1 ಕೊರಿಂಥ 2:1-16

2  ಆದುದರಿಂದ ಸಹೋದರರೇ, ನಾನು ನಿಮ್ಮ ಬಳಿಗೆ ದೇವರ ಪವಿತ್ರ ರಹಸ್ಯವನ್ನು ಪ್ರಕಟಿಸಲು ಬಂದಾಗ ವಾಕ್ಚಾತುರ್ಯದಿಂದಾಗಲಿ ವಿವೇಕಾಡಂಬರ​ದಿಂದಾಗಲಿ ಬರಲಿಲ್ಲ.  ನಾನು ನಿಮ್ಮಲ್ಲಿದ್ದಾಗ, ಯೇಸು ಕ್ರಿಸ್ತನನ್ನು ಮತ್ತು ಅವನು ಶೂಲಕ್ಕೇರಿಸಲ್ಪಟ್ಟದ್ದನ್ನು ಹೊರತು ಇನ್ನಾವುದನ್ನೂ ತಿಳಿಯದಿರಲು ನಿರ್ಧರಿಸಿದೆನು.  ನಿಮ್ಮ ಬಳಿಗೆ ಬಂದಾಗ ನಾನು ಬಲಹೀನನೂ ಭಯಪಡುವವನೂ ಬಹಳ ನಡುಗುವವನೂ ಆಗಿದ್ದೆನು.  ನನ್ನ ಮಾತು ಮತ್ತು ನಾನು ಸಾರಿದ ಸುವಾರ್ತೆಯು ವಿವೇಕಾಡಂಬರದ ಒಡಂಬಡಿಸುವ ಮಾತುಗಳ ಮೇಲೆ ಅವಲಂಬಿಸಿರದೆ ಪವಿತ್ರಾತ್ಮದ * ಮತ್ತು ದೇವರ ಶಕ್ತಿಯ ಪುರಾವೆಯ ಮೇಲೆ ಅವಲಂಬಿಸಿತ್ತು.  ಇದರಿಂದಾಗಿ ನಿಮ್ಮ ನಂಬಿಕೆಯು ಮನುಷ್ಯರ ವಿವೇಕದ ಮೇಲಲ್ಲ, ದೇವರ ಶಕ್ತಿಯ ಮೇಲೆ ಅವಲಂಬಿ​ಸಿರುವಂತಾಗುವುದು.  ನಾವು ಪ್ರೌಢರ ಮಧ್ಯೆ ವಿವೇಕದ ಕುರಿತು ಮಾತಾಡುತ್ತೇವೆ; ಅದು ಈ ವಿಷಯಗಳ ವ್ಯವಸ್ಥೆಯ ವಿವೇಕವಲ್ಲ, ಈ ವಿಷಯಗಳ ವ್ಯವಸ್ಥೆಯ ಇಲ್ಲವಾಗಲಿಕ್ಕಿರುವ ಅಧಿಪತಿಗಳ ವಿವೇಕವೂ ಅಲ್ಲ.  ಆದರೆ ನಾವು ಪವಿತ್ರ ರಹಸ್ಯದಲ್ಲಿರುವ ದೇವರ ವಿವೇಕದ ಕುರಿತು ಮಾತಾಡುತ್ತೇವೆ; ಇದು ಗುಪ್ತವಾಗಿರುವ ವಿವೇಕವಾಗಿದೆ ಮತ್ತು ದೇವರು ಇದನ್ನು ನಮ್ಮ ಮಹಿಮೆಗಾಗಿ ವಿಷಯಗಳ ವ್ಯವಸ್ಥೆಗಿಂತ ಮುಂಚೆಯೇ ಪೂರ್ವನಿಶ್ಚಯಮಾಡಿದನು.  ಈ ವಿವೇಕವನ್ನು ಈ ವಿಷಯಗಳ ವ್ಯವಸ್ಥೆಯ ಅಧಿಪತಿಗಳಲ್ಲಿ ಒಬ್ಬರೂ ತಿಳಿದುಕೊಳ್ಳಲಿಲ್ಲ; ಅವರು ಅದನ್ನು ತಿಳಿದು​ಕೊಂಡಿರುತ್ತಿದ್ದರೆ ಮಹಿಮಾಭರಿತ ಕರ್ತನನ್ನು ಶೂಲಕ್ಕೇರಿಸುತ್ತಿರಲಿಲ್ಲ.  ಇದು “ದೇವರು ತನ್ನನ್ನು ಪ್ರೀತಿಸುವವರಿಗಾಗಿ ಸಿದ್ಧಪಡಿಸಿರುವ ವಿಷಯಗಳನ್ನು ಕಣ್ಣು ಕಾಣಲಿಲ್ಲ, ಕಿವಿ ಕೇಳಿಸಿಕೊಳ್ಳಲಿಲ್ಲ ಮತ್ತು ಮನುಷ್ಯನ ಹೃದಯದಲ್ಲಿ ಹುಟ್ಟಲೂ ಇಲ್ಲ” ಎಂದು ಬರೆಯಲ್ಪಟ್ಟಿರುವಂತೆಯೇ ಆಯಿತು. 10  ಆದರೆ ದೇವರು ಈ ವಿಷಯಗಳನ್ನು ತನ್ನ ಪವಿತ್ರಾತ್ಮದ ಮೂಲಕ ನಮಗೆ ಪ್ರಕಟಪಡಿಸಿದ್ದಾನೆ. ಆ ಪವಿತ್ರಾತ್ಮವು ಎಲ್ಲ ವಿಷಯಗಳನ್ನು, ದೇವರ ಅಗಾಧವಾದ ವಿಷಯಗಳನ್ನೂ ಪರಿಶೋಧಿಸುತ್ತದೆ. 11  ಒಬ್ಬ ಮನುಷ್ಯನ ಆಲೋಚನೆಗಳು ಅವನ ಮನಸ್ಸಿಗಲ್ಲದೆ ಮನುಷ್ಯರಲ್ಲಿ ಮತ್ತಾರಿಗೆ ತಿಳಿಯುವುದು? ಹಾಗೆಯೇ ದೇವರ ಆತ್ಮವು * ತಿಳಿಯಪಡಿಸಿದ ಹೊರತು ಬೇರೆ ಯಾರೂ ದೇವರ ಆಲೋಚನೆಗಳನ್ನು ತಿಳಿದುಕೊಂಡಿರುವುದಿಲ್ಲ. 12  ನಾವು ಲೋಕದ ಮನೋಭಾವವನ್ನಲ್ಲ, ದೇವರಿಂದ ಬರುವ ಆತ್ಮವನ್ನು * ಪಡೆದುಕೊಂಡಿದ್ದೇವೆ; ಹೀಗೆ ದೇವರು ನಮಗೆ ದಯೆಯಿಂದ ನೀಡಿರುವಂಥ ವಿಷಯಗಳನ್ನು ನಾವು ಅರ್ಥಮಾಡಿಕೊಳ್ಳುವಂತಾಗುವುದು. 13  ನಾವು ಈ ವಿಷಯಗಳನ್ನು ಮಾನವ ವಿವೇಕದಿಂದ ಬೋಧಿಸಲ್ಪಟ್ಟ ಮಾತುಗಳಿಂದ ವಿವರಿಸದೆ, ಪವಿತ್ರಾತ್ಮದಿಂದ ಬೋಧಿಸಲ್ಪಟ್ಟ ಆಧ್ಯಾತ್ಮಿಕ ವಿಷಯಗಳನ್ನು ಆಧ್ಯಾತ್ಮಿಕ ಮಾತುಗಳಿಂದ ವಿವರಿಸುತ್ತೇವೆ. 14  ಭೌತಿಕ ಮನುಷ್ಯನು ದೇವರಾತ್ಮದ ವಿಷಯಗಳನ್ನು ಹುಚ್ಚುಮಾತಾಗಿ ಎಣಿಸುವುದರಿಂದ ಅವುಗಳನ್ನು ಸ್ವೀಕರಿಸುವುದಿಲ್ಲ; ಅವುಗಳು ಆಧ್ಯಾತ್ಮಿಕವಾಗಿ ಪರೀಕ್ಷಿಸಲ್ಪಡುವುದರಿಂದ ಅವನು ಅವುಗಳನ್ನು ತಿಳಿದುಕೊಳ್ಳಲಾರನು. 15  ಆಧ್ಯಾತ್ಮಿಕ ಮನುಷ್ಯನಾದರೋ ಎಲ್ಲವನ್ನೂ ಪರೀಕ್ಷಿಸುತ್ತಾನೆ; ಆದರೆ ಅವನು ತಾನೇ ಯಾವ ಮನುಷ್ಯನಿಂದಲೂ ಪರೀಕ್ಷಿಸಲ್ಪಡುವುದಿಲ್ಲ. 16  “ಯೆಹೋವನಿಗೆ ಉಪದೇಶಮಾಡುವಂತೆ ಆತನ ಮನಸ್ಸನ್ನು ಯಾರು ತಿಳಿದಿರುತ್ತಾನೆ?” ನಾವಾದರೋ ಕ್ರಿಸ್ತನ ಮನಸ್ಸನ್ನು ಹೊಂದಿದ್ದೇವೆ.

ಪಾದಟಿಪ್ಪಣಿ

1ಕೊರಿಂ 2:⁠4  ಅಥವಾ, “ದೇವರ ಕಾರ್ಯಕಾರಿ ಶಕ್ತಿ.” ಪರಿಶಿಷ್ಟ 7 ನ್ನು ನೋಡಿ.
1ಕೊರಿಂ 2:⁠11  ಅಥವಾ, “ದೇವರ ಕಾರ್ಯಕಾರಿ ಶಕ್ತಿ.” ಪರಿಶಿಷ್ಟ 7 ನ್ನು ನೋಡಿ.
1ಕೊರಿಂ 2:⁠12  ಅಥವಾ, “ದೇವರ ಕಾರ್ಯಕಾರಿ ಶಕ್ತಿ.” ಪರಿಶಿಷ್ಟ 7 ನ್ನು ನೋಡಿ.