1 ಯೋಹಾನ 2:1-29

2  ನನ್ನ ಚಿಕ್ಕ ಮಕ್ಕಳೇ, ನೀವು ಪಾಪವನ್ನು ಮಾಡದಂತೆ ನಾನು ಈ ವಿಷಯಗಳನ್ನು ನಿಮಗೆ ಬರೆಯುತ್ತಿದ್ದೇನೆ. ಹಾಗಿದ್ದರೂ ಯಾವನಾದರೂ ಪಾಪವನ್ನು ಮಾಡಿದರೆ ತಂದೆಯ ಬಳಿಯಲ್ಲಿ ನೀತಿವಂತನಾದ ಯೇಸು ಕ್ರಿಸ್ತನೆಂಬ ಸಹಾಯಕನು ನಮಗಿದ್ದಾನೆ.  ಅವನು ನಮ್ಮ ಪಾಪಗಳಿಗೆ ಪಾಪನಿವಾರಣಾರ್ಥಕ ಯಜ್ಞವಾಗಿದ್ದಾನೆ; ನಮ್ಮ ಪಾಪಗಳನ್ನು ಮಾತ್ರವಲ್ಲ ಇಡೀ ಲೋಕದ ಪಾಪಗಳನ್ನು ಸಹ ನಿವಾರಣೆಮಾಡುತ್ತಾನೆ.  ನಾವು ಅವನ ಆಜ್ಞೆಗಳನ್ನು ಕೈಕೊಂಡು ನಡೆಯುತ್ತಾ ಇರುವುದಾದರೆ ಅದರಿಂದಲೇ ಅವನನ್ನು ಬಲ್ಲವರಾಗಿದ್ದೇವೆ ಎಂಬುದನ್ನು ತಿಳಿದುಕೊಳ್ಳುತ್ತೇವೆ.  “ನಾನು ಅವನನ್ನು ಬಲ್ಲವನಾಗಿದ್ದೇನೆ” ಎಂದು ಹೇಳಿ ಅವನ ಆಜ್ಞೆಗಳನ್ನು ಕೈಕೊಳ್ಳದೆ ಇರುವವನು ಸುಳ್ಳುಗಾರನಾಗಿದ್ದಾನೆ ಮತ್ತು ಸತ್ಯವು ಅವನಲ್ಲಿ ಇಲ್ಲ.  ಆದರೆ ಯಾವನು ಆತನ ವಾಕ್ಯವನ್ನು ಕೈಕೊಂಡು ನಡೆಯುತ್ತಾನೋ ಅವನಲ್ಲಿ ನಿಜವಾಗಿಯೂ ದೇವರ ಪ್ರೀತಿಯು ಪರಿಪೂರ್ಣಗೊಳಿಸಲ್ಪಟ್ಟಿದೆ. ಇದರಿಂದಲೇ ನಾವು ಆತನೊಂದಿಗೆ ಐಕ್ಯದಲ್ಲಿದ್ದೇವೆ ಎಂಬುದನ್ನು ತಿಳಿದುಕೊಳ್ಳುತ್ತೇವೆ.  ಆತನೊಂದಿಗೆ ಐಕ್ಯದಲ್ಲಿ ನೆಲೆಗೊಂಡವನಾಗಿದ್ದೇನೆಂದು ಹೇಳುವವನು ಕ್ರಿಸ್ತನು ನಡೆ​ದಂತೆಯೇ ತಾನೂ ನಡೆಯುವ ಹಂಗಿಗೊಳಗಾಗಿದ್ದಾನೆ.  ಪ್ರಿಯರೇ, ನಾನು ನಿಮಗೆ ಬರೆಯುತ್ತಿರುವುದು ಒಂದು ಹೊಸ ಆಜ್ಞೆಯಲ್ಲ, ಆರಂಭದಿಂದಲೇ ನೀವು ಹೊಂದಿದ್ದ ಅದೇ ಹಳೆಯ ಆಜ್ಞೆಯಾಗಿದೆ. ಈ ಹಳೆಯ ಆಜ್ಞೆಯು ನೀವು ಕೇಳಿಸಿಕೊಂಡಿರುವ ವಾಕ್ಯವೇ ಆಗಿದೆ.  ಆದರೂ ನಾನು ನಿಮಗೆ ಒಂದು ಹೊಸ ಆಜ್ಞೆಯನ್ನು ಬರೆಯುತ್ತಿದ್ದೇನೆ; ಇದು ಅವನ ವಿಷಯದಲ್ಲಿಯೂ ನಿಮ್ಮ ವಿಷಯದಲ್ಲಿಯೂ ಸತ್ಯವಾಗಿದೆ, ಏಕೆಂದರೆ ಕತ್ತಲೆಯು ಕಳೆದುಹೋಗುತ್ತಿದೆ ಮತ್ತು ನಿಜವಾದ ಬೆಳಕು ಈಗಾಗಲೇ ಪ್ರಕಾಶಿಸುತ್ತಿದೆ.  ತಾನು ಬೆಳಕಿನಲ್ಲಿದ್ದೇನೆಂದು ಹೇಳಿಕೊಳ್ಳುವುದಾದರೂ ತನ್ನ ಸಹೋದರನನ್ನು ದ್ವೇಷಿಸುವವನು ಈಗಿನ ವರೆಗೆ ಕತ್ತಲೆಯಲ್ಲಿದ್ದಾನೆ. 10  ತನ್ನ ಸಹೋದರನನ್ನು ಪ್ರೀತಿಸುವವನು ಬೆಳಕಿನಲ್ಲಿ ಉಳಿಯುತ್ತಾನೆ ಮತ್ತು ಅವನಲ್ಲಿ ಎಡವಲು ಯಾವುದೇ ಕಾರಣವಿರುವುದಿಲ್ಲ. 11  ಆದರೆ ತನ್ನ ಸಹೋದರನನ್ನು ದ್ವೇಷಿಸುವವನು ಕತ್ತಲೆಯಲ್ಲಿದ್ದಾನೆ ಮತ್ತು ಕತ್ತಲೆಯಲ್ಲೇ ನಡೆಯುತ್ತಿದ್ದಾನೆ; ಕತ್ತಲೆಯು ಅವನ ಕಣ್ಣುಗಳನ್ನು ಕುರುಡುಮಾಡಿರುವುದರಿಂದ ತಾನು ಎಲ್ಲಿಗೆ ಹೋಗುತ್ತಿದ್ದೇನೆ ಎಂಬುದು ಅವನಿಗೆ ತಿಳಿಯದು. 12  ಚಿಕ್ಕ ಮಕ್ಕಳೇ, ಯೇಸುವಿನ ಹೆಸರಿನ ನಿಮಿತ್ತ ನಿಮ್ಮ ಪಾಪಗಳು ಕ್ಷಮಿಸಲ್ಪಟ್ಟಿರುವುದರಿಂದ ನಾನು ನಿಮಗೆ ಬರೆಯುತ್ತಿದ್ದೇನೆ. 13  ತಂದೆಗಳೇ, ಆರಂಭದಿಂದಲೇ ಇರುವವನನ್ನು ನೀವು ತಿಳಿದು​ಕೊಂಡಿರುವುದರಿಂದ ನಾನು ನಿಮಗೆ ಬರೆಯುತ್ತಿದ್ದೇನೆ. ಯುವಕರೇ, ನೀವು ಕೆಡುಕನನ್ನು ಜಯಿಸಿರುವುದರಿಂದ ನಾನು ನಿಮಗೆ ಬರೆಯುತ್ತಿದ್ದೇನೆ. ಮಕ್ಕಳೇ, ನೀವು ತಂದೆಯನ್ನು ತಿಳಿದುಕೊಂಡಿರುವುದರಿಂದ ನಾನು ನಿಮಗೆ ಬರೆಯುತ್ತೇನೆ. 14  ತಂದೆಗಳೇ, ಆರಂಭದಿಂದಲೇ ಇರುವವನನ್ನು ನೀವು ತಿಳಿದುಕೊಂಡಿರುವುದರಿಂದ ನಾನು ನಿಮಗೆ ಬರೆಯುತ್ತೇನೆ. ಯುವಕರೇ, ನೀವು ಬಲಶಾಲಿಗಳಾಗಿರುವುದರಿಂದಲೂ ದೇವರ ವಾಕ್ಯವು ನಿಮ್ಮಲ್ಲಿ ನೆಲೆಗೊಂಡಿರುವುದರಿಂದಲೂ ನೀವು ಕೆಡುಕನನ್ನು ಜಯಿಸಿರುವುದರಿಂದಲೂ ನಾನು ನಿಮಗೆ ಬರೆಯುತ್ತೇನೆ. 15  ಲೋಕವನ್ನಾಗಲಿ ಲೋಕದಲ್ಲಿರುವವುಗಳನ್ನಾಗಲಿ ಪ್ರೀತಿಸಬೇಡಿರಿ. ಯಾವನಾದರೂ ಲೋಕವನ್ನು ಪ್ರೀತಿಸುವುದಾದರೆ ತಂದೆಯ ಪ್ರೀತಿಯು ಅವನಲ್ಲಿ ಇಲ್ಲ. 16  ಏಕೆಂದರೆ ಲೋಕದಲ್ಲಿರುವ ಸರ್ವವೂ​—⁠ಶರೀರದಾಶೆ, ಕಣ್ಣಿನಾಶೆ ಮತ್ತು ಜೀವನೈಶ್ವರ್ಯದ ಆಡಂಬರ ಪ್ರದರ್ಶನ​—⁠ಇವು ತಂದೆಯಿಂದ ಉಂಟಾಗದೆ ಲೋಕದಿಂದ ಉಂಟಾದವುಗಳಾಗಿವೆ. 17  ಇದಲ್ಲದೆ ಲೋಕವೂ ಅದರ ಆಶೆಯೂ ಗತಿಸಿಹೋಗುತ್ತಿದೆ, ಆದರೆ ದೇವರ ಚಿತ್ತವನ್ನು ಮಾಡುವವನು ಎಂದೆಂದಿಗೂ ಇರುವನು. 18  ಚಿಕ್ಕ ಮಕ್ಕಳೇ, ಇದು ಕೊನೆಯ ಗಳಿಗೆಯಾಗಿದೆ ಮತ್ತು ಕ್ರಿಸ್ತವಿರೋಧಿಯು ಬರುತ್ತಾನೆಂದು ನೀವು ಕೇಳಿಸಿಕೊಂಡಿದ್ದೀರಿ; ಈಗಲೂ ಅನೇಕ ಕ್ರಿಸ್ತವಿರೋಧಿಗಳು ಬಂದಿದ್ದಾರೆ. ಈ ವಾಸ್ತವಾಂಶದಿಂದಲೇ ಇದು ಕೊನೆಯ ಗಳಿಗೆಯಾಗಿದೆ ಎಂದು ನಾವು ತಿಳಿದುಕೊಳ್ಳುತ್ತೇವೆ. 19  ಅವರು ನಮ್ಮಿಂದ ಹೊರಟುಹೋದರು, ಆದರೆ ಅವರು ನಮಗೆ ಸೇರಿದವರಾಗಿರಲಿಲ್ಲ; ಅವರು ನಮಗೆ ಸೇರಿದವರಾಗಿದ್ದರೆ ನಮ್ಮೊಂದಿಗೇ ಉಳಿಯುತ್ತಿದ್ದರು. ಆದರೆ ಅವರು ನಮ್ಮಿಂದ ಹೊರಟುಹೋದದ್ದರಿಂದ ಅವರೆಲ್ಲರೂ ನಮಗೆ ಸೇರಿದವರಲ್ಲ ಎಂಬುದು ಸ್ಪಷ್ಟವಾಯಿತು. 20  ನೀವು ಪವಿತ್ರನಾಗಿರುವಾತನಿಂದ ಅಭಿಷೇಕವನ್ನು ಹೊಂದಿದ್ದೀರಿ; ನಿಮ್ಮೆಲ್ಲರಿಗೂ ಜ್ಞಾನವಿದೆ. 21  ನೀವು ಸತ್ಯವನ್ನು ತಿಳಿಯದವರೆಂಬ ಕಾರಣಕ್ಕಾಗಿ ಅಲ್ಲ, ನೀವು ಅದನ್ನು ತಿಳಿದಿರುವುದರಿಂದಲೂ ಸತ್ಯದೊಂದಿಗೆ ಯಾವ ಸುಳ್ಳೂ ಉಂಟಾಗುವುದಿಲ್ಲವಾದುದರಿಂದಲೂ ನಾನು ನಿಮಗೆ ಬರೆಯುತ್ತೇನೆ. 22  ಯೇಸುವೇ ಕ್ರಿಸ್ತನೆಂಬುದನ್ನು ಅಲ್ಲಗಳೆಯುವವನು ಸುಳ್ಳುಗಾರನಲ್ಲವಾದರೆ ಸುಳ್ಳುಗಾರನು ಬೇರೆ ಯಾವನು? ತಂದೆಯನ್ನೂ ಮಗನನ್ನೂ ಅಲ್ಲಗಳೆಯುವವನೇ ಕ್ರಿಸ್ತವಿರೋಧಿಯಾಗಿದ್ದಾನೆ. 23  ಮಗನನ್ನು ಅಲ್ಲಗಳೆಯುವವನು ತಂದೆಯೊಂದಿಗೂ ಐಕ್ಯದಲ್ಲಿರುವುದಿಲ್ಲ. ಮಗನನ್ನು ಒಪ್ಪಿಕೊಳ್ಳುವವನು ತಂದೆಯೊಂದಿಗೂ ಐಕ್ಯದಲ್ಲಿರುವನು. 24  ನಿಮ್ಮ ವಿಷಯದಲ್ಲಾದರೋ ನೀವು ಆರಂಭದಿಂದ ಏನನ್ನು ಕೇಳಿಸಿಕೊಂಡಿದ್ದೀರೋ ಅದು ನಿಮ್ಮಲ್ಲಿ ಉಳಿಯಲಿ. ನೀವು ಆರಂಭದಿಂದಲೂ ಕೇಳಿಸಿಕೊಂಡಿರುವುದು ನಿಮ್ಮಲ್ಲಿ ಉಳಿಯುವುದಾದರೆ ನೀವು ಮಗನೊಂದಿಗೂ ಐಕ್ಯದಲ್ಲಿರುವಿರಿ, ತಂದೆಯೊಂದಿಗೂ ಐಕ್ಯದಲ್ಲಿರುವಿರಿ. 25  ಮಾತ್ರವಲ್ಲದೆ, ಆತನು ತಾನೇ ನಮಗೆ ವಾಗ್ದಾನಮಾಡಿದ ವಾಗ್ದಾನವು ನಿತ್ಯಜೀವವಾಗಿದೆ. 26  ನಿಮ್ಮನ್ನು ದಾರಿತಪ್ಪಿಸಲು ಪ್ರಯತ್ನಿಸುತ್ತಿರುವವರ ಕುರಿತಾಗಿ ನಾನು ಈ ವಿಷಯಗಳನ್ನು ನಿಮಗೆ ಬರೆಯುತ್ತೇನೆ. 27  ನಿಮ್ಮ ವಿಷಯದಲ್ಲಾದರೋ ನೀವು ಆತನಿಂದ ಹೊಂದಿದ ಅಭಿಷೇಕವು ನಿಮ್ಮಲ್ಲಿ ನೆಲೆಗೊಂಡಿದೆ ಮತ್ತು ಯಾವನಾದರೂ ನಿಮಗೆ ಉಪದೇಶಮಾಡುವ ಅವಶ್ಯವಿಲ್ಲ; ಆತನಿಂದ ಹೊಂದಿದ ಅಭಿಷೇಕವೇ ಎಲ್ಲ ವಿಷಯಗಳ ಕುರಿತು ನಿಮಗೆ ಬೋಧಿಸುವಂಥದ್ದಾಗಿದ್ದು ಸತ್ಯವಾಗಿದೆ, ಸುಳ್ಳಲ್ಲ; ಅದು ನಿಮಗೆ ಕಲಿಸಿರುವ ಪ್ರಕಾರವೇ ಅವನೊಂದಿಗೆ ಐಕ್ಯದಲ್ಲಿ ಉಳಿಯಿರಿ. 28  ಆದುದರಿಂದ ಚಿಕ್ಕ ಮಕ್ಕಳೇ, ಅವನು ಪ್ರತ್ಯಕ್ಷನಾಗುವಾಗ ನಾವು ವಾಕ್ಸರಳತೆಯುಳ್ಳವರಾಗಿರುವಂತೆ ಮತ್ತು ಅವನ ಸಾನ್ನಿಧ್ಯದ ಸಮಯದಲ್ಲಿ ಅವನ ಮುಂದೆ ನಿಲ್ಲಲು ನಾಚಿಕೆಪಡದಂತೆ ಅವನೊಂದಿಗೆ ಐಕ್ಯದಲ್ಲಿ ಉಳಿಯಿರಿ. 29  ಅವನು ನೀತಿವಂತನಾಗಿದ್ದಾನೆಂಬುದು ನಿಮಗೆ ತಿಳಿದಿರುವುದಾದರೆ, ನೀತಿಯನ್ನು ನಡಿಸುವ ಪ್ರತಿಯೊಬ್ಬನು ಆತನಿಂದಲೇ ಹುಟ್ಟಿದ್ದಾನೆ ಎಂಬುದನ್ನು ನೀವು ತಿಳಿದುಕೊಳ್ಳುತ್ತೀರಿ.

ಪಾದಟಿಪ್ಪಣಿ