1 ಯೋಹಾನ 5:1-21

5  ಯೇಸುವೇ ಕ್ರಿಸ್ತನೆಂದು ನಂಬುವ ಪ್ರತಿಯೊಬ್ಬನು ದೇವರಿಂದ ಹುಟ್ಟಿದವನಾಗಿದ್ದಾನೆ ಮತ್ತು ಹುಟ್ಟಿಸಿದಾತನನ್ನು ಪ್ರೀತಿಸುವ ಪ್ರತಿಯೊಬ್ಬನು ಆತನಿಂದ ಹುಟ್ಟಿದವನನ್ನು ಪ್ರೀತಿಸುವವನಾಗಿದ್ದಾನೆ.  ನಾವು ದೇವರನ್ನು ಪ್ರೀತಿಸುತ್ತಾ ಆತನ ಆಜ್ಞೆಗಳನ್ನು ಕೈಕೊಂಡು ನಡೆಯುತ್ತಾ ಇರುವಾಗ ನಾವು ದೇವರ ಮಕ್ಕಳನ್ನು ಪ್ರೀತಿಸುತ್ತೇವೆಂಬುದನ್ನು ತಿಳಿದುಕೊಳ್ಳುತ್ತೇವೆ.  ದೇವರ ಮೇಲಣ ಪ್ರೀತಿ ಏನೆಂದರೆ ನಾವು ಆತನ ಆಜ್ಞೆಗಳನ್ನು ಕೈಕೊಂಡು ನಡೆಯುವುದೇ; ಆದರೂ ಆತನ ಆಜ್ಞೆಗಳು ಭಾರವಾದವುಗಳಲ್ಲ.  ಏಕೆಂದರೆ ದೇವರಿಂದ ಹುಟ್ಟಿರುವಂಥದ್ದೆಲ್ಲವೂ ಲೋಕವನ್ನು ಜಯಿಸುತ್ತದೆ. ಲೋಕವನ್ನು ಜಯಿಸಿದಂಥ ವಿಜಯವು ನಮ್ಮ ನಂಬಿಕೆಯೇ.  ಯೇಸುವು ದೇವರ ಮಗನಾಗಿದ್ದಾನೆ ಎಂಬ ನಂಬಿಕೆಯುಳ್ಳವನಲ್ಲದೆ ಲೋಕವನ್ನು ಜಯಿಸುವವನು ಬೇರೆ ಯಾರಿದ್ದಾನೆ?  ಇವನು ಅಂದರೆ ಯೇಸು ಕ್ರಿಸ್ತನೇ ನೀರಿನ ಮೂಲಕವೂ ರಕ್ತದ ಮೂಲಕವೂ ಬಂದವನು. ನೀರಿನಿಂದ ಮಾತ್ರವಲ್ಲ ನೀರಿನಿಂದಲೂ ರಕ್ತದಿಂದಲೂ ಬಂದವನು. ಪವಿತ್ರಾತ್ಮವು ಇದಕ್ಕೆ ಸಾಕ್ಷಿಕೊಡುತ್ತದೆ, ಏಕೆಂದರೆ ಪವಿತ್ರಾತ್ಮವು ಸತ್ಯವಾಗಿದೆ.  ಇದಲ್ಲದೆ ಮೂರು ಸಾಕ್ಷಿಧಾರಕರಿದ್ದಾರೆ;  ಪವಿತ್ರಾತ್ಮ, ನೀರು ಮತ್ತು ರಕ್ತ; ಈ ಮೂರು ಸಹಮತದಲ್ಲಿವೆ.  ನಾವು ಜನರು ಕೊಡುವ ಸಾಕ್ಷಿಯನ್ನು ಅಂಗೀಕರಿಸುತ್ತೇವಾದರೆ ದೇವರು ಕೊಡುವ ಸಾಕ್ಷಿಯು ಇನ್ನೂ ಹೆಚ್ಚು ಶ್ರೇಷ್ಠವಾದದ್ದಾಗಿದೆ. ಏಕೆಂದರೆ ತನ್ನ ಪುತ್ರನ ವಿಷಯವಾಗಿ ಆತನು ಸಾಕ್ಷಿಯನ್ನು ಕೊಟ್ಟಿದ್ದಾನೆ ಎಂಬ ವಾಸ್ತವಾಂಶವೇ ದೇವರು ಕೊಡುವ ಸಾಕ್ಷಿಯಾಗಿದೆ. 10  ದೇವರ ಮಗನಲ್ಲಿ ನಂಬಿಕೆಯಿಡುವ ವ್ಯಕ್ತಿಯು ತನ್ನ ವಿಷಯದಲ್ಲಿಯೇ ಸಾಕ್ಷಿಯನ್ನು ಹೊಂದಿದ್ದಾನೆ. ದೇವರಲ್ಲಿ ನಂಬಿಕೆಯಿಡದ ವ್ಯಕ್ತಿಯು ಆತನನ್ನು ಸುಳ್ಳುಗಾರನನ್ನಾಗಿ ಮಾಡಿದ್ದಾನೆ, ಏಕೆಂದರೆ ತನ್ನ ಪುತ್ರನ ವಿಷಯದಲ್ಲಿ ಸಾಕ್ಷಿಯಾಗಿ ದೇವರು ಕೊಟ್ಟಿರುವ ಸಾಕ್ಷಿಯಲ್ಲಿ ಅವನು ನಂಬಿಕೆಯಿಡಲಿಲ್ಲ. 11  ಕೊಡಲ್ಪಟ್ಟ ಸಾಕ್ಷಿಯೇನೆಂದರೆ, ದೇವರು ನಮಗೆ ನಿತ್ಯಜೀವವನ್ನು ಒದಗಿಸಿದನು ಮತ್ತು ಆ ಜೀವವು ಆತನ ಮಗನಲ್ಲಿದೆ. 12  ಮಗನು ಯಾವನಲ್ಲಿ ಇದ್ದಾನೋ ಅವನಿಗೆ ಈ ಜೀವವಿದೆ; ದೇವರ ಮಗನು ಯಾವನಲ್ಲಿ ಇಲ್ಲವೋ ಅವನಿಗೆ ಈ ಜೀವವಿಲ್ಲ. 13  ದೇವರ ಮಗನ ಹೆಸರಿನಲ್ಲಿ ನಂಬಿಕೆಯಿಟ್ಟಿರುವವರಾದ ನಿಮಗೆ ನಿತ್ಯಜೀವ ಉಂಟೆಂದು ನೀವು ತಿಳಿದುಕೊಳ್ಳುವಂತೆ ನಾನು ಈ ವಿಷಯಗಳನ್ನು ಬರೆಯುತ್ತೇನೆ. 14  ನಾವು ಆತನ ಚಿತ್ತಕ್ಕನುಸಾರ ಯಾವುದನ್ನೇ ಕೇಳಿಕೊಂಡರೂ ಆತನು ನಮಗೆ ಕಿವಿಗೊಡುತ್ತಾನೆಂಬ ಭರವಸೆಯು ಆತನ ವಿಷಯವಾಗಿ ನಮಗುಂಟು. 15  ಇದಲ್ಲದೆ, ನಾವು ಏನು ಕೇಳಿಕೊಂಡರೂ ಆತನು ನಮಗೆ ಕಿವಿಗೊಡುತ್ತಾನೆಂಬುದು ನಮಗೆ ತಿಳಿದಿರುವುದಾದರೆ ನಾವು ಅವುಗಳನ್ನು ಆತನ ಬಳಿ ಕೇಳಿಕೊಂಡಿರುವುದರಿಂದ ಅವುಗಳನ್ನು ಪಡೆದುಕೊಳ್ಳುತ್ತೇವೆ ಎಂಬುದು ನಮಗೆ ತಿಳಿದಿದೆ. 16  ಯಾವನಾದರೂ ತನ್ನ ಸಹೋದರನು ಮರಣವನ್ನು ಉಂಟುಮಾಡದಂಥ ಪಾಪಮಾಡುತ್ತಿರುವುದನ್ನು ನೋಡಿದರೆ ಅವನು ಬೇಡಿಕೊಳ್ಳುವನು; ಆಗ ದೇವರು ಅವನಿಗೆ, ಅಂದರೆ ಮರಣವನ್ನು ಉಂಟುಮಾಡದಂಥ ಪಾಪವನ್ನು ಮಾಡುತ್ತಿರುವವನಿಗೆ ಜೀವವನ್ನು ದಯಪಾಲಿಸುವನು. ಆದರೆ ಮರಣಕ್ಕೆ ಗುರಿಮಾಡುವಂಥ ಪಾಪವಿದೆ. ಆ ಪಾಪದ ವಿಷಯವಾಗಿ ಬೇಡಿಕೊಳ್ಳುವಂತೆ ನಾನು ಅವನಿಗೆ ಹೇಳುವುದಿಲ್ಲ. 17  ಎಲ್ಲ ಅನೀತಿಯು ಪಾಪ​ವಾಗಿದೆ; ಆದರೂ ಮರಣವನ್ನು ಉಂಟು​ಮಾಡದಿರುವಂಥ ಪಾಪವುಂಟು. 18  ದೇವರಿಂದ ಹುಟ್ಟಿರುವ ಪ್ರತಿ​ಯೊಬ್ಬ ವ್ಯಕ್ತಿಯು ಪಾಪವನ್ನು ಮಾಡುತ್ತಾ ಇರುವುದಿಲ್ಲ ಎಂಬುದು ನಮಗೆ ಗೊತ್ತಿದೆ, ಆದರೆ ದೇವರಿಂದ ಹುಟ್ಟಿದವನು ಅವನನ್ನು ಕಾಯುತ್ತಾನೆ ಮತ್ತು ಕೆಡುಕನು ಅವನನ್ನು ಬಿಗಿಯಾಗಿ ಹಿಡಿದುಕೊಳ್ಳುವುದಿಲ್ಲ. 19  ನಾವು ದೇವರಿಂದ ಹುಟ್ಟಿದವರೆಂದು, ಆದರೆ ಇಡೀ ಲೋಕವು ಕೆಡುಕನ ವಶದಲ್ಲಿ ಬಿದ್ದಿದೆ ಎಂದು ನಮಗೆ ತಿಳಿದಿದೆ. 20  ದೇವರ ಮಗನು ಬಂದಿದ್ದಾನೆ ಮತ್ತು ನಾವು ಸತ್ಯವಾಗಿರುವಾತನ ಜ್ಞಾನವನ್ನು ಪಡೆದುಕೊಳ್ಳಲು ಸಾಧ್ಯವಾಗುವಂತೆ ಅವನು ನಮಗೆ ಬುದ್ಧಿಸಾಮರ್ಥ್ಯವನ್ನು ಕೊಟ್ಟಿದ್ದಾನೆ ಎಂಬುದು ನಮಗೆ ತಿಳಿದಿದೆ. ನಾವು ಆತನ ಮಗನಾದ ಯೇಸು ಕ್ರಿಸ್ತನ ಮೂಲಕ ಸತ್ಯವಾಗಿರುವಾತನೊಂದಿಗೆ ಐಕ್ಯದಲ್ಲಿದ್ದೇವೆ. ಈತನೇ ಸತ್ಯ ದೇವರೂ ನಿತ್ಯಜೀವವೂ ಆಗಿದ್ದಾನೆ. 21  ಚಿಕ್ಕ ಮಕ್ಕಳೇ, ವಿಗ್ರಹಗಳಿಂದ ನಿಮ್ಮನ್ನು ಕಾಪಾಡಿಕೊಳ್ಳಿರಿ.

ಪಾದಟಿಪ್ಪಣಿ