2 ಕೊರಿಂಥ 3:1-18

3  ನಮ್ಮನ್ನು ನಾವೇ ಪುನಃ ಶಿಫಾರಸ್ಸು ಮಾಡಿಕೊಳ್ಳುವುದಕ್ಕೆ ತೊಡಗುತ್ತಿದ್ದೇವೊ? ಅಥವಾ ಕೆಲವು ವ್ಯಕ್ತಿಗಳಿಗೆ ಪ್ರಾಯಶಃ ಬೇಕಾಗಿರುವಂತೆ ನಿಮಗೆ ಅಥವಾ ನಿಮ್ಮಿಂದ ಶಿಫಾರಸ್ಸು ಪತ್ರಗಳು ನಮಗೆ ಅಗತ್ಯವೊ?  ನೀವೇ ನಮ್ಮ ಪತ್ರವಾಗಿದ್ದೀರಿ; ಅದು ನಮ್ಮ ಹೃದಯಗಳಲ್ಲಿ ಬರೆಯಲ್ಪಟ್ಟಿದೆ ಮತ್ತು ಅದನ್ನು ಇಡೀ ಮಾನವಕುಲವು ತಿಳಿಯುತ್ತಿದೆ ಹಾಗೂ ಓದುತ್ತಿದೆ.  ನೀವು ಶುಶ್ರೂಷಕರಾದ ನಮ್ಮಿಂದ ಬರೆಯಲ್ಪಟ್ಟಿರುವ ಕ್ರಿಸ್ತನ ಪತ್ರವಾಗಿ ತೋರಿಸಲ್ಪಟ್ಟಿದ್ದೀರಿ; ಇದು ಮಸಿಯಿಂದ ಬರೆಯಲ್ಪಡದೆ ಜೀವವುಳ್ಳ ದೇವರ ಆತ್ಮದಿಂದಲೇ * ಬರೆಯಲ್ಪಟ್ಟಿದೆ; ಕಲ್ಲಿನ ಹಲಗೆಗಳ ಮೇಲಲ್ಲ, ಶಾರೀರಿಕ ಹಲಗೆಗಳಾದ ಹೃದಯಗಳ ಮೇಲೆ ಬರೆಯಲ್ಪಟ್ಟಿದೆ.  ಈಗ ಕ್ರಿಸ್ತನ ಮೂಲಕ ನಮಗೆ ದೇವರ ವಿಷಯದಲ್ಲಿ ಈ ರೀತಿಯ ಭರವಸೆಯಿದೆ.  ನಮ್ಮಿಂದಲೇ ಏನಾದರೂ ಉಂಟಾಯಿತೆಂದು ನೆನಸಲು ನಮ್ಮಷ್ಟಕ್ಕೆ ನಾವೇ ತಕ್ಕಷ್ಟು ಅರ್ಹರಾಗಿದ್ದೇವೆಂದಲ್ಲ, ಬದಲಾಗಿ ನಾವು ತಕ್ಕಷ್ಟು ಅರ್ಹರಾಗಿರುವುದು ದೇವರಿಂದಲೇ ಬಂದದ್ದು.  ಆತನೇ ನಮ್ಮನ್ನು ಹೊಸ ಒಡಂಬಡಿಕೆಯ ಶುಶ್ರೂಷಕರಾಗಿರಲು ತಕ್ಕಷ್ಟು ಅರ್ಹರಾಗುವಂತೆ ಮಾಡಿದ್ದಾನೆ. ನಾವು ಲಿಖಿತ ನಿಯಮಾವಳಿಯ ಶುಶ್ರೂಷಕರಲ್ಲ ದೇವರಾತ್ಮದ ಶುಶ್ರೂಷಕರಾಗಿದ್ದೇವೆ; ಏಕೆಂದರೆ ಲಿಖಿತ ನಿಯಮಾವಳಿಯು ಮರಣವನ್ನು ವಿಧಿಸುತ್ತದೆ, ಆದರೆ ಪವಿತ್ರಾತ್ಮವು ಜೀವಿಸುವಂತೆ ಮಾಡುತ್ತದೆ.  ಮಾತ್ರವಲ್ಲದೆ, ಮರಣವನ್ನು ವಿಧಿಸುವ ಮತ್ತು ಕಲ್ಲಿನ ಮೇಲೆ ಅಕ್ಷರಗಳಲ್ಲಿ ಕೆತ್ತಲ್ಪಟ್ಟಿದ್ದ ನಿಯಮಾವಳಿಯು ಮಹಿಮೆಯಿಂದ ಕೂಡಿದ್ದಾಗಿತ್ತು; ಇಲ್ಲವಾಗಿ ಹೋಗಲಿಕ್ಕಿದ್ದಂಥ ಆ ಮಹಿಮೆಯಿಂದ ಮೋಶೆಯ ಮುಖವು ಪ್ರಕಾಶಿಸುತ್ತಿದ್ದಾಗ ಇಸ್ರಾಯೇಲ್ಯರು ಅವನ ಮುಖವನ್ನು ದೃಷ್ಟಿಸಿ ನೋಡಲು ಶಕ್ತರಾಗದೆ ಇದ್ದಲ್ಲಿ,  ಪವಿತ್ರಾತ್ಮದ ನಿರ್ವಹಣೆಯು ಏಕೆ ಎಷ್ಟೋ ಹೆಚ್ಚು ಮಹಿಮೆಯುಳ್ಳದ್ದಾಗಿರಬಾರದು?  ಖಂಡನೆಯನ್ನು ಉಂಟುಮಾಡುವಂಥ ನಿಯಮಾವಳಿಯು ಮಹಿಮೆಯುಳ್ಳದ್ದಾಗಿತ್ತಾದರೆ, ನೀತಿಯನ್ನು ಉಂಟುಮಾಡುವಂಥದ್ದು ಮತ್ತಷ್ಟು ಮಹಿಮೆಯಿಂದ ತುಂಬಿದ್ದಾಗಿರುತ್ತದೆ. 10  ವಾಸ್ತವದಲ್ಲಿ, ಒಮ್ಮೆ ಮಹಿಮೆಯುಳ್ಳದ್ದಾಗಿ ಮಾಡಲ್ಪಟ್ಟದ್ದು ಸಹ ಈಗ ಅದನ್ನು ಮೀರುವ ಮಹಿಮೆಯ ಕಾರಣ ಮಹಿಮೆಯನ್ನು ಕಳೆದುಕೊಂಡಿದೆ. 11  ಇಲ್ಲದೆ ಹೋಗುವಂಥದ್ದು ಮಹಿಮೆಗೆ ತರಲ್ಪಟ್ಟಿತ್ತಾದರೆ ಉಳಿಯುವಂಥದ್ದು ಮತ್ತಷ್ಟು ಹೆಚ್ಚು ಮಹಿಮೆಯನ್ನು ಹೊಂದಿರುವುದು. 12  ಇಂಥ ನಿರೀಕ್ಷೆ ನಮಗಿರುವುದರಿಂದ ನಾವು ಮಹಾ ವಾಕ್ಸರಳತೆಯನ್ನು ಉಪಯೋಗಿಸುತ್ತೇವೆ. 13  ಇಲ್ಲವಾಗುವಂಥದ್ದರ ಅಂತ್ಯವನ್ನು ಇಸ್ರಾಯೇಲ್ಯರು ದೃಷ್ಟಿಸಿ ನೋಡದಿರುವಂತೆ ಮೋಶೆಯು ತನ್ನ ಮುಖಕ್ಕೆ ಮುಸುಕು ಹಾಕಿಕೊಳ್ಳುತ್ತಿದ್ದಂತೆ ನಾವು ಮಾಡುವುದಿಲ್ಲ. 14  ಅವರ ಮಾನಸಿಕ ಶಕ್ತಿಯು ಕುಂದಿಹೋಗಿತ್ತು. ಈ ದಿನದ ವರೆಗೂ ಹಳೆಯ ಒಡಂಬಡಿಕೆಯು ಓದಲ್ಪಡುವಾಗ ಅದೇ ಮುಸುಕು ಎತ್ತಲ್ಪಡದೆ ಇರುತ್ತದೆ, ಏಕೆಂದರೆ ಅದು ಕ್ರಿಸ್ತನ ಮೂಲಕ ತೆಗೆದುಹಾಕಲ್ಪಡುತ್ತದೆ. 15  ವಾಸ್ತವದಲ್ಲಿ ಈ ದಿನದ ವರೆಗೂ ಮೋಶೆಯ ಗ್ರಂಥವು ಓದಲ್ಪಡುವಾಗಲೆಲ್ಲ ಮುಸುಕು ಅವರ ಹೃದಯಗಳ ಮೇಲೆ ಇರುತ್ತದೆ. 16  ಆದರೆ ಯೆಹೋವನ ಕಡೆಗೆ ತಿರುಗಿಕೊಂಡಾಗಲೇ ಆ ಮುಸುಕು ತೆಗೆದುಹಾಕಲ್ಪಡುತ್ತದೆ. 17  ಯೆಹೋವನು ಆತ್ಮಸ್ವರೂಪಿಯಾಗಿದ್ದಾನೆ; ಎಲ್ಲಿ ಯೆಹೋವನ ಆತ್ಮವಿದೆಯೋ * ಅಲ್ಲಿ ಸ್ವಾತಂತ್ರ್ಯವಿದೆ. 18  ನಾವೆಲ್ಲರೂ ಮುಸುಕಿಲ್ಲದ ಮುಖಗಳೊಂದಿಗೆ ದರ್ಪಣಗಳಂತೆ ಯೆಹೋವನ ಮಹಿಮೆಯನ್ನು ಪ್ರತಿಬಿಂಬಿಸುವಾಗ ಅದೇ ಸ್ವರೂಪಕ್ಕೆ ಮಾರ್ಪಟ್ಟು ಆತ್ಮಸ್ವರೂಪಿಯಾದ ಯೆಹೋವನಿಂದ ಮಾಡಲ್ಪಡುವಂತೆಯೇ ನಾವು ಮಹಿಮೆಯಿಂದ ಮತ್ತಷ್ಟು ಮಹಿಮೆಯನ್ನು ಪ್ರತಿಬಿಂಬಿಸುತ್ತೇವೆ.

ಪಾದಟಿಪ್ಪಣಿ

2ಕೊರಿಂ 3:3  ಅಥವಾ, “ದೇವರ ಕಾರ್ಯಕಾರಿ ಶಕ್ತಿ.” ಪರಿಶಿಷ್ಟ 7 ನ್ನು ನೋಡಿ.
2ಕೊರಿಂ 3:17  ಅಥವಾ, “ದೇವರ ಕಾರ್ಯಕಾರಿ ಶಕ್ತಿ.” ಪರಿಶಿಷ್ಟ 7 ನ್ನು ನೋಡಿ.