2 ತಿಮೊಥೆಯ 4:1-22

4  ದೇವರ ಮುಂದೆಯೂ ಜೀವಿತರಿಗೂ ಸತ್ತವರಿಗೂ ನ್ಯಾಯತೀರಿಸಲು ನೇಮಿಸಲ್ಪಟ್ಟಿರುವ ಕ್ರಿಸ್ತ ಯೇಸುವಿನ ಮುಂದೆಯೂ ಅವನ ಪ್ರತ್ಯಕ್ಷತೆ ಮತ್ತು ಅವನ ರಾಜ್ಯದ ಮೂಲಕವೂ ನಾನು ನಿನಗೆ ಗಂಭೀರವಾಗಿ ಆಜ್ಞಾಪಿಸುವುದೇನೆಂದರೆ,  ವಾಕ್ಯವನ್ನು ಸಾರು; ಅನುಕೂಲವಾದ ಸಮಯದಲ್ಲಿಯೂ ತೊಂದರೆಯ ಸಮಯದಲ್ಲಿಯೂ ತುರ್ತಿನಿಂದ ಅದರಲ್ಲಿ ತಲ್ಲೀನನಾಗಿರು. ಪೂರ್ಣ ದೀರ್ಘ ಸಹನೆಯಿಂದಲೂ ಬೋಧಿಸುವ ಕಲೆಯಿಂದಲೂ ಖಂಡಿಸು, ಗದರಿಸು ಮತ್ತು ಬುದ್ಧಿಹೇಳು.  ಏಕೆಂದರೆ ಜನರು ಸ್ವಸ್ಥಬೋಧನೆಯನ್ನು ಸಹಿಸಿಕೊಳ್ಳದಿರುವಂಥ ಸಮಯಾವಧಿಯು ಬರುತ್ತದೆ; ಆ ಸಮಯದಲ್ಲಿ ಜನರು ತಮ್ಮ ಸ್ವಂತ ಇಚ್ಛೆಗಳಿಗನುಸಾರ ತಮ್ಮ ಕಿವಿಗಳನ್ನು ಪುಳಕಗೊಳಿಸುವ ವಿಷಯಗಳನ್ನು ಕೇಳಿಸಿಕೊಳ್ಳಲು ತಮಗಾಗಿ ಬೋಧಕರನ್ನು ಕೂಡಿಸಿಕೊಳ್ಳುವರು.  ಅವರು ಸತ್ಯದಿಂದ ತಮ್ಮ ಕಿವಿಗಳನ್ನು ತಿರುಗಿಸಿಕೊಂಡು ಸುಳ್ಳು ಕಥೆಗಳನ್ನು ಕೇಳಿಸಿಕೊಳ್ಳಲು ಹೋಗುವರು.  ನೀನಾದರೋ ಎಲ್ಲ ವಿಷಯಗಳಲ್ಲಿ ಸ್ವಸ್ಥಚಿತ್ತನಾಗಿರು, ಕೆಟ್ಟದ್ದನ್ನು ತಾಳಿಕೊ, ಸೌವಾರ್ತಿಕನ ಕೆಲಸವನ್ನು ಮಾಡು, ನಿನ್ನ ಶುಶ್ರೂಷೆಯನ್ನು ಪೂರ್ಣವಾಗಿ ನೆರವೇರಿಸು.  ನಾನು ಈಗಾಗಲೇ ಪಾನದ್ರವ್ಯವಾಗಿ ಅರ್ಪಿತನಾಗುತ್ತಾ ಇದ್ದೇನೆ ಮತ್ತು ನಾನು ಬಿಡುಗಡೆ ಹೊಂದಲಿಕ್ಕಾಗಿರುವ ತಕ್ಕ ಸಮಯವು ಸಮೀಪಕ್ಕೆ ಬಂದಿದೆ.  ನಾನು ಉತ್ತಮ ಹೋರಾಟವನ್ನು ಮಾಡಿದ್ದೇನೆ, ನನ್ನ ಓಟವನ್ನು ಕೊನೆಗಾಣಿಸಿದ್ದೇನೆ, ನಂಬಿಕೆಯನ್ನು ಕಾಪಾಡಿಕೊಂಡಿದ್ದೇನೆ.  ಈ ಸಮಯದಿಂದ ನೀತಿಯ ಕಿರೀಟವು ನನಗಾಗಿ ಕಾದಿರಿಸಲ್ಪಟ್ಟಿದೆ; ನೀತಿಯ ನ್ಯಾಯಾಧಿಪತಿಯಾಗಿರುವ ಕರ್ತನು ಅದನ್ನು ಆ ದಿನದಲ್ಲಿ ನನಗೆ ಬಹುಮಾನವಾಗಿ ಕೊಡುವನು; ನನಗೆ ಮಾತ್ರವಲ್ಲದೆ ಅವನ ಪ್ರತ್ಯಕ್ಷತೆಯನ್ನು ಪ್ರೀತಿಸಿದವರೆಲ್ಲರಿಗೂ ಕೊಡುವನು.  ನನ್ನ ಬಳಿಗೆ ಬೇಗನೆ ಬರಲು ನಿನ್ನಿಂದಾದ ಪ್ರಯತ್ನವನ್ನು ಮಾಡು. 10  ಏಕೆಂದರೆ ದೇಮನು ಸದ್ಯದ ವಿಷಯಗಳ ವ್ಯವಸ್ಥೆಯನ್ನು ಪ್ರೀತಿಸಿದ್ದರಿಂದ ನನ್ನನ್ನು ಬಿಟ್ಟು ಥೆಸಲೊನೀಕಕ್ಕೆ ಹೋದನು; ಕ್ರೆಸ್ಕನು ಗಲಾತ್ಯಕ್ಕೂ ತೀತನು ದಲ್ಮಾತ್ಯಕ್ಕೂ ಹೋದರು. 11  ಲೂಕನು ಮಾತ್ರ ನನ್ನೊಂದಿಗೆ ಇದ್ದಾನೆ. ಮಾರ್ಕನನ್ನು ನಿನ್ನೊಂದಿಗೆ ಕರೆದುಕೊಂಡು ಬಾ, ಏಕೆಂದರೆ ಶುಶ್ರೂಷೆಯ ಕೆಲಸದಲ್ಲಿ ಅವನು ನನಗೆ ಉಪಯುಕ್ತನಾಗಿದ್ದಾನೆ. 12  ಆದರೆ ನಾನು ತುಖಿಕನನ್ನು ಎಫೆಸಕ್ಕೆ ಕಳುಹಿಸಿದ್ದೇನೆ. 13  ನೀನು ಬರುವಾಗ ತ್ರೋವದಲ್ಲಿ ನಾನು ಕರ್ಪನ ಬಳಿಯಲ್ಲಿ ಬಿಟ್ಟುಬಂದಿರುವ ಮೇಲಂಗಿಯನ್ನೂ ಸುರುಳಿಗಳನ್ನೂ, ಮುಖ್ಯವಾಗಿ ಚರ್ಮದ ಹಾಳೆಗಳನ್ನು ತೆಗೆದುಕೊಂಡು ಬಾ. 14  ಕಂಚುಗಾರನಾದ ಅಲೆಕ್ಸಾಂದ್ರನು ನನಗೆ ಅನೇಕ ಹಾನಿಗಳನ್ನು ಮಾಡಿದನು​—⁠ಯೆಹೋವನು ಅವನ ಕೃತ್ಯಗಳಿಗೆ ತಕ್ಕಂತೆ ಅವನಿಗೆ ಪ್ರತಿಫಲವನ್ನು ಕೊಡುವನು. 15  ನೀನು ಸಹ ಅವನ ವಿಷಯದಲ್ಲಿ ಎಚ್ಚರಿಕೆಯಿಂದಿರು, ಏಕೆಂದರೆ ಅವನು ನಮ್ಮ ಮಾತುಗಳನ್ನು ಮಿತಿಮೀರಿದ ಪ್ರಮಾಣದಲ್ಲಿ ಎದುರಿಸಿದನು. 16  ನಾನು ಮೊದಲನೆಯ ಸಾರಿ ಪ್ರತಿವಾದ ಮಾಡಿದಾಗ ಯಾರೂ ನನ್ನ ಪಕ್ಷ ವಹಿಸಲಿಲ್ಲ; ಎಲ್ಲರೂ ನನ್ನನ್ನು ಕೈಬಿಟ್ಟರು​—⁠ಅದು ಅವರ ಲೆಕ್ಕಕ್ಕೆ ಸೇರಿಸಲ್ಪಡದಿರಲಿ. 17  ಆದರೆ ನನ್ನ ಮೂಲಕವಾಗಿ ಸಾರುವಿಕೆಯು ಪೂರ್ಣವಾಗಿ ನೆರವೇರುವಂತೆಯೂ ಎಲ್ಲ ಜನಾಂಗಗಳವರು ಅದನ್ನು ಕೇಳಿಸಿಕೊಳ್ಳುವಂತೆಯೂ ಕರ್ತನು ನನ್ನ ಬಳಿಯಲ್ಲಿ ನಿಂತು ನನ್ನಲ್ಲಿ ಶಕ್ತಿಯನ್ನು ತುಂಬಿಸಿದನು; ಮತ್ತು ನಾನು ಸಿಂಹದ ಬಾಯಿಂದ ಬಿಡಿಸಲ್ಪಟ್ಟೆನು. 18  ಕರ್ತನು ನನ್ನನ್ನು ಪ್ರತಿಯೊಂದು ದುಷ್ಕೃತ್ಯದಿಂದ ಬಿಡಿಸಿ ತನ್ನ ಸ್ವರ್ಗೀಯ ರಾಜ್ಯಕ್ಕಾಗಿ ನನ್ನನ್ನು ರಕ್ಷಿಸುವನು. ಅವನಿಗೆ ಸದಾಸರ್ವದಾ ಮಹಿಮೆಯು ಸಲ್ಲುತ್ತಾ ಇರಲಿ. ಆಮೆನ್‌. 19  ಪ್ರಿಸ್ಕಳಿಗೂ ಅಕ್ವಿಲ್ಲನಿಗೂ ಒನೆಸಿಫೊರನ ಮನೆವಾರ್ತೆಯವರಿಗೂ ನನ್ನ ವಂದನೆಯನ್ನು ತಿಳಿಸು. 20  ಎರಸ್ತನು ಕೊರಿಂಥದಲ್ಲಿ ಉಳಿದನು, ಆದರೆ ತ್ರೊಫಿಮನು ಅಸ್ವಸ್ಥನಾಗಿದ್ದದರಿಂದ ನಾನು ಅವನನ್ನು ಮಿಲೇತದಲ್ಲಿ ಬಿಟ್ಟೆನು. 21  ಚಳಿಗಾಲಕ್ಕಿಂತ ಮುಂಚೆಯೇ ಬರಲು ನಿನ್ನಿಂದಾದ ಪ್ರಯತ್ನವನ್ನು ಮಾಡು. ಯುಬೂಲನೂ ಪೂದೆಯನೂ ಲೀನನೂ ಕ್ಲೌದ್ಯಳೂ ಉಳಿದ ಎಲ್ಲ ಸಹೋದರರೂ ನಿನಗೆ ವಂದನೆಗಳನ್ನು ಕಳುಹಿಸಿದ್ದಾರೆ. 22  ಕರ್ತನು ನೀನು ತೋರಿಸುವ ಮನೋಭಾವದೊಂದಿಗೆ ಇರಲಿ. ಅವನ ಅಪಾತ್ರ ದಯೆಯು ನಿಮ್ಮೊಂದಿಗಿರಲಿ.

ಪಾದಟಿಪ್ಪಣಿ