1 ಪೇತ್ರ 4:1-19

4  ಕ್ರಿಸ್ತನು ಶರೀರದಲ್ಲಿ ಕಷ್ಟವನ್ನು ಅನುಭವಿಸಿದ್ದರಿಂದ ನೀವು ಸಹ ಅದೇ ಮಾನಸಿಕ ಪ್ರವೃತ್ತಿಯನ್ನು ಧರಿಸಿಕೊಳ್ಳಿರಿ; ಏಕೆಂದರೆ ಶರೀರದಲ್ಲಿ ಕಷ್ಟವನ್ನು ಅನುಭವಿಸಿದವನು ಪಾಪಗಳನ್ನು ತೊರೆದುಬಿಟ್ಟವನಾಗಿದ್ದಾನೆ.  ಇದರಿಂದಾಗಿ ಇನ್ನು ಮುಂದೆ ಅವನು ಶರೀರದಲ್ಲಿ ಜೀವಿಸುವಷ್ಟರ ವರೆಗೆ ಮನುಷ್ಯರ ಇಚ್ಛೆಗಳಿಗಾಗಿ ಜೀವಿಸದೆ ದೇವರ ಚಿತ್ತಕ್ಕಾಗಿಯೇ ಜೀವಿಸುವನು.  ನೀವು ಸಡಿಲು ನಡತೆ, ಕಾಮಾತುರತೆ, ಮಿತಿ​ಮೀರಿದ ದ್ರಾಕ್ಷಾಮದ್ಯ ಸೇವನೆ, ಭಾರೀ ಮೋಜು, ಮದ್ಯಪಾನ ಸ್ಪರ್ಧೆ, ನಿಷಿದ್ಧ ವಿಗ್ರಹಾರಾಧನೆ ಈ ಮುಂತಾದ ಕಾರ್ಯಗಳನ್ನು ಮಾಡುತ್ತಾ ಅನ್ಯಜನಾಂಗಗಳ ಇಚ್ಛೆಗಳನ್ನು ಮಾಡುವುದರಲ್ಲಿ ಕಳೆದುಹೋದ ಕಾಲವೇ ಸಾಕು.  ತಮ್ಮ ಕೀಳ್ಮಟ್ಟದ ಪಟಿಂಗತನದಲ್ಲಿ ನೀವು ಅವರೊಂದಿಗೆ ಓಡುವುದನ್ನು ಮುಂದುವರಿಸುವುದಿಲ್ಲವಾದುದರಿಂದ ಅವರು ಆಶ್ಚರ್ಯಪಟ್ಟು ನಿಮ್ಮ ಕುರಿತು ದೂಷಣಾತ್ಮಕ ಮಾತುಗಳನ್ನಾಡುತ್ತಾರೆ.  ಆದರೆ ಜೀವಿಸುವವರಿಗೂ ಸತ್ತವರಿಗೂ ತೀರ್ಪುಮಾಡಲು ಸಿದ್ಧನಾಗಿರುವವನಿಗೆ ಈ ಜನರು ಲೆಕ್ಕ ಒಪ್ಪಿಸುವರು.  ವಾಸ್ತವದಲ್ಲಿ, ಸತ್ತವರು ಮನುಷ್ಯರ ದೃಷ್ಟಿಯಲ್ಲಿ ಶರೀರಪ್ರಕಾರವಾಗಿ ತೀರ್ಪುಹೊಂದಿ ದೇವರ ದೃಷ್ಟಿಯಲ್ಲಿ ಆಧ್ಯಾತ್ಮಿಕ​ವಾಗಿ ಬದುಕುವಂತಾಗಬೇಕೆಂಬ ಉದ್ದೇಶಕ್ಕಾಗಿಯೇ ಅವರಿಗೂ ಸುವಾರ್ತೆಯು ಪ್ರಕಟಿಸಲ್ಪಟ್ಟಿತು.  ಆದರೆ ಎಲ್ಲವುಗಳ ಅಂತ್ಯವು ಸಮೀಪಿಸಿದೆ. ಆದುದರಿಂದ ಸ್ವಸ್ಥಚಿತ್ತರಾಗಿರಿ ಮತ್ತು ಪ್ರಾರ್ಥನೆಗಳ ವಿಷಯದಲ್ಲಿ ಎಚ್ಚರಿಕೆಯಿಂದಿರಿ.  ಎಲ್ಲಕ್ಕಿಂತಲೂ ಮಿಗಿಲಾಗಿ ಒಬ್ಬರಿಗೊಬ್ಬರು ಗಾಢವಾದ ಪ್ರೀತಿಯುಳ್ಳವರಾಗಿರಿ; ಏಕೆಂದರೆ ಪ್ರೀತಿಯು ಬಹು ಪಾಪಗಳನ್ನು ಮುಚ್ಚುತ್ತದೆ.  ಗುಣುಗುಟ್ಟದೆ ಒಬ್ಬರಿಗೊಬ್ಬರು ಅತಿಥಿಸತ್ಕಾರಮಾಡಿರಿ. 10  ವಿವಿಧ ರೀತಿಯಲ್ಲಿ ವ್ಯಕ್ತ​ಪಡಿಸಲ್ಪಟ್ಟಿರುವ ದೇವರ ಅಪಾತ್ರ ದಯೆಯ ಉತ್ತಮ ಮನೆವಾರ್ತೆಯವರಾಗಿರುವ ಪ್ರತಿಯೊಬ್ಬನು ತನಗೆ ಸಿಕ್ಕಿದ ವರದ ಪ್ರಮಾಣಕ್ಕನುಸಾರ ಒಬ್ಬರಿಗೊಬ್ಬರು ಸೇವೆಸಲ್ಲಿಸುವುದಕ್ಕಾಗಿ ಅದನ್ನು ಉಪಯೋಗಿಸಲಿ. 11  ಯಾವನಾದರೂ ಮಾತಾಡುವುದಾದರೆ ಅವನು ದೇವರ ಪವಿತ್ರ ದೈವೋಕ್ತಿಗಳನ್ನು ನುಡಿಯುವವನ ಹಾಗೆ ಮಾತಾಡಲಿ; ಯಾವನಾದರೂ ಶುಶ್ರೂಷೆಮಾಡುವುದಾದರೆ ಅವನು ದೇವರು ಒದಗಿಸುವ ಶಕ್ತಿಯ ಮೇಲೆ ಹೊಂದಿಕೊಂಡಿರುವ ಹಾಗೆ ಶುಶ್ರೂಷೆಮಾಡಲಿ; ಹೀಗೆ ಎಲ್ಲ ವಿಷಯಗಳಲ್ಲಿ ಯೇಸು ಕ್ರಿಸ್ತನ ಮೂಲಕ ದೇವರು ಮಹಿಮೆಗೊಳಿಸಲ್ಪಡುವಂತಾಗುವುದು. ಮಹಿಮೆಯೂ ಶಕ್ತಿಯೂ ಸದಾಕಾಲಕ್ಕೂ ಆತನವೇ. ಆಮೆನ್‌. 12  ಪ್ರಿಯರೇ, ವಿಚಿತ್ರವಾದದ್ದೇನೋ ನಿಮಗೆ ಸಂಭವಿಸುತ್ತಿದೆಯೋ ಎಂಬಂತೆ ನಿಮ್ಮ ಮಧ್ಯೆ ಉರಿಯುತ್ತಿರುವ ಬೆಂಕಿಯಿಂದಾಗಿ ಕಳವಳಗೊಳ್ಳಬೇಡಿ; ಅದು ಪರೀಕ್ಷೆಗಾಗಿ ನಿಮಗೆ ಸಂಭವಿಸುತ್ತಿದೆ. 13  ಅದಕ್ಕೆ ಬದಲಾಗಿ ಕ್ರಿಸ್ತನ ಕಷ್ಟಗಳಲ್ಲಿ ನೀವು ಎಷ್ಟರ ಮಟ್ಟಿಗೆ ಪಾಲುಗಾರರಾಗಿದ್ದೀರೋ ಅಷ್ಟರ ಮಟ್ಟಿಗೆ ಹರ್ಷಿಸುತ್ತಾ ಇರಿ; ಆಗ ಅವನ ಮಹಿಮೆಯ ಪ್ರಕಟನೆಯ ಸಮಯದಲ್ಲಿಯೂ ನೀವು ಹರ್ಷದಿಂದ ಮತ್ತು ಅತ್ಯಾನಂದದಿಂದ ಇರುವಿರಿ. 14  ಕ್ರಿಸ್ತನ ಹೆಸರಿನ ನಿಮಿತ್ತ ನೀವು ನಿಂದಿಸಲ್ಪಡುತ್ತಿರುವುದಾದರೆ ಸಂತೋಷಿತರು; ಏಕೆಂದರೆ ಮಹಿಮೆಯ ಆತ್ಮವು, ದೇವರ ಪವಿತ್ರಾತ್ಮವು ಸಹ ನಿಮ್ಮಲ್ಲಿ ನೆಲೆಗೊಂಡಿದೆ. 15  ಆದರೆ ನಿಮ್ಮಲ್ಲಿ ಯಾವನೂ ಕೊಲೆಗಾರನಾಗಿ, ಕಳ್ಳನಾಗಿ, ದುಷ್ಟನಾಗಿ ಅಥವಾ ಬೇರೆಯವರ ವಿಷಯಗಳಲ್ಲಿ ತಲೆಹಾಕುವವನಾಗಿ ಕಷ್ಟವನ್ನು ಅನುಭವಿಸದಿರಲಿ. 16  ಆದರೆ ಕ್ರೈಸ್ತನಾಗಿದ್ದು ಕಷ್ಟವನ್ನು ಅನುಭವಿಸುವುದಾದರೆ ಅವನು ನಾಚಿಕೆಪಡದೆ ಈ ಹೆಸರಿನಲ್ಲಿಯೇ ದೇವರನ್ನು ಮಹಿಮೆಪಡಿಸುತ್ತಾ ಇರಲಿ. 17  ಏಕೆಂದರೆ ದೇವರ ಮನೆಯಿಂದಲೇ ಪ್ರಾರಂಭವಾಗುವ ನ್ಯಾಯತೀರ್ಪಿನ ನೇಮಿತ ಸಮಯವು ಇದಾಗಿದೆ. ಅದು ಮೊದಲು ನಮ್ಮಲ್ಲಿಯೇ ಪ್ರಾರಂಭವಾಗುವುದಾದರೆ ದೇವರ ಸುವಾರ್ತೆಗೆ ವಿಧೇಯರಾಗದಿರುವವರ ಅಂತ್ಯವು ಏನಾಗಿರುವುದು? 18  “ನೀತಿವಂತನೇ ಕಷ್ಟದಿಂದ ರಕ್ಷಣೆ ಹೊಂದುವುದಾದರೆ, ದೇವಭಕ್ತಿಯಿಲ್ಲದ ಮನುಷ್ಯನ ಮತ್ತು ಪಾಪಿಯ ಗತಿಯಾದರೂ ಏನು?” 19  ಹೀಗಿರುವುದರಿಂದ, ದೇವರ ಚಿತ್ತಕ್ಕೆ ಹೊಂದಿಕೆಯಲ್ಲಿ ಕಷ್ಟವನ್ನು ಅನುಭವಿಸುತ್ತಿರುವವರು ಕೂಡ ಒಳ್ಳೇದನ್ನು ಮಾಡುತ್ತಿರುವಾಗ ತಮ್ಮ ಪ್ರಾಣಗಳನ್ನು ನಂಬಿಗಸ್ತನಾದ ಸೃಷ್ಟಿಕರ್ತನಿಗೆ ಒಪ್ಪಿಸುತ್ತಾ ಇರಲಿ.

ಪಾದಟಿಪ್ಪಣಿ