1 ಕೊರಿಂಥ 14:1-40

14  ಪ್ರೀತಿಯನ್ನು ಬೆನ್ನ​ಟ್ಟಿರಿ; ಆದರೂ ಆಧ್ಯಾತ್ಮಿಕ ವರಗಳನ್ನು, ವಿಶೇಷವಾಗಿ ಪ್ರವಾದಿಸುವ ವರವನ್ನು ಹುರುಪಿನಿಂದ ಹುಡುಕುತ್ತಾ ಇರಿ.  ಬೇರೊಂದು ಭಾಷೆಯಲ್ಲಿ ಮಾತಾಡುವವನು ಪವಿತ್ರಾತ್ಮದ ಮೂಲಕ ಪವಿತ್ರ ರಹಸ್ಯಗಳನ್ನು ಮಾತಾಡುವುದರಿಂದ ಮನುಷ್ಯರೊಂದಿಗಲ್ಲ ದೇವರೊಂದಿಗೆ ಮಾತಾಡುತ್ತಾನೆ; ಯಾರೂ ಅದನ್ನು ಕೇಳಿಸಿ​ಕೊಳ್ಳುವುದಿಲ್ಲ. 3   ಆದರೆ ​ಪ್ರವಾದಿಸುವವನು ತನ್ನ ಮಾತಿನ ಮೂಲಕ ಜನರಿಗೆ ಭಕ್ತಿವೃದ್ಧಿಯನ್ನೂ ಪ್ರೋತ್ಸಾಹವನ್ನೂ ಸಾಂತ್ವನ​ವನ್ನೂ ಕೊಡುತ್ತಾನೆ.  ಬೇರೊಂದು ಭಾಷೆಯಲ್ಲಿ ಮಾತಾಡುವವನು ತನಗೆ ಮಾತ್ರ ಭಕ್ತಿವೃದ್ಧಿಮಾಡಿಕೊಳ್ಳುತ್ತಾನೆ, ಆದರೆ ಪ್ರವಾದಿಸುವವನು ಸಭೆಯ ಭಕ್ತಿವೃದ್ಧಿಮಾಡುತ್ತಾನೆ.  ನೀವೆಲ್ಲರೂ ವಿವಿಧ ಭಾಷೆಗಳಲ್ಲಿ ಮಾತಾಡಬೇಕೆಂದು ನಾನು ಬಯಸುತ್ತೇನೆ, ಆದರೆ ಅದಕ್ಕಿಂತಲೂ ಹೆಚ್ಚಾಗಿ ನೀವು ಪ್ರವಾದಿಸಬೇಕೆಂಬುದು ನನ್ನ ಇಷ್ಟ. ವಿವಿಧ ಭಾಷೆಗಳಲ್ಲಿ ಮಾತಾಡುವವನು ಸಭೆಯು ಭಕ್ತಿವೃದ್ಧಿಹೊಂದುವಂತೆ ತನ್ನ ಮಾತುಗಳನ್ನು ಭಾಷಾಂತರಿಸದೇ ಇದ್ದರೆ ಅವನಿಗಿಂತ ಪ್ರವಾದಿಸುವವನೇ ಮೇಲು.  ಆದರೆ ಸಹೋದರರೇ, ಈ ಸಮಯದಲ್ಲಿ ನಾನು ನಿಮ್ಮ ಬಳಿಗೆ ಬಂದು ಪ್ರಕಟನೆಯಿಂದಾಗಲಿ ಜ್ಞಾನದಿಂದಾಗಲಿ ಪ್ರವಾದನೆಯಿಂದಾಗಲಿ ಬೋಧನೆಯಿಂದಾಗಲಿ ಮಾತಾಡದೆ ವಿವಿಧ ಭಾಷೆಗಳಲ್ಲಿ ಮಾತ್ರ ಮಾತಾಡುವವನಾಗಿರುವುದಾದರೆ ಆಗ ನನ್ನಿಂದ ನಿಮಗೇನು ಪ್ರಯೋಜನ?  ಕೊಳಲು ಕಿನ್ನರಿ ಮುಂತಾದ ನಿರ್ಜೀವ ವಾದ್ಯಗಳ ಸ್ವರಗಳಲ್ಲಿ ಯಾವ ವ್ಯತ್ಯಾಸವೂ ಕಂಡುಬರದಿದ್ದರೆ ಕೊಳಲಿನಲ್ಲಾಗಲಿ ಕಿನ್ನರಿಯಲ್ಲಾಗಲಿ ಏನು ನುಡಿಸಲ್ಪಡುತ್ತಿದೆ ಎಂದು ತಿಳಿಯುವುದು ಹೇಗೆ?  ತುತೂರಿಯು ಅಸ್ಪಷ್ಟವಾದ ಕರೆಯನ್ನು ಕೊಟ್ಟರೆ ಯುದ್ಧಕ್ಕೆ ಯಾರು ತಾನೇ ಸಿದ್ಧರಾಗುವರು?  ಅದೇ ರೀತಿಯಲ್ಲಿ ನೀವು ಜನರಿಗೆ ಸುಲಭವಾಗಿ ಅರ್ಥವಾಗುವ ಭಾಷೆಯಲ್ಲಿ ಮಾತಾಡದೇ ಹೋದರೆ ಮಾತಾಡಿದ್ದು ಏನೆಂದು ಹೇಗೆ ಗೊತ್ತಾಗುವುದು? ವಾಸ್ತವದಲ್ಲಿ ನೀವು ಗಾಳಿಯ ಸಂಗಡ ಮಾತಾಡುತ್ತಿರುವಿರಿ. 10  ಲೋಕದಲ್ಲಿ ಅನೇಕ ರೀತಿಯ ಭಾಷಾನಾದಗಳು ಇರಬಹುದಾದರೂ ಯಾವುದೂ ಅರ್ಥವಿಲ್ಲದ್ದಾಗಿರುವುದಿಲ್ಲ. 11  ಒಂದುವೇಳೆ ಮಾತಾಡಲ್ಪಡುವ ನಾದದ ಶಕ್ತಿ ನನಗೆ ಅರ್ಥವಾಗದಿರುವುದಾದರೆ, ಮಾತಾಡುವವನಿಗೆ ನಾನು ವಿದೇಶಿಯಂತಿರುವೆನು ಮತ್ತು ಮಾತಾಡುವವನು ನನಗೆ ವಿದೇಶಿಯಂತಿರುವನು. 12  ಅದೇ ರೀತಿಯಲ್ಲಿ ನೀವು ಸಹ ಪವಿತ್ರಾತ್ಮದ ವರಗಳನ್ನು ಹುರುಪಿನಿಂದ ಆಶಿಸುವವರಾಗಿರುವುದರಿಂದ ಸಭೆಯ ಭಕ್ತಿವೃದ್ಧಿಗಾಗಿ ಅವುಗಳಲ್ಲಿ ಸಮೃದ್ಧರಾಗಿರಲು ಪ್ರಯತ್ನಿಸಿರಿ. 13  ಆದುದರಿಂದ ಬೇರೊಂದು ಭಾಷೆಯಲ್ಲಿ ಮಾತಾಡುವವನು ತಾನು ಆ ಮಾತುಗಳನ್ನು ಭಾಷಾಂತರಿಸಲು ಶಕ್ತನಾಗುವಂತೆ ಪ್ರಾರ್ಥಿಸಲಿ. 14  ನಾನು ಬೇರೊಂದು ಭಾಷೆಯಲ್ಲಿ ಪ್ರಾರ್ಥಿಸುವುದಾದರೆ, ನನಗೆ ನೀಡಲ್ಪಟ್ಟಿರುವ ಪವಿತ್ರಾತ್ಮದ ವರವೇ ಪ್ರಾರ್ಥಿಸುತ್ತಿರುವುದು; ಆದರೆ ನನ್ನ ಮನಸ್ಸು ನಿಷ್ಫಲವಾಗಿದೆ. 15  ಹಾಗಾದರೆ ಏನು ಮಾಡಬೇಕು? ನಾನು ಪವಿತ್ರಾತ್ಮದ ವರದಿಂದ ಪ್ರಾರ್ಥಿಸುವೆನು, ಆದರೆ ಅದೇ ಸಮಯದಲ್ಲಿ ನನ್ನ ಮನಸ್ಸಿನಿಂದಲೂ ಪ್ರಾರ್ಥಿಸುವೆನು. ನಾನು ಪವಿತ್ರಾತ್ಮದ ವರದಿಂದ ಸ್ತುತಿಗೀತೆ ಹಾಡುವೆನು, ಆದರೆ ಅದೇ ಸಮಯದಲ್ಲಿ ನನ್ನ ಮನಸ್ಸಿನಿಂದಲೂ ಸ್ತುತಿಗೀತೆ ಹಾಡುವೆನು. 16  ನೀನು ಪವಿತ್ರಾತ್ಮದ ವರದಿಂದ ಸ್ತುತಿಯನ್ನು ಸಲ್ಲಿಸುವುದಾದರೆ ಸಾಮಾನ್ಯ ವ್ಯಕ್ತಿಯ ಸ್ಥಾನದಲ್ಲಿರುವವನಿಗೆ ನೀನು ಏನು ಹೇಳುತ್ತೀ ಎಂಬುದು ತಿಳಿಯದಿರುವುದರಿಂದ ನೀನು ಸಲ್ಲಿಸುತ್ತಿರುವ ಕೃತಜ್ಞತಾಸ್ತುತಿಗೆ ಅವನು “ಆಮೆನ್‌” ಎಂದು ಹೇಗೆ ಹೇಳುವನು? 17  ನೀನು ಉತ್ತಮವಾದ ರೀತಿಯಲ್ಲೇ ಕೃತಜ್ಞತೆ ಸಲ್ಲಿಸಿದ್ದೀ ಎಂಬುದು ನಿಜ. ಆದರೆ ಮತ್ತೊಬ್ಬನು ಅದರಿಂದ ಭಕ್ತಿವೃದ್ಧಿಹೊಂದ​ಲಿಲ್ಲ. 18  ನಿಮ್ಮೆಲ್ಲರಿಗಿಂತಲೂ ಹೆಚ್ಚು ಭಾಷೆಗಳಲ್ಲಿ ನಾನು ಮಾತಾಡುತ್ತೇನೆ ಎಂಬುದಕ್ಕಾಗಿ ದೇವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. 19  ಆದರೆ ಸಭೆಯಲ್ಲಿ ಬೇರೊಂದು ಭಾಷೆಯಲ್ಲಿ ಹತ್ತು ಸಾವಿರ ಮಾತುಗಳನ್ನು ಆಡುವ ಬದಲು ನನ್ನ ಮನಸ್ಸಿನಿಂದ ಕೇವಲ ಐದು ಮಾತುಗಳನ್ನು ಆಡಿ ಇತರರಿಗೆ ಮೌಖಿಕವಾಗಿ ಉಪದೇಶಮಾಡಲು ನಾನು ಬಯಸುತ್ತೇನೆ. 20  ಸಹೋದರರೇ, ತಿಳಿವಳಿಕೆಯ ಸಾಮರ್ಥ್ಯದಲ್ಲಿ ಬಾಲಕರಾಗಿರಬೇಡಿರಿ, ಆದರೆ ಕೆಟ್ಟತನದ ವಿಷಯದಲ್ಲಿ ಶಿಶು​ಗಳಾಗಿಯೂ ತಿಳಿವಳಿಕೆಯ ಸಾಮರ್ಥ್ಯದಲ್ಲಿ ಪೂರ್ಣ ಬೆಳೆದವರೂ ಆಗಿರಿ. 21  “ ‘ಈ ಜನರ ಸಂಗಡ ವಿದೇಶಿಗಳ ಭಾಷೆಗಳಲ್ಲಿಯೂ ಅಪರಿಚಿತರ ತುಟಿಗಳಿಂದಲೂ ಮಾತಾಡುವೆನು, ಆದರೂ ಅವರು ನನಗೆ ಕಿವಿಗೊಡುವುದಿಲ್ಲ’ ಎಂದು ಯೆಹೋವನು ಹೇಳುತ್ತಾನೆ” ಎಂದು ಧರ್ಮಶಾಸ್ತ್ರದಲ್ಲಿ ಬರೆದಿದೆ. 22  ವಿವಿಧ ಭಾಷೆಗಳನ್ನಾಡುವ ವರವು ವಿಶ್ವಾಸಿಗಳಿಗಲ್ಲ, ಅವಿಶ್ವಾಸಿಗಳಿಗೆ ಒಂದು ಸೂಚನೆಯಾಗಿದೆ; ಆದರೆ ಪ್ರವಾದಿಸುವುದು ಅವಿಶ್ವಾಸಿಗಳಿಗಲ್ಲ ವಿಶ್ವಾಸಿಗಳಿಗಾಗಿದೆ. 23  ಆದುದರಿಂದ ಒಂದುವೇಳೆ ಇಡೀ ಸಭೆಯು ಒಂದೇ ಸ್ಥಳದಲ್ಲಿ ಕೂಡಿಬಂದಿದ್ದು ಎಲ್ಲರೂ ವಿವಿಧ ಭಾಷೆ​ಗಳಲ್ಲಿ ಮಾತಾಡುವುದಾದರೆ ಸಾಮಾನ್ಯ ಜನರು ಅಥವಾ ಅವಿಶ್ವಾಸಿಗಳು ಅಲ್ಲಿಗೆ ಬಂದಾಗ ನಿಮಗೆ ಹುಚ್ಚುಹಿಡಿದಿದೆ ಎಂದು ಹೇಳುವುದಿಲ್ಲವೆ? 24  ಆದರೆ ನೀವೆಲ್ಲರೂ ಪ್ರವಾದಿಸುತ್ತಿರುವಾಗ ಅವಿಶ್ವಾಸಿಯಾಗಲಿ ಸಾಮಾನ್ಯ ಮನುಷ್ಯನಾಗಲಿ ಅಲ್ಲಿಗೆ ಬಂದರೆ ನಿಮ್ಮೆಲ್ಲರ ಮಾತುಗಳು ಅವನಿಗೆ ಗದರಿಕೆಗಳಾಗಿರುವವು ಮತ್ತು ತನ್ನನ್ನು ನಿಕಟವಾಗಿ ಪರೀಕ್ಷಿಸಿಕೊಳ್ಳುವಂತೆ ಅವು ಅವನನ್ನು ಪ್ರಚೋದಿಸುವವು. 25  ಅವನ ಹೃದಯದ ಗುಪ್ತ ವಿಚಾರಗಳು ಬಯಲಾಗುವವು; ಹೀಗೆ ಅವನು ಅಧೋಮುಖವಾಗಿ ಬಿದ್ದು “ದೇವರು ನಿಜವಾಗಿಯೂ ನಿಮ್ಮ ಮಧ್ಯೆ ಇದ್ದಾನೆ” ಎಂದು ಹೇಳುತ್ತಾ ದೇವರನ್ನು ಆರಾಧಿಸುವನು. 26  ಹಾಗಾದರೆ ಸಹೋದರರೇ ಏನು ಮಾಡಬೇಕು? ನೀವು ಒಟ್ಟಾಗಿ ಕೂಡಿ​ಬರುವಾಗ ಒಬ್ಬನು ಕೀರ್ತನೆಯನ್ನು ಹಾಡುತ್ತಾನೆ, ಇನ್ನೊಬ್ಬನು ಬೋಧಿಸುತ್ತಾನೆ, ಮತ್ತೊಬ್ಬನು ಪ್ರಕಟನೆಯನ್ನು ತಿಳಿಸುತ್ತಾನೆ, ಇನ್ನೊಬ್ಬನು ಬೇರೊಂದು ಭಾಷೆಯಲ್ಲಿ ಮಾತಾಡುತ್ತಾನೆ, ಒಬ್ಬನು ಅರ್ಥವನ್ನು ವಿವರಿಸುತ್ತಾನೆ. ಈ ಎಲ್ಲ ವಿಷಯಗಳು ಭಕ್ತಿವೃದ್ಧಿಗಾಗಿ ಮಾಡಲ್ಪಡಲಿ. 27  ಯಾವನಾದರೂ ಬೇರೊಂದು ಭಾಷೆಯಲ್ಲಿ ಮಾತಾಡುವುದಾದರೆ ಹೆಚ್ಚೆಂದರೆ ಇಬ್ಬರು ಅಥವಾ ಮೂವರು ಮಾತಾಡಲಿ ಮತ್ತು ಸರದಿಯ ಪ್ರಕಾರ ಒಬ್ಬೊಬ್ಬರಾಗಿ ಮಾತಾಡಲಿ. ಯಾರಾದರೊಬ್ಬರು ಭಾಷಾಂತರಿಸಲಿ. 28  ಆದರೆ ಭಾಷಾಂತರಕಾರನು ಇಲ್ಲವಾದರೆ ಅವನು ಸಭೆಯಲ್ಲಿ ಮೌನವಾಗಿರಲಿ; ಅವನು ತನ್ನೊಂದಿಗೂ ದೇವ​ರೊಂದಿಗೂ ಮಾತಾಡಿಕೊಳ್ಳಲಿ. 29  ಇದಲ್ಲದೆ ಇಬ್ಬರು ಅಥವಾ ಮೂವರು ಪ್ರವಾದಿಗಳು ಮಾತಾಡಲಿ ಮತ್ತು ಇತರರು ಅದರ ಅರ್ಥವನ್ನು ವಿವೇಚಿಸಿ ತಿಳಿದುಕೊಳ್ಳಲಿ. 30  ಆದರೆ ಕುಳಿತಿರುವ ಒಬ್ಬನಿಗೆ ಪ್ರಕಟನೆ ಉಂಟಾದರೆ ಮೊದಲು ಮಾತಾಡುತ್ತಿದ್ದವನು ಮೌನವಾಗಲಿ. 31  ನೀವೆಲ್ಲರೂ ಒಬ್ಬರ ಅನಂತರ ಇನ್ನೊಬ್ಬರು ಪ್ರವಾದಿಸುವುದಾದರೆ ಎಲ್ಲರೂ ಕಲಿತುಕೊಳ್ಳುವರು ಮತ್ತು ಎಲ್ಲರೂ ಉತ್ತೇಜಿಸಲ್ಪಡುವರು. 32  ಪ್ರವಾದಿಗಳಿಗೆ ಪವಿತ್ರಾತ್ಮದಿಂದ ದೊರಕುವ ವರಗಳನ್ನು ಪ್ರವಾದಿಗಳೇ ಹತೋಟಿಯಲ್ಲಿಟ್ಟುಕೊಳ್ಳಬೇಕು. 33  ದೇವರು ಶಾಂತಿಯ ದೇವರಾಗಿದ್ದಾನೆಯೇ ಹೊರತು ಗಲಿಬಿಲಿಯ ದೇವರಲ್ಲ. ಪವಿತ್ರ ಜನರ ಎಲ್ಲ ಸಭೆಗಳಲ್ಲಿ ಇರುವಂತೆ 34  ಸ್ತ್ರೀಯರು ಸಭೆಗಳಲ್ಲಿ ಮೌನವಾಗಿರಲಿ; ಅವರಿಗೆ ಮಾತಾಡಲು ಅನುಮತಿ​ಯಿಲ್ಲ. ಧರ್ಮಶಾಸ್ತ್ರವು ಸಹ ತಿಳಿಸುವಂತೆ ಅವರು ಅಧೀನದಲ್ಲಿರಲಿ. 35  ಅವರು ಏನನ್ನಾದರೂ ತಿಳಿದುಕೊಳ್ಳಲು ಬಯಸುವಲ್ಲಿ ಮನೆಯಲ್ಲಿ ತಮ್ಮ ಗಂಡಂದಿರನ್ನು ಕೇಳಲಿ, ಏಕೆಂದರೆ ಸ್ತ್ರೀಯು ಸಭೆಯಲ್ಲಿ ಮಾತಾಡುವುದು ಅಗೌರವಯುತ​ವಾದದ್ದಾಗಿದೆ. 36  ಏನು? ದೇವರ ವಾಕ್ಯವು ನಿಮ್ಮಿಂದಲೇ ಬಂತೊ? ಅಥವಾ ಅದು ನಿಮಗೆ ಮಾತ್ರವೇ ತಲಪಿತೊ? 37  ಯಾವನಾದರೂ ತಾನು ಪ್ರವಾದಿ​ಯೆಂದೂ ತನಗೆ ಪವಿತ್ರಾತ್ಮದ ವರವು ಒದಗಿಸಲ್ಪಟ್ಟಿದೆಯೆಂದೂ ಭಾವಿಸಿಕೊಳ್ಳುವಲ್ಲಿ, ನಾನು ನಿಮಗೆ ಬರೆಯುವ ವಿಷಯಗಳನ್ನು ಅವನು ಒಪ್ಪಿಕೊಳ್ಳಲಿ, ಏಕೆಂದರೆ ಅವು ಕರ್ತನ ಆಜ್ಞೆಯಾಗಿವೆ. 38  ಆದರೆ ಯಾವನಾದರೂ ಅಜ್ಞಾನಿಯಾಗಿರಲು ಬಯಸುವಲ್ಲಿ ಅವನು ಅಜ್ಞಾನಿಯಾಗಿಯೇ ಉಳಿಯುತ್ತಾನೆ. 39  ಆದುದರಿಂದ ನನ್ನ ಸಹೋದರರೇ, ಪ್ರವಾದನ ವರವನ್ನು ಪಡೆದುಕೊಳ್ಳಲು ಹುರುಪಿನಿಂದ ಪ್ರಯತ್ನಿಸುತ್ತಾ ಇರಿ. ಹಾಗಿದ್ದರೂ ವಿವಿಧ ಭಾಷೆಗಳಲ್ಲಿ ಮಾತಾಡುವುದನ್ನು ನಿಷೇಧಿಸಬೇಡಿರಿ. 40  ಆದರೆ ಎಲ್ಲವುಗಳು ಸಭ್ಯವಾಗಿಯೂ ಕ್ರಮವಾಗಿಯೂ ನಡೆಯಲಿ.

ಪಾದಟಿಪ್ಪಣಿ