ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಎ3

ನಮಗೆ ಬೈಬಲ್‌ ಹೇಗೆ ಸಿಕ್ತು?

ಬೈಬಲನ್ನ ಬರೆಸಿದವನೇ ಅದನ್ನ ಇಲ್ಲಿ ತನಕ ಕಾಪಾಡ್ಕೊಂಡು ಬಂದಿದ್ದಾನೆ. ಅದಕ್ಕೆ ಆತನು ಹೀಗೆ ಬರೆಸಿದ್ದಾನೆ:

“ನಮ್ಮ ದೇವರ ಮಾತು ಸದಾಕಾಲ ಉಳಿಯುತ್ತೆ.”—ಯೆಶಾಯ 40:8.

ಮೊದಲು ಬರೆದ ಹೀಬ್ರು, ಅರಾಮಿಕ್‌ a ಅಥವಾ ಗ್ರೀಕ್‌ ಬೈಬಲಿನ ಹಸ್ತಪ್ರತಿಗಳು ಇವತ್ತು ಇಲ್ಲ, ಹಾಗಿದ್ರೂ ಆ ಮಾತು ನಿಜ. ಆದ್ರೆ ನಮಗೊಂದು ಪ್ರಶ್ನೆ ಬರುತ್ತೆ. ನಮ್ಮ ಹತ್ರ ಇರೋ ಬೈಬಲಲ್ಲಿ ಆ ಹಸ್ತಪ್ರತಿಗಳಲ್ಲಿ ಇರೋ ವಿಷ್ಯಗಳೇ ಇದೆ ಅಂತ ಏನು ಗ್ಯಾರಂಟಿ?

ನಕಲು ಮಾಡಿದವರು ದೇವರ ಮಾತನ್ನ ಕಾಪಾಡಿದ್ರು

ಬೈಬಲಿನಲ್ಲಿರೋ ಹೀಬ್ರು ವಚನಗಳು ಇದ್ದ ಹಾಗೇ ಇದೆ ಅಂತ ನಮಗೆ ಗ್ಯಾರಂಟಿ ಸಿಗಬೇಕಂದ್ರೆ ದೇವರು ಆ ಕಾಲದಲ್ಲಿ ಮಾಡಿದ್ದ ಒಂದು ಏರ್ಪಾಡನ್ನ ನಾವು ತಿಳ್ಕೊಬೇಕು. ಅದೇನಂದ್ರೆ ಹೀಬ್ರು ವಚನಗಳನ್ನ ನಕಲು ಮಾಡಿ ಅಂತ ಯೆಹೋವ ದೇವರು ಆಜ್ಞೆ ಕೊಟ್ಟಿದ್ದನು. b ಉದಾಹರಣೆಗೆ ನಿಯಮ ಪುಸ್ತಕದ ಪ್ರತಿಗಳನ್ನ ನಕಲು ಮಾಡ್ಕೊಬೇಕು ಅಂತ ಯೆಹೋವ ದೇವರು ಇಸ್ರಾಯೇಲ್‌ ರಾಜರಿಗೆ ಆಜ್ಞೆ ಕೊಟ್ಟಿದ್ದನು. (ಧರ್ಮೋಪದೇಶಕಾಂಡ 17:18) ಇದ್ರ ಜೊತೆಗೆ ನಿಯಮ ಪುಸ್ತಕವನ್ನ ಕಾಪಾಡೋ ಮತ್ತು ಬೇರೆಯವ್ರಿಗೆ ಕಲಿಸೋ ಜವಾಬ್ದಾರಿಯನ್ನ ದೇವರು ಲೇವಿಯರಿಗೆ ಕೊಟ್ಟಿದ್ದನು. (ಧರ್ಮೋಪದೇಶಕಾಂಡ 31:26; ನೆಹೆಮೀಯ 8:7) ಯೆಹೂದ್ಯರು ಬಾಬೆಲಿನ ಸೆರೆಯಿಂದ ಬಂದ್ಮೇಲೆ ನಕಲು ಮಾಡುವವರ ಗುಂಪು ಅಥವಾ ಪಂಡಿತರ ಗುಂಪು (ಸೊಫೇರಿಮ್‌) ಹುಟ್ಕೊಂಡಿತು. (ಎಜ್ರ 7:​6, ಪಾದಟಿಪ್ಪಣಿಗಳು) ಸಮಯ ಹೋಗ್ತಾ ಹೋಗ್ತಾ ಆ ಪಂಡಿತರು 39 ಹೀಬ್ರು ಪುಸ್ತಕಗಳನ್ನ ನಕಲು ಮಾಡಿ ತುಂಬ ಕಾಪಿಗಳನ್ನ ಮಾಡಿದ್ರು.

ನೂರಾರು ವರ್ಷಗಳಿಂದ ಪಂಡಿತರು ಚಿಕ್ಕಪುಟ್ಟದಕ್ಕೂ ಗಮನಕೊಟ್ಟು ಈ ಪುಸ್ತಕಗಳನ್ನ ತುಂಬ ಜಾಗ್ರತೆಯಿಂದ ನಕಲು ಮಾಡಿದ್ದಾರೆ. ಮಧ್ಯ ಯುಗದಲ್ಲಿ ಮಸೋರೀಟ್ಸ್‌ ಅಂತ ಕರಿಯೋ ಯೆಹೂದಿ ಪಂಡಿತರ ಒಂದು ಗುಂಪು ಆ ಪದ್ಧತಿಯನ್ನ ಹಾಗೇ ಮುಂದುವರಿಸಿದ್ರು. ಮಸೋರೀಟ್ಸ್‌ ನಕಲುಮಾಡಿದ ಒಂದು ಹಸ್ತಪ್ರತಿ ಲೆನಿನ್‌ಗ್ರಾಡ್‌ ಕೋಡಕ್ಸ್‌. ಇದು ತುಂಬ ಹಳೇದು, ಕ್ರಿ.ಶ. 1008/1009ರಲ್ಲಿ ಇದನ್ನ ನಕಲು ಮಾಡಿದ್ರು. 20ನೇ ಶತಮಾನದ ಮಧ್ಯ ಭಾಗದಲ್ಲಿ ಸುಮಾರು 220 ಹಸ್ತಪ್ರತಿಗಳು ಮತ್ತು ಅದ್ರ ತುಂಡುಗಳು ಮೃತ ಸಮುದ್ರದ ಹತ್ರ ಸಿಕ್ಕಿದವು. ಅವು ಲೆನಿನ್‌ಗ್ರಾಡ್‌ ಕೋಡಕ್ಸ್‌ಕ್ಕಿಂತ ಒಂದು ಸಾವಿರ ವರ್ಷ ಹಳೇದು. ಮೃತ ಸಮುದ್ರದ ಸುರುಳಿಯನ್ನ ಲೆನಿನ್‌ಗ್ರಾಡ್‌ ಕೋಡಕ್ಸ್‌ ಜೊತೆ ಹೋಲಿಸಿದಾಗ ಒಂದು ವಿಷ್ಯ ಸ್ಪಷ್ಟವಾಯ್ತು. ಅದೇನಂದ್ರೆ ಮೃತ ಸಮುದ್ರದ ಸುರುಳಿಯಲ್ಲಿರೋ ಪದಗಳಲ್ಲಿ ಅಲ್ಪಸ್ವಲ್ಪ ವ್ಯತ್ಯಾಸ ಇದ್ರೂ ಅದ್ರಲ್ಲಿರೋ ವಿಷ್ಯ ಒಂದೇ ಆಗಿತ್ತು.

ಈಗ ಗ್ರೀಕಿನ 27 ಪುಸ್ತಕಗಳ ಬಗ್ಗೆ ನೋಡೋಣ. ಆ ಪುಸ್ತಕಗಳನ್ನ ಯೇಸುವಿನ ಅಪೊಸ್ತಲರು ಮತ್ತು ಇನ್ನು ಕೆಲವು ಶಿಷ್ಯರು ಬರೆದ್ರು. ಯೆಹೂದಿ ಪಂಡಿತರು ಮಾಡ್ತಿದ್ದ ಹಾಗೆ ಕ್ರೈಸ್ತರು ಆ ಪುಸ್ತಕಗಳ ನಕಲುಗಳನ್ನ ಮಾಡಿದ್ರು. (ಕೊಲೊಸ್ಸೆ 4:16) ರೋಮನ್‌ ಚಕ್ರವರ್ತಿ ಡಯಕ್ಲೀಷನ್‌ ಮತ್ತು ಇನ್ನು ಕೆಲವರು ಮೊದಲಿದ್ದ ಕ್ರೈಸ್ತರು ಬರೆದಿದ್ದ ಎಲ್ಲ ಪುಸ್ತಕಗಳನ್ನ ನಾಶಮಾಡೋಕೆ ಪ್ರಯತ್ನ ಮಾಡಿದ್ರು. ಹಾಗಿದ್ರೂ ಇವತ್ತಿನ ತನಕ ಸಾವಿರಾರು ಹಳೇ ಹಸ್ತಪ್ರತಿಗಳಿಗೆ ಮತ್ತು ತುಂಡುಗಳಿಗೆ ಏನೂ ಆಗಿಲ್ಲ, ಹಾಗೇ ಉಳ್ಕೊಂಡಿವೆ.

ಕ್ರೈಸ್ತ ಬರಹಗಳನ್ನ ಬೇರೆ ಭಾಷೆಗಳಿಗೂ ಅನುವಾದ ಮಾಡಿದ್ರು. ಅರ್ಮೇನಿಯನ್‌, ಕಾಪ್ಟೀಕ್‌, ಎಥಿಯೋಪಿಕ್‌, ಜಾರ್ಜಿಯನ್‌, ಲ್ಯಾಟಿನ್‌, ಸಿರಿಯಾಕ್‌ ಇಂಥ ಹಳೇ ಭಾಷೆಗಳಿಗೂ ಬೈಬಲನ್ನ ಅನುವಾದ ಮಾಡಿದ್ರು.

ಅನುವಾದ ಮಾಡೋಕೆ ಹೀಬ್ರು ಮತ್ತು ಗ್ರೀಕ್‌ ಹಸ್ತಪ್ರತಿಯಲ್ಲಿ ಯಾವುದನ್ನ ಬಳಸಿದ್ರು?

ಎಲ್ಲ ಹಳೇ ಬೈಬಲ್‌ ಹಸ್ತಪ್ರತಿಗಳಲ್ಲಿ ಒಂದೇ ರೀತಿ ಪದಗಳನ್ನ ಬಳಸಿಲ್ಲ. ಹಾಗಾದ್ರೆ ನಿಜವಾದ ಹಸ್ತಪ್ರತಿಯಲ್ಲಿ ಏನಿತ್ತು ಅಂತ ಹೇಗೆ ಗೊತ್ತಾಗುತ್ತೆ?

ಇದನ್ನ ಅರ್ಥ ಮಾಡ್ಕೊಳ್ಳೋಕೆ ಒಂದು ಉದಾಹರಣೆ ನೋಡೋಣ. ಒಬ್ಬ ಶಿಕ್ಷಕ 100 ಮಕ್ಕಳಿಗೆ ಒಂದು ಪುಸ್ತಕದ ಅಧ್ಯಾಯವನ್ನ ನಕಲು ಮಾಡೋಕೆ ಹೇಳಿದ ಅಂತ ನೆನಸಿ. ನಕಲು ಮಾಡೋಕೆ ಬಳಸಿದ ಪುಸ್ತಕ ಸ್ವಲ್ಪ ಸಮಯ ಆದ್ಮೇಲೆ ಕಳೆದುಹೋಯ್ತು. ಆದ್ರೂ ನಕಲು ಮಾಡಿದಂಥ 100 ಕಾಪಿಗಳನ್ನ ಹೋಲಿಸಿ ನೋಡಿದ್ರೆ ಆ ಪುಸ್ತಕದಲ್ಲಿ ಏನಿತ್ತು ಅಂತ ಗೊತ್ತಾಗುತ್ತೆ ಅಲ್ವಾ? ಎಲ್ಲ ಮಕ್ಕಳು ಚಿಕ್ಕಪುಟ್ಟ ತಪ್ಪುಗಳನ್ನ ಮಾಡಿರಬಹುದು. ಆದ್ರೆ ಎಲ್ರೂ ಒಂದೇ ತಪ್ಪು ಮಾಡಿರಲ್ಲ. ಅದೇ ತರ ಹಳೇ ಬೈಬಲ್‌ ಪುಸ್ತಕದ ಸಾವಿರಾರು ತುಂಡುಗಳನ್ನ ಮತ್ತು ಕಾಪಿಗಳನ್ನ ಹೋಲಿಸಿ ನೋಡಿದಾಗ ನಕಲು ಮಾಡಿದವರು ಮಾಡಿರೋ ಚಿಕ್ಕ ಪುಟ್ಟ ತಪ್ಪುಗಳು ಪರಿಣಿತರಿಗೆ ಗೊತ್ತಾಗುತ್ತೆ. ಅಷ್ಟೇ ಅಲ್ಲ ನಿಜವಾಗ್ಲೂ ಅಲ್ಲಿ ಯಾವ ಪದ ಇತ್ತು ಅಂತಾನೂ ಗೊತ್ತಾಗುತ್ತೆ.

“ಯಾವ ಹಳೇ ಪುಸ್ತಕವನ್ನೂ ಇಷ್ಟು ಸರಿಯಾಗಿ ನಕಲುಮಾಡಿಲ್ಲ ಅಂತ ಧೈರ್ಯವಾಗಿ ಹೇಳಬಹುದು.”

ಮೊದಲ ಹಸ್ತಪ್ರತಿಗಳಲ್ಲಿ ಇದ್ದ ವಿಚಾರಗಳನ್ನೇ ನಕಲುಗಾರರು ದಾಟಿಸಿದ್ದಾರೆ ಅಂತ ನಾವು ಹೇಗೆ ನಂಬಬಹುದು? ಹೀಬ್ರು ಪುಸ್ತಕದ ಬಗ್ಗೆ ಪರಿಣಿತರಾದ ವಿಲ್ಯಂ ಎಚ್‌. ಗ್ರೀನ್‌ ಹೀಗೆ ಹೇಳ್ತಾರೆ: “ಯಾವ ಹಳೇ ಪುಸ್ತಕವನ್ನೂ ಇಷ್ಟು ಸರಿಯಾಗಿ ನಕಲುಮಾಡಿಲ್ಲ ಅಂತ ಧೈರ್ಯವಾಗಿ ಹೇಳಬಹುದು.” ಪರಿಣಿತರಾದ ಎಫ್‌. ಎಫ್‌. ಬ್ರೂಸ್‌ ಹೊಸ ಒಡಂಬಡಿಕೆ ಅಂತ ಕರಿಯೋ ಗ್ರೀಕ್‌ ಪುಸ್ತಕಗಳ ಬಗ್ಗೆ ಹೀಗೆ ಹೇಳ್ತಾರೆ: “ಹಳೇ ಕಾಲದ ಲೇಖಕರು ಬರೆದಿರೋ ಪುಸ್ತಕಗಳ ಬಗ್ಗೆ ಯಾರೂ ಕನಸಲ್ಲೂ ಪ್ರಶ್ನೆ ಮಾಡಲ್ಲ. ಹಾಗಿರುವಾಗ ನಮ್ಮ ಹೊಸ ಒಡಂಬಡಿಕೆಯನ್ನ ನಕಲುಗಾರರು ಸರಿಯಾಗೇ ನಕಲುಮಾಡಿದ್ದಾರೆ ಅನ್ನೋದ್ರಲ್ಲಿ ಎರಡು ಮಾತಿಲ್ಲ.” ಅವರು “ಹೊಸ ಒಡಂಬಡಿಕೆ ಅನ್ನೋದು ಜನ್ರು ಬರೆದಿರೋ ಪುಸ್ತಕಗಳ ಸಂಗ್ರಹ ಆಗಿದ್ರೆ ಯಾರಾದ್ರೂ ಸಂಶಯಪಡಬಹುದೇನೋ” ಅಂತಾನೂ ಹೇಳಿದ್ರು.

ಮೃತ ಸಮುದ್ರದಲ್ಲಿ ಸಿಕ್ಕಿದ ಯೆಶಾಯ ಪುಸ್ತಕದ 40ನೇ ಅಧ್ಯಾಯ (ಕ್ರಿ.ಪೂ. 125-100)

ಸಾವಿರ ವರ್ಷದಷ್ಟು ಹಳೇ ಹೀಬ್ರು ಹಸ್ತಪ್ರತಿಯನ್ನ ನೋಡಿದಾಗ ಚಿಕ್ಕ ಪುಟ್ಟ ವ್ಯತ್ಯಾಸ ಇತ್ತು. ಅದ್ರಲ್ಲಿ ಹೆಚ್ಚಿನ ವ್ಯತ್ಯಾಸ ಏನಂದ್ರೆ ಅಕ್ಷರಗಳು ಸ್ವಲ್ಪ ತಪ್ಪಾಗಿತ್ತು

ಅಲೆಪ್ಪೊ ಕೋಡಕ್ಸ್‌ನಲ್ಲಿ ಯೆಶಾಯ 40ನೇ ಅಧ್ಯಾಯ. ಕ್ರಿ.ಶ. 930ರಲ್ಲಿ ಬರೆದ ಹೀಬ್ರು ಮ್ಯಾಸೋರೆಟಿಕ್‌ ಹಸ್ತಪ್ರತಿ

ಹೀಬ್ರು ಪುಸ್ತಕಗಳು: ಹೀಬ್ರು ಪುಸ್ತಕಗಳ ಹೊಸ ಲೋಕ ಭಾಷಾಂತರ (1953-1960) ರುಡೋಲ್ಫ್‌ ಕಿಟೆಲ್‌ ಅನುವಾದ ಮಾಡಿರೋ ಬಿಬ್‌ಲಿಯಾ ಹೆಬ್ರೈಕಾ ಮೇಲೆ ಆಧಾರವಾಗಿತ್ತು. ಮೃತ ಸಮುದ್ರದ ಸುರುಳಿಗಳನ್ನ ಮತ್ತು ಹಳೇ ಹಸ್ತಪ್ರತಿಗಳನ್ನ ಸಂಶೋಧನೆ ಮಾಡಿದಾಗ ಹೊಸ ವಿಷ್ಯಗಳು ಸಿಕ್ತು. ಅವತ್ತಿಂದ ಆ ವಿಷ್ಯಗಳನ್ನ ಬಿಬ್‌ಲಿಯಾ ಹೆಬ್ರೈಕಾ ಸ್ಟುಟ್‌ಗಾರ್‌ಟೆನ್ಸಿಯಾ ಮತ್ತು ಬಿಬ್‌ಲಿಯಾ ಹೆಬ್ರೈಕಾ ಕ್ವಿನ್ಟಾದಲ್ಲಿ ಸೇರಿಸಿದ್ರು. ಇವು ಬಿಬ್‌ಲಿಯಾ ಹೆಬ್ರೈಕಾದ ಪರಿಷ್ಕೃತ ಆವೃತ್ತಿಗಳು. ಇವೆರಡನ್ನೂ ಲೆನಿನ್‌ಗ್ರಾಡ್‌ ಕೋಡಕ್ಸನ್ನೇ ಆಧಾರವಾಗಿ ಇಟ್ಕೊಂಡು ತಯಾರಿಮಾಡಿದ್ರು. ಆದ್ರೆ ಪಾದಟಿಪ್ಪಣಿಗಳನ್ನ ಸಮಾರಿಟನ್‌ ಪೆಂಟಟ್ಯೂಕ್‌, ಮೃತ ಸಮುದ್ರದ ಸುರುಳಿಗಳು, ಗ್ರೀಕ್‌ ಸೆಪ್ಟೂಅಜಿಂಟ್‌, ಅರಾಮಿಕ್‌ ಟಾರ್‌ಗಮ್ಸ್‌, ಲ್ಯಾಟಿನ್‌ ವಲ್ಗೇಟ್‌, ಸಿರಿಯಾಕ್‌ ಪೆಶಿಟ್ಟಾ ಅನ್ನೋ ಪುಸ್ತಕಗಳನ್ನ ಹೋಲಿಸಿ ನೋಡಿ ತಯಾರಿಸಿದ್ದಾರೆ. ನಾವು ಬಿಬ್‌ಲಿಯಾ ಹೆಬ್ರೈಕಾ ಸ್ಟುಟ್‌ಗಾರ್‌ಟೆನ್ಸಿಯಾ ಮತ್ತು ಬಿಬ್‌ಲಿಯಾ ಹೆಬ್ರೈಕಾ ಕ್ವಿನ್ಟಾ ನೋಡಿ ಹೊಸ ಲೋಕ ಭಾಷಾಂತರವನ್ನ (ಇಂಗ್ಲಿಷ್‌) ತಯಾರಿಸಿದ್ವಿ.

ಗ್ರೀಕ್‌ ಪುಸ್ತಕಗಳು: 19ನೇ ಶತಮಾನದ ಕೊನೆಯಲ್ಲಿ ಪರಿಣಿತರಾಗಿರೋ ಬಿ. ಎಫ್‌. ವೆಸ್ಟ್‌ಕೋಟ್‌ ಮತ್ತು ಜೆ. ಎ. ಹಾರ್ಟ್‌ ಭಾಷಾಂತರ ಮಾಡೋಕೆ ಉಪಯೋಗಿಸೋ ಗ್ರೀಕ್‌ ಮುಖ್ಯ ಕಾಪಿಯನ್ನ ತಯಾರಿಮಾಡಿದ್ರು. ಅದನ್ನ ಮಾಡುವಾಗ ಅವಾಗಿದ್ದ ಬೈಬಲ್‌ ಹಸ್ತಪ್ರತಿಗಳನ್ನ ಮತ್ತು ತುಂಡುಗಳನ್ನ ಹೋಲಿಸಿದ್ರು. ಅದ್ರಲ್ಲಿದ್ದ ವಿಷ್ಯಗಳನ್ನೇ ಈ ಮುಖ್ಯ ಕಾಪಿಯಲ್ಲಿ ಆದಷ್ಟು ತರೋಕೆ ಪ್ರಯತ್ನಿಸಿದ್ದಾರೆ. 20ನೇ ಶತಮಾನದ ಮಧ್ಯಭಾಗದಲ್ಲಿ ಹೊಸ ಲೋಕ ಭಾಷಾಂತರ ಸಮಿತಿ ಆ ಗ್ರೀಕ್‌ ಮುಖ್ಯ ಕಾಪಿಯನ್ನ ಆಧಾರವಾಗಿಟ್ಟು ಭಾಷಾಂತರ ಮಾಡಿದ್ರು. ಅಷ್ಟೇ ಅಲ್ಲ ಕ್ರಿ. ಶ. 2 ಮತ್ತು 3ನೇ ಶತಮಾನದ್ದು ಅಂತ ನೆನಸೋ ಬೇರೆ ಪಪೈರಸನ್ನ ಅವರು ಉಪಯೋಗಿಸಿದ್ರು. ಅವತ್ತಿಂದ ತುಂಬ ಪಪೈರಸ್‌ ಸಿಗ್ತಾ ಹೋಯ್ತು. ಇದಲ್ಲದೆ ನೆಸಲ್‌ ಮತ್ತು ಅಲಂಡ್‌ ಅನ್ನೋ ವ್ಯಕ್ತಿಗಳು ತಯಾರಿಮಾಡಿದ ಪುಸ್ತಕಗಳನ್ನ ಮತ್ತು ಯುನೈಟಡ್‌ ಬೈಬಲ್‌ ಸೊಸೈಟಿಗಳು ತಯಾರಿಮಾಡಿರೋ ಪುಸ್ತಕಗಳನ್ನ ಉಪಯೋಗಿಸಿದ್ರು. ಈ ಪುಸ್ತಕಗಳಲ್ಲಿ ಇತ್ತೀಚಿನ ಅಧ್ಯಯನದಲ್ಲಿ ಕಂಡ್ಕೊಂಡಿರೋ ವಿಷ್ಯಗಳನ್ನ ಸೇರಿಸಿದ್ರು. ಈ ಪುಸ್ತಕಗಳು ಭಾಷಾಂತರ ಮಾಡೋಕೆ ಉಪಯೋಗಿಸೋ ಗ್ರೀಕ್‌ ಮುಖ್ಯ ಕಾಪಿಗಳು ಆಯ್ತು.

ಅದನ್ನ ಚೆನ್ನಾಗಿ ಪರಿಶೀಲಿಸೋದಾದ್ರೆ ಕೆಲವು ಹಳೇ ಭಾಷಾಂತರದಲ್ಲಿ ಇರೋ ಗ್ರೀಕ್‌ ಪವಿತ್ರ ಗ್ರಂಥದ ಕೆಲವು ವಚನಗಳು ಇದ್ರ ಭಾಗ ಅಲ್ಲ ಅಂತ ಗೊತ್ತಾಗುತ್ತೆ. ಅದನ್ನ ಆಮೇಲೆ ನಕಲುಮಾಡಿದವರು ಸೇರಿಸಿದ್ದಾರೆ ಅಂತಾನೂ ಗೊತ್ತಾಗುತ್ತೆ. ಆದ್ರೆ ಅವರು ಸೇರಿಸಿರೋ ಈ ವಚನಗಳನ್ನ ತೆಗೆದುಹಾಕುವಾಗ ಸ್ವಲ್ಪ ಕಷ್ಟ ಆಗುತ್ತೆ. ಯಾಕಂದ್ರೆ ಇದನ್ನ 16ನೇ ಶತಮಾನದಲ್ಲೇ ಅವರು ಒಪ್ಕೊಂಡಿದ್ರು. ಹಾಗೇ ಸೇರಿಸಿರೋ ವಚನಗಳು ಯಾವಂದ್ರೆ: ಮತ್ತಾಯ 17:21; 18:11; 23:14; ಮಾರ್ಕ 7:16; 9:​44, 46; 11:26; 15:28; ಲೂಕ 17:36; 23:17; ಯೋಹಾನ 5:4; ಅಪೊಸ್ತಲರ ಕಾರ್ಯ 8:37; 15:34; 24:7; 28:29 ಮತ್ತು ರೋಮನ್ನರಿಗೆ 16:24. ಈ ಆವೃತ್ತಿಯಲ್ಲಿ ಆ ವಚನಗಳನ್ನ ನಾವು ಹಾಕಿಲ್ಲ. ಬದಲಿಗೆ ಆ ಸಂಖ್ಯೆಯನ್ನು ಹಾಕಿದ್ದೀವಿ. ಆಮೇಲೆ ಅದಕ್ಕೊಂದು ಪಾದಟಿಪ್ಪಣಿ ಹಾಕಿದ್ದೀವಿ.

ಮಾರ್ಕ 16ನೇ ಅಧ್ಯಾಯದ ದೊಡ್ಡ ಸಮಾಪ್ತಿ (ಅಂದ್ರೆ ವಚನ 9ರಿಂದ 20ರ ತನಕ,) ಮಾರ್ಕ 16ನೇ ಅಧ್ಯಾಯದ ಚುಟುಕಾದ ಸಮಾಪ್ತಿ ಮತ್ತು ಯೋಹಾನ 7:53–8:11ರಲ್ಲಿರೋ ವಚನಗಳು ಹಳೇ ಹಸ್ತಪ್ರತಿಗಳಲ್ಲಿ ಇರಲಿಲ್ಲ ಅಂತ ಚೆನ್ನಾಗಿ ಗೊತ್ತಾಗುತ್ತೆ. ಅದಕ್ಕೇ ಆ ತಪ್ಪಾದ ವಚನಗಳನ್ನ ಈ ಆವೃತ್ತಿಯಲ್ಲಿ ಸೇರಿಸಿಲ್ಲ. c

ಇನ್ನು ಕೆಲವೊಂದು ಚಿಕ್ಕ ಪುಟ್ಟ ಬದಲಾವಣೆಗಳನ್ನ ಈ ಭಾಷಾಂತರದಲ್ಲಿ ಮಾಡಿದ್ದೀವಿ. ಅದನ್ನ ಪರಿಣಿತರು ಕೂಡ ಒಪ್ಪುತ್ತಾರೆ. ಯಾಕಂದ್ರೆ ಅದು ಮೂಲ ಬರಹಗಳಿಗೆ ತುಂಬ ಹೋಲುತ್ತೆ. ಉದಾಹರಣೆಗೆ ಕೆಲವು ಹಸ್ತಪ್ರತಿಗಳಲ್ಲಿ ಮತ್ತಾಯ 7:13 ಹೀಗಿದೆ: “ಇಕ್ಕಟ್ಟಾದ ಬಾಗಿಲಿಂದ ಹೋಗಿ. ಯಾಕಂದ್ರೆ ನಾಶಕ್ಕೆ ಹೋಗೋ ಬಾಗಿಲು ಅಗಲ. ದಾರಿ ವಿಶಾಲ.” ಈ ಮುಂಚೆ ಇದ್ದ ಹೊಸ ಲೋಕ ಭಾಷಾಂತರದಲ್ಲಿ “ಅಗಲ” ಅನ್ನೋದನ್ನ ಸೇರಿಸಿರಲಿಲ್ಲ. ಇದ್ರ ಬಗ್ಗೆ ತಿಳ್ಕೊಳ್ಳೋಕೆ ಹಸ್ತಪ್ರತಿಗಳನ್ನ ಸಂಶೋಧನೆ ಮಾಡಿದಾಗ “ಅಗಲ” ಅನ್ನೋದು ಮೂಲಪಾಠದಲ್ಲಿ ಇತ್ತು ಅನ್ನೋದಕ್ಕೆ ಸಾಕ್ಷಿ ಸಿಕ್ತು. ಹಾಗಾಗಿ ಈಗಿನ ಇಂಗ್ಲಿಷ್‌ ಭಾಷಾಂತರದಲ್ಲಿ ಅದನ್ನ ಸೇರಿಸಿದ್ದೀವಿ. ಇದೇ ತರ ತುಂಬ ಬದಲಾವಣೆಗಳು ಮಾಡಿದ್ದೀವಿ. ಈ ಬದಲಾವಣೆಗಳು ತುಂಬ ಚಿಕ್ಕದಷ್ಟೇ. ಅದ್ರಿಂದ ದೇವರ ಪವಿತ್ರ ಗ್ರಂಥದ ಮುಖ್ಯ ಸಂದೇಶ ಏನೂ ಬದಲಾಗಿಲ್ಲ.

2 ಕೊರಿಂಥ 4:13–5:4​ನೇ ವಚನದ ತನಕ ಇರೋ ಪಪೈರಸ್‌ ಹಸ್ತಪ್ರತಿ. ಇದು ಸುಮಾರು ಕ್ರಿ.ಶ. 200ರಲ್ಲಿ ಬರೆದ್ರು

a ಮುಂದಕ್ಕೆ ಹೀಬ್ರು ಅಂತ ಮಾತ್ರ ಹೇಳಿದ್ರೂ ಅದ್ರಲ್ಲಿ ಅರಾಮಿಕ್‌ ಕೂಡ ಸೇರಿದೆ.

b ನಕಲು ಮಾಡೋಕೆ ಒಂದು ಕಾರಣ ಏನಂದ್ರೆ ಆ ಸಮಯದಲ್ಲಿ ಬಳಸ್ತಿದ್ದ ಸುರುಳಿಗಳು ಬೇಗ ಹಾಳಾಗ್ತಿದ್ದವು.

c ಈ ವಚನಗಳು ಯಾಕೆ ತಪ್ಪು ಅಂತ ವಿವರಿಸೋಕೆ 1948ರಲ್ಲಿ ಮುದ್ರಣ ಮಾಡಿರೋ ಹೊಸ ಲೋಕ ಭಾಷಾಂತರದಲ್ಲಿ ಹೆಚ್ಚಿನ ಮಾಹಿತಿ ಇದೆ.