ಅರಣ್ಯಕಾಂಡ 22:1-41

  • ಬಾಲಾಕ ಬಿಳಾಮನನ್ನ ಕರಿಸಿದ (1-21)

  • ಬಿಳಾಮನ ಕತ್ತೆ ಮಾತಾಡ್ತು (22-41)

22  ಇಸ್ರಾಯೇಲ್ಯರು ಅಲ್ಲಿಂದ ಮೋವಾಬಿನ ಬಯಲು ಪ್ರದೇಶಕ್ಕೆ ಬಂದು ಅಲ್ಲಿ ಡೇರೆ ಹಾಕೊಂಡ್ರು. ಅದು ಯೆರಿಕೋ ಪಟ್ಟಣದ ಮುಂದೆ, ಯೋರ್ದನ್‌ ನದಿ ಪಕ್ಕದಲ್ಲಿ ಇತ್ತು.+  ಇಸ್ರಾಯೇಲ್ಯರು ಅಮೋರಿಯರಿಗೆ ಮಾಡಿದ್ದೆಲ್ಲ ಚಿಪ್ಪೋರನ ಮಗ ಬಾಲಾಕನಿಗೆ ಗೊತ್ತಾಯ್ತು.+  ಇಸ್ರಾಯೇಲ್ಯರ ಸಂಖ್ಯೆ ತುಂಬ ಜಾಸ್ತಿಯಾಗ್ತಾ ಇದ್ದದ್ದಕ್ಕೆ ಮೋವಾಬ್ಯರು ಭಯಪಟ್ರು. ಇಸ್ರಾಯೇಲ್ಯರನ್ನ ನೆನಸ್ಕೊಂಡ್ರೆ ಅವ್ರಿಗೆ ನಡುಕ ಬರ್ತಿತ್ತು.+  ಅದಕ್ಕೆ ಮೋವಾಬ್ಯರು ಮಿದ್ಯಾನಿನ+ ಹಿರಿಯರಿಗೆ “ಹೋರಿ ಹೊಲದ ಹುಲ್ಲನ್ನೆಲ್ಲ ಮೇಯ್ದು ಬಿಡೋ ತರ ಈ ಜನ ನಮ್ಮ ಪ್ರದೇಶಗಳನ್ನ ನಾಶ ಮಾಡಿಬಿಡ್ತಾರೆ” ಅಂದ್ರು. ಆಗ ಚಿಪ್ಪೋರನ ಮಗ ಬಾಲಾಕ ಮೋವಾಬಿನ ರಾಜನಾಗಿದ್ದ.  ಅವನು ಬೆಯೋರನ ಮಗ ಬಿಳಾಮನನ್ನ ಬರೋಕೆ ಹೇಳ್ತಾ ಸಂದೇಶವಾಹಕರನ್ನ ಕಳಿಸಿದ. ಬಿಳಾಮ ಯೂಫ್ರೆಟಿಸ್‌ ನದಿ ಹತ್ರ ಇರೋ ತನ್ನ ಹುಟ್ಟೂರಾದ ಪೆತೋರಿನಲ್ಲಿ ಇದ್ದ.+ ಬಾಲಾಕ ಅವನಿಗೆ “ಈಜಿಪ್ಟ್‌ ದೇಶದಿಂದ ಒಂದು ಜನಾಂಗ ಬಂದಿದೆ. ನೆಲಾನೇ ಕಾಣಿಸದೆ ಇರೋ ತರ ಎಲ್ಲ ಕಡೆ ತುಂಬ್ಕೊಳ್ತಾ ಇದ್ದಾರೆ!+ ಅವರು ನನ್ನ ಪ್ರದೇಶದ ಹತ್ರಾನೇ ವಾಸ ಮಾಡ್ತಾರೆ.  ಅವರು ನಮಗಿಂತ ತುಂಬ ಶಕ್ತಿಶಾಲಿ. ಅದಕ್ಕೆ ದಯವಿಟ್ಟು ನೀನು ಬಂದು ಅವರಿಗೆ ಶಾಪ ಹಾಕು.+ ಆಗ ನನಗೆ ಅವರನ್ನ ಸೋಲಿಸಿ ಈ ದೇಶದಿಂದ ಓಡಿಸಿಬಿಡೋಕೆ ಆಗುತ್ತೆ. ನೀನು ಯಾರಿಗೆ ಆಶೀರ್ವಾದ ಮಾಡ್ತೀಯೋ ಅವ್ರಿಗೆ ಒಳ್ಳೇದಾಗುತ್ತೆ. ಯಾರಿಗೆ ಶಾಪ ಕೊಡ್ತೀಯೋ ಅವ್ರಿಗೆ ಕೆಟ್ಟದಾಗುತ್ತೆ ಅಂತ ನನಗೆ ಚೆನ್ನಾಗಿ ಗೊತ್ತು” ಅಂತ ಹೇಳಿ ಕಳಿಸಿದ.  ಹಾಗಾಗಿ ಮೋವಾಬಿನ ಹಿರಿಯರು, ಮಿದ್ಯಾನಿನ ಹಿರಿಯರು ಹಣ ಕೊಟ್ಟು ಶಾಪ ಹಾಕಿಸೋಕೆ ಬಿಳಾಮ+ ಇದ್ದ ಊರಿಗೆ ಹೋದ್ರು. ಬಾಲಾಕ ಹೇಳಿದ್ದನ್ನ ಅವನಿಗೆ ಹೇಳಿದ್ರು.  ಆಗ ಬಿಳಾಮ ಅವರಿಗೆ “ಇವತ್ತು ರಾತ್ರಿ ಇಲ್ಲೇ ಇರಿ. ಯೆಹೋವ ಏನು ಹೇಳ್ತಾನೋ ನೋಡಿ ನಿಮ್ಗೆ ಹೇಳ್ತೀನಿ” ಅಂದ. ಅದಕ್ಕೆ ಮೋವಾಬಿನ ಅಧಿಕಾರಿಗಳು ಅಲ್ಲೇ ಉಳ್ಕೊಂಡ್ರು.  ಆಮೇಲೆ ದೇವರು ಬಿಳಾಮನ ಹತ್ರ ಬಂದು+ “ನಿನ್ನ ಜೊತೆ ಇರೋ ಈ ಗಂಡಸರು ಯಾರು?” ಅಂತ ಕೇಳಿದನು. 10  ಆಗ ಬಿಳಾಮ ಸತ್ಯ ದೇವರಿಗೆ “ಚಿಪ್ಪೋರನ ಮಗ, ಮೋವಾಬಿನ ರಾಜ ಬಾಲಾಕ ಇವರನ್ನ ಕಳಿಸಿದ್ದಾನೆ. ಬಾಲಾಕ ನನಗೆ 11  ‘ಈಜಿಪ್ಟಿಂದ ಒಂದು ಜನಾಂಗ ಬಂದಿದೆ. ನೆಲಾನೇ ಕಾಣಿಸದೆ ಇರೋ ತರ ಎಲ್ಲ ಕಡೆ ತುಂಬ್ಕೊಳ್ತಾ ಇದ್ದಾರೆ! ನೀನು ಬಂದು ಅವ್ರಿಗೆ ಶಾಪ ಹಾಕು.+ ಆಗ ನನಗೆ ಅವರನ್ನ ಸೋಲಿಸಿ ಈ ದೇಶದಿಂದ ಓಡಿಸಿಬಿಡೋಕೆ ಆಗುತ್ತೆ’ ಅಂತ ಹೇಳಿ ಕಳಿಸಿದ್ದಾನೆ” ಅಂದ. 12  ಅದಕ್ಕೆ ದೇವರು “ನೀನು ಅವ್ರ ಜೊತೆ ಹೋಗಬಾರದು. ಆ ಜನ್ರಿಗೆ ಶಾಪ ಹಾಕಬಾರದು. ಯಾಕಂದ್ರೆ ನಾನು ಅವರಿಗೆ ಆಶೀರ್ವಾದ ಮಾಡ್ತೀನಿ”+ ಅಂದನು. 13  ಬಿಳಾಮ ಬೆಳಗ್ಗೆ ಎದ್ದು ಬಾಲಾಕನ ಅಧಿಕಾರಿಗಳಿಗೆ “ನಿಮ್ಮ ದೇಶಕ್ಕೆ ವಾಪಸ್‌ ಹೋಗಿ. ನಾನು ನಿಮ್ಮ ಜೊತೆ ಬರಕ್ಕಾಗಲ್ಲ, ಯಾಕಂದ್ರೆ ಯೆಹೋವ ನನಗೆ ಒಪ್ಪಿಗೆ ಕೊಡಲಿಲ್ಲ” ಅಂದ. 14  ಹಾಗಾಗಿ ಮೋವಾಬಿನ ಅಧಿಕಾರಿಗಳು ಅಲ್ಲಿಂದ ಬಾಲಾಕನ ಹತ್ರ ವಾಪಸ್‌ ಬಂದು “ಬಿಳಾಮ ಬರೋಕೆ ಒಪ್ಪಲಿಲ್ಲ” ಅಂದ್ರು. 15  ಆದ್ರೆ ಬಾಲಾಕ ಇನ್ನೂ ಹೆಚ್ಚು ಅಧಿಕಾರಿಗಳನ್ನ ಬಿಳಾಮನ ಹತ್ರ ಕಳಿಸಿದ. ಅವರು ಮೊದ್ಲು ಬಂದವರಿಗಿಂತ ಹೆಸರುವಾಸಿ ಆದ ವ್ಯಕ್ತಿಗಳಾಗಿದ್ರು. 16  ಅವರು ಬಿಳಾಮನ ಹತ್ರ ಬಂದು “ಚಿಪ್ಪೋರನ ಮಗ ಬಾಲಾಕ ಹೀಗೆ ಹೇಳ್ತಿದ್ದಾನೆ, ‘ನೀನು ದಯವಿಟ್ಟು ನನ್ನ ಹತ್ರ ಬಾ. ಏನೇ ಆದ್ರೂ ಬರಲೇಬೇಕು. 17  ನಾನು ನಿನಗೆ ದೊಡ್ಡ ಸನ್ಮಾನ ಮಾಡ್ತೀನಿ. ನೀನು ಏನೇ ಹೇಳಿದ್ರೂ ನಾನದನ್ನ ಮಾಡ್ತೀನಿ. ದಯವಿಟ್ಟು ನನಗೋಸ್ಕರ ಇಲ್ಲಿಗೆ ಬಂದು ಈ ಜನ್ರಿಗೆ ಶಾಪ ಹಾಕು’” ಅಂದ್ರು. 18  ಅದಕ್ಕೆ ಬಿಳಾಮ “ಬಾಲಾಕ ಅವನ ಹತ್ರ ಇರೋ ಚಿನ್ನಬೆಳ್ಳಿ ತುಂಬಿಸಿ ಕೊಟ್ರೂ ನನ್ನ ದೇವರಾದ ಯೆಹೋವನ ಅಪ್ಪಣೆನ ಮೀರಿ ನನ್ನಿಂದ ಏನೂ ಮಾಡಕ್ಕಾಗಲ್ಲ. ಅದು ಚಿಕ್ಕದಿರಲಿ ದೊಡ್ಡದಿರಲಿ ನನ್ನಿಂದಾಗಲ್ಲ.+ 19  ಆದ್ರೆ ನೀವು ಒಂದು ಕೆಲಸ ಮಾಡಿ. ದಯವಿಟ್ಟು ಇವತ್ತು ರಾತ್ರಿನೂ ಇಲ್ಲೇ ಇರಿ. ಯೆಹೋವ ಬೇರೆ ಏನಾದ್ರೂ ಉತ್ರ ಕೊಡ್ತಾನಾ ಅಂತ ನೋಡೋಣ”+ ಅಂದ. 20  ಆ ರಾತ್ರಿ ದೇವರು ಬಿಳಾಮನ ಹತ್ರ ಬಂದು “ಈ ಗಂಡಸರು ನಿನ್ನ ಕರಿಯೋಕೆ ಬಂದಿರೋದಾದ್ರೆ ನೀನು ಅವ್ರ ಜೊತೆ ಹೋಗು. ಆದ್ರೆ ನಾನು ನಿನಗೆ ತಿಳಿಸೋ ಮಾತುಗಳನ್ನ ಬಿಟ್ಟು ಬೇರೇನೂ ಹೇಳ್ಬಾರದು”+ ಅಂದ. 21  ಅದಕ್ಕೆ ಬಿಳಾಮ ಬೆಳಗ್ಗೆ ಎದ್ದು ಕತ್ತೆನ ಸಿದ್ಧಮಾಡಿ ಮೋವಾಬಿನ ಅಧಿಕಾರಿಗಳ ಜೊತೆ ಹೊರಟ.+ 22  ಆದ್ರೆ ಬಿಳಾಮ ಹೋಗಿದ್ದಕ್ಕೆ ದೇವರಿಗೆ ಅವನ ಮೇಲೆ ತುಂಬ ಕೋಪ ಬಂತು. ಅದಕ್ಕೆ ಅವನನ್ನ ತಡಿಯೋಕೆ ಯೆಹೋವನ ದೂತ ದಾರಿಲಿ ನಿಂತ. ಬಿಳಾಮ ಕತ್ತೆ ಮೇಲೆ ಸವಾರಿ ಮಾಡ್ತಿದ್ದ. ಅವನ ಜೊತೆ ಅವನ ಇಬ್ರು ಸೇವಕರು ಇದ್ರು. 23  ಯೆಹೋವನ ದೂತ ಕತ್ತಿ ಹಿಡ್ಕೊಂಡು ದಾರಿಲಿ ನಿಂತಿರೋದನ್ನ ಬಿಳಾಮನ ಕತ್ತೆ ನೋಡಿ ದಾರಿ ಬಿಟ್ಟು ಬಯಲಿನ ಕಡೆ ಹೋಗೋಕೆ ಪ್ರಯತ್ನಿಸ್ತು. ಆಗ ಬಿಳಾಮ ಕತ್ತೆನ ದಾರಿ ಕಡೆ ತಿರುಗಿಸೋಕೆ ರಪರಪ ಅಂತ ಹೊಡಿಯೋಕೆ ಶುರು ಮಾಡ್ದ. 24  ಆಮೇಲೆ ಯೆಹೋವನ ದೂತ ಎರಡು ದ್ರಾಕ್ಷಿತೋಟಗಳ ಮಧ್ಯದಲ್ಲಿದ್ದ ಚಿಕ್ಕ ದಾರಿಲಿ ನಿಂತ. ಆ ದಾರಿಯ ಎರಡೂ ಬದಿಗಳಲ್ಲಿ ಕಲ್ಲಿನ ಗೋಡೆ ಇತ್ತು. 25  ಕತ್ತೆ ಯೆಹೋವನ ದೂತನನ್ನ ನೋಡಿ ಗೋಡೆಗೆ ಒರಗಿ ನಿಲ್ಲೋಕೆ ಪ್ರಯತ್ನಿಸ್ತಾ ಬಿಳಾಮನ ಕಾಲನ್ನ ಗೋಡೆಗೆ ಒತ್ತಿತು. ಆಗ ಬಿಳಾಮ ಮತ್ತೆ ಕತ್ತೆಗೆ ಜೋರಾಗಿ ಹೊಡಿಯೋಕೆ ಶುರು ಮಾಡಿದ. 26  ಯೆಹೋವನ ದೂತ ಮತ್ತೆ ಮುಂದೆ ಹೋಗಿ ಎಡಕ್ಕಾಗ್ಲಿ ಬಲಕ್ಕಾಗ್ಲಿ ತಿರುಗೋಕೆ ಆಗದಷ್ಟು ಇಕ್ಕಟ್ಟಾದ ಜಾಗದಲ್ಲಿ ನಿಂತ. 27  ಕತ್ತೆ ಯೆಹೋವನ ದೂತನನ್ನ ನೋಡಿದ ತಕ್ಷಣ ನೆಲದ ಮೇಲೆ ಕೂತ್ಕೊಳ್ತು. ಆಗ ಬಿಳಾಮನಿಗೆ ಕೋಪ ನೆತ್ತಿಗೇರಿ ಕೋಲಿಂದ ಕತ್ತೆಗೆ ಹೊಡಿಯೋಕೆ ಶುರು ಮಾಡ್ದ. 28  ಆಗ ಕತ್ತೆ ಮಾತಾಡೊ ತರ ಯೆಹೋವ ಮಾಡಿದನು.+ ಕತ್ತೆ ಬಿಳಾಮನಿಗೆ “ನಾನೇನ್‌ ಮಾಡ್ದೆ ಅಂತ ನೀನು ನನ್ನ ಮೂರು ಸಲ ಹೊಡ್ದೆ?”+ ಅಂತ ಕೇಳ್ತು. 29  ಆಗ ಬಿಳಾಮ ಕತ್ತೆಗೆ “ನೀನು ನನಗೆ ಕಾಟ ಕೊಡ್ತಾ ಇದ್ದೀಯ. ನನ್ನ ಕೈಯಲ್ಲೇನಾದ್ರೂ ಕತ್ತಿ ಇದ್ದಿದ್ರೆ ನಿನ್ನ ಕೊಂದೇ ಹಾಕ್ತಿದ್ದೆ!” ಅಂದ. 30  ಅದಕ್ಕೆ ಕತ್ತೆ “ನೀನು ಜೀವನಪೂರ್ತಿ ನನ್ನ ಮೇಲೆ ಸವಾರಿ ಮಾಡಿದ್ದೀಯ ತಾನೇ. ಯಾವತ್ತಾದ್ರೂ ಈ ತರ ಮಾಡಿದ್ದೀನಾ?” ಅಂತು. ಬಿಳಾಮ “ಇಲ್ಲ” ಅಂದ. 31  ಆಗ ಯೆಹೋವ ಬಿಳಾಮನ ಕಣ್ಣು ತೆರೆದನು.+ ಅವನಿಗೆ ಯೆಹೋವನ ದೂತ ಕೈಯಲ್ಲಿ ಕತ್ತಿ ಹಿಡಿದು ದಾರಿಲಿ ನಿಂತಿರೋದು ಕಾಣಿಸ್ತು. ತಕ್ಷಣ ಅವನು ನೆಲದ ತನಕ ಬಗ್ಗಿ ನಮಸ್ಕಾರ ಮಾಡಿದ. 32  ಆಗ ಯೆಹೋವನ ದೂತ “ಕತ್ತೆಗೆ ಮೂರು ಸಲ ಯಾಕೆ ಹೊಡ್ದೆ? ನನ್ನ ಇಷ್ಟಕ್ಕೆ ವಿರುದ್ಧವಾದ ದಾರಿ ಹಿಡಿದಿದ್ದಕ್ಕೆ ತಡಿಯೋಕೆ ಬಂದೆ.+ 33  ಮೂರು ಸಲ ನಿನ್ನನ್ನ ತಡ್ದೆ. ಆ ಮೂರೂ ಸಲ ನಿನ್ನ ಕತ್ತೆ ನನ್ನ ನೋಡಿ ದಾರಿಯಿಂದ ಪಕ್ಕಕ್ಕೆ ಸರಿಯೋಕೆ ನೋಡ್ತು.+ ಒಂದುವೇಳೆ ಅದು ಹಾಗೆ ಮಾಡದೇ ಇದ್ದಿದ್ರೆ ನಾನು ನಿನ್ನ ಕೊಂದು ಕತ್ತೆನ ಉಳಿಸ್ತಿದ್ದೆ” ಅಂದ. 34  ಬಿಳಾಮ ಯೆಹೋವನ ದೂತನಿಗೆ “ನಾನು ಪಾಪ ಮಾಡ್ದೆ. ನನ್ನ ಭೇಟಿ ಮಾಡೋಕೆ ನೀನು ದಾರಿಲಿ ನಿಂತಿರೋದು ನನಗೆ ಗೊತ್ತಾಗಲಿಲ್ಲ. ನಾನು ಹೋಗೋದು ನಿನಗಿಷ್ಟ ಇಲ್ಲಾಂದ್ರೆ ವಾಪಸ್‌ ಹೋಗ್ತೀನಿ” ಅಂದ. 35  ಯೆಹೋವನ ದೂತ ಬಿಳಾಮನಿಗೆ “ಅವರ ಜೊತೆ ನೀನು ಹೋಗು. ಆದ್ರೆ ನಾನು ಹೇಳೋ ಮಾತುಗಳನ್ನ ಬಿಟ್ಟು ಬೇರೇನೂ ಹೇಳಬಾರದು” ಅಂದ. ಹಾಗಾಗಿ ಬಿಳಾಮ ಬಾಲಾಕನ ಅಧಿಕಾರಿಗಳ ಜೊತೆ ಹೋದ. 36  ಬಿಳಾಮ ಬಂದಿದ್ದಾನೆ ಅನ್ನೋ ಸುದ್ದಿ ಸಿಕ್ಕಿದ ತಕ್ಷಣ ಬಾಲಾಕ ಅವನನ್ನ ಭೇಟಿ ಮಾಡೋಕೆ ಮೋವಾಬ್‌ ಪಟ್ಟಣಕ್ಕೆ ಹೋದ. ಈ ಪಟ್ಟಣ ಅವನ ಪ್ರದೇಶದ ಗಡಿಯಲ್ಲಿರೋ ಅರ್ನೋನ್‌ ಕಣಿವೆ ದಡದಲ್ಲಿದೆ. 37  ಬಾಲಾಕ ಬಿಳಾಮನಿಗೆ “ನಾನು ಮುಂಚೆ ಹೇಳಿ ಕಳಿಸಿದಾಗ ನೀನ್ಯಾಕೆ ಬರಲಿಲ್ಲ? ನಿನಗೆ ದೊಡ್ಡ ಸನ್ಮಾನ ಮಾಡೋಕೆ ನನ್ನಿಂದ ಆಗಲ್ಲ ಅಂತ ನೆನಿಸಿದ್ಯಾ?”+ ಅಂತ ಕೇಳ್ದ. 38  ಅದಕ್ಕೆ ಬಿಳಾಮ “ಈಗ ಬಂದಿದ್ದೀನಲ್ಲಾ. ಆದ್ರೂ ನನ್ನ ಮನಸ್ಸಿಗೆ ಬಂದ ಹಾಗೆ ಮಾತಾಡೋಕೆ ನನಗೆ ಅನುಮತಿ ಇಲ್ಲ. ದೇವರು ನನಗೆ ತಿಳಿಸೋ ಮಾತುಗಳಷ್ಟೇ ನನ್ನಿಂದ ಹೇಳೋಕೆ ಆಗೋದು”+ ಅಂದ. 39  ಆಮೇಲೆ ಬಿಳಾಮ ಬಾಲಾಕನ ಜೊತೆ ಕಿರ್ಯತ್‌-ಹುಚೋತಿಗೆ ಹೋದ. 40  ಅಲ್ಲಿ ಬಾಲಾಕ ಹೋರಿಗಳನ್ನ ಕುರಿಗಳನ್ನ ಬಲಿ ಕೊಟ್ಟ. ಬಲಿಯ ಮಾಂಸದಲ್ಲಿ ಸ್ವಲ್ಪನ ಬಿಳಾಮನಿಗೂ ಅವನ ಜೊತೆ ಇದ್ದ ಅಧಿಕಾರಿಗಳಿಗೂ ಕಳಿಸಿಕೊಟ್ಟ. 41  ಬೆಳಿಗ್ಗೆ ಬಾಲಾಕ ಬಿಳಾಮನನ್ನ ಬಾಮೋತ್‌-ಬಾಳ್‌ ಅನ್ನೋ ಜಾಗಕ್ಕೆ ಕರ್ಕೊಂಡು ಹೋದ. ಅಲ್ಲಿಂದ ಅವನಿಗೆ ಎಲ್ಲ ಇಸ್ರಾಯೇಲ್ಯರನ್ನ ನೋಡೋಕೆ ಆಗ್ತಿತ್ತು.+

ಪಾದಟಿಪ್ಪಣಿ