ಧರ್ಮೋಪದೇಶಕಾಂಡ 25:1-19
25 ಇಬ್ರ ಮಧ್ಯ ಜಗಳ ಆದ್ರೆ ನ್ಯಾಯಾಧೀಶರ ಹತ್ರ ಹೋಗಬೇಕು.+ ಅವರು ವಿಚಾರಣೆ ಮಾಡಿ ತಪ್ಪಿಲ್ಲದವನನ್ನ ನಿರಪರಾಧಿ ಅಂತ, ಕೆಟ್ಟವನನ್ನ ಅಪರಾಧಿ ಅಂತ ತೀರ್ಪು ಕೊಡಬೇಕು.+
2 ಆ ಕೆಟ್ಟವನಿಗೆ ಏಟು ಕೊಡಬೇಕು ಅಂತ ತೀರ್ಮಾನ ಮಾಡಿದ್ರೆ+ ನ್ಯಾಯಾಧೀಶ ತನ್ನ ಕಣ್ಮುಂದೆನೇ ಅವನನ್ನ ಬೋರಲು ಮಲಗಿಸಿ ಹೊಡೆಸಬೇಕು. ಅಪರಾಧಕ್ಕೆ ತಕ್ಕ ಹಾಗೆ ಅವನಿಗೆ ಎಷ್ಟು ಏಟು ಕೊಡಬೇಕು ಅಂತ ತೀರ್ಮಾನ ಮಾಡಬೇಕು.
3 ಜಾಸ್ತಿ ಅಂದ್ರೆ 40 ಏಟು ಕೊಡಬಹುದು,+ ಅದಕ್ಕಿಂತ ಜಾಸ್ತಿ ಕೊಡಬಾರದು. ಜಾಸ್ತಿ ಏಟು ಕೊಡ್ತಾ ಇದ್ರೆ ಆ ನಿಮ್ಮ ಸಹೋದರನಿಗೆ ಅವಮಾನ ಆಗುತ್ತೆ.
4 ಹೋರಿ ಕಣ ತುಳಿವಾಗ ಧಾನ್ಯ ತಿನ್ನುತ್ತೆ ಅಂತ ಬಾಯಿ ಕಟ್ಟಬಾರದು.+
5 ಒಡಹುಟ್ಟಿದ ಅಣ್ಣತಮ್ಮಂದಿರು ಒಂದೇ ಜಾಗದಲ್ಲಿ ಇದ್ದು ಅವ್ರಲ್ಲಿ ಒಬ್ಬ ತೀರಿಹೋದ್ರೆ ಅವನಿಗೆ ಮಗ ಇಲ್ಲದಿದ್ರೆ ಅವನ ಹೆಂಡತಿ ಗಂಡನ ಕುಟುಂಬಕ್ಕೆ ಸೇರಿರದ ಯಾವ ಪುರುಷನನ್ನೂ ಮದುವೆ ಆಗಬಾರದು. ತೀರಿಹೋದ ಅವಳ ಗಂಡನ ಒಡಹುಟ್ಟಿದವನು ತನ್ನ ಕರ್ತವ್ಯ ಪೂರೈಸಬೇಕು. ಆ ವಿಧವೆನ ಮದುವೆ ಆಗಬೇಕು.+
6 ಅವನಿಗೆ ಅವಳಿಂದ ಹುಟ್ಟೋ ಮೊದಲ ಮಗನನ್ನ ತೀರಿಹೋದ ಅವನ ಸಹೋದರನ ಮಗ ಅಂತ ಅನ್ಕೊಬೇಕು.+ ಆಗ ತೀರಿಹೋದವನ ಹೆಸ್ರು ಇಸ್ರಾಯೇಲ್ಯರ ಮಧ್ಯದಿಂದ ಅಳಿಸಿ ಹೋಗಲ್ಲ.+
7 ತೀರಿಹೋದವನ ಸಹೋದರನಿಗೆ ಆ ವಿಧವೆನ ಮದುವೆ ಆಗೋಕೆ ಇಷ್ಟ ಇಲ್ಲದಿದ್ರೆ ಅವಳು ಪಟ್ಟಣದ ಬಾಗಿಲ ಹತ್ರ ಇರೋ ಹಿರಿಯರ ಹತ್ರ ಹೋಗಿ ‘ನನ್ನ ಗಂಡನ ಸಹೋದರ ತನ್ನ ಕರ್ತವ್ಯ ಮಾಡೋಕೆ, ನನ್ನ ಮದುವೆ ಆಗೋಕೆ ಒಪ್ತಿಲ್ಲ. ತನ್ನ ಒಡಹುಟ್ಟಿದವನ ಹೆಸ್ರನ್ನ ಇಸ್ರಾಯೇಲ್ಯರ ಮಧ್ಯ ಉಳಿಸೋಕೆ ಅವನಿಗಿಷ್ಟ ಇಲ್ಲ’ ಅಂತ ಹೇಳಬೇಕು.
8 ಆಗ ಆ ಪಟ್ಟಣದ ಹಿರಿಯರು ಅವನನ್ನ ಕರೆದು ಮಾತಾಡಬೇಕು. ಆಗ್ಲೂ ಅವನು ಒಪ್ಪದೆ ‘ನನಗೆ ಅವಳನ್ನ ಮದುವೆ ಆಗೋಕೆ ಇಷ್ಟ ಇಲ್ಲ’ ಅಂದ್ರೆ
9 ಅವಳು ಆ ಹಿರಿಯರ ಮುಂದೆನೇ ಅವನ ಕಾಲಿಂದ ಚಪ್ಪಲಿ ತೆಗೆದು,+ ಅವನ ಮುಖದ ಮೇಲೆ ಉಗುಳಿ ‘ಸಹೋದರನ ವಂಶ ಉಳಿಸೋಕೆ ಇಷ್ಟ ಇಲ್ಲದವನಿಗೆ ಹೀಗೇ ಆಗಬೇಕು’ ಅಂತ ಹೇಳಬೇಕು.
10 ಮುಂದೆ ಅವನ ಕುಟುಂಬದ ಹೆಸ್ರು, ‘ಚಪ್ಪಲಿ ಬಿಚ್ಚಿಸ್ಕೊಂಡವನ ಮನೆಯವರು’ ಅಂತಾಗುತ್ತೆ.
11 ಇಬ್ರು ಪುರುಷರು ಹೊಡೆದಾಡ್ತಾ ಇರುವಾಗ ಒಬ್ಬನ ಹೆಂಡತಿ ಮಧ್ಯ ಬಂದು ತನ್ನ ಗಂಡನನ್ನ ಹೊಡೆತದಿಂದ ತಪ್ಪಿಸೋಕೆ ಕೈಚಾಚಿ ಇನ್ನೊಬ್ಬನ ಗುಪ್ತಾಂಗ ಹಿಡಿದ್ರೆ
12 ಅವಳ ಕೈಯನ್ನ ಕತ್ತರಿಸಿ ಹಾಕಬೇಕು. ನೀವು ಅವಳಿಗೆ ಕನಿಕರ ತೋರಿಸಬಾರದು.
13 ತೂಕದಲ್ಲಿ ಹೆಚ್ಚುಕಮ್ಮಿ ಇರೋ ಎರಡು ತರದ ತೂಕದ ಕಲ್ಲನ್ನ ನಿಮ್ಮ ಚೀಲದಲ್ಲಿ ಇಟ್ಕೊಬಾರದು.+
14 ಅಳತೆಯಲ್ಲಿ ಹೆಚ್ಚುಕಮ್ಮಿ ಇರೋ ಎರಡು ತರದ ಅಳತೆ ಪಾತ್ರೆನ* ನಿಮ್ಮ ಮನೇಲಿ ಇಟ್ಕೊಬಾರದು.+
15 ಸರಿಯಾದ ತೂಕದ ಕಲ್ಲನ್ನ, ಅಳತೆ ಪಾತ್ರೆನ ಇಟ್ಕೊಬೇಕು. ಆಗ ನಿಮ್ಮ ದೇವರಾದ ಯೆಹೋವ ನಿಮಗೆ ಕೊಡೋ ದೇಶದಲ್ಲಿ ಜಾಸ್ತಿ ವರ್ಷ ಜೀವಿಸ್ತೀರ.+
16 ಈ ವಿಷ್ಯದಲ್ಲಿ ಅನ್ಯಾಯ ಮಾಡೋ ಪ್ರತಿಯೊಬ್ಬನೂ ನಿಮ್ಮ ದೇವರಾದ ಯೆಹೋವನಿಗೆ ಅಸಹ್ಯ.+
17 ನೀವು ಈಜಿಪ್ಟನ್ನ ಬಿಟ್ಟು ಬರ್ತಿದ್ದಾಗ ದಾರೀಲಿ ಅಮಾಲೇಕ್ಯರು ನಿಮಗೆ ಏನು ಮಾಡಿದ್ರು ಅಂತ ನೆನಪಿಸ್ಕೊಳ್ಳಿ.+
18 ಪ್ರಯಾಣ ಮಾಡಿ ಬಳಲಿ ಬೆಂಡಾಗಿ ನಿಮ್ಮ ಹಿಂದೆ ನಿಧಾನವಾಗಿ ಬರ್ತಾ ಇದ್ದವ್ರ ಮೇಲೆ ಆ ಅಮಾಲೇಕ್ಯರು ದಾಳಿ ಮಾಡಿದ್ರು. ಅವ್ರಿಗೆ ದೇವರ ಮೇಲೆ ಸ್ವಲ್ಪನೂ ಭಯ ಇರಲಿಲ್ಲ.
19 ನಿಮ್ಮ ದೇವರಾದ ಯೆಹೋವ ನಿಮಗೆ ಆಸ್ತಿಯಾಗಿ ಕೊಡೋ ದೇಶಕ್ಕೆ ಹೋದ್ಮೇಲೆ, ನಿಮ್ಮ ಸುತ್ತ ಇರೋ ಶತ್ರುಗಳಿಂದ ಯೆಹೋವ ನಿಮ್ಮನ್ನ ರಕ್ಷಿಸಿ ನೆಮ್ಮದಿಯಿಂದ ಬದುಕೋ ತರ ಮಾಡಿದ ಮೇಲೆ+ ನೀವು ಅಮಾಲೇಕ್ಯರನ್ನ ನಾಶ ಮಾಡಬೇಕು. ಭೂಮಿ ಮೇಲೆ ಹೆಸ್ರೇ ಇಲ್ಲದ ಹಾಗೆ ಅವ್ರನ್ನ ನಾಶ ಮಾಡೋಕೆ+ ಮರಿಬಾರದು.
ಪಾದಟಿಪ್ಪಣಿ
^ ಅಕ್ಷ. “ಒಂದು ಏಫಾ ಅಳತೆಯ ಪಾತ್ರೆ.” ಪರಿಶಿಷ್ಟ ಬಿ14 ನೋಡಿ.