ಅರಣ್ಯಕಾಂಡ 36:1-13

  • ಸ್ತ್ರೀ ವಾರಸುದಾರರ ಮದುವೆಯ ಬಗ್ಗೆ ನಿಯಮ (1-13)

36  ಯೋಸೇಫನ ಮರಿಮೊಮ್ಮಗನೂ ಮನಸ್ಸೆಯ ಮೊಮ್ಮಗನೂ ಮಾಕೀರನ+ ಮಗನೂ ಆದ ಗಿಲ್ಯಾದನ ವಂಶದವರ ಮುಖ್ಯಸ್ಥರು ಮೋಶೆ ಮತ್ತು ಇಸ್ರಾಯೇಲ್ಯರ ಪ್ರಧಾನರ ಹತ್ರ ಬಂದು  “ಸ್ವಾಮಿ, ದೇಶವನ್ನ ಚೀಟು ಹಾಕಿ ಹಂಚಿ+ ಇಸ್ರಾಯೇಲ್ಯರಿಗೆ ಆಸ್ತಿಯಾಗಿ ಕೊಡು ಅಂತ ಯೆಹೋವ ನಿನಗೆ ಹೇಳಿದ್ದನು. ನಮ್ಮ ಸಹೋದರನಾದ ಚಲ್ಪಹಾದನ ಆಸ್ತಿಯನ್ನ ಅವನ ಹೆಣ್ಣು ಮಕ್ಕಳಿಗೆ ಕೊಡಬೇಕು ಅಂತ ಯೆಹೋವ ನಿನಗೆ ಹೇಳಿದ್ದನು.+  ಆ ಹೆಣ್ಣು ಮಕ್ಕಳು ಇಸ್ರಾಯೇಲ್ಯರ ಬೇರೆ ಕುಲದ ಗಂಡಸರನ್ನ ಮದುವೆ ಆದ್ರೆ ಅವರು ಮದುವೆಯಾಗಿ ಹೋಗೋ ಕುಲಕ್ಕೆ ಅವ್ರ ಆಸ್ತಿ ಸೇರುತ್ತೆ. ಆಗ ನಮ್ಮ ಪೂರ್ವಜರಿಗೆ ಸೇರಿದ ಆಸ್ತಿಯನ್ನ ಅಂದ್ರೆ ನಮ್ಮ ಕುಲಕ್ಕೆ ಕೊಟ್ಟ ಜಮೀನನ್ನ ನಾವು ಕಳ್ಕೊತೀವಿ.  ಬಿಡುಗಡೆಯ ವರ್ಷದಲ್ಲೂ*+ ಆ ಆಸ್ತಿ ನಮ್ಮ ಕುಲಕ್ಕೆ ವಾಪಸ್‌ ಸಿಗಲ್ಲ. ಅವರು ಮದುವೆಯಾಗಿ ಹೋಗಿರೋ ಕುಲಕ್ಕೇ ಅದು ಸೇರುತ್ತೆ. ಇದ್ರಿಂದ ನಮ್ಮ ಪೂರ್ವಜರ ಕುಲಕ್ಕೆ ಸಿಕ್ಕಿದ ಆಸ್ತಿ ಕಳ್ಕೊತೀವಿ” ಅಂದ್ರು.  ಮೋಶೆ ಆ ವಿಷ್ಯದಲ್ಲಿ ಯೆಹೋವ ಹೇಳೋದು ಏನಂತ ತಿಳ್ಕೊಂಡ. ಆಮೇಲೆ ಇಸ್ರಾಯೇಲ್ಯರಿಗೆ “ಯೋಸೇಫ ವಂಶದ ಕುಲದವರು ಹೇಳ್ತಿರೋದು ಸರಿ.  ಯೆಹೋವ ಚಲ್ಪಹಾದನ ಹೆಣ್ಣು ಮಕ್ಕಳ ವಿಷ್ಯದಲ್ಲಿ ‘ಅವರು ತಮ್ಮ ತಂದೆ ಕುಲದ ಕುಟುಂಬಗಳಲ್ಲಿ ಇರೋ ಗಂಡಸರನ್ನೇ ಮದುವೆ ಆಗಬೇಕು. ಅವ್ರಲ್ಲಿ ತಮಗಿಷ್ಟ ಆದವರನ್ನ ಆ ಹೆಣ್ಣು ಮಕ್ಕಳು ಮದುವೆ ಆಗಬಹುದು.  ಇಸ್ರಾಯೇಲ್ಯರು ತಮ್ಮ ಪೂರ್ವಜರ ಕುಲಕ್ಕೆ ಸೇರಿದ ಆಸ್ತಿಯನ್ನ ತಮ್ಮಲ್ಲೇ ಉಳಿಸ್ಕೊಳ್ಳಬೇಕು. ಹಾಗಾಗಿ ಒಂದು ಕುಲಕ್ಕೆ ಸೇರಿದ ಆಸ್ತಿ ಇನ್ನೊಂದು ಕುಲಕ್ಕೆ ಹೋಗಬಾರದು.  ಇಸ್ರಾಯೇಲ್ಯರಲ್ಲಿ ಯಾವ ಹೆಣ್ಣುಮಕ್ಕಳಿಗೆ ತಮ್ಮ ತಂದೆ ಆಸ್ತಿ ಸಿಗುತ್ತೋ ಅವರು ತಮ್ಮ ತಂದೆ ಕುಲದವರನ್ನೇ ಮದುವೆ ಆಗಬೇಕು.+ ಇದ್ರಿಂದ ಇಸ್ರಾಯೇಲ್ಯರು ತಮ್ಮ ಪೂರ್ವಜರ ಆಸ್ತಿ ತಮ್ಮ ಕುಲದಲ್ಲೇ ಉಳಿಸ್ಕೊಳ್ಳೋಕೆ ಆಗುತ್ತೆ.  ಇಸ್ರಾಯೇಲ್ಯರ ಪ್ರತಿಯೊಂದು ಕುಲದವರು ತಮಗೆ ಸೇರಿದ ಆಸ್ತಿಯನ್ನ ತಮ್ಮಲ್ಲೇ ಉಳಿಸ್ಕೊಳ್ಳಬೇಕು. ಯಾಕಂದ್ರೆ ಒಂದು ಕುಲಕ್ಕೆ ಸೇರಿದ ಆಸ್ತಿ ಇನ್ನೊಂದು ಕುಲಕ್ಕೆ ಹೋಗಬಾರದು’ ಅಂತ ಆಜ್ಞೆ ಕೊಟ್ಟಿದ್ದಾನೆ” ಅಂದ. 10  ಯೆಹೋವ ಮೋಶೆಗೆ ಹೇಳಿದ ಹಾಗೇ ಚಲ್ಪಹಾದನ ಹೆಣ್ಣು ಮಕ್ಕಳು ಮಾಡಿದ್ರು.+ 11  ಮಹ್ಲಾ, ತಿರ್ಚಾ, ಹೊಗ್ಲಾ, ಮಿಲ್ಕ, ನೋವಾ+ ತಮ್ಮ ತಂದೆಯ ಅಣ್ಣತಮ್ಮಂದಿರ ಗಂಡು ಮಕ್ಕಳನ್ನ ಮದುವೆ ಆದ್ರು. 12  ತಮ್ಮ ಆಸ್ತಿ ತಮ್ಮ ತಂದೆಯ ಕುಲದಲ್ಲೇ ಇರೋ ಹಾಗೆ ಅವರು ಯೋಸೇಫನ ಮಗ ಮನಸ್ಸೆಯ ಕುಟುಂಬಗಳಿಗೆ ಸೇರಿದವರನ್ನೇ ಮದುವೆ ಆದ್ರು. 13  ಯೆರಿಕೋ ಪಟ್ಟಣದ ಹತ್ರ ಯೋರ್ದನ್‌ ನದಿ ಪಕ್ಕ ಇರೋ ಮೋವಾಬ್‌ ಬಯಲು ಪ್ರದೇಶಗಳಲ್ಲಿ+ ಯೆಹೋವ ಮೋಶೆ ಮೂಲಕ ಇಸ್ರಾಯೇಲ್ಯರಿಗೆ ಈ ತೀರ್ಪುಗಳನ್ನ, ಆಜ್ಞೆಗಳನ್ನ ಕೊಟ್ಟನು.

ಪಾದಟಿಪ್ಪಣಿ

ಅಥವಾ “ಜೂಬಿಲಿ ವರ್ಷದಲ್ಲೂ.” ಪದವಿವರಣೆ ನೋಡಿ.