1 ಕೊರಿಂಥ 15:1-58

15  ಸಹೋದರರೇ, ನಾನು ನಿಮಗೆ ಪ್ರಕಟಿಸಿದ, ನೀವು ಅಂಗೀಕರಿಸಿದ ಮತ್ತು ನೀವು ನಿಲುವನ್ನು ತೆಗೆದುಕೊಂಡಿರುವ ಹಾಗೂ ರಕ್ಷಿಸಲ್ಪಡುತ್ತಲೂ ಇರುವ ಸುವಾರ್ತೆಯನ್ನು ನಿಮಗೆ ತಿಳಿಯಪಡಿಸುತ್ತೇನೆ.  ನಾನು ನಿಮಗೆ ಸಾರಿದ ಸುವಾರ್ತೆಯ ಮಾತನ್ನು ನೀವು ಬಿಗಿಯಾಗಿ ಹಿಡಿದುಕೊಳ್ಳಬೇಕು. ಇಲ್ಲವಾದರೆ ನೀವು ಉದ್ದೇಶರಹಿತವಾಗಿ ವಿಶ್ವಾಸಿಗಳಾದಂತಾಗುತ್ತದೆ.  ನಾನು ಕಲಿತುಕೊಂಡು ಬಳಿಕ ನಿಮಗೆ ತಿಳಿಯಪಡಿಸಿದ ವಿಷಯಗಳಲ್ಲಿ ಮೊದಲನೆಯದು ಯಾವುದೆಂದರೆ, ಶಾಸ್ತ್ರಗ್ರಂಥಕ್ಕನುಸಾರ ಕ್ರಿಸ್ತನು ನಮ್ಮ ಪಾಪಗಳಿಗಾಗಿ ಸತ್ತು  ಹೂಣಿಡಲ್ಪಟ್ಟು ಶಾಸ್ತ್ರಗ್ರಂಥಕ್ಕನುಸಾರ ಮೂರನೆಯ ದಿನದಲ್ಲಿ ಎಬ್ಬಿಸಲ್ಪಟ್ಟನು  ಮತ್ತು ಅವನು ಕೇಫನಿಗೂ ಬಳಿಕ ಹನ್ನೆರಡು ಮಂದಿಗೂ ಕಾಣಿಸಿಕೊಂಡನು.  ತರುವಾಯ ಅವನು ಒಂದು ಸಮಯದಲ್ಲಿ ಐನೂರಕ್ಕಿಂತಲೂ ಹೆಚ್ಚು ಮಂದಿ ಸಹೋದರರಿಗೆ ಕಾಣಿಸಿಕೊಂಡನು. ಅವರಲ್ಲಿ ಹೆಚ್ಚಿನವರು ಇಂದಿನ ವರೆಗೂ ಇದ್ದಾರೆ, ಆದರೆ ಕೆಲವರು ಮರಣದಲ್ಲಿ ನಿದ್ರೆ​ಹೋಗಿದ್ದಾರೆ.  ಬಳಿಕ ಅವನು ಯಾಕೋಬನಿಗೂ ಎಲ್ಲ ಅಪೊಸ್ತಲರಿಗೂ ಕಾಣಿಸಿ​ಕೊಂಡನು.  ಕೊನೆಯದಾಗಿ ದಿನತುಂಬದೆ ಹುಟ್ಟಿದವನಂತಿರುವ ನನಗೂ ಕಾಣಿಸಿ​ಕೊಂಡನು.  ನಾನು ಅಪೊಸ್ತಲರಲ್ಲಿ ಅತಿ ಕನಿಷ್ಠನು; ನಾನು ದೇವರ ಸಭೆಯವರನ್ನು ಹಿಂಸೆಪಡಿಸಿದ್ದರಿಂದ ಅಪೊಸ್ತಲನೆಂದು ಕರೆಸಿಕೊಳ್ಳಲು ಯೋಗ್ಯನಲ್ಲ. 10  ಆದರೆ ನಾನು ಎಂಥವನಾಗಿದ್ದೇನೋ ಅದು ದೇವರ ಅಪಾತ್ರ ದಯೆಯಿಂದಲೇ ಆಗಿದೆ. ನನಗೆ ಆತನು ತೋರಿಸಿದ ಅಪಾತ್ರ ದಯೆಯು ವ್ಯರ್ಥ​ವಾಗಲಿಲ್ಲ; ನಾನು ಅವರೆಲ್ಲರಿಗಿಂತಲೂ ಹೆಚ್ಚಾಗಿ ಪ್ರಯಾಸಪಟ್ಟೆನು. ಪ್ರಯಾಸಪಟ್ಟವನು ನಾನಲ್ಲ, ನನ್ನೊಂದಿಗಿರುವ ದೇವರ ಅಪಾತ್ರ ದಯೆಯೇ ಆಗಿದೆ. 11  ಆದರೂ ನಾನಾದರೇನು, ಅವರಾದರೇನು, ನಾವು ಹಾಗೆಯೇ ಸಾರುತ್ತಿದ್ದೇವೆ ಮತ್ತು ನೀವು ಹಾಗೆಯೇ ನಂಬಿದ್ದೀರಿ. 12  ಕ್ರಿಸ್ತನು ಸತ್ತವರೊಳಗಿಂದ ಎಬ್ಬಿಸಲ್ಪಟ್ಟಿದ್ದಾನೆಂದು ಸಾರಲ್ಪಡುತ್ತಿರುವಾಗ ನಿಮ್ಮಲ್ಲಿ ಕೆಲವರು ಸತ್ತವರಿಗೆ ಪುನರುತ್ಥಾನವೇ ಇಲ್ಲ ಎಂದು ಹೇಳುವುದು ಹೇಗೆ? 13  ಸತ್ತವರಿಗೆ ಪುನರುತ್ಥಾನವೇ ಇಲ್ಲವಾದರೆ ಕ್ರಿಸ್ತನು ಸಹ ಎಬ್ಬಿಸಲ್ಪಡಲಿಲ್ಲ. 14  ಕ್ರಿಸ್ತನು ಎಬ್ಬಿಸಲ್ಪಟ್ಟಿಲ್ಲವಾದರೆ ನಮ್ಮ ಸಾರುವಿಕೆಯೂ ವ್ಯರ್ಥ, ನಮ್ಮ ನಂಬಿಕೆಯೂ ವ್ಯರ್ಥ. 15  ಮಾತ್ರವಲ್ಲದೆ, ಸತ್ತವರು ಎಬ್ಬಿಸಲ್ಪಡುವುದಿಲ್ಲವೆಂಬುದು ನಿಜವಾಗಿದ್ದರೆ, ದೇವರು ಕ್ರಿಸ್ತನನ್ನು ಎಬ್ಬಿಸಲಿಲ್ಲ; ಆದರೆ ಅವನನ್ನು ಎಬ್ಬಿಸಿದನೆಂದು ನಾವು ದೇವರ ವಿರುದ್ಧ ಸಾಕ್ಷಿ ಹೇಳಿರುವುದರಿಂದ ನಾವು ದೇವರ ಸುಳ್ಳು ಸಾಕ್ಷಿಗಳಾಗಿಯೂ ಕಂಡುಬರುವೆವು. 16  ಸತ್ತವರು ಎಬ್ಬಿಸಲ್ಪಡುವುದಿಲ್ಲವಾದರೆ ಕ್ರಿಸ್ತನೂ ಎಬ್ಬಿಸಲ್ಪಟ್ಟಿಲ್ಲ. 17  ಮಾತ್ರವಲ್ಲದೆ, ಕ್ರಿಸ್ತನು ಎಬ್ಬಿಸಲ್ಪಟ್ಟಿಲ್ಲವಾದರೆ ನಿಮ್ಮ ನಂಬಿಕೆಯೂ ನಿಷ್ಪ್ರಯೋಜಕವಾಗಿದೆ; ನೀವು ಇನ್ನೂ ನಿಮ್ಮ ಪಾಪಗಳಲ್ಲಿಯೇ ಇದ್ದೀರಿ. 18  ಇದಲ್ಲದೆ, ಕ್ರಿಸ್ತನೊಂದಿಗೆ ಐಕ್ಯದಲ್ಲಿ ಮರಣದಲ್ಲಿ ನಿದ್ರೆಹೋದವರು ಸಹ ನಾಶವಾದರು. 19  ನಾವು ಈ ಜೀವಿತದಲ್ಲಿ ಮಾತ್ರ ಕ್ರಿಸ್ತನಲ್ಲಿ ನಿರೀಕ್ಷೆಯಿಟ್ಟಿರುವುದಾದರೆ ಎಲ್ಲ ಜನರಲ್ಲಿ ನಾವು ಹೆಚ್ಚು ಶೋಚನೀಯ ಸ್ಥಿತಿಯಲ್ಲಿರುವವರೇ ಸರಿ. 20  ಆದರೆ ಈಗ ಕ್ರಿಸ್ತನು ಸತ್ತವರೊಳಗಿಂದ ಎಬ್ಬಿಸಲ್ಪಟ್ಟಿದ್ದಾನೆ; ಮರಣದಲ್ಲಿ ನಿದ್ರೆಹೋದವರಲ್ಲಿ ಪ್ರಥಮಫಲವಾಗಿದ್ದಾನೆ. 21  ಒಬ್ಬ ಮನುಷ್ಯನ ಮೂಲಕ ​ಮರಣವು ಬಂದಂತೆಯೇ ಸತ್ತವರ ಪುನರುತ್ಥಾನವೂ ಒಬ್ಬ ಮನುಷ್ಯನಿಂದಲೇ ಆಗುತ್ತದೆ. 22  ಆದಾಮನಿಂದಾಗಿ ಎಲ್ಲರೂ ಸಾಯುತ್ತಿರುವಂತೆಯೇ ಕ್ರಿಸ್ತನಿಂದಾಗಿ ಎಲ್ಲರೂ ​ಜೀವಿತರಾಗುವರು. 23  ಆದರೆ ಪ್ರತಿಯೊಬ್ಬನು ತನ್ನ ಸ್ವಂತ ದರ್ಜೆಯಲ್ಲಿ ಎಬ್ಬಿಸಲ್ಪಡುವನು: ಕ್ರಿಸ್ತನು ಪ್ರಥಮಫಲ, ಅನಂತರ ಕ್ರಿಸ್ತನ ಸಾನ್ನಿಧ್ಯದ ಸಮಯದಲ್ಲಿ ಅವನಿಗೆ ಸೇರಿದವರು ಎಬ್ಬಿಸಲ್ಪಡುವರು. 24  ಆಮೇಲೆ ಅವನು ಎಲ್ಲ ಆಧಿಪತ್ಯವನ್ನೂ ಎಲ್ಲ ಅಧಿಕಾರವನ್ನೂ ಶಕ್ತಿಯನ್ನೂ ನಿರ್ಮೂಲಮಾಡಿದ ಮೇಲೆ ತನ್ನ ದೇವರೂ ತಂದೆಯೂ ಆಗಿರುವಾತನಿಗೆ ರಾಜ್ಯವನ್ನು ಒಪ್ಪಿಸಿಕೊಡುವಾಗ ಸಮಾಪ್ತಿ. 25  ಏಕೆಂದರೆ ದೇವರು ಎಲ್ಲ ವೈರಿಗಳನ್ನು ಅವನ ಪಾದಗಳ ಕೆಳಗೆ ಹಾಕುವ ತನಕ ಅವನು ಅರಸನಾಗಿ ಆಳುವುದು ಆವಶ್ಯಕ. 26  ಕೊನೆಯ ಶತ್ರುವಾಗಿ ಮರಣವು ನಿರ್ಮೂಲಮಾಡಲ್ಪಡಬೇಕು. 27  ದೇವರು “ಎಲ್ಲವನ್ನೂ ಅವನ ಪಾದಗಳ ಕೆಳಗೆ ಹಾಕಿ ಅವನಿಗೆ ಅಧೀನಮಾಡಿದನು.” ಆದರೆ ‘ಎಲ್ಲವೂ ಅಧೀನ​ಮಾಡಲ್ಪಟ್ಟಿದೆ’ ಎಂದು ಹೇಳುವಾಗ, ಎಲ್ಲವನ್ನೂ ಅವನಿಗೆ ಅಧೀನಮಾಡಿಕೊಟ್ಟಾತನು ಅದರಲ್ಲಿ ಸೇರಿಲ್ಲವೆಂಬುದು ಸ್ಪಷ್ಟವಾಗಿದೆ. 28  ಆದರೆ ಎಲ್ಲವೂ ಅವನಿಗೆ ಅಧೀನ​ಮಾಡಲ್ಪಟ್ಟ ಬಳಿಕ ಮಗನು ಎಲ್ಲವನ್ನೂ ತನಗೆ ಅಧೀನಮಾಡಿಕೊಟ್ಟಾತನಿಗೆ ತಾನೇ ಅಧೀನ​ನಾಗುವನು; ಹೀಗೆ ದೇವರು ಎಲ್ಲರಿಗೂ ಎಲ್ಲವೂ ಆಗುವನು. 29  ಇಲ್ಲವಾದರೆ, ಸತ್ತವರಾಗುವ ಉದ್ದೇಶ​ದಿಂದ ದೀಕ್ಷಾಸ್ನಾನ ಪಡೆದುಕೊಳ್ಳುತ್ತಿರುವವರು ಏನು ಮಾಡುವರು? ಸತ್ತವರು ಎಂದಿಗೂ ಎಬ್ಬಿಸಲ್ಪಡುವುದಿಲ್ಲವಾದರೆ ಅವರು ಸತ್ತವರಾಗಬೇಕೆಂಬ ಉದ್ದೇಶಕ್ಕಾಗಿ ಏಕೆ ದೀಕ್ಷಾಸ್ನಾನ ಪಡೆದುಕೊಳ್ಳುತ್ತಿದ್ದಾರೆ? 30  ನಾವು ಸಹ ಪ್ರತಿ ಗಳಿಗೆಯಲ್ಲೂ ಅಪಾಯದಲ್ಲಿರುವುದೇಕೆ? 31  ಪ್ರತಿದಿನವೂ ನಾನು ಮರಣವನ್ನು ಎದುರಿಸುತ್ತೇನೆ. ಸಹೋದರರೇ, ನಮ್ಮ ಕರ್ತನಾದ ಕ್ರಿಸ್ತ ಯೇಸುವಿನಲ್ಲಿ ನಿಮ್ಮ ವಿಷಯದಲ್ಲಿ ನನಗಿರುವ ಹೆಚ್ಚಳದಿಂದ ಇದನ್ನು ದೃಢೀಕರಿಸುತ್ತೇನೆ. 32  ನಾನು ಜನರಂತೆ ಎಫೆಸದಲ್ಲಿ ಕಾಡುಮೃಗಗಳೊಂದಿಗೆ ಹೋರಾಡಿದ್ದೇನಾದರೆ ಅದರಿಂದ ನನಗೇನು ಪ್ರಯೋಜನ? ಸತ್ತವರು ಎಬ್ಬಿಸಲ್ಪಡುವುದಿಲ್ಲವಾದರೆ, “ನಾವು ತಿನ್ನೋಣ, ಕುಡಿಯೋಣ, ನಾಳೆ ಸಾಯುತ್ತೇವಲ್ಲ.” 33  ಮೋಸಹೋಗಬೇಡಿರಿ. ದುಸ್ಸಹವಾಸಗಳು ಸದಾಚಾರಗಳನ್ನು ಕೆಡಿಸುತ್ತವೆ. 34  ನೀತಿಗನುಸಾರ ಅಮಲಿನಿಂದ ಎಚ್ಚತ್ತುಕೊಳ್ಳಿರಿ; ಪಾಪವನ್ನು ಪರಿಪಾಠಮಾಡಬೇಡಿ. ಏಕೆಂದರೆ ಕೆಲವರು ದೇವರ ಜ್ಞಾನವಿಲ್ಲದೆ ಇದ್ದಾರೆ. ನಾನು ನಿಮಗೆ ನಾಚಿಕೆ​ಹುಟ್ಟಿಸಲಿಕ್ಕಾಗಿ ಇದನ್ನು ಹೇಳು​ತ್ತಿದ್ದೇನೆ. 35  ಆದರೂ “ಸತ್ತವರು ಹೇಗೆ ಎಬ್ಬಿಸಲ್ಪಡುತ್ತಾರೆ? ಯಾವ ರೀತಿಯ ದೇಹದೊಂದಿಗೆ ಅವರು ಬರುತ್ತಾರೆ?” ಎಂದು ಯಾರಾದರೂ ಕೇಳುವರು. 36  ವಿವೇಚನೆ​ಯಿಲ್ಲದವನು ನೀನು! ನೀನು ಬಿತ್ತಿದ್ದು ಮೊದಲು ಸಾಯದಿದ್ದರೆ ಅದು ಜೀವಂತ​ವಾಗುವುದಿಲ್ಲ. 37  ನೀನು ಒಂದುವೇಳೆ ಗೋಧಿಯನ್ನು ಅಥವಾ ಬೇರೆ ಯಾವುದೇ ಬೀಜವನ್ನು ಬಿತ್ತುವಾಗ, ಮುಂದೆ ಬೆಳೆಯುವಂಥ ದೇಹವನ್ನಲ್ಲ ಬರೀ ಕಾಳನ್ನು ಬಿತ್ತುತ್ತೀ. 38  ಆದರೆ ದೇವರು ತನಗೆ ಇಷ್ಟವಾದ ದೇಹವನ್ನು ಅದಕ್ಕೆ ಕೊಡುತ್ತಾನೆ ಮತ್ತು ಪ್ರತಿಯೊಂದು ಬೀಜಕ್ಕೆ ಅದರದ್ದೇ ಆದ ದೇಹವನ್ನು ಕೊಡುತ್ತಾನೆ. 39  ಎಲ್ಲ ಶರೀರಗಳು ಒಂದೇ ರೀತಿಯ ಶರೀರ​ವಾಗಿರುವುದಿಲ್ಲ; ಮನುಷ್ಯನ ಶರೀರ ಬೇರೆ, ಪಶುಗಳ ಶರೀರ ಬೇರೆ, ಪಕ್ಷಿಗಳ ಶರೀರ ಬೇರೆ, ಮೀನಿನ ಶರೀರವೇ ಬೇರೆ. 40  ಇದಲ್ಲದೆ ಸ್ವರ್ಗದ ದೇಹಗಳುಂಟು ಮತ್ತು ಭೂಮಿಯ ದೇಹಗಳುಂಟು; ಸ್ವರ್ಗದ ದೇಹಗಳ ಮಹಿಮೆಯೇ ಬೇರೆ, ಭೂಮಿಯ ದೇಹಗಳ ಮಹಿಮೆಯೇ ಬೇರೆ. 41  ಸೂರ್ಯನ ಮಹಿಮೆಯು ಒಂದು ವಿಧ, ಚಂದ್ರನ ಮಹಿಮೆ ಇನ್ನೊಂದು ವಿಧ ಮತ್ತು ನಕ್ಷತ್ರಗಳ ಮಹಿಮೆ ಮತ್ತೊಂದು ವಿಧ; ವಾಸ್ತವದಲ್ಲಿ ಒಂದು ನಕ್ಷತ್ರವು ಇನ್ನೊಂದು ನಕ್ಷತ್ರಕ್ಕಿಂತ ಮಹಿಮೆಯಲ್ಲಿ ಭಿನ್ನವಾಗಿದೆ. 42  ಸತ್ತವರ ಪುನರುತ್ಥಾನವೂ ಹೀಗೆಯೇ ಇರುತ್ತದೆ. ದೇಹವು ಲಯಾವಸ್ಥೆಯಲ್ಲಿ ಬಿತ್ತಲ್ಪಡುತ್ತದೆ, ನಿರ್ಲಯಾವಸ್ಥೆಯಲ್ಲಿ ಎಬ್ಬಿಸಲ್ಪಡುತ್ತದೆ. 43  ಅದು ಹೀನಾವಸ್ಥೆಯಲ್ಲಿ ಬಿತ್ತಲ್ಪಡುತ್ತದೆ, ಮಹಿಮೆ​ಯಲ್ಲಿ ಎಬ್ಬಿಸಲ್ಪಡುತ್ತದೆ. ನಿರ್ಬಲಾವಸ್ಥೆಯಲ್ಲಿ ಬಿತ್ತಲ್ಪಡುತ್ತದೆ, ಬಲಾವಸ್ಥೆಯಲ್ಲಿ ಎಬ್ಬಿಸಲ್ಪಡುತ್ತದೆ. 44  ಶಾರೀರಿಕ ದೇಹವಾಗಿ ಬಿತ್ತಲ್ಪಡುತ್ತದೆ, ಆತ್ಮಿಕ ದೇಹವಾಗಿ ಎಬ್ಬಿಸಲ್ಪಡುತ್ತದೆ. ಶಾರೀರಿಕ ದೇಹವಿರುವುದಾದರೆ ಆತ್ಮಿಕ ದೇಹವೂ ಇರುವುದು. 45  “ಮೊದಲನೆಯ ಮಾನವನಾದ ಆದಾಮನು ಜೀವಿಸುವ ಪ್ರಾಣವಾದನು” ಎಂದು ಬರೆಯಲ್ಪಟ್ಟಿದೆ. ಕೊನೆಯ ಆದಾಮ​ನಾದರೋ ಜೀವ ಕೊಡುವ ಆತ್ಮಜೀವಿಯಾದನು. 46  ಮೊದಲನೆಯದ್ದು ಆತ್ಮಿಕವಾದದ್ದಲ್ಲ, ಶಾರೀರಿಕವಾದದ್ದು; ತದನಂತರದ್ದು ಆತ್ಮಿಕವಾದದ್ದು. 47  ಮೊದಲನೆಯ ಮನುಷ್ಯನು ಭೂಮಿಯಿಂದ ​ಬಂದವನಾಗಿ ಮಣ್ಣಿನಿಂದ ಮಾಡಲ್ಪಟ್ಟವನು; ಎರಡನೆಯ ಮನುಷ್ಯನು ಸ್ವರ್ಗದಿಂದ ಬಂದವನು. 48  ಮಣ್ಣಿನಿಂದ ಮಾಡಲ್ಪಟ್ಟವನು ಎಂಥವನೋ ಮಣ್ಣಿನಿಂದ ಮಾಡಲ್ಪಟ್ಟ ಇತರರೂ ಅಂಥವರೇ; ಸ್ವರ್ಗ​ದಿಂದ ಬಂದವನು ಎಂಥವನೋ ಸ್ವರ್ಗಕ್ಕೆ ಸಂಬಂಧಪಟ್ಟವರೂ ಅಂಥವರೇ. 49  ನಾವು ಮಣ್ಣಿನಿಂದ ಮಾಡಲ್ಪಟ್ಟವನ ಸ್ವರೂಪವನ್ನು ಧರಿಸಿಕೊಂಡಿರುವಂತೆಯೇ ಸ್ವರ್ಗೀಯ ವ್ಯಕ್ತಿಯ ಸ್ವರೂಪವನ್ನೂ ಧರಿಸಿಕೊಳ್ಳುವೆವು. 50  ಹಾಗಿದ್ದರೂ ಸಹೋದರರೇ ನಾನು ಹೇಳುವುದೇನೆಂದರೆ, ಮಾಂಸವೂ ರಕ್ತವೂ ದೇವರ ರಾಜ್ಯಕ್ಕೆ ಬಾಧ್ಯವಾಗಲಾರದು; ಲಯಾವಸ್ಥೆಯು ನಿರ್ಲಯಾವಸ್ಥೆಗೆ ಬಾಧ್ಯವಾಗಲಾರದು. 51  ಇಗೋ, ನಾನು ನಿಮಗೆ ಒಂದು ಪವಿತ್ರ ರಹಸ್ಯವನ್ನು ಹೇಳುತ್ತೇನೆ: ನಾವೆಲ್ಲರೂ ಮರಣದಲ್ಲಿ ನಿದ್ರೆಹೋಗುವುದಿಲ್ಲ. 52  ಆದರೆ ಕೊನೆಯ ತುತೂರಿಯು ಊದಲ್ಪಡುವಾಗ ನಾವೆಲ್ಲರೂ ಒಂದೇ ಕ್ಷಣದಲ್ಲಿ, ಕಣ್ಣುರೆಪ್ಪೆ ಬಡಿಯುವಷ್ಟರೊಳಗೆ ಮಾರ್ಪಡುವೆವು. ತುತೂರಿಯು ಊದಲ್ಪಡುವುದು, ಆಗ ಸತ್ತವರು ನಿರ್ಲಯಾವಸ್ಥೆಯಲ್ಲಿ ಎಬ್ಬಿಸಲ್ಪಡುವರು ಮತ್ತು ನಾವು ಮಾರ್ಪಡುವೆವು. 53  ಲಯವಾಗುವ ಈ ದೇಹವು ನಿರ್ಲಯತ್ವವನ್ನು ಧರಿಸಿಕೊಳ್ಳಬೇಕು ಮತ್ತು ಮರಣಾಧೀನವಾಗಿರುವ ಈ ದೇಹವು ಅಮರತ್ವವನ್ನು ಧರಿಸಿಕೊಳ್ಳಬೇಕು. 54  ಲಯವಾಗುವ ಈ ದೇಹವು ನಿರ್ಲಯತ್ವವನ್ನು ಧರಿಸಿ​ಕೊಂಡಾಗ ಮತ್ತು ಮರಣಾಧೀನವಾಗಿರುವ ಈ ದೇಹವು ಅಮರತ್ವವನ್ನು ಧರಿಸಿ​ಕೊಂಡಾಗ ಬರೆದಿರುವ ಮಾತು ನೆರವೇರುವುದು. ಅದೇನೆಂದರೆ, “ಮರಣವು ನಿತ್ಯಕ್ಕೂ ನುಂಗಲ್ಪಟ್ಟಿತು” ಎಂಬುದೇ. 55  ​“ಮರಣವೇ, ನಿನ್ನ ಜಯವೆಲ್ಲಿ? ಮರಣವೇ, ನಿನ್ನ ಕೊಂಡಿ ಎಲ್ಲಿ?” 56  ಮರಣವನ್ನು ಉಂಟು​ಮಾಡುವ ಕೊಂಡಿಯು ಪಾಪವಾಗಿದೆ, ಆದರೆ ಪಾಪಕ್ಕೆ ಬಲವು ಧರ್ಮಶಾಸ್ತ್ರವೇ. 57  ಹಾಗಿದ್ದರೂ ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ ದೇವರು ನಮಗೆ ಜಯವನ್ನು ಕೊಡುವುದರಿಂದ ಆತನಿಗೆ ಕೃತಜ್ಞತೆ! 58  ಆದುದರಿಂದ ನನ್ನ ಪ್ರಿಯ ಸಹೋದರರೇ, ಸ್ಥಿರಚಿತ್ತರಾಗಿಯೂ ನಿಶ್ಚಲ​ರಾಗಿಯೂ ಇರಿ. ನೀವು ಕರ್ತನ ಸಂಬಂಧದಲ್ಲಿ ಪಡುವ ಪ್ರಯಾಸವು ವ್ಯರ್ಥವಾಗುವುದಿಲ್ಲ ಎಂದು ತಿಳಿದವರಾಗಿದ್ದು ಕರ್ತನ ಕೆಲಸವನ್ನು ಯಾವಾಗಲೂ ಹೇರಳವಾಗಿ ಮಾಡುವವರಾಗಿರಿ.

ಪಾದಟಿಪ್ಪಣಿ