1 ಕೊರಿಂಥ 9:1-27

9  ನಾನು ಸ್ವತಂತ್ರನಲ್ಲವೆ? ನಾನು ಒಬ್ಬ ಅಪೊಸ್ತಲನಲ್ಲವೆ? ನಾನು ನಮ್ಮ ಕರ್ತನಾದ ಯೇಸುವನ್ನು ನೋಡಿಲ್ಲವೆ? ನಾನು ಕರ್ತನಲ್ಲಿ ಮಾಡಿದ ಕೆಲಸದ ಫಲ ನೀವೇ ಅಲ್ಲವೆ?  ನಾನು ಬೇರೆಯವರಿಗೆ ಅಪೊಸ್ತಲನಲ್ಲದಿದ್ದರೂ ನಿಮಗೆ ಅತಿ ಖಂಡಿತವಾಗಿಯೂ ಅಪೊಸ್ತಲನಾಗಿದ್ದೇನೆ. ಏಕೆಂದರೆ ಕರ್ತನ ಸಂಬಂಧದಲ್ಲಿ ನನ್ನ ಅಪೊಸ್ತಲತನವನ್ನು ದೃಢಪಡಿಸುವ ಮುದ್ರೆಯು ನೀವೇ ಆಗಿದ್ದೀರಿ.  ನನ್ನನ್ನು ವಿಚಾರಿಸುವವರಿಗೆ ನಾನು ಕೊಡುವ ಉತ್ತರವು ಹೀಗಿದೆ:  ನಮಗೆ ತಿನ್ನಲು ಮತ್ತು ಕುಡಿಯಲು ಅಧಿಕಾರವಿದೆ, ಅಲ್ಲವೆ?  ಉಳಿದ ಅಪೊಸ್ತಲರಂತೆಯೂ ಕರ್ತನ ಸಹೋದರ​ರಂತೆಯೂ ಕೇಫನಂತೆಯೂ ನಾವು ಸಹ ಒಬ್ಬ ಕ್ರೈಸ್ತ ಸಹೋದರಿಯನ್ನು ಹೆಂಡತಿ​ಯಾಗಿ ತೆಗೆದುಕೊಂಡು ಅವಳನ್ನು ಜೊತೆಯಲ್ಲಿ ಕರೆದುಕೊಂಡು ಸಂಚರಿಸುವ ಅಧಿಕಾರ ನಮಗೂ ಉಂಟಲ್ಲವೆ?  ಅಥವಾ ಐಹಿಕ ಕೆಲಸವನ್ನು ಮಾಡದಿರಲು ಅಧಿಕಾರ​ವಿಲ್ಲದಿರುವುದು ನನಗೆ ಮತ್ತು ಬಾರ್ನಬನಿಗೆ ಮಾತ್ರವೊ?  ತನ್ನ ಸ್ವಂತ ಖರ್ಚಿನಿಂದ ಸೈನಿಕನಾಗಿ ಸೇವೆಸಲ್ಲಿಸುವವನು ಯಾರಿದ್ದಾನೆ? ಒಂದು ದ್ರಾಕ್ಷಿಯ ತೋಟವನ್ನು ನೆಟ್ಟು ಅದರ ಫಲವನ್ನು ತಿನ್ನದವನು ಯಾರಿದ್ದಾನೆ? ಅಥವಾ ಒಂದು ಮಂದೆಯನ್ನು ಮೇಯಿಸಿ ಅದರ ಹಾಲನ್ನು ಕುಡಿಯದೇ ಇರುವವನು ಯಾರಿದ್ದಾನೆ?  ನಾನು ಮಾನವ ಮಟ್ಟಗಳಿಗನುಸಾರ ಈ ವಿಷಯಗಳನ್ನು ಮಾತಾಡುತ್ತಿದ್ದೇನೊ? ಧರ್ಮಶಾಸ್ತ್ರವು ಸಹ ಈ ವಿಷಯಗಳನ್ನು ಹೇಳುವುದಿಲ್ಲವೊ?  ಮೋಶೆಯ ಧರ್ಮಶಾಸ್ತ್ರದಲ್ಲಿ, “ಎತ್ತು ಕಣತುಳಿಯುತ್ತಿರುವಾಗ ಅದರ ಬಾಯನ್ನು ಕಟ್ಟಬಾರದು” ಎಂದು ಬರೆಯಲ್ಪಟ್ಟಿದೆ. ದೇವರು ಎತ್ತುಗಳ ಕುರಿತು ಚಿಂತಿಸುತ್ತಿದ್ದಾನೊ?  10  ಅಥವಾ ನಮಗೋಸ್ಕರವಾಗಿಯೇ ಅದನ್ನು ಹೇಳುತ್ತಾನೊ? ವಾಸ್ತವದಲ್ಲಿ ನಮಗೋಸ್ಕರವಾಗಿಯೇ ಅದು ಬರೆಯಲ್ಪಟ್ಟಿತು; ಏಕೆಂದರೆ ಉಳುವವನು ನಿರೀಕ್ಷೆಯುಳ್ಳವನಾಗಿ ಉಳಬೇಕು ಮತ್ತು ಒಕ್ಕುವವನು ಪಾಲುಗಾರನಾಗುವೆನೆಂಬ ನಿರೀಕ್ಷೆಯಲ್ಲಿ ಒಕ್ಕಬೇಕು. 11  ನಾವು ನಿಮ್ಮಲ್ಲಿ ಆಧ್ಯಾತ್ಮಿಕ ವಿಷಯಗಳನ್ನು ಬಿತ್ತಿರುವುದಾದರೆ, ನಿಮ್ಮಿಂದ ಶಾರೀರಿಕ ವಿಷಯಗಳನ್ನು ಕೊಯ್ಯುವುದು ದೊಡ್ಡದೊ? 12  ಈ ಅಧಿಕಾರ ಇತರರಿಗೆ ನಿಮ್ಮ ಮೇಲಿರುವುದಾದರೆ ನಮಗೆ ಇನ್ನೆಷ್ಟು ಹೆಚ್ಚಾಗಿ ಇರುತ್ತದೆ? ಆದರೂ ನಾವು ಈ ಅಧಿಕಾರವನ್ನು ಉಪಯೋಗಿಸದೆ, ಕ್ರಿಸ್ತನ ಕುರಿತಾದ ಸುವಾರ್ತೆಗೆ ಯಾವುದೇ ತಡೆಯನ್ನು ತರದಂತೆ ಎಲ್ಲವನ್ನೂ ನಾವೇ ಸಹಿಸಿಕೊಳ್ಳುತ್ತಿದ್ದೇವೆ. 13  ಪವಿತ್ರ ಸೇವೆಯನ್ನು ಸಲ್ಲಿಸುತ್ತಿರುವವರು ದೇವಾಲಯದ ಪದಾರ್ಥಗಳನ್ನು ತಿನ್ನುತ್ತಾರೆಂಬುದೂ ಯಜ್ಞವೇದಿಯ ಬಳಿಯಲ್ಲಿ ಸತತವಾಗಿ ಸೇವೆಮಾಡುವವರು ಆ ವೇದಿಯ ಪದಾರ್ಥಗಳಲ್ಲಿ ಒಂದು ಪಾಲನ್ನು ಪಡೆಯುತ್ತಾರೆಂಬುದೂ ನಿಮಗೆ ತಿಳಿದಿಲ್ಲವೊ? 14  ಅದೇ ರೀತಿಯಲ್ಲಿ ಸಹ ಸುವಾರ್ತೆಯನ್ನು ಪ್ರಕಟಿಸುವವರು ಸುವಾರ್ತೆಯಿಂದಲೇ ಜೀವನಮಾಡುವಂತೆ ಕರ್ತನು ನೇಮಿಸಿದನು. 15  ಆದರೆ ನಾನು ಈ ಒದಗಿಸುವಿಕೆಗಳಲ್ಲಿ ಒಂದನ್ನೂ ಉಪಯೋಗಿಸಿ​ಕೊಂಡಿಲ್ಲ. ನನ್ನ ವಿಷಯದಲ್ಲಿ ಹೀಗಾಗ​ಬೇಕೆಂದು ನಾನು ಈ ವಿಷಯಗಳನ್ನು ಬರೆದಿಲ್ಲ; ಅದಕ್ಕಿಂತ ನಾನು ಸಾಯುವುದೇ ಲೇಸು​—⁠ನಾನು ಹೊಗಳಿಕೊಳ್ಳಲು ನನಗಿರುವ ಈ ಕಾರಣವನ್ನು ಯಾವನೂ ನಿರರ್ಥಕಗೊಳಿಸಲಾರನು! 16  ನಾನು ಸುವಾರ್ತೆಯನ್ನು ಸಾರುತ್ತಿರುವುದಾದರೆ ಹೊಗಳಿಕೊಳ್ಳಲು ನನಗೆ ಆಸ್ಪದವಿಲ್ಲ; ಏಕೆಂದರೆ ಅದನ್ನು ಸಾರಲೇಬೇಕಾದ ಆವಶ್ಯಕತೆ ನನಗುಂಟು. ವಾಸ್ತವದಲ್ಲಿ ನಾನು ಸುವಾರ್ತೆಯನ್ನು ಸಾರದಿದ್ದರೆ ನನ್ನ ಗತಿಯನ್ನು ಏನು ಹೇಳಲಿ! 17  ನಾನು ಇದನ್ನು ಇಷ್ಟಪೂರ್ವಕವಾಗಿ ಮಾಡುವುದಾದರೆ ನನಗೆ ಬಹುಮಾನ ಉಂಟು; ನಾನು ಇದನ್ನು ನನ್ನ ಇಷ್ಟಕ್ಕೆ ವಿರುದ್ಧವಾಗಿ ಮಾಡುವು​ದಾದರೂ ಮನೆವಾರ್ತೆಗಾರನ ಜವಾಬ್ದಾರಿಯು ನನ್ನ ವಶಕ್ಕೆ ಕೊಡಲ್ಪಟ್ಟಿದೆ. 18  ಹಾಗಾದರೆ ನನಗೆ ದೊರೆಯುವ ಬಹುಮಾನವಾದರೂ ಏನು? ನಾನು ಸುವಾರ್ತೆಯನ್ನು ಸಾರುವಾಗ ಸುವಾರ್ತೆಯಲ್ಲಿನ ನನ್ನ ಅಧಿಕಾರ​ವನ್ನು ದುರುಪಯೋಗಿಸದೆ ಅದನ್ನು ವೆಚ್ಚವಿಲ್ಲದೆ ಮಾಡುವುದೇ ಆಗಿದೆ. 19  ನಾನು ಎಲ್ಲ ಮನುಷ್ಯರಿಂದ ಸ್ವತಂತ್ರನಾಗಿರುವುದಾದರೂ, ಹೆಚ್ಚು ಜನರನ್ನು ಗಳಿಸಲಿಕ್ಕಾಗಿ ನನ್ನನ್ನು ಎಲ್ಲರಿಗೂ ದಾಸನಾಗಿ ಮಾಡಿಕೊಂಡಿದ್ದೇನೆ. 20  ಆದುದ​ರಿಂದ ನಾನು ಯೆಹೂದ್ಯರನ್ನು ಗಳಿಸಲಿಕ್ಕಾಗಿ ಯೆಹೂದ್ಯರಿಗೆ ಯೆಹೂದ್ಯನಂತಾದೆನು; ನಾನು ಧರ್ಮಶಾಸ್ತ್ರದ ಕೆಳಗಿಲ್ಲವಾದರೂ ಧರ್ಮಶಾಸ್ತ್ರದ ಕೆಳಗಿದ್ದವರನ್ನು ಗಳಿಸಲಿಕ್ಕಾಗಿ ಅವರಿಗೆ ಧರ್ಮಶಾಸ್ತ್ರದ ಕೆಳಗಿರುವವನಂತಾದೆನು. 21  ನಾನು ದೇವರ ನಿಯಮವಿಲ್ಲದವನಲ್ಲ, ಕ್ರಿಸ್ತನ ನಿಯಮಕ್ಕೆ ಅಧೀನನಾದವನಾಗಿದ್ದೇನೆ; ಆದರೂ ನಿಯಮವಿಲ್ಲದವರನ್ನು ಗಳಿಸಲಿಕ್ಕಾಗಿ ಅವರಿಗೆ ನಿಯಮವಿಲ್ಲದವ​ನಂತಾದೆನು. 22  ನಾನು ಬಲವಿಲ್ಲದವರನ್ನು ಗಳಿಸಲಿಕ್ಕಾಗಿ ಬಲವಿಲ್ಲದವನಾದೆನು. ನಾನು ಯಾವ ರೀತಿಯಲ್ಲಾದರೂ ಕೆಲವರನ್ನು ರಕ್ಷಿಸಲಿಕ್ಕಾಗಿ ಎಲ್ಲ ರೀತಿಯ ಜನರಿಗೆ ಎಲ್ಲವೂ ಆದೆನು. 23  ಆದರೆ ನಾನು ಇತರ​ರೊಂದಿಗೆ ಸುವಾರ್ತೆಯಲ್ಲಿ ಪಾಲುಗಾರನಾಗಲಿಕ್ಕಾಗಿ ಎಲ್ಲವನ್ನೂ ಸುವಾರ್ತೆಗೋಸ್ಕರವೇ ಮಾಡುತ್ತೇನೆ. 24  ಒಂದು ಓಟದ ಪಂದ್ಯದಲ್ಲಿ ಎಲ್ಲರೂ ಓಡುತ್ತಾರಾದರೂ ಒಬ್ಬನಿಗೆ ಮಾತ್ರ ಬಹುಮಾನ ದೊರಕುತ್ತದೆ ಎಂಬುದು ನಿಮಗೆ ತಿಳಿಯದೊ? ನೀವು ಬಹುಮಾನವನ್ನು ಪಡೆದುಕೊಳ್ಳುವಂಥ ರೀತಿಯಲ್ಲಿ ಓಡಿರಿ. 25  ಮಾತ್ರವಲ್ಲದೆ, ಒಂದು ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬನೂ ಎಲ್ಲ ವಿಷಯಗಳಲ್ಲಿ ​ಸ್ವನಿಯಂತ್ರಣವನ್ನು ಕಾಪಾಡಿಕೊಳ್ಳುತ್ತಾನೆ. ಅವರು ಹಾಳಾಗಬಲ್ಲ ಕಿರೀಟವನ್ನು ಹೊಂದಲಿಕ್ಕಾಗಿ ಅದನ್ನು ಮಾಡುತ್ತಾರೆ, ಆದರೆ ನಾವು ಹಾಳಾಗದ ಕಿರೀಟವನ್ನು ಹೊಂದಲಿಕ್ಕಾಗಿ ಅದನ್ನು ಮಾಡುತ್ತೇವೆ. 26  ಆದುದರಿಂದ ನಾನು ಗೊತ್ತುಗುರಿಯಿಲ್ಲದೆ ಓಡುತ್ತಿಲ್ಲ; ನಾನು ಗಾಳಿಯನ್ನು ಗುದ್ದುವವನಂತೆ ಗುದ್ದುತ್ತಿಲ್ಲ; 27  ನಾನು ಇತರರಿಗೆ ಸಾರಿದ ಮೇಲೆ ಯಾವುದಾದರೊಂದು ವಿಧದಲ್ಲಿ ನಾನೇ ಅನಂಗೀಕಾರಕ್ಕೆ ಗುರಿಯಾಗದಂತೆ ನನ್ನ ದೇಹವನ್ನು ಜಜ್ಜಿ ಅದನ್ನು ದಾಸನಂತೆ ನಡೆಸಿಕೊಳ್ಳುತ್ತೇನೆ.

ಪಾದಟಿಪ್ಪಣಿ