮಾತುಗಳನ್ನ ಹೇಳೋಕೂ ಅಧಿಕಾರ ಸಿಕ್ತು.+  ಅದು ಬಾಯಿ ತೆಗೆದು ದೇವರಿಗೆ ಅವಮಾನ ಮಾಡೋ ಮಾತುಗಳನ್ನ ಹೇಳ್ತು.+ ಅಂದ್ರೆ ದೇವರ ಹೆಸ್ರಿಗೆ, ಆತನ ವಾಸಸ್ಥಳಕ್ಕೆ ಮತ್ತು ಸ್ವರ್ಗದಲ್ಲಿ ವಾಸಿಸುವವ್ರಿಗೆ ಅವಮಾನ ಮಾಡ್ತು.+  ಅಷ್ಟೇ ಅಲ್ಲ ಪವಿತ್ರ ಜನ್ರ ಜೊತೆ ಯುದ್ಧ ಮಾಡಿ ಅವ್ರನ್ನ ಸೋಲಿಸೋಕೆ ಅದಕ್ಕೆ ಅನುಮತಿ ಸಿಕ್ತು.+ ಎಲ್ಲ ಕುಲ, ಜಾತಿ, ಭಾಷೆ, ದೇಶಗಳ ಮೇಲೆ ಅಧಿಕಾರ ಸಿಕ್ತು.  ಭೂಮಿಯಲ್ಲಿ ಇರುವವರೆಲ್ಲ ಅದನ್ನ ಆರಾಧಿಸ್ತಾರೆ. ಲೋಕ ಶುರು ಆದಾಗಿಂದ ಇಲ್ಲಿ ತನಕ ಅವ್ರಲ್ಲಿ ಒಬ್ರ ಹೆಸ್ರನ್ನೂ ಜೀವದ ಪುಸ್ತಕದಲ್ಲಿ ಬರೆದಿಲ್ಲ.+ ಈ ಪುಸ್ತಕ ಬಲಿಯಾಗಿರೋ ಕುರಿಮರಿಗೆ ಸೇರಿದ್ದು.+  ಚೆನ್ನಾಗಿ ಕೇಳಿಸ್ಕೊಂಡು ಅರ್ಥ ಮಾಡ್ಕೊಳ್ಳಿ.+ 10  ಯಾವನಿಗಾದ್ರೂ ಕೈದಿಯಾಗಿ ಹೋಗಬೇಕಿದ್ರೆ ಅವನು ಕೈದಿಯಾಗಿ ಹೋಗ್ತಾನೆ. ಯಾವನಾದ್ರೂ ಕತ್ತಿಯಿಂದ ಕೊಂದಿದ್ರೆ ಅವನು ಕತ್ತಿಯಿಂದ ಸಾಯಬೇಕು.*+ ಅದಕ್ಕೇ ಪವಿತ್ರ ಜನ್ರಿಗೆ+ ತಾಳ್ಮೆ,+ ನಂಬಿಕೆ+ ಬೇಕು. 11  ಆಮೇಲೆ ನಾನು ಇನ್ನೊಂದು ಕಾಡುಪ್ರಾಣಿ ಭೂಮಿಯಿಂದ ಮೇಲೆ ಬರೋದನ್ನ ನೋಡ್ದೆ. ಅದಕ್ಕೆ ಕುರಿಮರಿಗೆ ಇರೋ ತರ ಎರಡು ಕೊಂಬಿತ್ತು, ಆದ್ರೆ ಅದು ಒಂದು ಘಟಸರ್ಪದ ತರ ಮಾತಾಡೋಕೆ ಶುರುಮಾಡ್ತು.+ 12  ಈ ಪ್ರಾಣಿ ಮೊದಲನೇ ಕಾಡುಪ್ರಾಣಿಗಿದ್ದ+ ಅಧಿಕಾರವನ್ನ ಅದ್ರ ಮುಂದೆನೇ ಚಲಾಯಿಸೋಕೆ ಶುರುಮಾಡ್ತು. ದೊಡ್ಡ ಹೊಡೆತ ಬಿದ್ದು ಗಾಯ ವಾಸಿಯಾಗಿದ್ದ ಆ ಮೊದಲನೇ ಕಾಡುಪ್ರಾಣಿಯನ್ನ+ ಭೂಮಿ ಮತ್ತು ಅದ್ರಲ್ಲಿ ಇರುವವ್ರೆಲ್ಲ ಆರಾಧಿಸೋ ಹಾಗೆ ಈ ಪ್ರಾಣಿ ಮಾಡುತ್ತೆ. 13  ಅದು ದೊಡ್ಡದೊಡ್ಡ ಅದ್ಭುತಗಳನ್ನ ಮಾಡುತ್ತೆ. ಮನುಷ್ಯರು ನೋಡ್ತಾ ಇರುವಾಗಲೇ ಆಕಾಶದಿಂದ ಬೆಂಕಿ ಭೂಮಿಗೆ ಬೀಳೋ ತರ ಮಾಡುತ್ತೆ. 14  ಮೊದಲನೇ ಕಾಡುಪ್ರಾಣಿಯ ಕಣ್ಮುಂದೆನೇ ಯಾವ ಅದ್ಭುತಗಳನ್ನ ಮಾಡೋಕೆ ಅದಕ್ಕೆ ಅಧಿಕಾರ ಸಿಕ್ತೋ ಅದ್ರಿಂದ ಭೂಮಿ ಮೇಲೆ ಇರೋ ಜನ್ರನ್ನ ಅದು ಮೋಸ ಮಾಡುತ್ತೆ. ಅದೇ ಸಮಯದಲ್ಲಿ, ಕತ್ತಿಯಿಂದ ಗಾಯ ಆಗಿ ವಾಸಿಯಾಗಿರೋ+ ಆ ಕಾಡುಪ್ರಾಣಿಯ ಮೂರ್ತಿಯನ್ನ+ ಮಾಡು ಅಂತ ಭೂಮಿಯಲ್ಲಿ ಇರುವವ್ರಿಗೆ ಹೇಳುತ್ತೆ. 15  ಅಷ್ಟೇ ಅಲ್ಲ ಆ ಮೊದಲನೇ ಕಾಡುಪ್ರಾಣಿಯ ಮೂರ್ತಿಗೆ ಜೀವ ಕೊಡೋಕೆ ಅದಕ್ಕೆ ಅನುಮತಿ ಸಿಕ್ತು. ಆ ಕಾಡುಪ್ರಾಣಿಯ ಮೂರ್ತಿ ಮಾತಾಡೋ ತರ ಮಾಡೋಕೆ ಮತ್ತು ಆ ಮೂರ್ತಿಯನ್ನ ಆರಾಧಿಸೋಕೆ ಒಪ್ಕೊಳ್ಳದ ಜನ್ರನ್ನ ಸಾಯಿಸೋಕೆ ಅನುಮತಿ ಸಿಕ್ತು. 16  ಚಿಕ್ಕವರು-ದೊಡ್ಡವರು ಶ್ರೀಮಂತರು-ಬಡವರು ಸ್ವತಂತ್ರರು-ದಾಸರು ಹೀಗೆ ಎಲ್ರೂ ಅವ್ರ ಬಲಗೈಯಲ್ಲಿ ಅಥವಾ ಹಣೆ ಮೇಲೆ ಒಂದು ಗುರುತು ಹಾಕೊಳ್ಳಬೇಕು ಅಂತ ಅದು ಒತ್ತಾಯ ಮಾಡ್ತು.+ 17  ಯಾರಿಗಾದ್ರೂ ಈ ಗುರುತು ಅಂದ್ರೆ ಕಾಡುಪ್ರಾಣಿಯ ಹೆಸ್ರು+ ಅಥವಾ ಹೆಸ್ರಿನ ಸಂಖ್ಯೆ ಹಣೆ ಮೇಲೆ ಇಲ್ಲದಿದ್ರೆ+ ಅವರು ಕೊಂಡ್ಕೊಳ್ಳಕ್ಕಾಗಲಿ ಮಾರಕ್ಕಾಗಲಿ ಆಗಲ್ಲ. 18  ತಿಳುವಳಿಕೆ ಇರುವವನು ಕಾಡುಪ್ರಾಣಿಯ ಸಂಖ್ಯೆಯನ್ನ ಲೆಕ್ಕ ಮಾಡಬೇಕು. ಅದು ಒಬ್ಬ ಮನುಷ್ಯನ ಸಂಖ್ಯೆ. ಆ ಸಂಖ್ಯೆ 666.+ ಬುದ್ಧಿ ಇರುವವರು ಮಾತ್ರ ಇದನ್ನ ಅರ್ಥ ಮಾಡ್ಕೊಳ್ತಾರೆ.

ಪಾದಟಿಪ್ಪಣಿ

ಬಹುಶಃ, “ಯಾವನಾದ್ರೂ ಕತ್ತಿಯಿಂದ ಸಾಯಬೇಕಿದ್ರೆ.”