2 ಕೊರಿಂಥ 9:1-15

9  ಪವಿತ್ರ ಜನರಿಗಾಗಿ ಇರುವ ಶುಶ್ರೂಷೆಯ ಕುರಿತು ನಾನು ನಿಮಗೆ ಬರೆಯುವ ಅಗತ್ಯವಿಲ್ಲ.  ಏಕೆಂದರೆ ನಿಮ್ಮ ಸಿದ್ಧಮನಸ್ಸಿನ ಕುರಿತು ನಾನು ಬಲ್ಲೆನು; ಕಳೆದ ಒಂದು ವರ್ಷದಿಂದ ಅಖಾಯದವರು ಸಹಾಯಮಾಡಲು ಸಿದ್ಧರಾಗಿ ನಿಂತಿದ್ದಾರೆಂದು ಮಕೆದೋನ್ಯದವರ ಮುಂದೆ ನಿಮ್ಮನ್ನು ಹೊಗಳುತ್ತಿದ್ದೇನೆ ಮತ್ತು ನಿಮ್ಮ ಹುರುಪು ಅವರಲ್ಲಿ ಹೆಚ್ಚಿನವರನ್ನು ಪ್ರೇರೇಪಿಸಿದೆ.  ಈ ವಿಷಯ​ದಲ್ಲಿ ನಿಮ್ಮ ಕುರಿತಾದ ನಮ್ಮ ಹೊಗಳಿಕೆಯು ಪೊಳ್ಳಾಗಿ ಪರಿಣಮಿಸದಂತೆ ನಾನು ಸಹೋದರರನ್ನು ಕಳುಹಿಸುತ್ತಿದ್ದೇನೆ; ಆಗ ನೀವು ಸಿದ್ಧರಾಗಿರುತ್ತೀರಿ ಎಂದು ನಾನು ಹೇಳುತ್ತಿದ್ದಂತೆಯೇ ನೀವು ನಿಜವಾಗಿಯೂ ಸಿದ್ಧರಾಗಿರುವಿರಿ.  ಸಿದ್ಧವಾಗಿರದಿದ್ದರೆ ಒಂದುವೇಳೆ ಮಕೆದೋನ್ಯದವರು ನನ್ನೊಂದಿಗೆ ಬಂದು ನೀವು ಸಿದ್ಧರಾಗಿ ಇಲ್ಲದಿರುವುದನ್ನು ಕಂಡುಕೊಳ್ಳುವಾಗ, ನಮ್ಮ ಈ ಆಶ್ವಾಸನೆಯ ಸಂಬಂಧದಲ್ಲಿ ನಾವು ನಾಚಿಕೆಪಡಬೇಕಾದೀತು, ನಿಮಗೂ ನಾಚಿಕೆಯಾಗುವುದೆಂದು ಹೇಳಬೇಕಾಗಿಲ್ಲ.  ಆದುದರಿಂದ ನಿಮ್ಮ ಬಳಿಗೆ ಮುಂಚಿತವಾಗಿಯೇ ಹೋಗುವಂತೆ ಮತ್ತು ಈ ಮುಂಚೆ ಮಾತುಕೊಟ್ಟಂತೆಯೇ ನಿಮ್ಮ ಉದಾರವಾದ ಕಾಣಿಕೆಯನ್ನು ಮುಂದಾಗಿಯೇ ಸಿದ್ಧಪಡಿಸುವಂತೆ ಸಹೋದರರನ್ನು ಉತ್ತೇಜಿಸುವುದು ಅಗತ್ಯವೆಂದು ನನಗೆ ತೋರಿತು; ಹೀಗೆ ಆ ಹಣವು ಸುಲಿಗೆಯಂತಿರದೆ ಉದಾರವಾದ ಕಾಣಿಕೆಯಂತೆ ಮುಂಚಿತವಾಗಿಯೇ ಸಿದ್ಧವಾಗಿರುವುದು.  ಆದರೆ ಈ ವಿಷಯದಲ್ಲಿ, ಯಾರು ಸ್ವಲ್ಪವಾಗಿ ಬಿತ್ತುತ್ತಾನೋ ಅವನು ಸ್ವಲ್ಪವಾಗಿ ಕೊಯ್ಯುವನು; ಯಾರು ಬಹಳವಾಗಿ ಬಿತ್ತುತ್ತಾನೋ ಅವನು ಬಹಳವಾಗಿ ಕೊಯ್ಯುವನು.  ಪ್ರತಿಯೊಬ್ಬನು ಒಲ್ಲದ ಮನಸ್ಸಿನಿಂದಾಗಲಿ ಒತ್ತಾಯದಿಂದಾಗಲಿ ಮಾಡದೆ ತನ್ನ ಹೃದಯದಲ್ಲಿ ನಿರ್ಣಯಿಸಿಕೊಂಡಿರುವ ಪ್ರಕಾರವೇ ಮಾಡಲಿ; ಏಕೆಂದರೆ ಸಂತೋಷದಿಂದ ಕೊಡುವವನನ್ನು ದೇವರು ಪ್ರೀತಿಸುತ್ತಾನೆ.  ಮಾತ್ರವಲ್ಲದೆ, ನೀವು ಯಾವಾಗಲೂ ಎಲ್ಲ ವಿಷಯಗಳಲ್ಲಿ ಪೂರ್ಣ ಸ್ವಸಂತೃಪ್ತಿಯುಳ್ಳವರಾಗಿದ್ದು ಸಕಲಸತ್ಕಾರ್ಯಗಳನ್ನು ಹೇರಳವಾಗಿ ಮಾಡುವವರಾಗಿರುವಾಗ ದೇವರು ನಿಮ್ಮ ಮೇಲೆ ತನ್ನ ಎಲ್ಲ ಅಪಾತ್ರ ದಯೆಯನ್ನು ಧಾರಾಳವಾಗಿ ಅನುಗ್ರಹಿಸಲು ಶಕ್ತನಾಗಿರುತ್ತಾನೆ.  (“ಆತನು ವ್ಯಾಪಕ​ವಾಗಿ ವಿತರಿಸಿದ್ದಾನೆ, ಆತನು ಬಡವರಿಗೆ ನೀಡಿದ್ದಾನೆ, ಆತನ ನೀತಿಯು ಸದಾಕಾಲವೂ ಮುಂದುವರಿಯುವುದು” ಎಂದು ಬರೆದದೆಯಲ್ಲಾ. 10  ಬಿತ್ತುವವನಿಗೆ ಬೀಜವನ್ನೂ ಊಟಮಾಡುವವನಿಗೆ ಆಹಾರವನ್ನೂ ಹೇರಳವಾಗಿ ಒದಗಿಸುವಾತನು ನಿಮಗೂ ಬಿತ್ತುವದಕ್ಕೆ ಬೀಜವನ್ನು ಒದಗಿಸಿ ಅದನ್ನು ಹೆಚ್ಚಿಸುವನು ಮತ್ತು ನಿಮ್ಮ ನೀತಿಯ ಫಲಗಳನ್ನು ವೃದ್ಧಿಪಡಿಸುವನು.) 11  ಎಲ್ಲ ವಿಷಯಗಳಲ್ಲಿ ನೀವು ಎಲ್ಲ ರೀತಿಯ ಔದಾರ್ಯಕ್ಕೂ ಸಮೃದ್ಧಗೊಳಿಸಲ್ಪಟ್ಟಿದ್ದೀರಿ; ಇದು ನಮ್ಮ ಮೂಲಕ ದೇವರಿಗೆ ಕೃತಜ್ಞತಾಸ್ತುತಿಯನ್ನು ಉಂಟುಮಾಡುತ್ತದೆ. 12  ಏಕೆಂದರೆ ಈ ಸಾರ್ವಜನಿಕ ಸೇವೆಯ ಕಾರ್ಯವು ಪವಿತ್ರ ಜನರ ಅಗತ್ಯಗಳನ್ನು ಹೇರಳವಾಗಿ ಪೂರೈಸುತ್ತದೆ ಮಾತ್ರವಲ್ಲ ದೇವರಿಗೆ ಕೃತಜ್ಞತಾಸ್ತುತಿಯ ಅನೇಕ ಅಭಿವ್ಯಕ್ತಿಗಳನ್ನೂ ಉಂಟುಮಾಡುತ್ತದೆ. 13  ನೀವು ಸಾರ್ವಜನಿಕವಾಗಿ ತಿಳಿಯಪಡಿಸಿರುವಂತೆ ಕ್ರಿಸ್ತನ ಕುರಿತಾದ ಸುವಾರ್ತೆಗೆ ಅಧೀನರಾಗಿರುವುದರಿಂದಲೂ ಅವರಿಗೆ ಮತ್ತು ಎಲ್ಲರಿಗೆ ಕಾಣಿಕೆ ನೀಡುವುದರಲ್ಲಿ ನೀವು ಉದಾರಭಾವವನ್ನು ತೋರಿಸಿರುವುದರಿಂದಲೂ, ಈ ಶುಶ್ರೂಷೆಯು ಕೊಡುವ ರುಜುವಾತಿನ ಮೂಲಕ ಅವರು ದೇವರನ್ನು ಮಹಿಮೆಪಡಿಸುತ್ತಾರೆ; 14  ದೇವರ ಅಪಾತ್ರ ದಯೆಯು ನಿಮ್ಮ ಮೇಲೆ ಹೇರಳವಾಗಿರುವುದರಿಂದ ಅವರು ನಿಮಗಾಗಿ ಯಾಚಿಸುತ್ತಾ ನಿಮಗಾಗಿ ಹಂಬಲಿಸುವರು. 15  ವರ್ಣಿಸಲಸಾಧ್ಯವಾದ ದೇವರ ಉಚಿತ ವರಕ್ಕಾಗಿ ಆತನಿಗೆ ಕೃತಜ್ಞತೆ ಸಲ್ಲಲಿ.

ಪಾದಟಿಪ್ಪಣಿ