2 ಕೊರಿಂಥ 12:1-21

12  ನಾನು ಹೊಗಳಿಕೊಳ್ಳಬೇಕು. ಆದರೆ ಅದು ಪ್ರಯೋಜನದಾಯಕವಲ್ಲ; ಅದರ ಬದಲಿಗೆ ನಾನು ಕರ್ತನ ಅಸಾಧಾರಣವಾದ ದರ್ಶನಗಳ ಕುರಿತೂ ಪ್ರಕಟನೆಗಳ ಕುರಿತೂ ಮಾತಾಡುವೆನು.  ಕ್ರಿಸ್ತನೊಂದಿಗೆ ಐಕ್ಯದಿಂದಿದ್ದ ಒಬ್ಬ ಮನುಷ್ಯನನ್ನು ನಾನು ಬಲ್ಲೆನು. ಹದಿನಾಲ್ಕು ವರ್ಷಗಳ ಹಿಂದೆ ಅವನು ಮೂರನೆಯ ಸ್ವರ್ಗಕ್ಕೆ ಒಯ್ಯಲ್ಪಟ್ಟನು​—⁠ಅವನು ದೇಹಸಹಿತವಾಗಿ ಒಯ್ಯಲ್ಪಟ್ಟನೋ ದೇಹ​ರಹಿತವಾಗಿ ಒಯ್ಯಲ್ಪಟ್ಟನೋ ನನಗೆ ಗೊತ್ತಿಲ್ಲ, ದೇವರಿಗೇ ಗೊತ್ತು.  ಹೌದು, ನನಗೆ ಇಂಥ ಒಬ್ಬ ಮನುಷ್ಯನ ಬಗ್ಗೆ ಗೊತ್ತು. ಅವನು ಪರದೈಸಿಗೆ ಒಯ್ಯಲ್ಪಟ್ಟನು​—⁠ದೇಹಸಹಿತನಾಗಿಯೋ ದೇಹರಹಿತನಾಗಿಯೋ ನನಗೆ ಗೊತ್ತಿಲ್ಲ, ದೇವರಿಗೇ ಗೊತ್ತು.  ಮತ್ತು ಒಬ್ಬ ಮನುಷ್ಯನು ಮಾತಾಡಲು ನಿಷಿದ್ಧವೂ ನುಡಿಯಲಶಕ್ಯವೂ ಆದ ಮಾತುಗಳನ್ನು ಅವನು ಪರದೈಸಿನಲ್ಲಿದ್ದಾಗ ಕೇಳಿಸಿಕೊಂಡನು.  ಇಂಥ ಒಬ್ಬ ಮನುಷ್ಯನ ವಿಷಯದಲ್ಲಿ ನಾನು ಹೆಚ್ಚಳಪಡುವೆನು; ಆದರೆ ನಾನು ನನ್ನ ಬಲಹೀನತೆಗಳ ಸಂಬಂಧದಲ್ಲೇ ಹೊರತು ನನ್ನ ಕುರಿತಾಗಿಯೇ ಹೊಗಳಿಕೊಳ್ಳುವುದಿಲ್ಲ.  ಒಂದುವೇಳೆ ನಾನು ಹೊಗಳಿಕೊಳ್ಳಲು ಬಯಸುವುದಾದರೂ, ನಾನು ಸತ್ಯವನ್ನೇ ಹೇಳುವುದರಿಂದ ವಿಚಾರಹೀನನಾಗಿರುವುದಿಲ್ಲ. ಆದರೆ ಯಾವನಾದರೂ ನನ್ನಲ್ಲಿ ಕಾಣುವುದಕ್ಕಿಂತಲೂ ನನ್ನಿಂದ ಕೇಳಿಸಿಕೊಳ್ಳುವುದಕ್ಕಿಂತಲೂ ಹೆಚ್ಚಾಗಿ ನನ್ನ ಕುರಿತು ಎಣಿಸದಂತೆ ನಾನು ಹೊಗಳಿಕೊಳ್ಳುವುದರಿಂದ ದೂರವಿರುತ್ತೇನೆ.  ಹೇರಳವಾದ ಪ್ರಕಟನೆಗಳ ಕಾರಣದಿಂದಾಗಿ ಯಾರೂ ನನ್ನ ಕುರಿತು ಹೆಚ್ಚಾಗಿ ಎಣಿಸಬಾರದು. ಆದುದರಿಂದ ನಾನು ಮಿತಿಮೀರಿ ಹೆಚ್ಚಿಸಿಕೊಳ್ಳದಂತೆ ನನ್ನನ್ನು ಹೊಡೆಯುತ್ತಾ ಇರಲಿಕ್ಕಾಗಿ ಶರೀರದಲ್ಲಿ ಒಂದು ಮುಳ್ಳು, ಅಂದರೆ ಸೈತಾನನ ಒಬ್ಬ ದೂತನನ್ನು ಕೊಡಲಾಯಿತು; ನಾನು ಮಿತಿಮೀರಿ ಹೆಚ್ಚಿಸಿಕೊಳ್ಳದಂತೆ ಇದಾಯಿತು.  ಈ ಸಂಬಂಧದಲ್ಲಿ ಇದು ನನ್ನನ್ನು ಬಿಟ್ಟುಹೋಗಬೇಕೆಂದು ನಾನು ಮೂರು ಸಾರಿ ಕರ್ತನನ್ನು ಬೇಡಿಕೊಂಡೆನು.  ಆದರೆ ಆತನು ನನಗೆ, “ನನ್ನ ಅಪಾತ್ರ ದಯೆಯೇ ನಿನಗೆ ಸಾಕು; ನನ್ನ ಬಲವು ಬಲಹೀನತೆಯಲ್ಲಿ ಪರಿಪೂರ್ಣಗೊಳಿಸಲ್ಪಡುತ್ತದೆ” ಎಂದು ಖಂಡಿತವಾಗಿ ಹೇಳಿದನು. ಆದುದರಿಂದ ಕ್ರಿಸ್ತನ ಬಲವು ಗುಡಾರದಂತೆ ನನ್ನ ಮೇಲೆ ಉಳಿಯಬೇಕೆಂದು ನನ್ನ ಬಲಹೀನತೆಗಳ ಸಂಬಂಧದಲ್ಲಿ ಹೆಚ್ಚು ಸಂತೋಷದಿಂದ ಹೊಗಳಿಕೊಳ್ಳುವೆನು. 10  ಹೀಗಿರುವುದರಿಂದ ನಾನು ಕ್ರಿಸ್ತನ ನಿಮಿತ್ತ ಬಲಹೀನತೆಗಳಲ್ಲಿಯೂ ಅವಮಾನಗಳಲ್ಲಿಯೂ ಕೊರತೆಗಳಲ್ಲಿಯೂ ಹಿಂಸೆಗಳಲ್ಲಿಯೂ ಕಷ್ಟಗಳಲ್ಲಿಯೂ ಸಂತೋಷಪಡುತ್ತೇನೆ. ನಾನು ಬಲಹೀನನಾಗಿರುವಾಗಲೇ ಬಲವುಳ್ಳವನಾಗಿದ್ದೇನೆ. 11  ನಾನು ವಿಚಾರಹೀನನಾಗಿದ್ದೇನೆ. ಇದಕ್ಕೆ ನೀವೇ ನನಗೆ ​ಬಲವಂತಮಾಡಿದಿರಿ; ಏಕೆಂದರೆ ನೀವೇ ನನ್ನನ್ನು ಶಿಫಾರಸ್ಸು ಮಾಡಬೇಕಾಗಿತ್ತು. ನಾನು ಏನೂ ಅಲ್ಲದಿದ್ದರೂ ಅತ್ಯುತ್ಕೃಷ್ಟರೆಂದು ತೋರಿಸಿಕೊಳ್ಳುವ ನಿಮ್ಮ ಅಪೊಸ್ತಲರಿಗಿಂತ ಒಂದು ವಿಷಯದಲ್ಲಿಯೂ ಕಡಮೆಯವನಾಗಿ ಕಂಡುಬರಲಿಲ್ಲ. 12  ವಾಸ್ತವದಲ್ಲಿ ಒಬ್ಬ ಅಪೊಸ್ತಲನ ರುಜುವಾತುಗಳು ಎಲ್ಲ ಸಹನೆಯಿಂದಲೂ ಸೂಚಕಕಾರ್ಯಗಳಿಂದಲೂ ಆಶ್ಚರ್ಯಕಾರ್ಯಗಳಿಂದಲೂ ಮಹತ್ಕಾರ್ಯಗಳಿಂದಲೂ ನಿಮ್ಮ ಮಧ್ಯೆ ತೋರಿಸಲ್ಪಟ್ಟವು. 13  ನಾನು ನಿಮಗೆ ಹೊರೆಯಾಗಲಿಲ್ಲ ಎಂಬುದನ್ನು ಹೊರತು ಯಾವ ವಿಧದಲ್ಲಿ ಉಳಿದ ಸಭೆಗಳವರಿಗಿಂತ ನೀವು ಕಡಮೆಯವರಾಗಿ ಮಾಡಲ್ಪಟ್ಟಿರಿ? ನಾನು ನಿಮಗೆ ಹೊರೆಯಾಗಲಿಲ್ಲ ಎಂಬ ನನ್ನ ಈ ತಪ್ಪನ್ನು ದಯಮಾಡಿ ಕ್ಷಮಿಸಿರಿ. 14  ಇಗೋ, ನಾನು ನಿಮ್ಮ ಬಳಿಗೆ ಬರುವುದಕ್ಕೆ ಸಿದ್ಧವಾಗಿರುವುದು ಇದು ಮೂರನೆಯ ಬಾರಿ; ಆದರೂ ನಾನು ನಿಮಗೆ ಹೊರೆಯಾಗುವುದಿಲ್ಲ, ಏಕೆಂದರೆ ನಾನು ಆಶಿಸುವುದು ನಿಮ್ಮ ಸೊತ್ತುಗಳನ್ನಲ್ಲ, ನಿಮ್ಮನ್ನೇ. ಮಕ್ಕಳು ಹೆತ್ತವರಿಗಾಗಿ ಶೇಖರಿಸಿಡಬೇಕಾಗಿರುವುದಿಲ್ಲ, ಹೆತ್ತವರು ತಮ್ಮ ಮಕ್ಕಳಿಗಾಗಿ ಶೇಖರಿಸಿಡಬೇಕು. 15  ನಾನಾದರೋ ನನ್ನನ್ನು ನಿಮ್ಮ ಪ್ರಾಣಗಳಿಗೋಸ್ಕರ ಅತಿ ಸಂತೋಷದಿಂದ ವಿನಿಯೋಗಿಸಿಕೊಳ್ಳುವೆನು, ಸಂಪೂರ್ಣವಾಗಿ ವಿನಿಯೋಗಿಸುವಂತೆ ಬಿಡುವೆನು. ನಾನು ನಿಮ್ಮನ್ನು ಬಹಳವಾಗಿ ಪ್ರೀತಿಸುವುದಾದರೆ, ನೀವು ನನ್ನನ್ನು ಕಡಮೆ ಪ್ರೀತಿಸಬೇಕೊ? 16  ಅದೇನೇ ಇರಲಿ, ನಾನು ನಿಮ್ಮ ಮೇಲೆ ಹೊರೆಯನ್ನು ಹೊರಿಸಲಿಲ್ಲ. ಆದರೂ ನಾನು “ಕುತಂತ್ರಿ” ಎಂದೂ ನಿಮ್ಮನ್ನು “ಕುಯುಕ್ತಿಯಿಂದ” ಹಿಡಿದೆನೆಂದೂ ನೀವು ಹೇಳುತ್ತೀರಿ. 17  ನಾನು ನಿಮ್ಮ ಬಳಿಗೆ ಕಳುಹಿಸಿದವರಲ್ಲಿ ಒಬ್ಬನ ಮೂಲಕವಾಗಿಯಾದರೂ ನಿಮ್ಮನ್ನು ದುರುಪಯೋಗಿಸಿಕೊಂಡೆನೊ? 18  ನಾನು ತೀತನನ್ನು ಉತ್ತೇಜಿಸಿದೆ ಮತ್ತು ಅವನೊಂದಿಗೆ ಆ ಸಹೋದರನನ್ನು ಕಳುಹಿಸಿದೆ. ತೀತನು ನಿಮ್ಮನ್ನು ಯಾವುದೇ ವಿಧದಲ್ಲಾದರೂ ದುರುಪಯೋಗಿಸಿಕೊಂಡನೊ? ನಾವು ಒಂದೇ ಮನೋವೃತ್ತಿಯಲ್ಲಿ ನಡೆದೆವಲ್ಲವೆ? ಒಂದೇ ಹೆಜ್ಜೆಜಾಡಿನಲ್ಲಿ ನಡೆದೆವಲ್ಲವೆ? 19  ನಾವು ಇಷ್ಟರ ವರೆಗೆ ನಿಮ್ಮ ಮುಂದೆ ಪ್ರತಿವಾದವನ್ನು ಮಾಡುತ್ತಿದ್ದೆವು ಎಂದು ನೀವು ನೆನಸುತ್ತಿದ್ದಿರೊ? ನಾವು ಕ್ರಿಸ್ತನ ಸಂಬಂಧದಲ್ಲಿ ದೇವರ ಮುಂದೆ ಮಾತಾಡುತ್ತಿದ್ದೇವೆ. ಆದರೆ ಪ್ರಿಯರೇ, ಎಲ್ಲವೂ ನಿಮ್ಮ ಭಕ್ತಿವೃದ್ಧಿಗೋಸ್ಕರವಾಗಿದೆ. 20  ನಾನು ನಿಮ್ಮ ಬಳಿಗೆ ಬರುವಾಗ ನಾನು ಬಯಸಿದಂಥ ರೀತಿಯಲ್ಲಿ ನಿಮ್ಮನ್ನು ಕಂಡುಕೊಳ್ಳದೆ ಮತ್ತು ನೀವು ಬಯಸಿದಂಥ ರೀತಿಯಲ್ಲಿ ನೀವು ನನ್ನನ್ನು ಕಂಡುಕೊಳ್ಳದೆ, ನಿಮ್ಮಲ್ಲಿ ಜಗಳ, ಹೊಟ್ಟೆಕಿಚ್ಚು, ಕೋಪ, ಕಿತ್ತಾಟಗಳು, ಚಾಡಿಹೇಳುವುದು, ಕಿವಿಯೂದುವುದು, ಉಬ್ಬಿಕೊಳ್ಳುವುದು ಮತ್ತು ಅವ್ಯವಸ್ಥೆಗಳು ಕಂಡುಬರಬಹುದೆಂಬ ಭಯ ನನಗಿದೆ. 21  ಪ್ರಾಯಶಃ ನಾನು ಪುನಃ ಬಂದಾಗ, ನನ್ನ ದೇವರು ನಿಮ್ಮ ಮಧ್ಯೆ ನನ್ನನ್ನು ಅವಮಾನಕ್ಕೆ ಗುರಿಪಡಿಸಬಹುದು ಮತ್ತು ಪೂರ್ವದಲ್ಲಿ ಪಾಪಮಾಡಿದ್ದರೂ ತಾವು ಅಭ್ಯಾಸಿಸುತ್ತಿದ್ದ ಅಶುದ್ಧತೆ, ಹಾದರ ಮತ್ತು ಸಡಿಲು ನಡತೆಯ ವಿಷಯದಲ್ಲಿ ಪಶ್ಚಾತ್ತಾಪಪಡದಿರುವಂಥ ಅನೇಕರ ವಿಷಯದಲ್ಲಿ ನಾನು ದುಃಖಪಡಬೇಕಾಗ​ಬಹುದು.

ಪಾದಟಿಪ್ಪಣಿ