ಧರ್ಮೋಪದೇಶಕಾಂಡ 27:1-26

  • ಕಲ್ಲುಗಳ ಮೇಲೆ ಎಲ್ಲ ನಿಯಮಗಳನ್ನ ಬರಿಬೇಕು (1-10)

  • ಏಲಾಬ್‌ ಮತ್ತು ಗೆರಿಜ್ಜೀಮ್‌ ಬೆಟ್ಟದ ಹತ್ರ (11-14)

  • ಶಾಪಗಳನ್ನ ಮತ್ತೆ ಹೇಳಿದ್ದು (15-26)

27  ಆಮೇಲೆ ಮೋಶೆ ಮತ್ತು ಇಸ್ರಾಯೇಲ್ಯರ ಹಿರಿಯರು ಜನ್ರ ಮುಂದೆ ನಿಂತ್ರು. ಮೋಶೆ ಜನ್ರಿಗೆ “ನಾನು ಇವತ್ತು ಕೊಡೋ ಎಲ್ಲಾ ಆಜ್ಞೆಗಳನ್ನ ನೀವು ಪಾಲಿಸಬೇಕು.  ನೀವು ಯೋರ್ದನ್‌ ನದಿ ದಾಟಿ ನಿಮ್ಮ ದೇವರಾದ ಯೆಹೋವ ಕೊಡೋ ದೇಶಕ್ಕೆ ಹೋದ ತಕ್ಷಣ ದೊಡ್ಡ ದೊಡ್ಡ ಕಲ್ಲುಗಳನ್ನ ನಿಲ್ಲಿಸಿ ಸುಣ್ಣ ಹಚ್ಚಬೇಕು.*+  ನೀವು ಯೋರ್ದನ್‌ ನದಿ ದಾಟಿದಾಗ ಆ ಕಲ್ಲುಗಳ ಮೇಲೆ ಈ ನಿಯಮ ಪುಸ್ತಕದಲ್ಲಿ ಇರೋ ಎಲ್ಲಾ ನಿಯಮಗಳನ್ನ ಬರಿಬೇಕು. ಹಾಗೆ ಮಾಡಿದ್ರೆ ಮಾತ್ರ ನಿಮ್ಮ ದೇವರಾದ ಯೆಹೋವ ಕೊಡೋ ದೇಶಕ್ಕೆ ಅಂದ್ರೆ ನಿಮ್ಮ ಪೂರ್ವಜರ ದೇವರಾದ ಯೆಹೋವ ನಿಮಗೆ ಕೊಡ್ತೀನಿ ಅಂತ ಮಾತುಕೊಟ್ಟ ಹಾಲೂ ಜೇನೂ ಹರಿಯೋ ದೇಶಕ್ಕೆ ಹೋಗ್ತೀರ.+  ಯೋರ್ದನ್‌ ನದಿ ದಾಟಿ ಹೋದ್ಮೇಲೆ ನಾನು ಇವತ್ತು ನಿಮಗೆ ಹೇಳಿದ ಹಾಗೇ ದೊಡ್ಡ ದೊಡ್ಡ ಕಲ್ಲುಗಳನ್ನ ಏಬಾಲ್‌ ಬೆಟ್ಟದ+ ಮೇಲೆ ನಿಲ್ಲಿಸಿ ಸುಣ್ಣ ಹಚ್ಚಬೇಕು.  ಅಲ್ಲಿ ನಿಮ್ಮ ದೇವರಾದ ಯೆಹೋವನಿಗಾಗಿ ಕಲ್ಲುಗಳಿಂದ ಒಂದು ಯಜ್ಞವೇದಿ ಕಟ್ಟಬೇಕು. ಆ ಕಲ್ಲುಗಳನ್ನ ಕಬ್ಬಿಣದ ಸಾಧನಗಳಿಂದ ಕೆತ್ತಿರಬಾರದು.+  ಉಳಿ ತಾಗದ ಇಡೀ ಕಲ್ಲುಗಳಿಂದ ನಿಮ್ಮ ದೇವರಾದ ಯೆಹೋವನಿಗಾಗಿ ಆ ಯಜ್ಞವೇದಿ ಕಟ್ಟಬೇಕು. ಅದ್ರ ಮೇಲೆ ನಿಮ್ಮ ದೇವರಾದ ಯೆಹೋವನಿಗೆ ಸರ್ವಾಂಗಹೋಮ ಬಲಿಗಳನ್ನ ಅರ್ಪಿಸಬೇಕು.  ಸಮಾಧಾನ ಬಲಿಗಳನ್ನ+ ಅರ್ಪಿಸಿ ಅಲ್ಲೇ ತಿನ್ನಬೇಕು.+ ನಿಮ್ಮ ದೇವರಾದ ಯೆಹೋವನ ಮುಂದೆ ಸಂತೋಷವಾಗಿ ಇರಬೇಕು.+  ನಿಯಮ ಪುಸ್ತಕದಲ್ಲಿ ಇರೋ ಎಲ್ಲ ಮಾತುಗಳನ್ನ ಆ ಕಲ್ಲುಗಳ ಮೇಲೆ ಸ್ಪಷ್ಟವಾಗಿ ಬರಿಬೇಕು”+ ಅಂದ.  ಆಮೇಲೆ ಎಲ್ಲ ಇಸ್ರಾಯೇಲ್ಯರಿಗೆ ಮೋಶೆ ಮತ್ತೆ ಲೇವಿಯರಾದ ಪುರೋಹಿತರು “ಇಸ್ರಾಯೇಲ್ಯರೇ, ಮೌನವಾಗಿದ್ದುಹೇಳೋದಕ್ಕೆ ಗಮನ ಕೊಡಿ. ಇವತ್ತು ನೀವು ನಿಮ್ಮ ದೇವರಾದ ಯೆಹೋವನ ಜನರಾಗಿದ್ದೀರ.+ 10  ನಿಮ್ಮ ದೇವರಾದ ಯೆಹೋವ ಹೇಳೋ ಮಾತನ್ನ ಕೇಳಿ. ಇವತ್ತು ನಿಮಗೆ ಹೇಳೋ ಆತನ ಆಜ್ಞೆಗಳನ್ನ ನಿಯಮಗಳನ್ನ ಪಾಲಿಸಬೇಕು”+ ಅಂದ್ರು. 11  ಆ ದಿನ ಮೋಶೆ ಜನ್ರಿಗೆ ಹೇಳಿದ್ದು ಏನಂದ್ರೆ 12  “ಯೋರ್ದನ್‌ ನದಿ ದಾಟಿದ ಮೇಲೆ ಸಿಮೆಯೋನ್‌, ಲೇವಿ, ಯೆಹೂದ, ಇಸ್ಸಾಕಾರ್‌, ಯೋಸೇಫ್‌, ಬೆನ್ಯಾಮೀನ್‌ ಕುಲದವರು ಗೆರಿಜ್ಜೀಮ್‌ ಬೆಟ್ಟದ+ ಹತ್ರ ನಿಂತು ಜನ್ರಿಗೆ ಆಶೀರ್ವಾದ ಮಾಡಬೇಕು. 13  ರೂಬೇನ್‌, ಗಾದ್‌, ಅಶೇರ್‌, ಜೆಬುಲೂನ್‌, ದಾನ್‌, ನಫ್ತಾಲಿ ಕುಲದವರು ಏಬಾಲ್‌ ಬೆಟ್ಟದ+ ಹತ್ರ ನಿಂತು ಶಾಪ ಹಾಕಬೇಕು. 14  ಲೇವಿಯರು ಇಸ್ರಾಯೇಲ್ಯರಿಗೆ ಗಟ್ಟಿಯಾಗಿ ಹೀಗೆ ಹೇಳಬೇಕು:+ 15  ‘ಯೆಹೋವ ಅಸಹ್ಯಪಡೋ+ ವಸ್ತುಗಳನ್ನ ಅಂದ್ರೆ ಕರಕುಶಲಗಾರರ* ಕೈಕೆಲಸ ಆಗಿರೋ ಕೆತ್ತಿದ ಮೂರ್ತಿಗಳನ್ನ,+ ಅಚ್ಚಲ್ಲಿ ಲೋಹ ಹೊಯ್ದು ಮೂರ್ತಿಗಳನ್ನ+ ಮಾಡೋನಿಗೆ ಶಾಪ ತಟ್ಲಿ. ಅವುಗಳನ್ನ ಗುಟ್ಟಾಗಿ ಇಡುವವನಿಗೂ ಶಾಪ ತಟ್ಲಿ.’ (ಅದಕ್ಕೆ ಜನ್ರೆಲ್ಲ ‘ಆಮೆನ್‌’* ಅನ್ನಬೇಕು.) 16  ‘ಅಪ್ಪಅಮ್ಮನನ್ನ ಕೀಳಾಗಿ ನೋಡುವವನಿಗೆ ಶಾಪ ತಟ್ಲಿ.’+ (ಅದಕ್ಕೆ ಜನ್ರೆಲ್ಲ ‘ಆಮೆನ್‌’ ಅನ್ನಬೇಕು.) 17  ‘ನೆರೆಯವನ ಜಮೀನಿನ ಗಡಿ ಸರಿಸುವವನಿಗೆ* ಶಾಪ ತಟ್ಲಿ.’+ (ಅದಕ್ಕೆ ಜನ್ರೆಲ್ಲ ‘ಆಮೆನ್‌’ ಅನ್ನಬೇಕು.) 18  ‘ಕುರುಡನನ್ನ ದಾರಿ ತಪ್ಪಿಸುವವನಿಗೆ ಶಾಪ ತಟ್ಲಿ.’+ (ಅದಕ್ಕೆ ಜನ್ರೆಲ್ಲ ‘ಆಮೆನ್‌’ ಅನ್ನಬೇಕು.) 19  ‘ವಿದೇಶಿಯರಿಗೆ, ಅನಾಥರಿಗೆ* ಅಥವಾ ವಿಧವೆಯರಿಗೆ+ ಅನ್ಯಾಯವಾಗಿ ತೀರ್ಪು ಕೊಡುವವನಿಗೆ ಶಾಪ ತಟ್ಲಿ.’+ (ಅದಕ್ಕೆ ಜನ್ರೆಲ್ಲ ‘ಆಮೆನ್‌’ ಅನ್ನಬೇಕು.) 20  ‘ತಂದೆಯ ಹೆಂಡತಿಯನ್ನ ಕೂಡಿ ತನ್ನ ತಂದೆಗೆ ಅವಮಾನ ಮಾಡುವವನಿಗೆ ಶಾಪ ತಟ್ಲಿ.’+ (ಅದಕ್ಕೆ ಜನ್ರೆಲ್ಲ ‘ಆಮೆನ್‌’ ಅನ್ನಬೇಕು.) 21  ‘ಪ್ರಾಣಿ ಜೊತೆ ಸಂಭೋಗ ಮಾಡುವವನಿಗೆ ಶಾಪ ತಟ್ಲಿ.’+ (ಅದಕ್ಕೆ ಜನ್ರೆಲ್ಲ ‘ಆಮೆನ್‌’ ಅನ್ನಬೇಕು.) 22  ‘ಅಕ್ಕತಂಗಿಯನ್ನ ಕೂಡುವವನಿಗೆ, ತಂದೆಯ ಮಗಳನ್ನ ಅಥವಾ ತಾಯಿಯ ಮಗಳನ್ನ ಕೂಡುವವನಿಗೆ ಶಾಪ ತಟ್ಲಿ.’+ (ಅದಕ್ಕೆ ಜನ್ರೆಲ್ಲ ‘ಆಮೆನ್‌’ ಅನ್ನಬೇಕು.) 23  ‘ಹೆಂಡತಿಯ ತಾಯಿಯನ್ನ ಕೂಡುವವನಿಗೆ ಶಾಪ ತಟ್ಲಿ.’+ (ಅದಕ್ಕೆ ಜನ್ರೆಲ್ಲ ‘ಆಮೆನ್‌’ ಅನ್ನಬೇಕು.) 24  ‘ಹೊಂಚುಹಾಕಿ ಒಬ್ಬನನ್ನ ಕೊಲ್ಲುವವನಿಗೆ ಶಾಪ ತಟ್ಲಿ.’+ (ಅದಕ್ಕೆ ಜನ್ರೆಲ್ಲ ‘ಆಮೆನ್‌’ ಅನ್ನಬೇಕು.) 25  ‘ನಿರಪರಾಧಿಯನ್ನ ಕೊಲ್ಲೋಕೆ ಲಂಚ ತಗೊಳ್ಳುವವನಿಗೆ ಶಾಪ ತಟ್ಲಿ.’+ (ಅದಕ್ಕೆ ಜನ್ರೆಲ್ಲ ‘ಆಮೆನ್‌’ ಅನ್ನಬೇಕು.) 26  ‘ಈ ನಿಯಮ ಪುಸ್ತಕದಲ್ಲಿ ಇರೋ ನಿಯಮಗಳನ್ನ ಪಾಲಿಸದೇ ಇರುವವನಿಗೆ ಶಾಪ ತಟ್ಲಿ.’+ (ಅದಕ್ಕೆ ಜನ್ರೆಲ್ಲ ‘ಆಮೆನ್‌’ ಅನ್ನಬೇಕು.)

ಪಾದಟಿಪ್ಪಣಿ

ಅಥವಾ “ಗಿಲಾವು ಮಾಡಬೇಕು.”
ಅಥವಾ “ಲೋಹದ ಕೆಲಸ, ಮರದ ಕೆಲಸ ಮಾಡುವವನ.”
ಅಥವಾ “ಹಾಗೇ ಆಗ್ಲಿ.”
ಅಥವಾ “ಅವನ ಆಸ್ತಿಯನ್ನ ಅತಿಕ್ರಮಿಸುವವನಿಗೆ.”
ಅಥವಾ “ತಂದೆ ಇಲ್ಲದ ಮಕ್ಕಳಿಗೆ.”