1 ಕೊರಿಂಥ 6:1-20

6  ನಿಮ್ಮಲ್ಲಿ ಯಾವನಿಗಾದರೂ ಮತ್ತೊ​ಬ್ಬನ ವಿರುದ್ಧ ವ್ಯಾಜ್ಯವಿರುವುದಾದರೆ ಅವನು ಪವಿತ್ರ ಜನರ ಮುಂದೆ ಹೋಗುವ ಬದಲು ಅನೀತಿವಂತರ ಮುಂದೆ ನ್ಯಾಯಾಲಯಕ್ಕೆ ಹೋಗಲು ಧೈರ್ಯ​ಮಾಡುತ್ತಾನೊ?  ಪವಿತ್ರ ಜನರು ಲೋಕಕ್ಕೆ ತೀರ್ಪುಮಾಡುವರೆಂಬುದು ನಿಮಗೆ ತಿಳಿಯದೊ? ಲೋಕವೇ ನಿಮ್ಮಿಂದ ತೀರ್ಪುಹೊಂದಬೇಕಾಗಿರುವಾಗ ತೀರ ಅಲ್ಪವಾದ ವಿಷಯಗಳ ಕುರಿತು ವಿಚಾರಣೆಮಾಡಲು ನೀವು ಅಯೋಗ್ಯರಾಗಿದ್ದೀರೊ?  ನಾವು ದೇವದೂತರಿಗೂ ತೀರ್ಪುಮಾಡಲಿದ್ದೇವೆ ಎಂಬುದು ನಿಮಗೆ ತಿಳಿಯದೊ? ಹಾಗಿರುವಾಗ ಈ ಜೀವನಕ್ಕೆ ಸಂಬಂಧಿಸಿದ ವಿಷಯಗಳನ್ನು ತೀರ್ಪುಮಾಡಲು ಏಕೆ ಸಾಧ್ಯವಿಲ್ಲ?  ಈ ಜೀವನದ ಸಂಬಂಧ​ದಲ್ಲಿ ವಿಚಾರಣೆಮಾಡತಕ್ಕ ವಿಷಯ​ಗಳು ನಿಮ್ಮಲ್ಲಿರುವುದಾದರೆ, ಸಭೆಯವರು ಗಣನೆಗೆ ತಾರದಂಥ ಜನರನ್ನು ನೀವು ನ್ಯಾಯಾಧಿಪತಿಗಳಾಗಿ ನೇಮಿಸುತ್ತೀರೊ?  ನಿಮಗೆ ನಾಚಿಕೆಹುಟ್ಟಿಸುವುದಕ್ಕಾಗಿ ನಾನು ಇದನ್ನು ಹೇಳುತ್ತಿದ್ದೇನೆ. ಸಹೋದರರ ಮಧ್ಯೆ ತೀರ್ಪನ್ನು ಮಾಡಶಕ್ತನಾಗಿರುವ ವಿವೇಕಿಯು ನಿಮ್ಮಲ್ಲಿ ಒಬ್ಬನಾದರೂ ಇಲ್ಲವೆಂಬುದು ನಿಜವೊ?  ಒಬ್ಬ ಸಹೋದರನು ಇನ್ನೊಬ್ಬ ಸಹೋದರನನ್ನು ನ್ಯಾಯಾಲಯಕ್ಕೆ, ಅದೂ ಅವಿಶ್ವಾಸಿಗಳ ಮುಂದೆ ಕರೆದುಕೊಂಡು ಹೋಗಿ ನಿಲ್ಲಿಸುವುದು ಸರಿಯೊ?  ಹಾಗಾದರೆ ನಿಜವಾಗಿಯೂ ನೀವು ಪರಸ್ಪರ ಮೊಕದ್ದಮೆ ಹೂಡುವುದು ನಿಮ್ಮ ಸಂಪೂರ್ಣ ಸೋಲನ್ನು ಸೂಚಿಸುತ್ತದೆ. ಅದಕ್ಕಿಂತ ನೀವೇ ಏಕೆ ಅನ್ಯಾಯವನ್ನು ಸಹಿಸಬಾರದು? ನೀವೇ ಏಕೆ ಮೋಸವನ್ನು ತಾಳಿಕೊಳ್ಳಬಾರದು?  ಅದಕ್ಕೆ ವ್ಯತಿರಿಕ್ತವಾಗಿ ನೀವೇ ಅನ್ಯಾಯವನ್ನೂ ಮೋಸವನ್ನೂ ಮಾಡುತ್ತೀರಿ; ನಿಮ್ಮ ಸಹೋದರರಿಗೇ ಹೀಗೆ ಮಾಡುತ್ತೀರಿ.  ಅನೀತಿವಂತರು ದೇವರ ರಾಜ್ಯಕ್ಕೆ ಬಾಧ್ಯರಾಗುವುದಿಲ್ಲ ಎಂಬುದು ನಿಮಗೆ ತಿಳಿಯದೊ? ಮೋಸಹೋಗಬೇಡಿರಿ. ಜಾರರಾಗಲಿ ವಿಗ್ರಹಾರಾಧಕರಾಗಲಿ ವ್ಯಭಿಚಾರಿ​ಗಳಾಗಲಿ ಅಸ್ವಾಭಾವಿಕ ಲೈಂಗಿಕ ಉದ್ದೇಶಕ್ಕಾಗಿರುವ ಪುರುಷರಾಗಲಿ ಪುರುಷಗಾಮಿಗಳಾಗಲಿ 10  ಕಳ್ಳರಾಗಲಿ ಲೋಭಿಗಳಾಗಲಿ ಕುಡುಕರಾಗಲಿ ದೂಷಕರಾಗಲಿ ಸುಲಿಗೆಮಾಡುವವರಾಗಲಿ ಯಾರೂ ದೇವರ ರಾಜ್ಯಕ್ಕೆ ಬಾಧ್ಯರಾಗುವುದಿಲ್ಲ. 11  ನಿಮ್ಮಲ್ಲಿ ಕೆಲವರು ಅಂಥವರಾಗಿದ್ದಿರಿ. ಆದರೆ ನೀವು ತೊಳೆದು ಶುದ್ಧೀಕರಿಸಲ್ಪಟ್ಟಿದ್ದೀರಿ, ಪವಿತ್ರೀಕರಿಸಲ್ಪಟ್ಟಿದ್ದೀರಿ, ನಮ್ಮ ಕರ್ತನಾದ ಯೇಸು ಕ್ರಿಸ್ತನ ಹೆಸರಿನಲ್ಲಿಯೂ ನಮ್ಮ ದೇವರ ಆತ್ಮ​ದಿಂದಲೂ * ನೀವು ನೀತಿವಂತರೆಂದು ನಿರ್ಣಯಿಸಲ್ಪಟ್ಟಿದ್ದೀರಿ. 12  ಎಲ್ಲ ವಿಷಯಗಳನ್ನು ಮಾಡಲು ನನಗೆ ಅನುಮತಿ ಇದೆ, ಆದರೆ ಎಲ್ಲವೂ ಪ್ರಯೋಜನದಾಯಕವಾಗಿರುವುದಿಲ್ಲ. ಎಲ್ಲ ವಿಷಯಗಳನ್ನು ಮಾಡಲು ನನಗೆ ಅನುಮತಿ ಇದೆ, ಆದರೆ ಯಾವುದೇ ಸಂಗತಿಯು ನನ್ನ ಮೇಲೆ ಅಧಿಕಾರ ನಡೆಸುವಂತೆ ನಾನು ಬಿಡುವುದಿಲ್ಲ. 13  ಆಹಾರಪದಾರ್ಥಗಳು ಹೊಟ್ಟೆಗಾಗಿಯೂ ಹೊಟ್ಟೆಯು ಆಹಾರ​ಪದಾರ್ಥಗಳಿಗಾಗಿಯೂ ಇದೆ; ಆದರೆ ದೇವರು ಅದನ್ನೂ ಅವುಗಳನ್ನೂ ಇಲ್ಲದಂತೆ ಮಾಡುವನು. ದೇಹವು ಜಾರತ್ವಕ್ಕಾಗಿ ಅಲ್ಲ, ಕರ್ತನಿಗೋಸ್ಕರ ಇರುವಂಥದ್ದಾಗಿದೆ; ಮತ್ತು ಕರ್ತನು ದೇಹಕ್ಕೋಸ್ಕರ ಇದ್ದಾನೆ. 14  ದೇವರು ತನ್ನ ಶಕ್ತಿಯಿಂದ ಕರ್ತನನ್ನು ಎಬ್ಬಿಸಿದ್ದಲ್ಲದೆ ನಮ್ಮನ್ನೂ ಸತ್ತವರೊಳಗಿಂದ ಎಬ್ಬಿಸುವನು. 15  ನಿಮ್ಮ ದೇಹಗಳು ಕ್ರಿಸ್ತನ ಅಂಗ​ಗಳಾಗಿವೆ ಎಂಬುದು ನಿಮಗೆ ತಿಳಿಯದೊ? ಹಾಗಾದರೆ ನಾನು ಕ್ರಿಸ್ತನ ಅಂಗಗಳನ್ನು ತೆಗೆದು ಅವುಗಳನ್ನು ವೇಶ್ಯೆಯ ಅಂಗಗಳನ್ನಾಗಿ ಮಾಡಲೊ? ಹಾಗೆಂದೂ ಆಗದಿರಲಿ! 16  ವೇಶ್ಯೆಯೊಂದಿಗೆ ಸೇರಿದವನು ಅವಳೊಂದಿಗೆ ಒಂದೇ ದೇಹ​ವಾಗಿದ್ದಾನೆ ಎಂಬುದು ನಿಮಗೆ ತಿಳಿಯದೊ? ಏಕೆಂದರೆ “ಅವರಿಬ್ಬರು ಒಂದೇ ಶರೀರವಾಗಿರುವರು” ಎಂದು ಆತನು ಹೇಳುತ್ತಾನೆ. 17  ಆದರೆ ಕರ್ತನೊಂದಿಗೆ ಸೇರಿದವನು ಅವನೊಂದಿಗೆ ಏಕಮನಸ್ಸುಳ್ಳವನಾಗಿದ್ದಾನೆ. 18  ಜಾರತ್ವಕ್ಕೆ ದೂರವಾಗಿ ಓಡಿಹೋಗಿರಿ. ಮನುಷ್ಯನು ಮಾಡುವ ಬೇರೆಲ್ಲ ಪಾಪವು ಅವನ ದೇಹಕ್ಕೆ ಹೊರಗಿನದ್ದಾಗಿದೆ, ಆದರೆ ಜಾರತ್ವವನ್ನು ರೂಢಿಮಾಡಿಕೊಂಡಿರು​ವವನು ತನ್ನ ದೇಹಕ್ಕೇ ವಿರುದ್ಧವಾಗಿ ಪಾಪಮಾಡುವವನಾಗಿದ್ದಾನೆ. 19  ನಿಮಗೆ ದೇವರಿಂದ ಕೊಡಲ್ಪಟ್ಟಿರುವ, ನಿಮ್ಮೊಳಗಿರುವ ಪವಿತ್ರಾತ್ಮಕ್ಕೆ ನಿಮ್ಮ ದೇಹವು ಆಲಯವಾಗಿದೆ ಎಂಬುದು ನಿಮಗೆ ತಿಳಿಯದೊ? ಇದಲ್ಲದೆ, ನೀವು ನಿಮಗೆ ಸೇರಿದವರಲ್ಲ; 20  ನೀವು ಕ್ರಯಕ್ಕೆ ಕೊಳ್ಳಲ್ಪಟ್ಟವರಾಗಿದ್ದೀರಿ. ಹೀಗಿರುವುದರಿಂದ ಅವಶ್ಯವಾಗಿ, ನಿಮ್ಮ ದೇಹದ ಮೂಲಕ ದೇವರನ್ನು ಮಹಿಮೆ​ಪಡಿಸಿರಿ.

ಪಾದಟಿಪ್ಪಣಿ

1ಕೊರಿಂ 6:⁠11  ಅಥವಾ, “ದೇವರ ಕಾರ್ಯಕಾರಿ ಶಕ್ತಿ.” ಪರಿಶಿಷ್ಟ 7 ನ್ನು ನೋಡಿ.