ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪ್ರಕಾಶಕರಿಂದ ಒಂದೆರಡು ಮಾತು

ಬೈಬಲ್‌ ದೇವರು ಬರೆಸಿರೋ ಪವಿತ್ರ ಪುಸ್ತಕ. ಅದನ್ನ ಓದಿದಾಗ ದೇವರೇ ನಮ್ಮ ಜೊತೆ ಮಾತಾಡಿದ ತರ ಇರುತ್ತೆ. ನಾವು ದೇವರನ್ನ ತಿಳ್ಕೊಬೇಕಂದ್ರೆ ನಾವು ಬೈಬಲನ್ನ ಚೆನ್ನಾಗಿ ಕಲಿಬೇಕು. (ಯೋಹಾನ 17:3; 2 ತಿಮೊತಿ 3:16) ಯೆಹೋವ ದೇವರು ನಮ್ಮ ಬಗ್ಗೆ, ನಮ್ಮ ಮನೆ ಆಗಿರೋ ಈ ಭೂಮಿ ಬಗ್ಗೆ ಮನಸ್ಸಲ್ಲಿ ಏನು ಅಂದ್ಕೊಳ್ತಾನೆ ಅಂತ ಬೈಬಲಿನ ಪುಟಗಳಲ್ಲಿ ಬಿಚ್ಚಿ ಇಟ್ಟಿದ್ದಾನೆ.​—⁠ಆದಿಕಾಂಡ 3:15; ಪ್ರಕಟನೆ 21:​3, 4.

ಜನರ ಜೀವನವನ್ನೇ ಬದಲಾಯಿಸೋ ಶಕ್ತಿ ಈ ಪುಸ್ತಕಕ್ಕೆ ಇದೆ. ಈ ಶಕ್ತಿ ಬೇರೆ ಯಾವ ಪುಸ್ತಕಕ್ಕೂ ಇಲ್ಲ. ಯೆಹೋವ ದೇವರಲ್ಲಿ ಇರೋ ಪ್ರೀತಿ, ದಯೆ, ಕನಿಕರ ಅನ್ನೋ ಗುಣಗಳನ್ನ ನಾವೂ ತೋರಿಸಕ್ಕೆ ಬೈಬಲ್‌ ಪ್ರೋತ್ಸಾಹಿಸುತ್ತೆ. ಎಂಥದ್ದೇ ಕಷ್ಟ ಬಂದ್ರೂ ತಾಳ್ಕೊಂಡು ಒಳ್ಳೇ ಜೀವನಕ್ಕಾಗಿ ಕಾಯೋಕೆ ಈ ಪುಸ್ತಕ ಸಹಾಯಮಾಡುತ್ತೆ. ದೇವರ ಇಷ್ಟಕ್ಕೆ ವಿರುದ್ಧವಾಗಿರೋ ಎಷ್ಟೋ ವಿಷ್ಯಗಳು ಈ ಲೋಕದಲ್ಲಿವೆ. ಆ ಎಲ್ಲ ವಿಷ್ಯಗಳನ್ನ ಈ ಪುಸ್ತಕ ಬಟ್ಟಬಯಲು ಮಾಡ್ತಾನೇ ಇರುತ್ತೆ.​—⁠ಕೀರ್ತನೆ 119:105; ಇಬ್ರಿಯ 4:12; 1 ಯೋಹಾನ 2:​15-17.

ಹೀಬ್ರು, ಅರಾಮಿಕ್‌, ಗ್ರೀಕ್‌ ಭಾಷೆಯಲ್ಲಿ ಬರೆದ ಬೈಬಲ್‌ ಈಗ ಪೂರ್ತಿ ಅಥವಾ ಅದರ ಕೆಲವು ಭಾಗಗಳು 3,000ಕ್ಕಿಂತ ಹೆಚ್ಚು ಭಾಷೆಗಳಲ್ಲಿ ಅನುವಾದ ಆಗಿದೆ. ಇಲ್ಲಿ ತನಕ ಯಾವ ಪುಸ್ತಕಾನೂ ಇಷ್ಟು ಭಾಷೆಗಳಿಗೆ ಅನುವಾದ ಆಗಿಲ್ಲ ಮತ್ತು ಇಷ್ಟು ಹೆಚ್ಚಾಗಿ ಜನ್ರ ಕೈ ಸೇರಿಲ್ಲ. ಯಾಕಂದ್ರೆ ಬೈಬಲಲ್ಲಿರೋ ಒಂದು ಭವಿಷ್ಯವಾಣಿ ನಿಜ ಆಗಬೇಕಿತ್ತು. ಅದೇನಂದ್ರೆ: “ದೇವರ ಆಳ್ವಿಕೆಯ ಈ ಸಿಹಿಸುದ್ದಿ [ಬೈಬಲಿನ ಮುಖ್ಯ ಸಂದೇಶ] ಲೋಕದಲ್ಲಿ ಇರೋ ಎಲ್ಲ ದೇಶಗಳಿಗೆ ಸಾಕ್ಷಿಗಾಗಿ ಸಾರಲಾಗುತ್ತೆ. ಆಮೇಲೆ ಅಂತ್ಯ ಬರುತ್ತೆ.”​—⁠ಮತ್ತಾಯ 24:⁠14.

ಬೈಬಲಿನಲ್ಲಿರೋ ಸಂದೇಶ ತುಂಬ ಪ್ರಾಮುಖ್ಯ ಅಂತ ನಮಗೆ ಗೊತ್ತಾಯ್ತು. ಹಾಗಾಗಿ ಮೂಲಪ್ರತಿಯಲ್ಲಿ ಹೇಗೆ ಇತ್ತೋ ಅದೇ ತರ ಅನುವಾದ ಮಾಡೋಕೆ ಪ್ರಯತ್ನಿಸಿದ್ದೀವಿ. ಅಷ್ಟೇ ಅಲ್ಲ ಓದುವಾಗ ಎಲ್ರಿಗೂ ಅರ್ಥ ಆಗೋ ತರ ಸರಳವಾಗಿ ಮಾಡಿದ್ದೀವಿ. ಈ ಬೈಬಲಿನಲ್ಲಿ ಹೆಚ್ಚಿನ ಮಾಹಿತಿ ನೀಡೋ ಲೇಖನಗಳೂ ಇವೆ. ಭಾಷೆಯಲ್ಲಿ ಆಗಿರೋ ಬದಲಾವಣೆಗಳ ಬಗ್ಗೆ ತಿಳಿಯೋಕೆ “ಬೈಬಲ್‌ ಭಾಷಾಂತರದ ಹಿಂದಿರೋ ತತ್ವಗಳು,” “ಈ ಭಾಷಾಂತರದ ವಿಶೇಷತೆ” ಮತ್ತು “ನಮಗೆ ಬೈಬಲ್‌ ಹೇಗೆ ಸಿಕ್ತು?” ಅನ್ನೋ ಪರಿಶಿಷ್ಟಗಳನ್ನ ಓದಿ.

ಯೆಹೋವ ದೇವರನ್ನ ಪ್ರೀತಿಸಿ ಆರಾಧನೆ ಮಾಡೋ ಜನ್ರು ದೇವರ ಮಾತುಗಳನ್ನ ಸರಿಯಾಗಿ ಅರ್ಥವಾಗೋ ಅನುವಾದದಲ್ಲಿ ಓದೋಕೆ ಇಷ್ಟಪಡ್ತಾರೆ. (1 ತಿಮೊತಿ 2:⁠4) ಹಾಗಾಗಿ ಹೊಸ ಲೋಕ ಭಾಷಾಂತರ ಹೆಚ್ಚಿನ ಭಾಷೆಗಳಲ್ಲಿ ಅನುವಾದ ಆಗಬೇಕು ಅನ್ನೋ ಆಸೆಯಿಂದ ನಾವು ಈ ಬೈಬಲನ್ನ ಕನ್ನಡಕ್ಕೆ ಅನುವಾದ ಮಾಡಿದ್ದೀವಿ. ಪ್ರೀತಿಯ ಓದುಗರೇ, ನಮ್ಮ ಆಸೆ ಮತ್ತು ನಮ್ಮ ಪ್ರಾರ್ಥನೆ ಏನಂದ್ರೆ, ‘ದೇವರನ್ನ ಹುಡುಕೋಕೆ ಮತ್ತು ಆತನು ನಿಮಗೆ ಸಿಗೋಕೆ’ ನೀವು ಪ್ರಯತ್ನ ಮಾಡ್ತಾ ಇರುವಾಗ ಈ ಪವಿತ್ರ ಬೈಬಲ್‌ ನಿಮಗೆ ಸಹಾಯ ಮಾಡಲಿ.​—⁠ಅಪೊಸ್ತಲರ ಕಾರ್ಯ 17:⁠27.

ಹೊಸ ಲೋಕ ಬೈಬಲ್‌ ಭಾಷಾಂತರ ಸಮಿತಿ