1 ತಿಮೊಥೆಯ 4:1-16

4  ಆದರೂ ಮುಂದಣ ಸಮಯಗಳಲ್ಲಿ ಕೆಲವರು ಮೋಸಕರವಾದ ಪ್ರೇರಿತ ಮಾತುಗಳಿಗೂ ದೆವ್ವಗಳ ಬೋಧನೆಗಳಿಗೂ ಗಮನಕೊಟ್ಟು ನಂಬಿಕೆಯಿಂದ ಬಿದ್ದುಹೋಗುವರೆಂದು ದೇವಪ್ರೇರಿತ ಮಾತು ಖಚಿತವಾಗಿ ಹೇಳುತ್ತದೆ.  ಮಾತ್ರವಲ್ಲದೆ, ತಮ್ಮ ಮನಸ್ಸಾಕ್ಷಿಯ ಮೇಲೆ ಬರೆಗೋಲಿ​ನಿಂದಲೋ ಎಂಬಂತೆ ಬರೆಹಾಕಿಕೊಂಡಿರುವ ಸುಳ್ಳಾಡುವವರಾದ ಮನುಷ್ಯರ ಕಪಟದಿಂದಾಗಿಯೂ ಕೆಲವರು ಬಿದ್ದುಹೋಗುವರು.  ಇಂಥ ಮನುಷ್ಯರು ಮದುವೆ​ಯಾಗಬಾರದೆಂತಲೂ ಯಾರು ನಂಬಿಕೆಯುಳ್ಳವರಾಗಿದ್ದು ಸತ್ಯವನ್ನು ನಿಷ್ಕೃಷ್ಟವಾಗಿ ತಿಳಿದುಕೊಂಡಿದ್ದಾರೋ ಅವರು ಕೃತಜ್ಞತಾಸ್ತುತಿಮಾಡಿ ತಿನ್ನುವುದಕ್ಕಾಗಿ ದೇವರು ಸೃಷ್ಟಿಸಿದ ಆಹಾರವನ್ನು ತಿನ್ನಬಾರದೆಂತಲೂ ಆಜ್ಞಾಪಿಸುತ್ತಾರೆ.  ದೇವರು ಸೃಷ್ಟಿಸಿದ್ದೆಲ್ಲವೂ ಉತ್ತಮವಾಗಿದೆ ಮತ್ತು ಕೃತಜ್ಞತಾಸ್ತುತಿಯನ್ನು ಸಲ್ಲಿಸಿ ತೆಗೆದುಕೊಳ್ಳುವಲ್ಲಿ ಯಾವುದನ್ನೂ ತಿರಸ್ಕರಿಸಬೇಕಾಗಿಲ್ಲ.  ಏಕೆಂದರೆ ದೇವರ ವಾಕ್ಯದ ಮೂಲಕವೂ ಅದಕ್ಕಾಗಿ ಮಾಡಿದ ಪ್ರಾರ್ಥನೆಯ ಮೂಲಕವೂ ಅದು ಪವಿತ್ರವಾಗುತ್ತದೆ.  ಸಹೋದರರಿಗೆ ಈ ಸಲಹೆಗಳನ್ನು ನೀಡುವ ಮೂಲಕ, ನೀನು ನಿಕಟವಾಗಿ ಅನುಸರಿಸಿದ ನಂಬಿಕೆಯ ಮತ್ತು ಉತ್ತಮವಾದ ಬೋಧನೆಯ ವಾಕ್ಯಗಳಿಂದ ಪೋಷಿಸಲ್ಪಟ್ಟವನಾಗಿ ಕ್ರಿಸ್ತ ಯೇಸುವಿನ ಒಳ್ಳೇ ಶುಶ್ರೂಷಕನಾಗಿರುವಿ.  ಆದರೆ ಪವಿತ್ರವಾದದ್ದನ್ನು ಹೊಲೆಮಾಡುವ ಮತ್ತು ವೃದ್ಧ ಸ್ತ್ರೀಯರು ಹೇಳುವ ಸುಳ್ಳು ಕಥೆಗಳನ್ನು ತಳ್ಳಿಬಿಡು. ದೇವಭಕ್ತಿಯನ್ನು ನಿನ್ನ ಗುರಿಯನ್ನಾಗಿ ಮಾಡಿಕೊಂಡು ನಿನ್ನನ್ನು ತರಬೇತುಗೊಳಿಸಿಕೊ.  ದೈಹಿಕ ತರಬೇತಿಯು ಸ್ವಲ್ಪಮಟ್ಟಿಗೆ ಪ್ರಯೋಜನಕರವಾಗಿದೆ; ಆದರೆ ದೇವಭಕ್ತಿಯು ಎಲ್ಲ ವಿಧಗಳಲ್ಲಿ ಪ್ರಯೋಜನಕರವಾಗಿದೆ, ಏಕೆಂದರೆ ಅದು ಈಗಲೂ ಮುಂದೆಯೂ ಜೀವ​ವಾಗ್ದಾನ​ವನ್ನು ಹೊಂದಿದ್ದಾಗಿದೆ.  ಆ ಹೇಳಿಕೆಯು ನಂಬತಕ್ಕದ್ದೂ ಸರ್ವಾಂಗೀಕಾರಕ್ಕೆ ಯೋಗ್ಯವಾದದ್ದೂ ಆಗಿದೆ. 10  ಎಲ್ಲ ರೀತಿಯ ಮನುಷ್ಯರ, ಮುಖ್ಯವಾಗಿ ನಂಬಿಗಸ್ತರ ರಕ್ಷಕನಾಗಿರುವ ಜೀವವುಳ್ಳ ದೇವರ ಮೇಲೆ ನಾವು ನಮ್ಮ ನಿರೀಕ್ಷೆಯನ್ನಿಟ್ಟಿರುವುದರಿಂದ ಕಠಿಣವಾಗಿ ಕೆಲಸಮಾಡುತ್ತಿದ್ದೇವೆ ಮತ್ತು ಪ್ರಯಾಸಪಡುತ್ತಿದ್ದೇವೆ. 11  ಈ ಆಜ್ಞೆಗಳನ್ನು ಅವರಿಗೆ ತಿಳಿಸುತ್ತಾ ಅವುಗಳನ್ನು ಬೋಧಿಸುತ್ತಾ ಇರು. 12  ನಿನ್ನ ಯೌವನವನ್ನು ಯಾವನೂ ಎಂದಿಗೂ ಕಡೆಗಣಿಸದಿರಲಿ. ಬದಲಾಗಿ ಮಾತಿನಲ್ಲಿಯೂ ನಡತೆಯಲ್ಲಿಯೂ ಪ್ರೀತಿಯಲ್ಲಿಯೂ ನಂಬಿಕೆಯಲ್ಲಿಯೂ ನೈತಿಕ ಶುದ್ಧತೆಯಲ್ಲಿಯೂ ನಂಬಿಗಸ್ತರಿಗೆ ಮಾದರಿಯಾಗಿರು. 13  ನಾನು ಬರುವ ತನಕ ಸಾರ್ವಜನಿಕ ವಾಚನದಲ್ಲಿಯೂ ಬುದ್ಧಿಹೇಳುವುದರಲ್ಲಿಯೂ ಬೋಧಿಸುವುದರಲ್ಲಿಯೂ ನಿನ್ನನ್ನು ತೊಡಗಿಸಿಕೊಳ್ಳುತ್ತಾ ಇರು. 14  ನಿನ್ನಲ್ಲಿರುವ ವರವನ್ನು ಅಲಕ್ಷ್ಯಮಾಡಬೇಡ; ಭವಿಷ್ಯ​ವಾಣಿಯ ಮೂಲಕವೂ ಹಿರೀಪುರುಷರ ಮಂಡಲಿಯು ನಿನ್ನ ಮೇಲೆ ತಮ್ಮ ಹಸ್ತಗಳನ್ನಿಡುವ ಮೂಲಕವೂ ಆ ವರವು ನಿನಗೆ ಕೊಡಲ್ಪಟ್ಟಿತು. 15  ಈ ಸಂಗತಿಗಳ ಕುರಿತು ಪರ್ಯಾಲೋಚಿಸು; ಅವುಗಳಲ್ಲಿ ಮಗ್ನನಾಗಿರು. ಹೀಗಾದರೆ ನಿನ್ನ ಅಭಿವೃದ್ಧಿಯು ಎಲ್ಲರಿಗೆ ಪ್ರಕಟವಾಗುವುದು. 16  ನಿನ್ನ ವಿಷಯದಲ್ಲಿಯೂ ನಿನ್ನ ಬೋಧನೆಯ ವಿಷಯದಲ್ಲಿಯೂ ಸದಾ ಗಮನ​ಕೊಡುವವನಾಗಿರು. ಈ ವಿಷಯಗಳಲ್ಲಿ ನಿರತನಾಗಿರು; ಹೀಗೆ ಮಾಡುವ ಮೂಲಕ ನೀನು ನಿನ್ನನ್ನೂ ನಿನಗೆ ಕಿವಿಗೊಡುವವರನ್ನೂ ರಕ್ಷಿಸುವಿ.

ಪಾದಟಿಪ್ಪಣಿ