ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಎ2

ಈ ಭಾಷಾಂತರದ ವಿಶೇಷತೆ

ಹೊಸ ಲೋಕ ಭಾಷಾಂತರದ ಕ್ರೈಸ್ತ ಗ್ರೀಕ್‌ ಗ್ರಂಥ ಇಂಗ್ಲಿಷ್‌ ಭಾಷೆಯಲ್ಲಿ 1950ರಲ್ಲಿ ಬಿಡುಗಡೆ ಆಯ್ತು. ಇದೇ ಭಾಷಾಂತರದ ಇಡೀ ಬೈಬಲ್‌ 1961ರಲ್ಲಿ ಬಿಡುಗಡೆ ಆಯ್ತು. ಈ ಭಾಷಾಂತರವನ್ನ ಬೈಬಲನ್ನು ಮೊದಲು ಬರೆದ ಭಾಷೆಗಳಿಂದ ಅಂದರೆ ಹೀಬ್ರು, ಅರಾಮಿಕ್‌ ಮತ್ತು ಗ್ರೀಕ್‌ ಭಾಷೆಗಳಿಂದ ಅನುವಾದ ಮಾಡಲಾಗಿದೆ. ಇದರಲ್ಲಿ ಪ್ರತಿಯೊಂದನ್ನು ಸರಿಯಾಗಿ ಅನುವಾದ ಮಾಡಲಾಗಿದೆ, ಓದಕ್ಕೂ ಸುಲಭ. ಈ ಭಾಷಾಂತರ 210ಕ್ಕೂ ಹೆಚ್ಚು ಭಾಷೆಗಳಲ್ಲಿ ಇದೆ. ಇದನ್ನು ಓದಿ ಲಕ್ಷಗಟ್ಟಲೆ ಜನ್ರಿಗೆ ಪ್ರಯೋಜನ ಆಗಿದೆ.

ಈಗಿನ ಜನರ ಹೃದಯ ಮುಟ್ಟುವ ಹಾಗೆ ಬೈಬಲ್‌ ಭಾಷಾಂತರ ಆಗಬೇಕು ಅಂತ ಹೊಸ ಲೋಕ ಭಾಷಾಂತರ ಸಮಿತಿಗೆ ಗೊತ್ತಿದೆ. ಹಾಗಾಗಿ ಈ ಭಾಷಾಂತರದಲ್ಲಿ ಬರಹ ಶೈಲಿ, ಪದಗಳನ್ನ ಆರಿಸುವಾಗ ಮುಂದಿನ ವಿಷ್ಯಗಳನ್ನ ಗಮನದಲ್ಲಿ ಇಡಲಾಗಿದೆ.

 • ಈಗಿನ ಜನಸಾಮಾನ್ಯರ ಭಾಷೆ. ಈ ಭಾಷಾಂತರದಲ್ಲಿ ಅರ್ಥವಾಗದ ಹಳೇ ಪದಗಳನ್ನ ಬಳಸಿಲ್ಲ. ಈಗ ಜನ ಬಳಸೋ ಸುಲಭವಾಗಿ ಅರ್ಥವಾಗೋ ಭಾಷೆಯನ್ನ ಬಳಸಲಾಗಿದೆ. ಉದಾಹರಣೆಗೆ, ‘ಪರಮಾಧಿಕಾರಿ ಕರ್ತನಾದ ಯೆಹೋವ’ ಅನ್ನೋದು ಸರಿಯಾದ ಅರ್ಥ ಕೊಡ್ತಿರಲಿಲ್ಲ, ಅಲ್ಲದೆ ಅರ್ಥನೂ ಆಗ್ತಿರಲಿಲ್ಲ. ಹಾಗಾಗಿ ‘ವಿಶ್ವದ ರಾಜ ಯೆಹೋವ’ ಅಂತ ಬದಲಾಯಿಸಲಾಗಿದೆ. (ಆದಿಕಾಂಡ 15:⁠2) ‘ರಕ್ತಾಪರಾಧ’ ಅನ್ನೋ ಪದವನ್ನ ಜನ ಬಳಸ್ತಿಲ್ಲ. ಹಾಗಾಗಿ ಅದನ್ನ ‘ಕೊಲೆ ಅಪರಾಧ’ ‘ಸಾವಿಗೆ ಕಾರಣ’ ‘ಕೊಲೆಗಾರ’ ಅಂತ ಅರ್ಥವಾಗೋ ಹಾಗೆ ಬೇರೆಬೇರೆ ರೀತಿ ಅನುವಾದ ಮಾಡಲಾಗಿದೆ. (ಧರ್ಮೋಪದೇಶಕಾಂಡ 21:⁠9) ‘ಪವಿತ್ರಾತ್ಮ’ ಅನ್ನೋ ಪದದಲ್ಲಿ ಆತ್ಮ ಎನ್ನೋ ಪದ ತಪ್ಪಾದ ಅರ್ಥ ಕೊಡೋದ್ರಿಂದ ‘ಪವಿತ್ರಶಕ್ತಿ’ ಅಂತ ಭಾಷಾಂತರಿಸಲಾಗಿದೆ. (ಆದಿಕಾಂಡ 1:⁠2) ‘ಸೇನಾಧೀಶ್ವರನಾದ ಯೆಹೋವ’ ಅನ್ನೋದನ್ನ ಓದಿದ ಕೂಡಲೇ ಅರ್ಥವಾಗೋ ಹಾಗೆ ‘ಸೈನ್ಯಗಳ ದೇವರಾದ ಯೆಹೋವ’ ಅಂತ ಹಾಕಲಾಗಿದೆ. (1 ಸಮುವೇಲ 1:11) ‘ಹಾದರ, ಜಾರತ್ವ’ ಅನ್ನೋದನ್ನ ‘ಲೈಂಗಿಕ ಅನೈತಿಕತೆ’ ಅಂತ ‘ಸಡಿಲು ನಡತೆ’ ಅನ್ನೋದನ್ನ ‘ನಾಚಿಕೆಗೆಟ್ಟ ನಡತೆ’ ಅಂತ ಅನುವಾದಿಸಲಾಗಿದೆ. (1 ಕೊರಿಂಥ 5:1; ಮಾರ್ಕ 7:22) ‘ಸಮಗ್ರತೆ’ ಅನ್ನೋದು ಎಲ್ಲರಿಗೂ ಅರ್ಥವಾಗಲ್ಲ ಅಂತ ‘ನಿಯತ್ತು, ತಪ್ಪಿಲ್ಲದ, ಪ್ರಾಮಾಣಿಕ’ ಅಂತ ಹಾಕಲಾಗಿದೆ. (ಯೆಹೋಶುವ 24:14) ಇದು ಹೀಬ್ರು ಭಾಷೆಯಲ್ಲಿ ಆ ಪದಕ್ಕಿರೋ ಅರ್ಥವನ್ನು ಸರಿಯಾಗಿ ತಿಳಿಸುತ್ತೆ. ಯೇಸುಗೆ ಕೊಟ್ಟ ಮರಣದಂಡನೆ ಬಗ್ಗೆ ಹೇಳುವಾಗ ‘ಶೂಲಕ್ಕೇರಿಸಿ’ ಅನ್ನೋ ಪದವನ್ನು ಮುಂಚೆ ಬಳಸಲಾಗುತ್ತಿತ್ತು. ಆದ್ರೆ ಜನಸಾಮಾನ್ಯರಿಗೆ ಸಹ ಅರ್ಥ ಆಗೋ ಹಾಗೆ ‘ಮರದ ಕಂಬಕ್ಕೆ ಜಡಿದು’ ಅಂತ ಈಗ ಬಳಸಲಾಗಿದೆ.​—⁠ಮತ್ತಾಯ 20:19; 27:​31, 35.

 • ಸರಿಯಾದ ಅರ್ಥ ಕೊಡುವ ಪದಗಳನ್ನು ಬಳಸಲಾಗಿದೆ. ಹೆಚ್ಚಿನ ಕನ್ನಡ ಬೈಬಲ್‌ಗಳಲ್ಲಿ ಸುಳ್ಳು ಬೋಧನೆಗೆ ಸಂಬಂಧಿಸಿದ ಪದಗಳಿವೆ. ಉದಾಹರಣೆಗೆ, ಹೀಬ್ರು ಭಾಷೆಯಲ್ಲಿರೋ ‘ಷೀಓಲ್‌’ ಮತ್ತು ಗ್ರೀಕ್‌ ಭಾಷೆಯಲ್ಲಿರೋ ‘ಹೇಡೀಸ್‌’ ಅನ್ನೋ ಪದಗಳಿಗೆ ಕೆಲವು ಬೈಬಲ್‌ ಭಾಷಾಂತರ ‘ಪಾತಾಳ’ ಅಂತ ಹೇಳ್ತದೆ. ಈ ಪದ ಮನುಷ್ಯ ಸತ್ತ ಮೇಲೆ ಭೂಮಿಯ ಕೆಳಗೆ ಬದುಕುವ ಒಂದು ಜಾಗ ಇದೆ ಎಂಬ ಅರ್ಥ ಕೊಡುತ್ತೆ. ಆದ್ರೆ ‘ಷೀಓಲ್‌’ ಮತ್ತು ‘ಹೇಡೀಸ್‌’ ಪದಗಳ ಅರ್ಥ ಸತ್ತವರನ್ನೆಲ್ಲ ಹೂಣಿಡುವ ಸಮಾಧಿ. ಹಾಗಾಗಿ ಈ ಭಾಷಾಂತರದಲ್ಲಿ ‘ಪಾತಾಳ’ ಅಥವಾ ‘ಹೇಡೀಸ್‌’ ಅಂತ ಬಳಸದೆ ‘ಸಮಾಧಿ’ ಅಂತ ಬಳಸಲಾಗಿದೆ.​—⁠ಕೀರ್ತನೆ 16:10; ಪ್ರಕಟನೆ 2:27.

  ಹೀಬ್ರು ಭಾಷೆಯ ‘ರೂಆಖ್‌’ ಮತ್ತು ಗ್ರೀಕ್‌ ಭಾಷೆಯ ‘ನ್ಯೂಮಾ’ ಎಂಬ ಪದಗಳನ್ನ ಅನೇಕ ಬೈಬಲ್‌ಗಳಲ್ಲಿ ‘ಆತ್ಮ’ ಅಂತ ಅನುವಾದಿಸಲಾಗಿದೆ. ಇದು ‘ದೇಹಕ್ಕೆ ಸಾವಿದೆ, ಆತ್ಮಕ್ಕೆ ಸಾವಿಲ್ಲ’ ‘ಆತ್ಮ ಅಮರ’ ಅನ್ನೋ ಸುಳ್ಳು ಬೋಧನೆಯನ್ನ ಹುಟ್ಟು ಹಾಕಿದೆ. ಆದ್ರೆ ‘ರೂಆಖ್‌’ ಮತ್ತು ‘ನ್ಯೂಮಾ’ ಪದಗಳ ಅರ್ಥ ಉಸಿರು. ಆ ಪದಗಳಿಗೆ ಮನಸ್ಸು, ಒಳ್ಳೇ ಮತ್ತು ಕೆಟ್ಟ ದೇವದೂತರು, ಜೀವ, ಶಕ್ತಿ, ಪವಿತ್ರಶಕ್ತಿ, ಹುರುಪು, ಗಾಳಿ ಹೀಗೆ ಬೇರೆ ಬೇರೆ ಅರ್ಥಗಳಿವೆ. ಹಾಗಾಗಿ ಈ ಭಾಷಾಂತರದಲ್ಲಿ ಆ ಪದಗಳನ್ನು ಸಂದರ್ಭಕ್ಕೆ ತಕ್ಕ ಹಾಗೆ ಭಾಷಾಂತರ ಮಾಡಲಾಗಿದೆ.​—⁠ಆದಿಕಾಂಡ 6:17; ಅರಣ್ಯಕಾಂಡ 14:24; 1 ಅರಸು 22:21; ಕೀರ್ತನೆ 22:21; ದಾನಿಯೇಲ 4:​8, 8; ಮತ್ತಾಯ 28:19; ಲೂಕ 1:⁠17.

  ಬದಲಾಯಿಸಿರುವ ಇನ್ನೂ ಬೇರೆ ಪದಗಳಿವೆ. ಉದಾಹರಣೆಗೆ, ‘ದೆವ್ವ’ ಪದಕ್ಕೆ ಬದಲಾಗಿ ‘ಕೆಟ್ಟ ದೇವದೂತರು,’ ‘ವಿಮೋಚನ ಮೌಲ್ಯ’ ಅನ್ನೋದಕ್ಕೆ ‘ಬಿಡುಗಡೆ ಬೆಲೆ,’ ‘ಯಾತನಾ ಕಂಬಕ್ಕೆ’ ಬದಲಾಗಿ ‘ಹಿಂಸಾ ಕಂಬ’ ಅಂತ ಅನುವಾದಿಸಲಾಗಿದೆ.

  ಮೇಲೆ ಹೇಳಿರೋ ಆ ಎಲ್ಲ ಬದಲಾವಣೆಗಳ ಬಗ್ಗೆ ತುಂಬ ಯೋಚಿಸಿ, ಚರ್ಚಿಸಿ, ಪ್ರಾರ್ಥನೆ ಮಾಡಿ, ಹೊಸ ಲೋಕ ಭಾಷಾಂತರ ಸಮಿತಿಯ ಸಹಾಯದೊಂದಿದೆ ಮಾಡಲಾಗಿದೆ.

ಈ ಭಾಷಾಂತರದ ಬೇರೆ ವಿಶೇಷತೆಗಳು:

ಈ ಬೈಬಲಿನಲ್ಲಿ ಬೇರೆಬೇರೆ ತರದ ಪಾದಟಿಪ್ಪಣಿಗಳು ಇವೆ:

 • “ಅಥವಾ” ಈ ಪಾದಟಿಪ್ಪಣಿಗಳು ಹೀಬ್ರು, ಅರಾಮಿಕ್‌, ಗ್ರೀಕ್‌ ಭಾಷೆಗಳಲ್ಲಿ ಹೇಳಿರೋ ವಿಷ್ಯಗಳನ್ನ ಅರ್ಥಮಾಡ್ಕೊಳ್ಳೋ ಇನ್ನೊಂದು ರೀತಿಯನ್ನ ತಿಳಿಸುತ್ತೆ, ಆದ್ರೆ ಅದರ ಅರ್ಥ ಬದಲಾಗಿಲ್ಲ.​—⁠ಆದಿಕಾಂಡ 1:2ರಲ್ಲಿ “ಪವಿತ್ರಶಕ್ತಿ” ಮತ್ತು ಯೆಹೋಶುವ 1:8ರಲ್ಲಿ “ಧ್ಯಾನಿಸು” ಅನ್ನೋ ಪದಗಳಿಗೆ ಇರೋ ಪಾದಟಿಪ್ಪಣಿ ನೋಡಿ.

 • “ಬಹುಶಃ” ಒಂದೇ ವಿಷ್ಯವನ್ನ ಬೇರೊಂದು ರೀತಿಯಲ್ಲಿ ಹೇಗೆ ಅರ್ಥ ಮಾಡ್ಕೊಬಹುದು ಅನ್ನೋದನ್ನ ಈ ಪಾದಟಿಪ್ಪಣಿಗಳಲ್ಲಿ ನೋಡಬಹುದು.​—⁠ಆದಿಕಾಂಡ 21:6ರಲ್ಲಿ “ನನ್ನ ಜೊತೆ ನಗ್ತಾರೆ” ಮತ್ತು ಜೆಕರ್ಯ 14:21ರಲ್ಲಿ “ಕಾನಾನ್ಯ” ಅನ್ನೋ ಪದಗಳಿಗೆ ಇರೋ ಪಾದಟಿಪ್ಪಣಿ ನೋಡಿ.

 • “ಅಕ್ಷ.” ಈ ಪಾದಟಿಪ್ಪಣಿಗಳಲ್ಲಿ ಹೀಬ್ರು, ಅರಾಮಿಕ್‌, ಗ್ರೀಕ್‌ ಭಾಷೆಗಳಲ್ಲಿ ಬಳಸಿರೋ ವಿಷ್ಯಗಳನ್ನೇ ಪದಕ್ಕೆ ಪದವಾಗಿ ಅನುವಾದ ಮಾಡಲಾಗಿದೆ ಅಥವಾ ಮೂಲಭಾಷೆಯ ಸರಿಯಾದ ಅರ್ಥವನ್ನ ಹೇಳಲಾಗಿದೆ.​—⁠ಆದಿಕಾಂಡ 2:7ರಲ್ಲಿ “ಜೀವ ಬಂತು” ಮತ್ತು ಮತ್ತಾಯ 5:22ರಲ್ಲಿ “ನಾಶನ” ಅನ್ನೋ ಪದಗಳಿಗೆ ಇರೋ ಪಾದಟಿಪ್ಪಣಿ ನೋಡಿ.

 • ಅರ್ಥ ಮತ್ತು ಹಿನ್ನೆಲೆ ಮಾಹಿತಿ ಹೆಸರುಗಳ ಅರ್ಥ (ಆದಿಕಾಂಡ 3:​17, “ಆದಾಮ”; ವಿಮೋಚನಕಾಂಡ 15:​23, “ಮಾರಾ”); ಭಾರ ಮತ್ತು ಅಳತೆಗಳ ವಿವರ (ಆದಿಕಾಂಡ 6:​15, “ಮೊಳ”); ಸರ್ವನಾಮವನ್ನ ಗುರುತಿಸುವ ಪದಗಳು (ನಹೂಮ 1:​12, “ನಿನಗೆ”); ಪರಿಶಿಷ್ಟ ಮತ್ತು ಪದವಿವರಣೆಯಲ್ಲಿ ಹೆಚ್ಚಿನ ಮಾಹಿತಿ.​—⁠ಆದಿಕಾಂಡ 37:35, “ಸಮಾಧಿ”; ಮತ್ತಾಯ 10:​38, “ಹಿಂಸಾ ಕಂಬ.”

ಆರಂಭದಲ್ಲಿರೋ “ಬೈಬಲಿನ ಪರಿಚಯ” ಅನ್ನೋ ಮೊದಲ ಭಾಗದಲ್ಲಿ ಬೈಬಲಲ್ಲಿರೋ ಮುಖ್ಯ ಬೋಧನೆಗಳನ್ನ ಕಲೀಬಹುದು. ಬೈಬಲಿನ ಕೊನೆ ಪುಸ್ತಕ ಅಂದ್ರೆ ಪ್ರಕಟನೆ ಪುಸ್ತಕ ಮುಗಿದ ಕೂಡಲೇ “ಬೈಬಲ್‌ ಪುಸ್ತಕಗಳ ವಿವರ” ಅನ್ನೋ ಪಟ್ಟಿ ಮತ್ತು “ಬೈಬಲಿನ ಪದವಿವರಣೆ” ಇದೆ. ಬೈಬಲಲ್ಲಿ ಕೆಲವು ಪದಗಳನ್ನ ಯಾವ ಅರ್ಥದಲ್ಲಿ ಬಳಸಲಾಗಿದೆ ಅಂತ ಅರ್ಥ ಮಾಡ್ಕೊಳ್ಳೋಕೆ ಪದವಿವರಣೆ ಸಹಾಯ ಮಾಡುತ್ತೆ. ಪರಿಶಿಷ್ಟ ಎ ವಿಭಾಗದಲ್ಲಿ, “ಬೈಬಲ್‌ ಭಾಷಾಂತರದ ಹಿಂದಿರೋ ತತ್ವಗಳು,” “ ಈ ಭಾಷಾಂತರದ ವಿಶೇಷತೆ,” “ನಮಗೆ ಬೈಬಲ್‌ ಹೇಗೆ ಸಿಕ್ತು?” “ಹೀಬ್ರು ಪವಿತ್ರ ಗ್ರಂಥದಲ್ಲಿ ದೇವರ ಹೆಸ್ರು,” “ಕ್ರೈಸ್ತ ಗ್ರೀಕ್‌ ಪವಿತ್ರ ಗ್ರಂಥದಲ್ಲಿ ದೇವರ ಹೆಸ್ರು,” “ಚಾರ್ಟ್‌: ಯೆಹೂದದ ಮತ್ತು ಇಸ್ರಾಯೇಲಿನ ರಾಜರು, ಪ್ರವಾದಿಗಳು” ಮತ್ತು “ಯೇಸುವಿನ ಜೀವನದಲ್ಲಿ ನಡೆದ ಮುಖ್ಯ ಘಟನೆಗಳು” ಅನ್ನೋ ಲೇಖನಗಳಿವೆ. ಪರಿಶಿಷ್ಟ ಬಿ ವಿಭಾಗದಲ್ಲಿ, ನಕ್ಷೆಗಳು, ಚಾರ್ಟ್‌ಗಳು ಮತ್ತು ಬೈಬಲನ್ನ ಚೆನ್ನಾಗಿ ಅರ್ಥ ಮಾಡ್ಕೊಳ್ಳೋಕೆ ಇಷ್ಟಪಡೋರಿಗೆ ಸಹಾಯ ಆಗೋ ಹೆಚ್ಚಿನ ಮಾಹಿತಿ ಅಲ್ಲಿ ಸಿಗುತ್ತೆ.

ಬೈಬಲಿನ ಪ್ರತಿ ಪುಸ್ತಕದಲ್ಲಿ ಆ ಪುಸ್ತಕದ ಮುಖ್ಯಾಂಶಗಳನ್ನ ಕೊಡಲಾಗಿದೆ. ಮುಖ್ಯಾಂಶದ ಪಕ್ಕದಲ್ಲಿ ಆ ಮುಖ್ಯಾಂಶ ಎಲ್ಲಿ ಬರುತ್ತೆ ಅಂತ ವಚನಗಳನ್ನ ಕೊಡಲಾಗಿದೆ. ಈ ಮುಖ್ಯಾಂಶಗಳನ್ನ ನೋಡಿದ್ರೆ ಸಾಕು ಆ ಇಡೀ ಪುಸ್ತಕದಲ್ಲಿ ಏನೆಲ್ಲ ಇದೆ ಅಂತ ಗೊತ್ತಾಗುತ್ತೆ. ಬೈಬಲ್‌ ವಚನಗಳಿರೋ ಪುಟಗಳ ಮಧ್ಯ ಮಾರ್ಜಿನಲ್‌ ರೆಫರನ್ಸ್‌ಗಳನ್ನ ಕೊಡಲಾಗಿದೆ. ಈ ವಚನಗಳು ಸಂಬಂಧಪಟ್ಟ ಬೇರೆ ವಚನಗಳನ್ನ ಹುಡುಕೋಕೆ ನಮಗೆ ಸಹಾಯ ಮಾಡುತ್ತವೆ.