1 ತಿಮೊಥೆಯ 5:1-25

5  ವೃದ್ಧನನ್ನು ಕಟುವಾಗಿ ಟೀಕಿಸಬೇಡ. ಬದಲಾಗಿ ಅವನನ್ನು ತಂದೆಯಂತೆಯೂ ಯೌವನಸ್ಥರನ್ನು ಸಹೋದರರಂತೆಯೂ  ವೃದ್ಧ ಸ್ತ್ರೀಯರನ್ನು ತಾಯಂದಿರಂತೆಯೂ ಯೌವನಸ್ಥೆಯರನ್ನು ಸಹೋದರಿಯರಂತೆಯೂ ಪರಿಗಣಿಸಿ ಪೂರ್ಣ ನೈತಿಕ ಶುದ್ಧಭಾವದಿಂದ ಅವರಿಗೆ ಬುದ್ಧಿಹೇಳು.  ದಿಕ್ಕಿಲ್ಲದ ವಿಧವೆಯರನ್ನು ಗೌರವಿಸು ಮತ್ತು ಪರಾಮರಿಸು.  ಆದರೆ ಒಬ್ಬ ವಿಧವೆಗೆ ಮಕ್ಕಳಾಗಲಿ ಮೊಮ್ಮಕ್ಕಳಾಗಲಿ ಇರುವುದಾದರೆ ಮೊದಲಾಗಿ ಅವರು ತಮ್ಮ ಸ್ವಂತ ಮನೆವಾರ್ತೆಯಲ್ಲಿ ದೇವಭಕ್ತಿಯನ್ನು ಅಭ್ಯಾಸಿಸಿ ತಮ್ಮ ಹೆತ್ತವರಿಗೂ ಅಜ್ಜಅಜ್ಜಿಯರಿಗೂ ಸಲ್ಲತಕ್ಕದ್ದನ್ನು ಸಲ್ಲಿಸುತ್ತಾ ಇರಲು ಕಲಿಯಲಿ; ಇದು ದೇವರ ದೃಷ್ಟಿಯಲ್ಲಿ ಸ್ವೀಕಾರಾರ್ಹವಾಗಿದೆ.  ದಿಕ್ಕಿಲ್ಲದ ವಿಧವೆಯಾಗಿದ್ದು ನಿರ್ಗತಿಕಳಾಗಿರುವ ಒಬ್ಬ ಸ್ತ್ರೀಯು ದೇವರಲ್ಲಿ ತನ್ನ ನಿರೀಕ್ಷೆಯನ್ನಿಟ್ಟು ಹಗಲೂರಾತ್ರಿ ಯಾಚನೆಗಳನ್ನೂ ಪ್ರಾರ್ಥನೆಗಳನ್ನೂ ಪಟ್ಟುಹಿಡಿದು ಮಾಡುತ್ತಾಳೆ.  ಆದರೆ ಇಂದ್ರಿಯ ಸುಖವನ್ನು ತಣಿಸಿ​ಕೊಳ್ಳಲು ಬಯಸುವವಳು ಬದುಕಿರುವುದಾದರೂ ಸತ್ತವಳಾಗಿದ್ದಾಳೆ.  ಆದುದರಿಂದ ಅವರು ನಿಂದಾರಹಿತರಾಗಿರುವಂತೆ ಈ ಆಜ್ಞೆಗಳನ್ನು ಕೊಡುತ್ತಾ ಇರು.  ನಿಶ್ಚಯವಾಗಿಯೂ ಯಾವನಾದರೂ ತನ್ನ ಸ್ವಂತದವರಿಗೆ, ವಿಶೇಷವಾಗಿ ತನ್ನ ಮನೆವಾರ್ತೆಯ ಸದಸ್ಯರಿಗೆ ಅಗತ್ಯವಿರುವುದನ್ನು ಒದಗಿಸದಿದ್ದರೆ ಅವನು ನಂಬಿಕೆ​ಯನ್ನು ನಿರಾಕರಿಸಿದವನೂ ನಂಬದವನಿಗಿಂತ ಕಡೆಯಾದವನೂ ಆಗಿದ್ದಾನೆ.  ಅರುವತ್ತು ವರ್ಷ ಪ್ರಾಯಕ್ಕಿಂತ ಕಡಮೆಯಿಲ್ಲದ ವಿಧವೆಯು ವಿಧವೆಯರ ಪಟ್ಟಿಯಲ್ಲಿ ಸೇರಿಸಲ್ಪಡಲಿ; ಅವಳು ಒಬ್ಬ ಗಂಡನಿಗೆ ಮಾತ್ರ ಹೆಂಡತಿಯಾಗಿದ್ದವಳಾಗಿರಬೇಕು. 10  ಅವಳು ಮಕ್ಕಳನ್ನು ಬೆಳೆಸಿದವಳಾಗಲಿ ಅಪರಿಚಿತರನ್ನು ಉಪಚರಿಸಿದವಳಾಗಲಿ ಪವಿತ್ರ ಜನರ ಪಾದಗಳನ್ನು ತೊಳೆದವಳಾಗಲಿ ಸಂಕಟದಲ್ಲಿದ್ದವರಿಗೆ ಸಹಾಯಮಾಡಿದವಳಾಗಲಿ ಪ್ರತಿಯೊಂದು ಸತ್ಕ್ರಿಯೆಯನ್ನು ಶ್ರದ್ಧೆಯಿಂದ ಅನುಸರಿಸಿದವಳಾಗಲಿ ಆಗಿರುವಲ್ಲಿ ತನ್ನ ಸತ್ಕ್ರಿಯೆಗಳಿಗಾಗಿ ಸಾಕ್ಷಿಯನ್ನು ಹೊಂದಿದವಳಾಗಿರಬೇಕು. 11  ಆದರೆ ಯುವಪ್ರಾಯದ ವಿಧವೆಯರನ್ನು ಪಟ್ಟಿಯಲ್ಲಿ ಸೇರಿಸಬೇಡ; ಏಕೆಂದರೆ ಅವರ ಲೈಂಗಿಕ ಬಯಕೆಗಳು ಅವರ ಮತ್ತು ಕ್ರಿಸ್ತನ ಮಧ್ಯೆ ಬರುವಾಗ ಅವರು ಮದುವೆಮಾಡಿಕೊಳ್ಳಲು ಬಯಸುತ್ತಾರೆ. 12  ಅವರು ತಮ್ಮ ನಂಬಿಕೆಯ ಮೊದಲ ಅಭಿವ್ಯಕ್ತಿಯನ್ನು ಅಲಕ್ಷ್ಯಮಾಡಿರುವುದರಿಂದ ತೀರ್ಪಿಗೊಳಗಾಗುತ್ತಾರೆ. 13  ಅದೇ ಸಮಯದಲ್ಲಿ ಅವರು ಮನೆಯಿಂದ ಮನೆಗೆ ತಿರುಗಾಡುತ್ತಾ ಸೋಮಾರಿತನವನ್ನು ಕಲಿಯುತ್ತಾರೆ; ಸೋಮಾರಿತನವನ್ನು ಕಲಿಯುವುದು ಮಾತ್ರವಲ್ಲ ಹರಟೆಮಾತಾಡುವವರೂ ಬೇರೆಯವರ ವಿಷಯಗಳಲ್ಲಿ ತಲೆಹಾಕುವವರೂ ಆಗಿದ್ದು ಮಾತಾಡಬಾರದ ವಿಷಯಗಳನ್ನು ಮಾತಾಡುವವರಾಗಿರುತ್ತಾರೆ. 14  ಆದುದರಿಂದ ಯುವಪ್ರಾಯದ ವಿಧವೆಯರು ಮದುವೆಮಾಡಿಕೊಂಡು, ಮಕ್ಕಳನ್ನು ಹೆತ್ತು, ತಮ್ಮ ಮನೆವಾರ್ತೆಯನ್ನು ನೋಡಿಕೊಳ್ಳುತ್ತಾ ದೂಷಣಾತ್ಮಕ ಮಾತನ್ನು ಆಡಲು ವಿರೋಧಿಗಳಿಗೆ ಆಸ್ಪದವನ್ನು ಕೊಡದವರಾಗಿ ಇರಬೇಕೆಂದು ನಾನು ಬಯಸುತ್ತೇನೆ. 15  ವಾಸ್ತವದಲ್ಲಿ, ಕೆಲವರು ಈಗಾಗಲೇ ಸೈತಾನನನ್ನು ಹಿಂಬಾಲಿಸುವಂತೆ ದಾರಿತಪ್ಪಿಸಲ್ಪಟ್ಟಿದ್ದಾರೆ. 16  ವಿಶ್ವಾಸಿಯಾದ ಸ್ತ್ರೀಗೆ ವಿಧವೆಯರಾದ ಸಂಬಂಧಿಕರಿದ್ದರೆ ಅವಳೇ ಅವರಿಗೆ ಸಹಾಯಮಾಡಲಿ; ಈ ಭಾರವು ಸಭೆಯ ಮೇಲೆ ಹಾಕಲ್ಪಡದಿರಲಿ. ಆಗ ಸಭೆಗೆ ದಿಕ್ಕಿಲ್ಲದ ವಿಧವೆಯರಿಗೆ ಸಹಾಯಮಾಡಲು ಸಾಧ್ಯವಾಗುತ್ತದೆ. 17  ಒಳ್ಳೇ ರೀತಿಯಲ್ಲಿ ಅಧ್ಯಕ್ಷತೆ ವಹಿಸುವ ಹಿರೀಪುರುಷರು, ವಿಶೇಷವಾಗಿ ವಾಕ್ಯದ ಕುರಿತು ಮಾತಾಡುವುದರಲ್ಲಿಯೂ ಬೋಧಿಸುವುದರಲ್ಲಿಯೂ ಶ್ರಮಪಟ್ಟು ಕೆಲಸಮಾಡುವವರು, ಇಮ್ಮಡಿಯಾದ ಗೌರವಕ್ಕೆ ಯೋಗ್ಯರಾದವರೆಂದು ಎಣಿಸಲ್ಪಡಲಿ. 18  “ಎತ್ತು ಕಣತುಳಿಯುತ್ತಿರುವಾಗ ಅದರ ಬಾಯನ್ನು ಕಟ್ಟಬಾರದು” ಮತ್ತು “ಕೆಲಸಗಾರನು ತನ್ನ ಕೂಲಿಗೆ ಅರ್ಹನಾಗಿದ್ದಾನೆ” ಎಂದು ಶಾಸ್ತ್ರವಚನವು ತಿಳಿಸುತ್ತದೆ. 19  ಒಬ್ಬ ಹಿರೀಪುರುಷನ ವಿರುದ್ಧವಾದ ಆಪಾದನೆಯನ್ನು ಇಬ್ಬರು ಅಥವಾ ಮೂವರು ಸಾಕ್ಷಿಗಳ ಪುರಾವೆಯ ಹೊರತು ಒಪ್ಪಿಕೊಳ್ಳಬೇಡ. 20  ಪಾಪದ ಪರಿಪಾಠವನ್ನು ಮಾಡುವ ವ್ಯಕ್ತಿಗಳನ್ನು ಎಲ್ಲ ಪ್ರೇಕ್ಷಕರ ಮುಂದೆಯೇ ಖಂಡಿಸು; ಆಗ ಉಳಿದವರಿಗೂ ಭಯವುಂಟಾಗುವುದು. 21  ನೀನು ವಿಚಾರಿಸುವುದಕ್ಕೆ ಮೊದಲೇ ತೀರ್ಮಾನಿಸದೆಯೂ ಪಕ್ಷಪಾತದಿಂದ ಏನನ್ನೂ ಮಾಡದೆಯೂ ಇರುವಂತೆ ದೇವರ, ಕ್ರಿಸ್ತ ಯೇಸುವಿನ ಮತ್ತು ಆಯ್ಕೆಮಾಡಲ್ಪಟ್ಟ ದೇವದೂತರ ಮುಂದೆ ನಾನು ಖಂಡಿತವಾಗಿ ಆಜ್ಞಾಪಿಸುತ್ತೇನೆ. 22  ಅವಸರದಿಂದ ಯಾವ ಮನುಷ್ಯನ ಮೇಲೂ ನಿನ್ನ ಹಸ್ತವನ್ನಿಟ್ಟು ಅವನನ್ನು ಸಭೆಯಲ್ಲಿ ನೇಮಿಸಬೇಡ; ಇತರರ ಪಾಪಗಳಲ್ಲಿ ಪಾಲಿಗನೂ ಆಗಬೇಡ; ನಿನ್ನನ್ನು ನೈತಿಕ ಶುದ್ಧತೆಯಲ್ಲಿ ಸುರಕ್ಷಿತವಾಗಿಟ್ಟುಕೊ. 23  ಇನ್ನು ಮೇಲೆ ನೀರನ್ನು ಕುಡಿಯಬೇಡ; ಆದರೆ ನಿನ್ನ ಹೊಟ್ಟೆಯ ನಿಮಿತ್ತವಾಗಿಯೂ ನಿನಗೆ ಆಗಾಗ ಉಂಟಾಗುವ ಅಸ್ವಸ್ಥತೆಯ ನಿಮಿತ್ತವಾಗಿಯೂ ಸ್ವಲ್ಪ ದ್ರಾಕ್ಷಾಮದ್ಯವನ್ನು ಉಪಯೋಗಿಸು. 24  ಕೆಲವರ ಪಾಪಗಳು ಬಹಿರಂಗವಾಗಿ ಪ್ರಸಿದ್ಧವಾಗಿದ್ದು ನೇರವಾಗಿ ನ್ಯಾಯತೀರ್ಪಿಗೆ ನಡೆಸುತ್ತವೆ, ಆದರೆ ಬೇರೆ ಕೆಲವರ ಪಾಪಗಳು ಮರೆಯಾಗಿದ್ದು ಸಮಯಾನಂತರ ಬಯಲಿಗೆ ಬರುತ್ತವೆ. 25  ಅದೇ ರೀತಿಯಲ್ಲಿ ಸತ್ಕ್ರಿಯೆಗಳು ಸಹ ಬಹಿರಂಗವಾಗಿ ಪ್ರಸಿದ್ಧವಾಗುತ್ತವೆ, ಆದರೆ ಬಹಿರಂಗವಾಗಿ ಪ್ರಸಿದ್ಧವಾಗದ ಸತ್ಕ್ರಿಯೆಗಳನ್ನು ಮರೆಯಾಗಿಡಲು ಸಾಧ್ಯವಿಲ್ಲ.

ಪಾದಟಿಪ್ಪಣಿ