2 ಕೊರಿಂಥ 7:1-16

7  ಆದುದರಿಂದ ಪ್ರಿಯರೇ, ಈ ವಾಗ್ದಾನಗಳು ನಮಗಿರುವುದರಿಂದ ನಾವು ಶರೀರ ಮತ್ತು ಮನಸ್ಸಿನ ಪ್ರತಿಯೊಂದು ಕಲ್ಮಶದಿಂದ ನಮ್ಮನ್ನು ಶುಚಿಮಾಡಿಕೊಂಡು ದೇವರ ಭಯದಲ್ಲಿ ಪವಿತ್ರತೆಯನ್ನು ಪರಿಪೂರ್ಣಗೊಳಿಸೋಣ.  ನಿಮ್ಮ ಹೃದಯಗಳಲ್ಲಿ ನಮಗೆ ಸ್ಥಳಕೊಡಿರಿ. ನಾವು ಯಾರಿಗೂ ತಪ್ಪುಮಾಡಿಲ್ಲ, ಯಾರನ್ನೂ ಭ್ರಷ್ಟಗೊಳಿಸಿಲ್ಲ, ಯಾರನ್ನೂ ನಮ್ಮ ಪ್ರಯೋಜನಕ್ಕಾಗಿ ಬಳಸಿಕೊಂಡಿಲ್ಲ.  ನಿಮ್ಮನ್ನು ಖಂಡಿಸಲಿಕ್ಕಾಗಿ ನಾನು ಇದನ್ನು ಹೇಳುತ್ತಿಲ್ಲ. ಏಕೆಂದರೆ ನೀವು ನಮ್ಮೊಂದಿಗೆ ಸಾಯಲು ಮತ್ತು ಜೀವಿಸಲು ನಮ್ಮ ಹೃದಯಗಳಲ್ಲಿದ್ದೀರಿ ಎಂದು ನಾನು ಮೊದಲೇ ಹೇಳಿದ್ದೇನೆ.  ನಾನು ನಿಮ್ಮೊಂದಿಗೆ ಬಹಳ ಧೈರ್ಯದಿಂದ * ಮಾತಾಡಬಲ್ಲೆ. ನನಗೆ ನಿಮ್ಮ ವಿಷಯದಲ್ಲಿ ತುಂಬ ಹೆಮ್ಮೆಯಿದೆ. ನಾನು ಸಾಂತ್ವನದಿಂದ ತುಂಬಿದವನಾಗಿದ್ದೇನೆ, ನಾನು ನಮ್ಮ ಎಲ್ಲ ಬಾಧೆಗಳಲ್ಲಿ ಸಂತೋಷದಿಂದ ತುಂಬಿತುಳುಕುತ್ತಿದ್ದೇನೆ.  ವಾಸ್ತವದಲ್ಲಿ ನಾವು ಮಕೆದೋನ್ಯಕ್ಕೆ ಬಂದಾಗ ನಮ್ಮ ಶರೀರಕ್ಕೆ ಯಾವುದೇ ಉಪಶಮನ ಸಿಗಲಿಲ್ಲ; ಬದಲಿಗೆ ನಾವು ಎಲ್ಲ ವಿಧಗಳಲ್ಲಿ ಬಾಧೆಗೊಳಗಾಗುತ್ತಾ ಇದ್ದೆವು​—⁠ಹೊರಗೆ ಜಗಳಗಳು, ಒಳಗೆ ಭಯ.  ಆದರೂ ಕುಗ್ಗಿಸಲ್ಪಟ್ಟಿರುವವರನ್ನು ಸಾಂತ್ವನಗೊಳಿಸುವ ದೇವರು ತೀತನ ಉಪಸ್ಥಿತಿಯ ಮೂಲಕ ನಮ್ಮನ್ನು ಸಾಂತ್ವನಗೊಳಿಸಿದನು.  ಅವನ ಉಪಸ್ಥಿತಿಯ ಮೂಲಕ ಮಾತ್ರವಲ್ಲ, ಅವನು ನಿಮ್ಮಿಂದ ಹೊಂದಿದ ಸಾಂತ್ವನದಿಂದಲೂ ನಾವು ಸಾಂತ್ವನಗೊಳಿಸಲ್ಪಟ್ಟೆವು; ನೀವು ನನಗಾಗಿ ತೋರಿಸುವ ಹಂಬಲ, ಗೋಳಾಟ, ಹುರುಪಿನ ಕುರಿತಾದ ವರದಿಯನ್ನು ಅವನು ಪುನಃ ತಂದನು. ಇದರಿಂದ ನಾನು ಇನ್ನಷ್ಟು ಹರ್ಷಿಸಿದೆನು.  ಆದುದರಿಂದ ನಾನು ನನ್ನ ಪತ್ರದ ಮೂಲಕ ನಿಮಗೆ ದುಃಖವನ್ನು ಉಂಟುಮಾಡಿದ್ದರೂ ಅದಕ್ಕಾಗಿ ವಿಷಾದಪಡುವುದಿಲ್ಲ. ನಾನು ಮೊದಲು ಅದರ ಕುರಿತು (ಸ್ವಲ್ಪಕಾಲ ನನ್ನ ಪತ್ರವು ನಿಮ್ಮನ್ನು ದುಃಖಪಡಿಸಿತು ಎಂದು ತಿಳಿಯುತ್ತದೆ) ವಿಷಾದ​ಪಟ್ಟೆನಾದರೂ  ಈಗ ನಾನು ಹರ್ಷಿಸುತ್ತೇನೆ; ಕೇವಲ ನೀವು ದುಃಖಪಟ್ಟಿರಿ ಎಂಬ ಕಾರಣಕ್ಕಾಗಿ ಅಲ್ಲ, ನಿಮ್ಮ ದುಃಖವು ಪಶ್ಚಾತ್ತಾಪಕ್ಕೆ ನಡೆಸಿತು ಎಂಬ ಕಾರಣಕ್ಕಾಗಿ ಹರ್ಷಿಸುತ್ತೇನೆ. ಏಕೆಂದರೆ ನೀವು ನಮ್ಮಿಂದಾಗಿ ಯಾವುದೇ ವಿಧದಲ್ಲಿ ಹಾನಿಯನ್ನು ಅನುಭವಿಸದಂತೆ ದೈವಿಕ ರೀತಿಯಲ್ಲಿ ದುಃಖಪಟ್ಟಿರಿ. 10  ಏಕೆಂದರೆ ದೈವಿಕ ರೀತಿಯ ದುಃಖವು ವಿಷಾದನೀಯವಲ್ಲದ ರಕ್ಷಣೆಗೆ ನಡೆಸುವ ಪಶ್ಚಾತ್ತಾಪವನ್ನು ಒದಗಿಸುತ್ತದೆ; ಆದರೆ ಈ ಲೋಕದ ದುಃಖವು ಮರಣವನ್ನು ಫಲಿಸುತ್ತದೆ. 11  ಹೀಗೆ ನೀವು ದೈವಿಕ ರೀತಿಯಲ್ಲಿ ದುಃಖಪಟ್ಟದ್ದು ನಿಮ್ಮಲ್ಲಿ ಎಂಥ ಶ್ರದ್ಧೆಯನ್ನು ಉಂಟುಮಾಡಿದೆ ಎಂಬುದನ್ನು ನೋಡಿರಿ! ಹೌದು, ಅದು ನಿಮ್ಮಲ್ಲಿ ಶುದ್ಧೀಕರಣವನ್ನೂ ರೋಷವನ್ನೂ ಭಯವನ್ನೂ ಹಂಬಲವನ್ನೂ ಹುರುಪನ್ನೂ ತಪ್ಪನ್ನು ಸರಿಪಡಿಸಿಕೊಳ್ಳುವ ಅಪೇಕ್ಷೆಯನ್ನೂ ಉಂಟುಮಾಡಿದೆ. ಈ ವಿಷಯದಲ್ಲಿ ನೀವು ನಿರ್ಮಲರೆಂಬುದನ್ನು ಪ್ರತಿಯೊಂದು ವಿಧದಲ್ಲಿಯೂ ತೋರಿಸಿಕೊಟ್ಟಿರಿ. 12  ನಾನು ನಿಮಗೆ ಬರೆದಾಗ ತಪ್ಪನ್ನು ಮಾಡಿದವನಿಗಾಗಲಿ ತಪ್ಪಿನಿಂದ ಬಾಧಿಸಲ್ಪಟ್ಟವನಿಗಾಗಲಿ ಅದನ್ನು ಬರೆಯದೆ, ನಮಗೋಸ್ಕರ ನೀವು ತೋರಿಸುವ ಆಸಕ್ತಿಯು ದೇವರ ದೃಷ್ಟಿಯಲ್ಲಿ ವ್ಯಕ್ತವಾಗುವಂತೆ ಇದನ್ನು ಬರೆದೆನೆಂಬುದು ನಿಶ್ಚಯ. 13  ಈ ಕಾರಣದಿಂದಲೇ ನಾವು ಸಾಂತ್ವನವನ್ನು ಹೊಂದಿದ್ದೇವೆ. ಆದರೂ ನಮಗೆ ದೊರೆತ ಸಾಂತ್ವನದೊಂದಿಗೆ ನಿಮ್ಮೆಲ್ಲರಿಂದ ತೀತನ ಮನಸ್ಸು ಚೈತನ್ಯಗೊಂಡ ಕಾರಣ ನಾವು ಅವನ ಆನಂದವನ್ನು ನೋಡಿ ಇನ್ನಷ್ಟು ಸಂತೋಷಪಟ್ಟೆವು. 14  ನಾನು ನಿಮ್ಮ ಕುರಿತು ಅವನ ಮುಂದೆ ಹೊಗಳಿರುವಲ್ಲಿ ಅದಕ್ಕಾಗಿ ನಾಚಿಕೆಪಡುವುದಿಲ್ಲ; ನಾವು ನಿಮಗೆ ಹೇಳಿದ ಎಲ್ಲ ವಿಷಯಗಳು ಸತ್ಯವಾಗಿದ್ದಂತೆಯೇ ತೀತನ ಮುಂದೆ ನಾವು ಮಾಡಿದ ಹೊಗಳಿಕೆಯೂ ಸತ್ಯವೆಂದು ರುಜುವಾಗಿದೆ. 15  ಮಾತ್ರವಲ್ಲದೆ, ಅವನು ನಿಮ್ಮೆಲ್ಲರ ವಿಧೇಯತೆಯನ್ನೂ ನೀವು ಅವನನ್ನು ಭಯ ನಡುಕಗಳೊಂದಿಗೆ ಬರಮಾಡಿಕೊಂಡದ್ದನ್ನೂ ಮನಸ್ಸಿಗೆ ತಂದುಕೊಳ್ಳುವಾಗ ನಿಮ್ಮ ವಿಷಯದಲ್ಲಿ ಅವನಿಗಿರುವ ಕೋಮಲ ಮಮತೆಯು ಇನ್ನಷ್ಟು ಹೆಚ್ಚಾಗುತ್ತದೆ. 16  ನಿಮ್ಮಿಂದಾಗಿ ನಾನು ಎಲ್ಲ ವಿಷಯಗಳಲ್ಲಿ ಧೈರ್ಯವುಳ್ಳವನಾಗಿ ಇರ​ಬಹುದೆಂಬುದಕ್ಕಾಗಿ ಸಂತೋಷಪಡುತ್ತೇನೆ.

ಪಾದಟಿಪ್ಪಣಿ

2ಕೊರಿಂ 7:4  ಅಥವಾ, “ಮಹಾ ವಾಕ್ಸರಳತೆಯೊಂದಿಗೆ.”