1 ಕೊರಿಂಥ 3:1-23

3  ಆದುದರಿಂದ ಸಹೋದರರೇ, ನಾನು ನಿಮ್ಮೊಂದಿಗೆ ಆಧ್ಯಾತ್ಮಿಕ ವ್ಯಕ್ತಿಗಳ ಸಂಗಡ ಮಾತಾಡುವಂತೆ ಅಲ್ಲ, ಶರೀರ​ಭಾವದ ವ್ಯಕ್ತಿಗಳೊಂದಿಗೆ ಕ್ರಿಸ್ತನ ವಿಷಯ​ದಲ್ಲಿ ಶಿಶುಗಳಾಗಿರುವವರಿಗೆ ತಕ್ಕಂತೆ ಮಾತಾಡಶಕ್ತನಾದೆನು.  ನಿಮಗೆ ಇನ್ನೂ ಸಾಕಷ್ಟು ಬಲವಿಲ್ಲದ ಕಾರಣ ನಾನು ನಿಮಗೆ ತಿನ್ನಲು ಗಟ್ಟಿಯಾದ ಆಹಾರವನ್ನು ಕೊಡದೆ ಹಾಲನ್ನು ಕುಡಿಸಿದೆನು. ವಾಸ್ತವದಲ್ಲಿ ನಿಮಗೆ ಈಗಲೂ ಸಾಕಷ್ಟು ಬಲವಿಲ್ಲ;  ಏಕೆಂದರೆ ನೀವು ಇನ್ನೂ ಶರೀರಭಾವದವರಾಗಿದ್ದೀರಿ. ನಿಮ್ಮ ಮಧ್ಯೆ ಹೊಟ್ಟೆಕಿಚ್ಚು ಮತ್ತು ಜಗಳಗಳು ಇರುವುದರಿಂದ ನೀವು ಶರೀರಭಾವದವರೂ ಲೋಕದ ಜನರಂತೆ ನಡೆಯುವವರೂ ಆಗಿದ್ದೀರಲ್ಲವೆ?  ಒಬ್ಬನು, “ನಾನು ಪೌಲನಿಗೆ ಸೇರಿದವನು” ಎಂದೂ ಇನ್ನೊಬ್ಬನು “ನಾನು ಅಪೊಲ್ಲೋಸನವನು” ಎಂದೂ ಹೇಳುವಾಗ ನೀವು ಕೇವಲ ಜನರೇ ಅಲ್ಲವೆ?  ಹಾಗಾದರೆ ಅಪೊಲ್ಲೋಸನು ಯಾರು? ಪೌಲನು ಯಾರು? ಅವರು ಶುಶ್ರೂಷಕರಾಗಿದ್ದಾರೆ; ಕರ್ತನು ಪ್ರತಿ​ಯೊಬ್ಬನಿಗೆ ಅನುಗ್ರಹಿಸಿದ ಪ್ರಕಾರ ಅವರ ಮೂಲಕ ನೀವು ನಂಬುವವರಾದಿರಿ.  ನಾನು ನೆಟ್ಟೆನು, ಅಪೊಲ್ಲೋಸನು ನೀರುಹೊಯ್ದನು, ಆದರೆ ದೇವರು ಅದನ್ನು ಬೆಳೆಸುತ್ತಾ ಬಂದನು.  ಆದುದರಿಂದ ನೆಡುವವನಾಗಲಿ ನೀರು ಹೊಯ್ಯುವವನಾಗಲಿ ವಿಶೇಷವಾದವನಲ್ಲ, ಅದನ್ನು ಬೆಳೆಯುವಂತೆ ಮಾಡುವ ದೇವರೇ ವಿಶೇಷವಾದವನು.  ನೆಡುವವನೂ ನೀರು ಹೊಯ್ಯುವವನೂ ಒಂದೇ ಆಗಿದ್ದಾರೆ, ಆದರೆ ಪ್ರತಿಯೊಬ್ಬನಿಗೆ ಅವನವನ ಸ್ವಂತ ಶ್ರಮಕ್ಕನುಸಾರ ಸ್ವಂತ ಪ್ರತಿಫಲ ದೊರೆಯುವುದು.  ಏಕೆಂದರೆ ನಾವು ದೇವರ ಜೊತೆಕೆಲಸಗಾರರಾಗಿದ್ದೇವೆ. ನೀವು ಕೃಷಿಮಾಡಲ್ಪಡುತ್ತಿರುವ ದೇವರ ಹೊಲ, ದೇವರ ಕಟ್ಟಡ ಆಗಿದ್ದೀರಿ. 10  ನನಗೆ ಕೊಡಲ್ಪಟ್ಟ ದೇವರ ಅಪಾತ್ರ ದಯೆಗನುಸಾರ ನಾನು ವಿವೇಕಿಯಾದ ಕಾರ್ಯನಿರ್ದೇಶಕನಂತೆ ಅಸ್ತಿವಾರ​ವನ್ನು ಹಾಕಿದೆನು, ಆದರೆ ಮತ್ತೊಬ್ಬನು ಅದರ ಮೇಲೆ ಕಟ್ಟುತ್ತಿದ್ದಾನೆ. ಪ್ರತಿಯೊಬ್ಬನು ತಾನು ಅದರ ಮೇಲೆ ಹೇಗೆ ಕಟ್ಟುತ್ತಿದ್ದೇನೆಂಬ ವಿಷಯದಲ್ಲಿ ಎಚ್ಚರಿಕೆ ವಹಿಸುತ್ತಿರಲಿ. 11  ಯಾವ ಮನುಷ್ಯನೂ ಈಗಾಗಲೇ ಹಾಕಲ್ಪಟ್ಟಿರುವ ಅಸ್ತಿವಾರವಾಗಿರುವ ಯೇಸು ಕ್ರಿಸ್ತನನ್ನೇ ಹೊರತು ಮತ್ತೊಂದು ಅಸ್ತಿವಾರವನ್ನು ಹಾಕಲಾರನು. 12  ಯಾವನಾದರೂ ಆ ಅಸ್ತಿವಾರದ ಮೇಲೆ ಚಿನ್ನ, ಬೆಳ್ಳಿ, ರತ್ನ, ಮರದ ಸಾಮಗ್ರಿ, ಹುಲ್ಲು, ಕೂಳೆ ಮುಂತಾದುವುಗಳಿಂದ ಕಟ್ಟುವುದಾದರೆ, 13  ಅವನವನ ಕೆಲಸವು ವ್ಯಕ್ತವಾಗುವುದು; ಆ ದಿನವು ಇದನ್ನು ತೋರಿಸುವುದು, ಏಕೆಂದರೆ ಅದು ಬೆಂಕಿಯ ಮೂಲಕ ಪ್ರಕಟಪಡಿಸಲ್ಪಡುವುದು; ಪ್ರತಿಯೊಬ್ಬನ ಕೆಲಸವು ಎಂಥೆಂಥದ್ದೆಂಬುದನ್ನು ಬೆಂಕಿಯೇ ರುಜುಪಡಿಸುವುದು. 14  ಕಟ್ಟಿರುವ ಯಾವನ ಕೆಲಸವಾದರೂ ಉಳಿಯುವುದಾದರೆ ಅವನು ಪ್ರತಿಫಲವನ್ನು ಪಡೆಯುವನು; 15  ಒಬ್ಬನು ಕಟ್ಟಿದ್ದು ಸುಟ್ಟುಹೋಗುವುದಾದರೆ ಅವನು ನಷ್ಟವನ್ನು ಅನುಭವಿಸುವನು; ತಾನಾದರೋ ರಕ್ಷಿಸಲ್ಪಡುವನು; ಆದರೂ ಅವನು ಬೆಂಕಿಯಿಂದ ಪಾರಾದವನ ಹಾಗಿರುವನು. 16  ನೀವು ದೇವರ ಆಲಯವಾಗಿದ್ದೀರಿ ಮತ್ತು ದೇವರ ಆತ್ಮವು * ನಿಮ್ಮಲ್ಲಿ ನೆಲೆಗೊಂಡಿದೆ ಎಂಬುದು ನಿಮಗೆ ತಿಳಿದಿಲ್ಲವೊ? 17  ಯಾವನಾದರೂ ದೇವರ ಆಲಯವನ್ನು ನಾಶಮಾಡುವುದಾದರೆ ದೇವರು ಅವನನ್ನು ನಾಶಮಾಡುವನು. ಏಕೆಂದರೆ ದೇವರ ಆಲಯವು ಪವಿತ್ರವಾದದ್ದು, ಆ ಆಲಯವು ನೀವೇ ಆಗಿದ್ದೀರಿ. 18  ಯಾವನೂ ತನ್ನನ್ನು ಮೋಸಗೊಳಿಸಿಕೊಳ್ಳದಿರಲಿ. ಯಾವನಾದರೂ ತಾನು ಈ ವಿಷಯಗಳ ವ್ಯವಸ್ಥೆಯಲ್ಲಿ ವಿವೇಕಿಯಾಗಿದ್ದೇನೆಂದು ನೆನಸುವುದಾದರೆ ಅವನು ವಿವೇಕಿಯಾಗುವುದಕ್ಕೋಸ್ಕರ ಮೂರ್ಖನಾಗಲಿ. 19  ಏಕೆಂದರೆ ಈ ಲೋಕದ ವಿವೇಕವು ದೇವರ ಮುಂದೆ ಹುಚ್ಚುತನವಾಗಿದೆ. “ಆತನು ವಿವೇಕಿಗಳನ್ನು ಅವರ ಕುತಂತ್ರದಲ್ಲಿಯೇ ಹಿಡಿಯುತ್ತಾನೆ” ಎಂದೂ 20  “ವಿವೇಕಿಗಳ ತರ್ಕಗಳು ನಿಷ್ಫಲ​ವಾದವುಗಳು ಎಂಬುದು ಯೆಹೋವನಿಗೆ ತಿಳಿದಿದೆ” ಎಂದೂ ಬರೆಯಲ್ಪಟ್ಟಿದೆ. 21  ಆದುದರಿಂದ ಯಾವನೂ ಮನುಷ್ಯರಲ್ಲಿ ಹೆಚ್ಚಳಪಡದಿರಲಿ; ಏಕೆಂದರೆ ಎಲ್ಲವೂ ನಿಮಗೆ ಸೇರಿದ್ದು. 22  ಪೌಲನಾಗಲಿ ಅಪೊಲ್ಲೋಸನಾಗಲಿ ಕೇಫನಾಗಲಿ ಲೋಕವಾಗಲಿ ಜೀವವಾಗಲಿ ಮರಣವಾಗಲಿ ಈಗಿರುವ ಸಂಗತಿಗಳಾಗಲಿ ಬರಲಿರುವ ಸಂಗತಿಗಳಾಗಲಿ ಎಲ್ಲವೂ ನಿಮಗೆ ಸೇರಿದ್ದು. 23  ಸರದಿಯಾಗಿ, ನೀವು ಕ್ರಿಸ್ತನಿಗೆ ಸೇರಿದವರಾಗಿದ್ದೀರಿ ಮತ್ತು ಕ್ರಿಸ್ತನು ದೇವರಿಗೆ ಸೇರಿದವನಾಗಿದ್ದಾನೆ.

ಪಾದಟಿಪ್ಪಣಿ

1ಕೊರಿಂ 3:⁠16  ಅಥವಾ, “ದೇವರ ಕಾರ್ಯಕಾರಿ ಶಕ್ತಿ.” ಪರಿಶಿಷ್ಟ 7 ನ್ನು ನೋಡಿ.