1 ಪೇತ್ರ 5:1-14

5  ಆದುದರಿಂದ ನಾನು ನಿಮ್ಮಲ್ಲಿರುವ ಹಿರೀಪುರುಷರಿಗೆ ಈ ಬುದ್ಧಿವಾದವನ್ನು ಕೊಡುತ್ತೇನೆ. ಏಕೆಂದರೆ ನಾನು ಸಹ ಅವರೊಂದಿಗೆ ಹಿರೀಪುರುಷನೂ ಕ್ರಿಸ್ತನ ಕಷ್ಟಾನುಭವಗಳಿಗೆ ಸಾಕ್ಷಿಯೂ ಪ್ರಕಟವಾಗಲಿರುವ ಮಹಿಮೆಯಲ್ಲಿ ಪಾಲುಗಾರನೂ ಆಗಿದ್ದೇನೆ.  ನಿಮ್ಮ ವಶಕ್ಕೆ ಕೊಡಲ್ಪಟ್ಟಿರುವ ದೇವರ ಮಂದೆಯನ್ನು ಪರಿಪಾಲಿಸಿರಿ; ನಿರ್ಬಂಧದಿಂದಲ್ಲ, ಇಚ್ಛಾಪೂರ್ವಕವಾಗಿ ಮಾಡಿರಿ; ಅಪ್ರಾಮಾಣಿಕ ಲಾಭದ ಮೇಲಣ ಪ್ರೀತಿಯಿಂದಲ್ಲ, ಸಿದ್ಧಮನಸ್ಸಿನಿಂದ ಮಾಡಿರಿ.  ದೇವರ ಸೊತ್ತಾಗಿರುವವರ ಮೇಲೆ ದೊರೆತನ ಮಾಡುವವರಾಗಿರದೆ ಮಂದೆಗೆ ಮಾದರಿಗಳಾಗಿರಿ.  ಮುಖ್ಯ ​ಕುರುಬನು ಪ್ರತ್ಯಕ್ಷಗೊಳಿಸಲ್ಪಟ್ಟಾಗ ಬಾಡಿಹೋಗದ ಮಹಿಮೆಯ ಕಿರೀಟವನ್ನು ನೀವು ಹೊಂದುವಿರಿ.  ಅದೇ ರೀತಿಯಲ್ಲಿ, ಯೌವನಸ್ಥರೇ, ಹಿರೀಪುರುಷರಿಗೆ ಅಧೀನರಾಗಿರಿ. ಆದರೆ ನೀವೆಲ್ಲರೂ ಒಬ್ಬರ ಕಡೆಗೊಬ್ಬರು ದೀನ​ಮನಸ್ಸಿನಿಂದ ನಡುಕಟ್ಟಲ್ಪಟ್ಟವರಾಗಿರಿ, ಏಕೆಂದರೆ ದೇವರು ಅಹಂಕಾರಿಗಳನ್ನು ಎದುರಿಸುತ್ತಾನೆ, ಆದರೆ ದೀನರಿಗೆ ಅಪಾತ್ರ ದಯೆಯನ್ನು ಅನುಗ್ರಹಿಸುತ್ತಾನೆ.  ಆದುದರಿಂದ ದೇವರ ಪ್ರಬಲವಾದ ಹಸ್ತದ ಕೆಳಗೆ ನಿಮ್ಮನ್ನು ತಗ್ಗಿಸಿಕೊಳ್ಳಿರಿ; ಆಗ ತಕ್ಕ ಸಮಯದಲ್ಲಿ ಆತನು ನಿಮ್ಮನ್ನು ಮೇಲಕ್ಕೇರಿಸುವನು.  ನಿಮ್ಮ ಚಿಂತೆಯನ್ನೆಲ್ಲಾ ಆತನ ಮೇಲೆ ಹಾಕಿರಿ, ಏಕೆಂದರೆ ಆತನು ನಿಮಗೋಸ್ಕರ ಚಿಂತಿಸುತ್ತಾನೆ.  ಸ್ವಸ್ಥಚಿತ್ತರಾಗಿರಿ, ಎಚ್ಚರವಾಗಿರಿ. ನಿಮ್ಮ ವಿರೋಧಿಯಾಗಿರುವ ಪಿಶಾಚನು ಗರ್ಜಿಸುವ ಸಿಂಹದಂತೆ ಯಾರನ್ನು ನುಂಗಲಿ ಎಂದು ಹುಡುಕುತ್ತಾ ತಿರುಗುತ್ತಾನೆ.  ಆದರೆ ನೀವು ನಂಬಿಕೆಯಲ್ಲಿ ಸ್ಥಿರರಾಗಿದ್ದು, ಲೋಕದಲ್ಲಿರುವ ನಿಮ್ಮ ಸಹೋದರರ ಇಡೀ ಬಳಗವು ಇಂಥ ಕಷ್ಟಗಳನ್ನೇ ಅನುಭವಿಸುತ್ತಿದೆ ಎಂಬುದನ್ನು ತಿಳಿದವರಾಗಿ ಅವನನ್ನು ಎದುರಿಸಿರಿ. 10  ಆದರೆ ಕ್ರಿಸ್ತನೊಂದಿಗೆ ಐಕ್ಯದಲ್ಲಿ ತನ್ನ ನಿತ್ಯ ಮಹಿಮೆಗೆ ಕರೆದಾತನಾದ ಸಕಲ ಅಪಾತ್ರ ದಯೆಯ ದೇವರು ನೀವು ಸ್ವಲ್ಪಕಾಲ ಕಷ್ಟವನ್ನು ಅನುಭವಿಸಿದ ಬಳಿಕ ನಿಮ್ಮ ತರಬೇತಿಯನ್ನು ತಾನೇ ಪೂರ್ಣಗೊಳಿಸಿ ನಿಮ್ಮನ್ನು ದೃಢಪಡಿಸುವನು, ನಿಮ್ಮನ್ನು ಬಲಪಡಿಸುವನು. 11  ಆತನಿಗೆ ಶಕ್ತಿಯು ಸದಾಕಾಲಕ್ಕೂ ಇರಲಿ. ಆಮೆನ್‌. 12  ನಂಬಿಗಸ್ತ ಸಹೋದರನೆಂದು ನಾನು ಪರಿಗಣಿಸುವ ಸಿಲ್ವಾನನ ಮೂಲಕ, ಇದೇ ನಿಜವಾದ ದೇವರ ಅಪಾತ್ರ ದಯೆಯಾಗಿದೆ ಎಂಬ ಉತ್ತೇಜನ ಮತ್ತು ಶ್ರದ್ಧಾಪೂರ್ವಕವಾದ ಸಾಕ್ಷಿನೀಡಲು ಕೆಲವೇ ಮಾತುಗಳನ್ನು ನಿಮಗೆ ಬರೆದಿದ್ದೇನೆ. ಇದರಲ್ಲಿ ಸ್ಥಿರವಾಗಿ ನಿಲ್ಲಿರಿ. 13  ನಿಮ್ಮಂತೆಯೇ ಆರಿಸಿಕೊಳ್ಳ​ಲ್ಪಟ್ಟಿರುವ ಬಾಬೆಲಿನಲ್ಲಿರುವ ಸಭೆಯು ನಿಮಗೆ ವಂದನೆಗಳನ್ನು ತಿಳಿಸುತ್ತದೆ; ನನ್ನ ಮಗನಾದ ಮಾರ್ಕನೂ ವಂದನೆ​ಗಳನ್ನು ಕಳುಹಿಸುತ್ತಾನೆ. 14  ಪ್ರೀತಿಯ ಮುದ್ದಿನಿಂದ ಒಬ್ಬರನ್ನೊಬ್ಬರು ವಂದಿಸಿರಿ. ಕ್ರಿಸ್ತನೊಂದಿಗೆ ಐಕ್ಯದಲ್ಲಿರುವ ನಿಮ್ಮೆಲ್ಲರಿಗೆ ಶಾಂತಿಯಿರಲಿ.

ಪಾದಟಿಪ್ಪಣಿ