2 ಯೋಹಾನ 1:1-13

1  ನಾನು ನಿಜವಾಗಿಯೂ ಪ್ರೀತಿಸುವ ಮತ್ತು ನಾನು ಮಾತ್ರವಲ್ಲ ಸತ್ಯವನ್ನು ತಿಳಿದು​ಕೊಂಡಿರುವವರೆಲ್ಲರೂ ಪ್ರೀತಿಸುವ ಆರಿಸಿ​ಕೊಳ್ಳಲ್ಪಟ್ಟಿರುವ ಮಹಿಳೆಗೂ ಅವಳ ಮಕ್ಕಳಿಗೂ ಹಿರೀಪುರುಷನು ಬರೆಯುವುದೇನೆಂದರೆ,  ನಮ್ಮಲ್ಲಿ ನೆಲೆಗೊಂಡಿರುವ ಸತ್ಯದ ಕಾರಣವೇ ನಾವು ಪ್ರೀತಿಸುತ್ತೇವೆ ಮತ್ತು ಅದು ಸದಾಕಾಲಕ್ಕೂ ನಮ್ಮೊಂದಿಗಿರುವುದು.  ತಂದೆಯಾದ ದೇವರಿಂದಲೂ ಆ ತಂದೆಯ ಮಗನಾದ ಯೇಸು ಕ್ರಿಸ್ತನಿಂದಲೂ ಅಪಾತ್ರ ದಯೆಯೂ * ಕರುಣೆಯೂ ಶಾಂತಿಯೂ ಸತ್ಯ ಮತ್ತು ಪ್ರೀತಿಯೊಂದಿಗೆ ನಮ್ಮೊಂದಿಗಿರುವುದು.  ನಾವು ತಂದೆಯಿಂದ ಹೊಂದಿದ ಆಜ್ಞೆಗನುಸಾರ ನಿನ್ನ ಮಕ್ಕಳಲ್ಲಿ ಕೆಲವರು ಸತ್ಯದಲ್ಲಿ ನಡೆಯುತ್ತಾ ಇರುವುದನ್ನು ಕಂಡು ನಾನು ಬಹಳವಾಗಿ ಹರ್ಷಿಸುತ್ತೇನೆ.  ಅಮ್ಮಾ, ನಿನಗೆ ಬರೆಯುತ್ತಿರುವವನಾದ ನಾನು ಈಗ ನಿನ್ನನ್ನು ಕೇಳಿಕೊಳ್ಳುವುದೇನೆಂದರೆ, ನಾವು ಒಬ್ಬರನ್ನೊಬ್ಬರು ಪ್ರೀತಿಸುವವರಾಗಿರಬೇಕು. ಇದು ಒಂದು ಹೊಸ ಆಜ್ಞೆಯೇನಲ್ಲ, ನಾವು ಆರಂಭದಿಂದಲೂ ಹೊಂದಿದ್ದ ಆಜ್ಞೆಯಾಗಿದೆ.  ನಾವು ಆತನ ಆಜ್ಞೆಗಳಿಗನುಸಾರ ನಡೆಯುತ್ತಾ ಇರುವುದೇ ಪ್ರೀತಿಯಾಗಿದೆ. ನೀವು ಇದರಲ್ಲಿ ನಡೆಯುತ್ತಾ ಇರಬೇಕೆಂಬುದೇ ನೀವು ಆರಂಭದಿಂದಲೂ ಕೇಳಿಸಿಕೊಂಡಿರುವ ಆಜ್ಞೆಯಾಗಿದೆ.  ಏಕೆಂದರೆ ಯೇಸು ಕ್ರಿಸ್ತನು ಮನುಷ್ಯನಾಗಿ ಬಂದಿರುವುದನ್ನು ಒಪ್ಪಿಕೊಳ್ಳದಿರುವ ವ್ಯಕ್ತಿಗಳು, ಅನೇಕ ವಂಚಕರು ಈ ಲೋಕದೊಳಗೆ ಹೋಗಿದ್ದಾರೆ. ಇವನೇ ವಂಚಕನೂ ಕ್ರಿಸ್ತ ವಿರೋಧಿಯೂ ಆಗಿದ್ದಾನೆ.  ನಾವು ಉತ್ಪಾದಿಸಲು ಪ್ರಯಾಸಪಟ್ಟಿರುವವುಗಳನ್ನು ನೀವು ಕಳೆದುಕೊಳ್ಳದೆ ಪೂರ್ಣ ಪ್ರತಿಫಲವನ್ನು ಹೊಂದುವಂತೆ ನಿಮ್ಮ ವಿಷಯದಲ್ಲಿ ಜಾಗರೂಕರಾಗಿರಿ.  ಕ್ರಿಸ್ತನ ಬೋಧನೆಯನ್ನು ಅತಿಕ್ರಮಿಸಿ ಮುಂದೆ ಹೋಗುವವನು ಮತ್ತು ಆ ಬೋಧನೆಯಲ್ಲಿ ನೆಲೆಗೊಂಡಿರದವನು ದೇವರನ್ನು ಹೊಂದಿರುವುದಿಲ್ಲ. ಈ ಬೋಧನೆಯಲ್ಲಿ ನೆಲೆಗೊಂಡಿರುವವನೇ ತಂದೆಯನ್ನೂ ಮಗನನ್ನೂ ಹೊಂದಿದವನಾಗಿದ್ದಾನೆ. 10  ಈ ಬೋಧನೆಯನ್ನು ಒಪ್ಪದಿರುವ ಯಾವನಾದರೂ ನಿಮ್ಮ ಬಳಿಗೆ ಬರುವುದಾದರೆ ಅಂಥವನನ್ನು ನಿಮ್ಮ ಮನೆಗಳೊಳಗೆ ಎಂದಿಗೂ ಸೇರಿಸಿಕೊಳ್ಳಬೇಡಿರಿ ಅಥವಾ ಅವನಿಗೆ ವಂದನೆಯನ್ನೂ ಹೇಳಬೇಡಿರಿ. 11  ಏಕೆಂದರೆ ಅವನಿಗೆ ವಂದನೆ ಹೇಳುವವನು ಅವನ ದುಷ್ಕೃತ್ಯಗಳಲ್ಲಿ ಪಾಲುಗಾರನಾಗಿದ್ದಾನೆ. 12  ನಿಮಗೆ ಬರೆಯಲು ಅನೇಕ ವಿಷಯ​ಗಳಿರುವುದಾದರೂ ಅವುಗಳನ್ನು ಕಾಗದ ಮತ್ತು ಮಸಿಯಲ್ಲಿ ತಿಳಿಸಲು ನನಗೆ ಇಷ್ಟವಿಲ್ಲ, ಆದರೆ ನಿಮ್ಮ ಆನಂದವು ಪೂರ್ಣ​ಪ್ರಮಾಣದ್ದಾಗುವಂತೆ ನಾನು ನಿಮ್ಮ ಬಳಿಗೆ ಬಂದು ಮುಖಾಮುಖಿಯಾಗಿ ಮಾತಾಡಲು ನಿರೀಕ್ಷಿಸುತ್ತಿದ್ದೇನೆ. 13  ಆರಿಸಿಕೊಳ್ಳಲ್ಪಟ್ಟಿರುವ ನಿನ್ನ ಸಹೋದರಿಯ ಮಕ್ಕಳು ನಿನಗೆ ತಮ್ಮ ವಂದನೆಗಳನ್ನು ತಿಳಿಸುತ್ತಾರೆ.

ಪಾದಟಿಪ್ಪಣಿ

2ಯೋಹಾ 3  ಅಥವಾ, “ಅಪಾರ ದಯೆಯೂ.”