ಧರ್ಮೋಪದೇಶಕಾಂಡ 1:1-46

  • ಹೋರೇಬ್‌ ಬೆಟ್ಟದಿಂದ ಹೊರಟದ್ದು (1-8)

  • ಮುಖ್ಯಸ್ಥರ, ನ್ಯಾಯಾಧೀಶರ ನೇಮಕ (9-18)

  • ಕಾದೇಶ್‌ ಬರ್ನೇಯದಲ್ಲಿ ದಂಗೆ (19-46)

    • ಕಾನಾನಿಗೆ ಹೋಗೋಕೆ ಇಸ್ರಾಯೇಲ್ಯರು ಒಪ್ಪಲಿಲ್ಲ (26-33)

    • ಕಾನಾನನ್ನ ಸೋಲಿಸೋಕೆ ಆಗಲಿಲ್ಲ (41-46)

1  ಇಸ್ರಾಯೇಲ್ಯರಿಗೆ ಮೋಶೆ ಹೇಳಿದ ಮಾತುಗಳು. ಆಗ ಅವ್ರೆಲ್ಲ ಯೋರ್ದನಿನ ಹತ್ರ ಇದ್ದ ಕಾಡಲ್ಲಿ* ಇದ್ರು. ಇದು ಸೂಫಿನ ಮುಂದೆ ಪಾರಾನ್‌, ತೋಫೆಲ್‌, ಲಾಬಾನ್‌, ಹಚೇರೋತ್‌, ದೀಜಾಹಾಬಿನ ಮಧ್ಯ ಇದ್ದ ಬಯಲು ಪ್ರದೇಶ.  ಹೋರೇಬಿಂದ ಸೇಯೀರ್‌ ಬೆಟ್ಟಕ್ಕೆ ಹೋಗೋ ದಾರಿಯಲ್ಲಿ ಕಾದೇಶ್‌-ಬರ್ನೇಯಕ್ಕೆ+ ಹೋಗೋಕೆ 11 ದಿನ ಹಿಡಿಯುತ್ತೆ.  ಯೆಹೋವ ಇಸ್ರಾಯೇಲ್ಯರಿಗೆ ಹೇಳೋಕೆ ಹೇಳಿದ್ದನ್ನೆಲ್ಲ ಮೋಶೆ ಅವ್ರಿಗೆ ಹೇಳಿದ. ಇಸ್ರಾಯೇಲ್ಯರು ಈಜಿಪ್ಟಿಂದ ಬಂದು 40ನೇ ವರ್ಷದ+ 11ನೇ ತಿಂಗಳಿನ ಮೊದಲನೇ ದಿನ ಅದನ್ನೆಲ್ಲ ಹೇಳಿದ.  ಹೆಷ್ಬೋನಲ್ಲಿ ಇದ್ದ ಅಮೋರಿಯರ ರಾಜ ಸೀಹೋನನನ್ನ+ ಅಷ್ಟರೋತಿನಲ್ಲಿ ಇದ್ದ ಬಾಷಾನಿನ ರಾಜ ಓಗನನ್ನ+ ಎದ್ರೈ+ ಅನ್ನೋ ಸ್ಥಳದಲ್ಲಿ ಅವನು* ಸೋಲಿಸಿದ ಮೇಲೆ ಇದೆಲ್ಲ ನಡೀತು.  ಮೋವಾಬ್‌ ದೇಶದ ಯೋರ್ದನ್‌ ಪ್ರದೇಶದಲ್ಲಿ ಮೋಶೆ ಇಸ್ರಾಯೇಲ್ಯರಿಗೆ ನಿಯಮ ಪುಸ್ತಕನ+ ವಿವರಿಸ್ತಾ ಹೀಗಂದ:  “ನಮ್ಮ ದೇವರಾದ ಯೆಹೋವ ಹೋರೇಬಲ್ಲಿ ನಮಗೆ ‘ಈ ಬೆಟ್ಟ ಪ್ರದೇಶಕ್ಕೆ ನೀವು ಬಂದು ತುಂಬ ಸಮಯ ಆಗಿದೆ.+  ಈಗ ಅಮೋರಿಯರ+ ಬೆಟ್ಟ ಪ್ರದೇಶಕ್ಕೆ ಹೋಗಿ. ಆಮೇಲೆ ಅದ್ರ ಹತ್ರ ಇರೋ ಎಲ್ಲ ಪ್ರದೇಶಗಳಿಗೆ ಅಂದ್ರೆ ಅರಾಬಾ,+ ಬೆಟ್ಟ ಪ್ರದೇಶ, ಷೆಫೆಲಾ, ನೆಗೆಬ್‌* ಮತ್ತೆ ಸಮುದ್ರ ತೀರಪ್ರದೇಶಕ್ಕೆ+ ಹೋಗಿ. ಅಷ್ಟೇ ಅಲ್ಲ ಕಾನಾನ್ಯರ ದೇಶಕ್ಕೆ ಲೆಬನೋನಿಗೆ*+ ಮಹಾನದಿ ಯೂಫ್ರೆಟಿಸ್‌+ ತನಕ ಹೋಗಿ.  ಯೆಹೋವನಾದ ನಾನು ನಿಮ್ಮ ಪೂರ್ವಜರಾದ ಅಬ್ರಹಾಮ, ಇಸಾಕ,+ ಯಾಕೋಬರಿಗೆ+ ಆಣೆ ಮಾಡಿ ಅವ್ರಿಗೆ ಅವ್ರ ವಂಶದವರಿಗೆ ಕೊಡ್ತೀನಿ+ ಅಂತ ಹೇಳಿದ ದೇಶ ಈಗ ನಿಮ್ಮ ಮುಂದೆ ಇದೆ. ನೀವು ಹೋಗಿ ಆ ದೇಶವನ್ನ ವಶ ಮಾಡ್ಕೊಳ್ಳಿ’ ಅಂದ.  ಆ ಸಮಯದಲ್ಲಿ ನಾನು ‘ನಿಮ್ಮೆಲ್ರನ್ನ ಮುನ್ನಡೆಸೋ ಜವಾಬ್ದಾರಿಯನ್ನ ನಾನೊಬ್ಬನೇ ಹೊರೋಕೆ ಆಗಲ್ಲ.+ 10  ನಿಮ್ಮ ದೇವರಾದ ಯೆಹೋವ ನಿಮ್ಮ ಸಂಖ್ಯೆಯನ್ನ ಜಾಸ್ತಿ ಮಾಡಿದ್ದಾನೆ. ಹಾಗಾಗಿ ನೀವು ಇವತ್ತು ಆಕಾಶದ ನಕ್ಷತ್ರಗಳ ತರ ಲೆಕ್ಕ ಮಾಡೋಕೆ ಆಗದಷ್ಟು ಜಾಸ್ತಿ ಆಗಿದ್ದೀರ.+ 11  ನೀವು ಈಗ ಇರೋದಕ್ಕಿಂತ ಸಾವಿರ ಪಟ್ಟು ಜಾಸ್ತಿ ಆಗೋ ತರ+ ನಿಮ್ಮ ಪೂರ್ವಜರ ದೇವರಾದ ಯೆಹೋವ ಮಾಡ್ಲಿ. ಆತನು ಈಗಾಗ್ಲೇ ಮಾತುಕೊಟ್ಟ ಹಾಗೇ ನಿಮ್ಮನ್ನ ಆಶೀರ್ವದಿಸ್ಲಿ.+ 12  ಆದ್ರೆ ಇಷ್ಟು ದೊಡ್ಡ ಸಮೂಹನ ನೋಡ್ಕೊಳ್ಳೋ ಭಾರನ ಹೊತ್ಕೊಳ್ಳೋಕೆ ನನ್ನೊಬ್ಬನಿಂದ ಹೇಗೆ ಆಗುತ್ತೆ? ನಿಮ್ಮ ಸಮಸ್ಯೆಗಳನ್ನ, ಜಗಳಗಳನ್ನ ನಾನೊಬ್ಬನೇ ಹೇಗೆ ತಾನೆ ಸರಿ ಮಾಡ್ಲಿ?+ 13  ಅದಕ್ಕೇ ವಿವೇಕ, ವಿವೇಚನೆ, ಅನುಭವ ಇರೋ ಗಂಡಸ್ರನ್ನ ನಿಮ್ಮ ಕುಲಗಳಿಂದ ಆರಿಸಿ. ಅವ್ರನ್ನ ನಿಮ್ಮ ಮುಖ್ಯಸ್ಥರನ್ನಾಗಿ ನೇಮಿಸ್ತೀನಿ’ + ಅಂತ ನಿಮಗೆ ಹೇಳ್ದೆ. 14  ಅದಕ್ಕೆ ನೀವು ‘ಸರಿ, ನೀನು ಹೇಳೋ ಹಾಗೆ ಮಾಡಿದ್ರೆ ಚೆನ್ನಾಗಿರುತ್ತೆ’ ಅಂದ್ರಿ. 15  ಆಗ ನಾನು ವಿವೇಕ ಅನುಭವ ಇದ್ದ ನಿಮ್ಮ ಕುಲಗಳ ಮುಖ್ಯಸ್ಥರನ್ನ ಸಾವಿರ ಜನ್ರ ಮೇಲೆ, ನೂರು ಜನ್ರ ಮೇಲೆ, ಐವತ್ತು ಜನ್ರ ಮೇಲೆ, ಹತ್ತು ಜನ್ರ ಮೇಲೆ ನೇಮಿಸಿದೆ. ಅವ್ರನ್ನ ನಿಮ್ಮ ಕುಲಗಳಿಗೆ ಅಧಿಕಾರಿಗಳಾಗಿ ನೇಮಿಸಿದೆ.+ 16  ಆ ಸಮಯದಲ್ಲಿ ನಿಮ್ಮ ನ್ಯಾಯಾಧೀಶರಿಗೆ ‘ಜನ್ರು ಸಮಸ್ಯೆ ಬಗೆಹರಿಸ್ಕೊಳ್ಳೋಕೆ ನಿಮ್ಮ ಹತ್ರ ಬಂದಾಗ ನ್ಯಾಯವಾಗಿ ತೀರ್ಪು ಮಾಡಬೇಕು.+ ಸಮಸ್ಯೆ ಇಬ್ರು ಇಸ್ರಾಯೇಲ್ಯರ ಮಧ್ಯ ಇರಲಿ ಅಥವಾ ಇಸ್ರಾಯೇಲ್ಯ ಮತ್ತು ವಿದೇಶಿ ಮಧ್ಯ ಇರಲಿ ನೀವು ನ್ಯಾಯವಾಗೇ ತೀರ್ಪು ಮಾಡಬೇಕು.+ 17  ವಿಚಾರಣೆ ಮಾಡುವಾಗ ಒಬ್ಬ ಪ್ರಸಿದ್ಧ ವ್ಯಕ್ತಿ ಮಾತಾಡಿದ್ರೆ ಹೇಗೆ ಕೇಳ್ತಿರೋ ಹಾಗೇ ಸಾಧಾರಣ ವ್ಯಕ್ತಿ ಮಾತಾಡಿದಾಗ್ಲೂ ಕೇಳಬೇಕು.+ ತೀರ್ಪು ಮಾಡುವಾಗ ಭೇದಭಾವ ಮಾಡಬಾರದು.+ ಮನುಷ್ಯರಿಗೆ ಹೆದರಿ ತೀರ್ಪು ಕೊಡಬಾರದು.+ ಯಾಕಂದ್ರೆ ನೀವು ದೇವರ ಪರವಾಗಿ ತೀರ್ಪು ಮಾಡ್ತಿದ್ದೀರ!+ ಯಾವುದಾದ್ರೂ ಸಮಸ್ಯೆ ಬಗೆಹರಿಸೋಕೆ ನಿಮ್ಮಿಂದ ಆಗದಿದ್ರೆ ನನ್ನ ಹತ್ರ ಬನ್ನಿ, ನಾನದನ್ನ ವಿಚಾರಿಸ್ತೀನಿ’ + ಅಂತ ಹೇಳ್ದೆ. 18  ಅಷ್ಟೇ ಅಲ್ಲ ಏನೇನು ಮಾಡಬೇಕಂತನೂ ನಾನಾಗ ಹೇಳ್ಕೊಟ್ಟೆ. 19  ಆಮೇಲೆ ನಾವೆಲ್ಲ ನಮ್ಮ ದೇವರಾದ ಯೆಹೋವನ ಆಜ್ಞೆ ಪ್ರಕಾರ ಹೋರೇಬಿಂದ ಹೊರಟ್ವಿ. ಅಮೋರಿಯರ ಬೆಟ್ಟ ಪ್ರದೇಶಕ್ಕೆ+ ಹೋಗೋ ದಾರಿಯಲ್ಲಿ ತುಂಬ ದೊಡ್ಡ, ಭಯಾನಕ ಕಾಡು+ ಇತ್ತು. ಅದನ್ನ ನೀವೇ ಕಣ್ಣಾರೆ ನೋಡಿದ್ರಿ. ನಾವು ಅದನ್ನ ನಡ್ಕೊಂಡು ಹೋಗಿ ದಾಟಿದ್ವಿ. ಹೀಗೆ ಪ್ರಯಾಣ ಮಾಡ್ತಾ ಮಾಡ್ತಾ ಕಾದೇಶ್‌-ಬರ್ನೇಯಕ್ಕೆ ಬಂದ್ವಿ.+ 20  ನಾನಾಗ ನಿಮಗೆ ‘ನಮ್ಮ ದೇವರಾದ ಯೆಹೋವ ನಮಗೆ ಕೊಡೋ ಅಮೋರಿಯರ ಬೆಟ್ಟ ಪ್ರದೇಶಕ್ಕೆ ನಾವೀಗ ಬಂದಿದ್ದೀವಿ. 21  ನಿಮ್ಮ ದೇವರಾದ ಯೆಹೋವ ಈ ದೇಶವನ್ನ ನಿಮಗೆ ಕೊಟ್ಟಿದ್ದಾನೆ. ನಿಮ್ಮ ಪೂರ್ವಜರ ದೇವರಾದ ಯೆಹೋವ ಹೇಳಿದ ಹಾಗೇ ಈ ಬೆಟ್ಟ ಪ್ರದೇಶಕ್ಕೆ ಹೋಗಿ ವಶ ಮಾಡ್ಕೊಳ್ಳಿ.+ ಧೈರ್ಯವಾಗಿರಿ! ಯಾರಿಗೂ ಹೆದರಬೇಡಿ!’ ಅಂದೆ. 22  ಆಗ ನೀವೆಲ್ಲ ನನ್ನ ಹತ್ರ ಬಂದು ‘ನಾವು ಆ ದೇಶಕ್ಕೆ ಹೋಗೋಕೆ ಮುಂಚೆ ಕೆಲವು ಗಂಡಸ್ರನ್ನ ಅಲ್ಲಿಗೆ ಕಳಿಸೋಣ. ಅವರು ಆ ದೇಶ ನೋಡ್ಕೊಂಡು ಬರಲಿ. ನಾವು ಯಾವ ದಾರೀಲಿ ಅಲ್ಲಿಗೆ ಹೋದ್ರೆ ಒಳ್ಳೇದು, ಆ ದಾರೀಲಿ ಎಂಥ ಪಟ್ಟಣಗಳಿವೆ ಅಂತ ಅವರು ನಮಗೆ ಹೇಳಲಿ’ + ಅಂದ್ರಿ. 23  ನೀವು ಹೇಳಿದ್ದು ಸರಿ ಅಂತ ನನಗೂ ಅನಿಸ್ತು. ಅದಕ್ಕೆ ನಾನು ಒಂದೊಂದು ಕುಲದಿಂದ ಒಬ್ಬೊಬ್ಬ ಗಂಡಸನ್ನ ಅಂದ್ರೆ ಒಟ್ಟು 12 ಜನ್ರನ್ನ ಆರಿಸ್ಕೊಂಡೆ.+ 24  ಅವರು ಬೆಟ್ಟ ಪ್ರದೇಶ ಹತ್ತಿ ಹೋಗಿ+ ಎಷ್ಕೋಲ್‌ ಕಣಿವೆ ತಲುಪಿ ಆ ದೇಶ ಸಂಚರಿಸಿ ನೋಡಿದ್ರು. 25  ಅಲ್ಲಿಂದ ಸ್ವಲ್ಪ ಹಣ್ಣುಗಳನ್ನ ತಂದು ನಮಗೆ ತೋರಿಸಿದ್ರು. ಅಷ್ಟೇ ಅಲ್ಲ ‘ನಮ್ಮ ದೇವರಾದ ಯೆಹೋವ ನಮಗೆ ಕೊಡೋ ದೇಶ ಒಳ್ಳೇ ದೇಶ’ + ಅಂದ್ರು. 26  ಆದ್ರೆ ನೀವು ಆ ದೇಶಕ್ಕೆ ಹೋಗೋಕೆ ಒಪ್ಪಲಿಲ್ಲ. ನಿಮ್ಮ ದೇವರಾದ ಯೆಹೋವನ ಅಪ್ಪಣೆ ವಿರುದ್ಧ ದಂಗೆ ಎದ್ರಿ.+ 27  ನಿಮ್ಮ ನಿಮ್ಮ ಡೇರೆಗಳಲ್ಲಿ ಗೊಣಗುತ್ತಾ ‘ಯೆಹೋವನಿಗೆ ನಮ್ಮ ಮೇಲೆ ಏನೋ ದ್ವೇಷ ಇರಬೇಕು. ಅದಕ್ಕೆ ಈಜಿಪ್ಟಿಂದ* ನಮ್ಮನ್ನ ಇಲ್ಲಿಗೆ ಕರ್ಕೊಂಡು ಬಂದಿದ್ದಾನೆ. ನಮ್ಮನ್ನ ಅಮೋರಿಯರ ಕೈಗೆ ಒಪ್ಪಿಸಿ ನಾಶ ಮಾಡಬೇಕು ಅಂತಿದ್ದಾನೆ. 28  ನಾವು ಹೋಗೋ ಜಾಗ ಹೇಗಿರುತ್ತೋ ಏನೋ? ನಮ್ಮ ಸಹೋದರರು ಆ ದೇಶವನ್ನ ನೋಡ್ಕೊಂಡು ಬಂದು “ಅಲ್ಲಿರೋ ಜನ ನಮಗಿಂತ ಎತ್ರ, ಬಲಶಾಲಿಗಳು. ಅಲ್ಲಿ ದೊಡ್ಡದೊಡ್ಡ ಪಟ್ಟಣಗಳಿವೆ. ಆ ಪಟ್ಟಣಗಳ ಕೋಟೆಗಳು ಆಕಾಶ ಮುಟ್ಟೋಷ್ಟು ಎತ್ರ.+ ಅಷ್ಟೇ ಅಲ್ಲ ನಾವಲ್ಲಿ ಅನಾಕ್ಯರನ್ನ+ ನೋಡಿದ್ವಿ” ಅಂತ ಹೇಳಿ ಧೈರ್ಯ ಕಳ್ಕೊಳ್ಳೋ ತರ ಮಾಡಿದ್ದಾರೆ’ + ಅಂದ್ರಿ. 29  ಅದಕ್ಕೆ ನಾನು ‘ಆ ದೇಶದ ಜನ್ರಿಗೆ ಹೆದರಬೇಡಿ, ಧೈರ್ಯ ಕಳ್ಕೊಳ್ಳಬೇಡಿ.+ 30  ಈಜಿಪ್ಟಲ್ಲಿ ನಿಮ್ಮ ದೇವರಾದ ಯೆಹೋವ ನಿಮಗೋಸ್ಕರ ಹೋರಾಡಿದ್ದನ್ನ ಕಣ್ಣಾರೆ ನೋಡಿದ್ರಲ್ಲಾ.+ ಅದೇ ತರ ಈಗ್ಲೂ ನಿಮಗೋಸ್ಕರ ಯುದ್ಧ ಮಾಡ್ತಾನೆ.+ 31  ಕಾಡಲ್ಲಿ ಇದ್ದಾಗ ದೇವರಾದ ಯೆಹೋವ ನಿಮ್ಮನ್ನ ಹೇಗೆಲ್ಲಾ ನೋಡ್ಕೊಂಡ ಅಂತ ನಿಮಗೆ ಚೆನ್ನಾಗಿ ಗೊತ್ತು. ಪ್ರಯಾಣ ಮಾಡ್ತಾ ಎಲ್ಲೆಲ್ಲಾ ಹೋದ್ರೊ ಅಲ್ಲೆಲ್ಲಾ ಒಬ್ಬ ತಂದೆ ಮಗನನ್ನ ತೋಳಲ್ಲಿ ಎತ್ಕೊಂಡು ಹೋಗೋ ತರ ದೇವರು ನಿಮ್ಮನ್ನ ಎತ್ಕೊಂಡು ಹೋದ. ಇಲ್ಲಿ ತನಕ ಕರ್ಕೊಂಡು ಬಂದ’ ಅಂದೆ. 32  ನಿಮ್ಮ ದೇವರಾದ ಯೆಹೋವ ಇಷ್ಟೆಲ್ಲಾ ಮಾಡಿದ್ರೂ ಆತನ ಮೇಲೆ ನೀವು ನಂಬಿಕೆ ಇಡಲಿಲ್ಲ.+ 33  ಪ್ರಯಾಣದ ಉದ್ದಕ್ಕೂ ಆತನು ನಿಮ್ಮ ಮುಂದೆಮುಂದೆ ಹೋಗಿ ನೀವೆಲ್ಲಿ ಡೇರೆ ಹಾಕಬೇಕಂತ ಸ್ಥಳ ಹುಡುಕ್ತಿದ್ದನು. ನಿಮಗೆ ದಾರಿ ತೋರಿಸೋಕೆ ರಾತ್ರಿ ಹೊತ್ತಲ್ಲಿ ಬೆಂಕಿಯಲ್ಲಿ ಹಗಲು ಹೊತ್ತಲ್ಲಿ ಮೋಡದಲ್ಲಿ ಕಾಣಿಸ್ಕೊಂಡನು.+ 34  ನೀವು ಗೊಣಗುತ್ತಾ ಹೇಳಿದ ಮಾತುಗಳನ್ನೆಲ್ಲ ಯೆಹೋವ ಕೇಳಿಸ್ಕೊಂಡನು. ಆತನಿಗೆ ನಿಮ್ಮ ಮೇಲೆ ತುಂಬ ಕೋಪ ಬಂತು. ಹಾಗಾಗಿ ಆತನು ಆಣೆಯಿಟ್ಟು+ 35  ‘ನಿಮ್ಮ ಪೂರ್ವಜರಿಗೆ ಕೊಡ್ತೀನಿ ಅಂತ ನಾನು ಮಾತು ಕೊಟ್ಟ ಆ ಒಳ್ಳೇ ದೇಶಕ್ಕೆ ಈ ಕೆಟ್ಟ ಪೀಳಿಗೆಯಲ್ಲಿ ಒಬ್ರೂ ಹೋಗಲ್ಲ.+ 36  ಆದ್ರೆ ಯೆಫುನ್ನೆಯ ಮಗ ಕಾಲೇಬ ಆ ದೇಶಕ್ಕೆ ಹೋಗ್ತಾನೆ. ಅವನು ಹೋಗಿ ನೋಡಿದ ಆ ದೇಶನ ಅವನಿಗೂ ಅವನ ವಂಶದವರಿಗೂ ಕೊಡ್ತೀನಿ. ಯಾಕಂದ್ರೆ ಯೆಹೋವನಾದ ನನ್ನ ಮಾತನ್ನ ಅವನು ಮನಸಾರೆ* ಪಾಲಿಸಿದ್ದಾನೆ.+ 37  (ನಿಮ್ಮಿಂದ ಯೆಹೋವ ನನ್ನ ಮೇಲೂ ಕೋಪ ಮಾಡ್ಕೊಂಡನು. “ಆ ದೇಶಕ್ಕೆ ನೀನೂ ಹೋಗಲ್ಲ.+ 38  ನೂನನ ಮಗನೂ ನಿನ್ನ ಸೇವಕನೂ ಆದ ಯೆಹೋಶುವ+ ಅಲ್ಲಿಗೆ ಹೋಗ್ತಾನೆ.+ ಆ ದೇಶವನ್ನ ಆಸ್ತಿಯಾಗಿ ಪಡ್ಕೊಳ್ಳೋಕೆ ಇಸ್ರಾಯೇಲ್ಯರಿಗೆ ಸಹಾಯ ಮಾಡ್ತಾನೆ. ಹಾಗಾಗಿ ಅವನಿಗೆ ಧೈರ್ಯ ತುಂಬು”*+ ಅಂದನು.) 39  ಅಷ್ಟೇ ಅಲ್ಲ ಒಳ್ಳೇದು ಕೆಟ್ಟದು ಗೊತ್ತಾಗದ ನಿಮ್ಮ ಮಕ್ಕಳು ಆ ದೇಶಕ್ಕೆ ಹೋಗ್ತಾರೆ. ಅವರು ಕೈದಿಗಳಾಗಿ ಹೋಗ್ತಾರೆ+ ಅಂತ ಹೇಳಿದ್ರಿ. ಆದ್ರೆ ನಾನು ಅವ್ರಿಗೆ ಆ ದೇಶವನ್ನ ಆಸ್ತಿಯಾಗಿ ಕೊಡ್ತೀನಿ.+ 40  ನೀವೀಗ ವಾಪಸ್‌ ಹೋಗಿ ಕೆಂಪು ಸಮುದ್ರಕ್ಕೆ ಹೋಗೋ ದಾರಿಯಿಂದ ಕಾಡಿಗೆ ಹೋಗಿ’ ಅಂದನು.+ 41  ಆಗ ನೀವು ನನಗೆ ‘ಯೆಹೋವನ ವಿರುದ್ಧ ಪಾಪ ಮಾಡಿದ್ದೀವಿ. ನಮ್ಮ ದೇವರಾದ ಯೆಹೋವ ಕೊಟ್ಟ ಆಜ್ಞೆ ಪ್ರಕಾರನೇ ನಾವೀಗ ಈ ಬೆಟ್ಟ ಹತ್ತಿ ಯುದ್ಧ ಮಾಡ್ತೀವಿ’ ಅಂದ್ರಿ. ಆಯುಧ ತಗೊಂಡು ಬೆಟ್ಟ ಹತ್ತಿ ಆ ಇಡೀ ಪ್ರದೇಶವನ್ನ ಜಯಿಸೋದು ತುಂಬ ಸುಲಭ ಅಂತ ನೆನಸಿದ್ರಿ.+ 42  ಆದ್ರೆ ಯೆಹೋವ ‘ಬೆಟ್ಟ ಹತ್ತಿ ಯುದ್ಧಕ್ಕೆ ಹೋಗಬಾರದು ಅಂತ ಅವ್ರಿಗೆ ಹೇಳು. ನಾನು ಅವ್ರ ಜೊತೆ ಇರಲ್ಲ.+ ಅವರು ಯುದ್ಧಕ್ಕೆ ಹೋದ್ರೆ ಶತ್ರುಗಳು ಅವ್ರನ್ನ ಸೋಲಿಸಿಬಿಡ್ತಾರೆ’ ” ಅಂತ ನನಗೆ ಹೇಳಿದನು. 43  ಅದನ್ನ ನಿಮಗೆ ಹೇಳಿದ್ರೂ ನೀವು ಕಿವಿಗೇ ಹಾಕೊಳ್ಳಲಿಲ್ಲ. ಯೆಹೋವನ ಮಾತಿನ ವಿರುದ್ಧ ದಂಗೆಯೆದ್ದು ದುರಹಂಕಾರದಿಂದ ಬೆಟ್ಟ ಹತ್ತಿ ಹೋದ್ರಿ. 44  ಆಗ ಅಲ್ಲಿ ವಾಸ ಮಾಡ್ತಿದ್ದ ಅಮೋರಿಯರು ನಿಮ್ಮ ವಿರುದ್ಧ ಯುದ್ಧ ಮಾಡಿದ್ರು. ಸೇಯೀರಿನಲ್ಲಿ ಹೊರ್ಮಾದ ತನಕ ನಿಮ್ಮನ್ನ ಜೇನುನೊಣಗಳ ತರ ಅಟ್ಟಿಸ್ಕೊಂಡು ಹೋಗಿ, ಓಡಿಸಿಬಿಟ್ರು. 45  ನೀವಾಗ ವಾಪಸ್‌ ಬಂದು ಯೆಹೋವನ ಮುಂದೆ ಅತ್ತು ಗೋಳಾಡಿದ್ರಿ. ಆದ್ರೆ ಯೆಹೋವ ನಿಮ್ಮ ಅಳು ಕೇಳಲೂ ಇಲ್ಲ, ನಿಮ್ಮ ಕಡೆ ಗಮನ ಕೊಡ್ಲೂ ಇಲ್ಲ. 46  ಅದಕ್ಕೇ ನೀವು ಕಾದೇಶಲ್ಲೇ ತುಂಬ ಸಮಯ ಇರಬೇಕಾಯ್ತು.

ಪಾದಟಿಪ್ಪಣಿ

ಅದು, ಯೆಹೋವನ ಶಕ್ತಿಯಿಂದ.
ಅಥವಾ “‘ದಕ್ಷಿಣಕ್ಕೆ’ ಅಂದ್ರೆ ಕಾನಾನ್‌ ದೇಶದ ದಕ್ಷಿಣ ದಿಕ್ಕಿಕ್ಕೆ.”
ಇದು ಲೆಬನೋನ್‌ ಪರ್ವತ ಶ್ರೇಣಿ ಆಗಿರಬೇಕು.
ಅಥವಾ “ಐಗುಪ್ತದಿಂದ.”
ಅಥವಾ “ಪೂರ್ಣ ಹೃದಯದಿಂದ.” ಅಕ್ಷ. “ಸಂಪೂರ್ಣವಾಗಿ.”
ಬಹುಶಃ, “ದೇವರು ಅವನನ್ನ ಬಲಪಡಿಸಿದ್ದಾನೆ.”