1 ಕೊರಿಂಥ 13:1-13

13  ನಾನು ಮನುಷ್ಯರ ಭಾಷೆಗಳಲ್ಲಿಯೂ ದೇವದೂತರ ಭಾಷೆಗಳಲ್ಲಿಯೂ ಮಾತಾಡುವವನಾಗಿದ್ದು ಪ್ರೀತಿಯಿಲ್ಲದವನಾದರೆ ನಾದಕೊಡುವ ಕಂಚು ಅಥವಾ ಗಣಗಣಿಸುವ ತಾಳ ಆಗಿದ್ದೇನೆ.  ನನಗೆ ಪ್ರವಾದಿಸುವ ವರವಿದ್ದರೂ, ನಾನು ಎಲ್ಲ ಪವಿತ್ರ ರಹಸ್ಯಗಳನ್ನೂ ಸಕಲ ಜ್ಞಾನವನ್ನೂ ಹೊಂದಿರುವುದಾದರೂ, ಬೆಟ್ಟಗಳನ್ನೇ ಸ್ಥಳಾಂತರಿಸುವಷ್ಟು ನಂಬಿಕೆಯುಳ್ಳವನಾಗಿರುವುದಾದರೂ, ನನ್ನಲ್ಲಿ ಪ್ರೀತಿಯಿಲ್ಲದಿದ್ದರೆ ನಾನು ಏನೂ ಅಲ್ಲ.  ಇತರರಿಗೆ ಉಣಿಸುವುದಕ್ಕಾಗಿ ನನ್ನ ಆಸ್ತಿಯನ್ನೆಲ್ಲ ಕೊಡುವುದಾದರೂ ಹೊಗಳಿಕೊಳ್ಳುವುದಕ್ಕಾಗಿ ನನ್ನ ದೇಹವನ್ನೇ ಒಪ್ಪಿಸಿಕೊಡುವುದಾದರೂ ಪ್ರೀತಿಯಿಲ್ಲದವನಾಗಿದ್ದರೆ ನನಗೆ ಯಾವ ಲಾಭವೂ ಇಲ್ಲ.  ಪ್ರೀತಿಯು ದೀರ್ಘ ಸಹನೆಯುಳ್ಳದ್ದೂ ದಯೆಯುಳ್ಳದ್ದೂ ಆಗಿದೆ. ಪ್ರೀತಿಯು ಹೊಟ್ಟೆಕಿಚ್ಚುಪಡುವುದಿಲ್ಲ, ಜಂಬಕೊಚ್ಚಿಕೊಳ್ಳುವುದಿಲ್ಲ, ಉಬ್ಬಿಕೊಳ್ಳುವುದಿಲ್ಲ,  ಅಸಭ್ಯವಾಗಿ ವರ್ತಿಸುವುದಿಲ್ಲ, ಸ್ವಹಿತವನ್ನು ಹುಡುಕುವುದಿಲ್ಲ, ಸಿಟ್ಟುಗೊಳ್ಳುವುದಿಲ್ಲ. ಅದು ಅನ್ಯಾಯದ ಲೆಕ್ಕವನ್ನು ಇಟ್ಟುಕೊಳ್ಳುವುದಿಲ್ಲ.  ಅದು ಅನೀತಿಯನ್ನು ಕಂಡು ಹರ್ಷಿಸುವುದಿಲ್ಲ, ಆದರೆ ಸತ್ಯದಲ್ಲಿ ಹರ್ಷಿಸುತ್ತದೆ.  ಅದು ಎಲ್ಲವನ್ನೂ ಸಹಿಸಿಕೊಳ್ಳುತ್ತದೆ, ಎಲ್ಲವನ್ನೂ ನಂಬುತ್ತದೆ, ಎಲ್ಲವನ್ನೂ ನಿರೀಕ್ಷಿಸುತ್ತದೆ, ಎಲ್ಲವನ್ನೂ ತಾಳಿಕೊಳ್ಳುತ್ತದೆ.  ಪ್ರೀತಿಯು ಎಂದಿಗೂ ವಿಫಲ​ವಾಗುವುದಿಲ್ಲ. ಪ್ರವಾದಿಸುವ ವರಗಳಿರುವುದಾದರೆ ಅವು ಇಲ್ಲವಾಗುವವು; ಭಾಷೆಗಳ ವರಗಳಿರುವುದಾದರೆ ಅವು ನಿಂತು​ಹೋಗುವವು; ಜ್ಞಾನವಿರುವುದಾದರೆ ಅದು ಇಲ್ಲವಾಗುವುದು.  ನಮಗೆ ಅಪೂರ್ಣವಾದ ಜ್ಞಾನವಿದೆ, ನಾವು ಅಪೂರ್ಣವಾಗಿ ಪ್ರವಾದಿಸುತ್ತೇವೆ; 10  ಆದರೆ ಪೂರ್ಣವಾದದ್ದು ಬಂದಾಗ ಅಪೂರ್ಣವಾದದ್ದು ಇಲ್ಲವಾಗುವುದು. 11  ನಾನು ಮಗುವಾಗಿದ್ದಾಗ ಮಗುವಿನಂತೆ ಮಾತಾಡುತ್ತಿದ್ದೆನು, ಮಗುವಿನಂತೆ ಆಲೋಚಿಸುತ್ತಿದ್ದೆನು, ಮಗುವಿನಂತೆ ತರ್ಕಿಸುತ್ತಿದ್ದೆನು; ಆದರೆ ಈಗ ನಾನು ಪುರುಷ​ನಾಗಿದ್ದೇನೆ, ಮಗುವಿನ ಗುಣಲಕ್ಷಣ​ಗಳನ್ನು ಬಿಟ್ಟುಬಿಟ್ಟಿದ್ದೇನೆ. 12  ಈಗ ನಾವು ಲೋಹದ ದರ್ಪಣದ ಮೂಲಕ ಮೊಬ್ಬಾದ ಆಕೃತಿಯನ್ನು ನೋಡುತ್ತೇವೆ, ಆದರೆ ಆಗ ಮುಖಾಮುಖಿಯಾಗಿ ನೋಡುವೆವು. ಈಗ ನನಗೆ ಅಪೂರ್ಣವಾಗಿ ತಿಳಿದಿದೆ, ಆದರೆ ಆಗ ದೇವರು ನನ್ನನ್ನು ನಿಷ್ಕೃಷ್ಟವಾಗಿ ತಿಳಿದುಕೊಂಡಿರುವಂತೆಯೇ ನಾನು ನಿಷ್ಕೃಷ್ಟವಾಗಿ ತಿಳಿದುಕೊಳ್ಳುವೆನು.  13  ಹೀಗಿರು​ವುದರಿಂದ ನಂಬಿಕೆ, ನಿರೀಕ್ಷೆ, ಪ್ರೀತಿ ಈ ಮೂರೇ ಉಳಿಯುತ್ತವೆ; ಆದರೆ ಇವುಗಳಲ್ಲಿ ಅತಿ ದೊಡ್ಡದು ಪ್ರೀತಿಯೇ.

ಪಾದಟಿಪ್ಪಣಿ