ಕೀರ್ತನೆ 22:1-31

  • ನಿರಾಶೆ ಹೋಗಿ ಸ್ತುತಿ

    • “ನನ್ನ ದೇವರೇ, ಯಾಕೆ ನನ್ನ ಕೈಬಿಟ್ಟೆ?” (1)

    • “ನನ್ನ ಬಟ್ಟೆಗಾಗಿ ಚೀಟಿ ಹಾಕ್ತಾರೆ” (18)

    • ಮಹಾಸಭೆಯಲ್ಲಿ ದೇವರನ್ನ ಹೊಗಳ್ತೀನಿ (22, 25)

    • ಭೂಮಿಯ ಮೂಲೆಮೂಲೆಯಲ್ಲೂ ದೇವರ ಆರಾಧನೆ (27)

ಗಾಯಕರ ನಿರ್ದೇಶಕನಿಗೆ ಸೂಚನೆ: ಇದನ್ನ “ಅರುಣೋದಯದ ಹರಿಣಿ”* ರಾಗದಲ್ಲಿ ಹಾಡಬೇಕು. ದಾವೀದನ ಮಧುರ ಗೀತೆ. 22  ನನ್ನ ದೇವರೇ, ನನ್ನ ದೇವರೇ, ಯಾಕೆ ನನ್ನ ಕೈಬಿಟ್ಟೆ?+ ನನ್ನನ್ನ ರಕ್ಷಿಸದೆ, ನನ್ನ ಅಳು ಕೇಳದೆ ಯಾಕೆ ದೂರವಾಗಿದ್ದೀಯ?+   ನನ್ನ ದೇವರೇ, ಹಗಲೆಲ್ಲಾ ನಾನು ನಿನ್ನನ್ನ ಕರೀತಾ ಇರ್ತಿನಿ, ಆದ್ರೆ ನೀನು ಉತ್ತರ ಕೊಡಲ್ಲ.+ ರಾತ್ರಿನೂ ನನ್ನಿಂದ ಸುಮ್ಮನಿರೋಕೆ ಆಗಲ್ಲ.   ಆದ್ರೆ ನೀನು ಪವಿತ್ರನು,+ಇಸ್ರಾಯೇಲ್ಯರ ಹೊಗಳಿಕೆಗಳ ಮಧ್ಯೆ ಕೂತಿರೋನು.   ನಮ್ಮ ಪೂರ್ವಜರು ನಿನ್ನ ಮೇಲೆ ಭರವಸೆ ಇಟ್ರು,+ಹೌದು, ಅವರು ಭರವಸೆ ಇಟ್ರು, ನೀನು ಅವ್ರನ್ನ ಕಾಪಾಡ್ತಾ ಬಂದೆ.+   ನಿನ್ನಲ್ಲಿ ಅವರು ಅಳಲನ್ನ ತೋಡ್ಕೊಂಡ್ರು. ನೀನು ಅವ್ರನ್ನ ರಕ್ಷಿಸಿದೆ. ನಿನ್ನಲ್ಲಿ ಅವರು ಭರವಸೆ ಇಟ್ರು. ನಿನ್ನಿಂದ ಅವ್ರಿಗೆ ನಿರಾಶೆ ಆಗಲಿಲ್ಲ.*+   ಆದ್ರೆ ಜನ್ರು ನನಗೆ ಅವಮಾನ ಮಾಡ್ತಾರೆ,* ಕೀಳಾಗಿ ನೋಡ್ತಾರೆ.+ ಅವ್ರ ದೃಷ್ಟಿಯಲ್ಲಿ ನಾನು ಒಬ್ಬ ಮನುಷ್ಯನಲ್ಲ, ಒಂದು ಹುಳ.   ನನ್ನನ್ನ ನೋಡೋರೆಲ್ಲ ನನ್ನನ್ನ ಗೇಲಿ ಮಾಡ್ತಾರೆ,+ನನ್ನ ಬಗ್ಗೆ ವ್ಯಂಗ್ಯವಾಗಿ ಮಾತಾಡ್ತಾರೆ. ತಲೆ ಅಲ್ಲಾಡಿಸಿ ಅಣಕಿಸ್ತಾ,+   “ಇವನು ತನ್ನನ್ನ ಯೆಹೋವನಿಗೆ ಒಪ್ಪಿಸ್ಕೊಂಡಿದ್ದ. ಆತನೇ ಇವನನ್ನ ಕಾಪಾಡಲಿ! ದೇವರಿಗೆ ಇವನನ್ನ ಕಂಡ್ರೆ ತುಂಬ ಇಷ್ಟ ಅಂದಮೇಲೆ ಆತನೇ ಇವನನ್ನ ರಕ್ಷಿಸಲಿ!” ಅಂತಾರೆ.+   ನನ್ನನ್ನ ಅಮ್ಮನ ಹೊಟ್ಟೆಯಿಂದ ಹೊರಗೆ ತಂದವನು ನೀನೇ,+ಅಮ್ಮನ ಎದೆಯಲ್ಲಿ ನಿಶ್ಚಿಂತೆಯಿಂದ ಇರೋ ತರ ಮಾಡಿದವನೂ ನೀನೇ. 10  ನಾನು ಹುಟ್ಟಿದ ತಕ್ಷಣ ನನ್ನ ಆರೈಕೆಯನ್ನ ನಿನಗೆ ಒಪ್ಪಿಸಿದ್ರು,ನಾನು ನನ್ನ ಅಮ್ಮನ ಹೊಟ್ಟೆಯಲ್ಲಿ ಇದ್ದಾಗಿಂದ ನೀನೇ ನನ್ನ ದೇವರು. 11  ತೊಂದ್ರೆ ನನ್ನ ಹತ್ರಾನೇ ಇರೋದ್ರಿಂದ ನೀನು ನನ್ನಿಂದ ದೂರ ಇರಬೇಡ.+ ಬೇರೆ ಯಾವ ಸಹಾಯಕನೂ ನನಗಿಲ್ಲ.+ 12  ತುಂಬ ಎಳೇ ಹೋರಿಗಳು ನನ್ನನ್ನ ಸುತ್ಕೊಂಡಿವೆ,+ಬಾಷಾನಿನ ಬಲಿಷ್ಠ ಹೋರಿಗಳು ನನ್ನನ್ನ ಮುತ್ಕೊಂಡಿವೆ.+ 13  ಗರ್ಜಿಸ್ತಾ ತನ್ನ ಬೇಟೆನ ತುಂಡುತುಂಡು ಮಾಡೋ ಸಿಂಹದ ತರ,+ಶತ್ರುಗಳು ತಮ್ಮ ಬಾಯನ್ನ ಅಗಲವಾಗಿ ತಕ್ಕೊಂಡು ನನ್ನ ವಿರುದ್ಧ ಬಂದಿದ್ದಾರೆ.+ 14  ನನ್ನನ್ನ ನೀರಿನ ತರ ಸುರೀತಿದ್ದಾರೆ,ನನ್ನ ಎಲುಬು ಕಳಚ್ಕೊಂಡು ಬರ್ತಿದೆ. ನನ್ನ ಹೃದಯ ಮೇಣದ ತರ,+ನನ್ನೊಳಗೇ ಕರಗಿ ಹೋಗಿದೆ.+ 15  ಮಡಿಕೆ ತುಂಡಿನ ತರ ನನ್ನ ಶಕ್ತಿ ಒಣಗಿ ಹೋಗಿದೆ,+ನನ್ನ ನಾಲಿಗೆ ನನ್ನ ವಸಡಿಗೆ ಅಂಟ್ಕೊಂಡಿದೆ,+ನೀನು ನನ್ನನ್ನ ಸಾವಿನ ಧೂಳಲ್ಲಿ ಬೀಳಿಸ್ತಿದ್ದೀಯ.+ 16  ಅವರು ನಾಯಿಗಳ ತರ ನನ್ನನ್ನ ಸುತ್ಕೊಂಡಿದ್ದಾರೆ,+ಎಲ್ಲ ಕಡೆಯಿಂದ ದುಷ್ಟರು ನನ್ನನ್ನ ಮುತ್ಕೊಂಡಿದ್ದಾರೆ,+ಅವರು ಸಿಂಹದ ತರ ನನ್ನ ಕೈಕಾಲನ್ನ ಕಚ್ತಿದ್ದಾರೆ.+ 17  ನಾನು ನನ್ನ ಎಲ್ಲ ಎಲುಬನ್ನ ಎಣಿಸಬಹುದು.+ ಅವರು ನನ್ನನ್ನೇ ನೋಡ್ತಾ ಗುರಾಯಿಸ್ತಿದ್ದಾರೆ. 18  ಅವರು ತಮ್ಮತಮ್ಮಲ್ಲೇ ನನ್ನ ಬಟ್ಟೆಗಳನ್ನ ಹಂಚ್ಕೊಳ್ತಾರೆ,ನನ್ನ ಬಟ್ಟೆಗಾಗಿ ಚೀಟಿ ಹಾಕ್ತಾರೆ.+ 19  ಆದ್ರೆ ಯೆಹೋವನೇ, ನನ್ನಿಂದ ದೂರ ಇರಬೇಡ.+ ನೀನೇ ನನ್ನ ಬಲ. ದಯವಿಟ್ಟು ಬೇಗ ಬಂದು ನನಗೆ ಸಹಾಯಮಾಡು.+ 20  ಕತ್ತಿಯಿಂದ ನನ್ನನ್ನ ಕಾಪಾಡು,ನನ್ನ ಅಮೂಲ್ಯ ಪ್ರಾಣವನ್ನ ನಾಯಿಗಳ ಕೈಯಿಂದ ರಕ್ಷಿಸು.+ 21  ಸಿಂಹದ ಬಾಯಿಂದ, ಕಾಡುಕೋಣಗಳ ಕೊಂಬಿಂದ ಕಾಪಾಡು.+ ನನಗೆ ಉತ್ರ ಕೊಡು, ನನ್ನನ್ನ ಉಳಿಸು. 22  ನಾನು ನನ್ನ ಅಣ್ಣತಮ್ಮಂದಿರ ಮಧ್ಯ ನಿನ್ನ ಹೆಸ್ರನ್ನ ಹೇಳ್ತೀನಿ,+ಸಭೆಯ ಮಧ್ಯ ನಾನು ನಿನ್ನನ್ನ ಹೊಗಳ್ತೀನಿ.+ 23  ಯೆಹೋವನಿಗೆ ಭಯಪಡುವವರೇ, ಆತನನ್ನ ಹೊಗಳಿ! ಯಾಕೋಬನ ವಂಶದವರೇ, ನೀವೆಲ್ಲ ಆತನಿಗೆ ಗೌರವಕೊಡಿ!+ ಇಸ್ರಾಯೇಲನ ವಂಶದವರೇ, ಆತನಿಗೆ ಭಯಭಕ್ತಿ ತೋರಿಸಿ. 24  ಯಾಕಂದ್ರೆ ದೌರ್ಜನ್ಯ ಆದವನ ಕಷ್ಟವನ್ನ ಆತನು ತಳ್ಳಿಬಿಡಲಿಲ್ಲ, ಅಸಹ್ಯ ಪಟ್ಕೊಳ್ಳಲಿಲ್ಲ,+ದೇವರು ತನ್ನ ಮುಖವನ್ನ ತಿರುಗಿಸ್ಕೊಳ್ಳಲಿಲ್ಲ.+ ಸಹಾಯಕ್ಕಾಗಿ ಕೂಗಿದಾಗ ಆತನು ಕೇಳಿಸ್ಕೊಳ್ಳದೆ ಇರಲಿಲ್ಲ.+ 25  ಮಹಾಸಭೆಯಲ್ಲಿ ನಾನು ನಿನ್ನನ್ನ ಹೊಗಳ್ತೀನಿ,+ನಿನಗೆ ಭಯಪಡೋರ ಮುಂದೆ ನಾನು ನನ್ನ ಹರಕೆಗಳನ್ನ ತೀರಿಸ್ತೀನಿ. 26  ದೀನರು ತಿಂದು ತೃಪ್ತರಾಗ್ತಾರೆ,+ಯೆಹೋವನಿಗಾಗಿ ಹುಡುಕುವವರು ಆತನನ್ನ ಹೊಗಳ್ತಾರೆ.+ ನೀವು ಶಾಶ್ವತಕ್ಕೂ ಜೀವನವನ್ನ ಆನಂದಿಸಬೇಕು.* 27  ಭೂಮಿಯ ಮೂಲೆಮೂಲೆಯಲ್ಲೂ ಯೆಹೋವನನ್ನ ನೆನಪಿಸ್ಕೊಳ್ತಾರೆ, ಆತನ ಕಡೆ ತಿರುಗ್ತಾರೆ. ದೇಶಗಳ ಎಲ್ಲ ಕುಟುಂಬಗಳು ನಿನ್ನ ಮುಂದೆ ಬಗ್ಗಿ ನಮಸ್ಕರಿಸ್ತಾರೆ.+ 28  ಯಾಕಂದ್ರೆ ಆಳೋ ಅಧಿಕಾರ ಯೆಹೋವನಿಗೆ ಮಾತ್ರ ಇದೆ,+ಆತನು ಎಲ್ಲ ದೇಶಗಳನ್ನ ಆಳ್ತಾನೆ. 29  ಭೂಮಿ ಮೇಲಿರೋ ಎಲ್ಲ ಶ್ರೀಮಂತರು* ಊಟಮಾಡಿ ಆತನಿಗೆ ಬಗ್ಗಿ ನಮಸ್ಕರಿಸ್ತಾರೆ,ಮಣ್ಣಿಗೆ ಸೇರೋರೆಲ್ಲ ಆತನ ಮುಂದೆ ಮೊಣಕಾಲೂರಿ ಕೂತ್ಕೊತಾರೆ,ಅವರು ಯಾರೂ ತಮ್ಮ ಜೀವನ ಕಾಪಾಡ್ಕೊಳ್ಳೋಕೆ ಆಗಲ್ಲ. 30  ಅವ್ರ ವಂಶದವರು ಆತನನ್ನ ಆರಾಧಿಸ್ತಾರೆ,ಮುಂದೆ ಬರೋ ಪೀಳಿಗೆ ಯೆಹೋವನ ಬಗ್ಗೆ ಕಲಿಯುತ್ತೆ. 31  ಅವರು ಬಂದು ಆತನ ನೀತಿಯ ಬಗ್ಗೆ ಹೇಳ್ತಾರೆ. ಆತನು ಮಾಡಿದ ಎಲ್ಲ ವಿಷ್ಯಗಳ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸ್ತಾರೆ.

ಪಾದಟಿಪ್ಪಣಿ

ಬಹುಶಃ ಸ್ವರದ ಹೆಸರು ಅಥವಾ ಸಂಗೀತ ಶೈಲಿ.
ಅಥವಾ “ನಾಚಿಕೆ ಆಗಲಿಲ್ಲ.”
ಅಥವಾ “ಅಲಕ್ಷಿಸ್ತಾರೆ.”
ಅಕ್ಷ. “ಹೃದಯ ನಿತ್ಯನಿರಂತರಕ್ಕೂ ಬಡಿಬೇಕು.”
ಅಕ್ಷ. “ಕೊಬ್ಬಿದವರು.”