1 ಕೊರಿಂಥ 12:1-31

12  ಸಹೋದರರೇ, ಆಧ್ಯಾತ್ಮಿಕ ವರಗಳ ವಿಷಯದಲ್ಲಿ ನೀವು ಅಜ್ಞಾನಿಗಳಾಗಿರಬೇಕೆಂದು ನಾನು ಬಯಸುವುದಿಲ್ಲ.  ನೀವು ಅನ್ಯಜನಾಂಗಗಳ ಜನರಾಗಿದ್ದಾಗ ಮೂಕ ವಿಗ್ರಹಗಳ ಕಡೆಗೆ ನಡೆಸಲ್ಪಡುವಂತೆ ನಿಮ್ಮನ್ನು ಬಿಟ್ಟುಕೊಟ್ಟಿರಿ ಎಂಬುದು ನಿಮಗೆ ತಿಳಿದಿದೆ.  ಆದುದರಿಂದ ನಾನು ನಿಮಗೆ ತಿಳಿಸಲು ಬಯಸುವುದೇನೆಂದರೆ ದೇವರ ಆತ್ಮದ * ಪ್ರೇರಣೆಯಿಂದ ಮಾತಾಡುವಾಗ ಯಾವನೂ “ಯೇಸು ಶಾಪಗ್ರಸ್ತನು!” ಎಂದು ಹೇಳುವುದಿಲ್ಲ; ಪವಿತ್ರಾತ್ಮದ ಪ್ರೇರಣೆಯಿಂದಲ್ಲದೆ ಯಾವನೂ “ಯೇಸುವೇ ಕರ್ತನು!” ಎಂದು ಹೇಳಲಾರನು.  ಬೇರೆ ಬೇರೆ ರೀತಿಯ ವರಗಳಿವೆಯಾದರೂ ಪವಿತ್ರಾತ್ಮವು ಒಂದೇ;  ಬೇರೆ ಬೇರೆ ರೀತಿಯ ಶುಶ್ರೂಷೆಗಳಿವೆಯಾದರೂ ಕರ್ತನು ಒಬ್ಬನೇ;  ಬೇರೆ ಬೇರೆ ರೀತಿಯ ಕಾರ್ಯಗಳಿವೆಯಾದರೂ ಎಲ್ಲರಲ್ಲಿಯೂ ಎಲ್ಲ ಕಾರ್ಯಗಳನ್ನು ನಡೆಸುವ ದೇವರು ಒಬ್ಬನೇ.  ಪ್ರಯೋಜನಕರವಾದ ಉದ್ದೇಶಕ್ಕಾಗಿಯೇ ಪ್ರತಿಯೊಬ್ಬನಿಗೆ ಪವಿತ್ರಾತ್ಮದ ಸಾಕ್ಷ್ಯವು ಕೊಡಲ್ಪಟ್ಟಿದೆ.  ಉದಾಹರಣೆಗೆ, ಒಬ್ಬನಿಗೆ ಪವಿತ್ರಾತ್ಮದ ಮೂಲಕ ವಿವೇಕದಿಂದ ಮಾತಾಡುವ ವರ, ಒಬ್ಬನಿಗೆ ಅದೇ ಪವಿತ್ರಾತ್ಮಕ್ಕನುಸಾರ ಜ್ಞಾನದಿಂದ ಮಾತಾಡುವ ವರ,  ಒಬ್ಬನಿಗೆ ಅದೇ ಪವಿತ್ರಾತ್ಮದಿಂದ ನಂಬಿಕೆಯು, ಒಬ್ಬನಿಗೆ ಅದೇ ಪವಿತ್ರಾತ್ಮದಿಂದ ವಾಸಿಮಾಡುವ ವರಗಳು, 10  ಒಬ್ಬನಿಗೆ ಮಹತ್ಕಾರ್ಯಗಳನ್ನು ಮಾಡುವ ವರ, ಒಬ್ಬನಿಗೆ ಪ್ರವಾದಿಸುವ ವರ, ಒಬ್ಬನಿಗೆ ಪ್ರೇರಿತ ಮಾತುಗಳನ್ನು ಅರ್ಥಮಾಡಿಕೊಳ್ಳುವ ವರ, ಒಬ್ಬನಿಗೆ ವಿವಿಧ ಭಾಷೆ​ಗಳಲ್ಲಿ ಮಾತಾಡುವ ವರ ಮತ್ತು ಒಬ್ಬನಿಗೆ ವಿವಿಧ ಭಾಷೆಗಳ ಅರ್ಥವನ್ನು ಹೇಳುವ ವರ ಕೊಡಲ್ಪಟ್ಟಿದೆ. 11  ಈ ಎಲ್ಲ ವರಗಳನ್ನು ಆ ಒಂದೇ ಪವಿತ್ರಾತ್ಮವು ತನ್ನ ಚಿತ್ತಕ್ಕನುಸಾರ ಪ್ರತಿಯೊಬ್ಬನಿಗೆ ಹಂಚಿಕೊಡುತ್ತದೆ. 12  ಹೀಗೆ ದೇಹವು ಒಂದೇ ಆಗಿದ್ದು ಅನೇಕ ಅಂಗಗಳಿರುವಂತೆಯೇ ಮತ್ತು ಆ ದೇಹದ ಅಂಗಗಳು ಅನೇಕವಾಗಿರುವುದಾದರೂ ಒಂದೇ ದೇಹವಾಗಿರುವಂತೆಯೇ ಕ್ರಿಸ್ತನು ಸಹ ಇದ್ದಾನೆ. 13  ನಾವು ಯೆಹೂದ್ಯರಾಗಿರಲಿ ಗ್ರೀಕ​ರಾಗಿರಲಿ, ದಾಸರಾಗಿರಲಿ ಸ್ವತಂತ್ರರಾಗಿರಲಿ ಒಂದೇ ದೇಹವಾಗಲು ಒಂದೇ ಪವಿತ್ರಾತ್ಮದಿಂದ ದೀಕ್ಷಾಸ್ನಾನವನ್ನು ಪಡೆದುಕೊಂಡೆವು ಮತ್ತು ಒಂದೇ ಪವಿತ್ರಾತ್ಮವನ್ನು ನಮ್ಮೆಲ್ಲರಿಗೂ ಪಾನವಾಗಿ ಕೊಡಲಾಯಿತು. 14  ದೇಹವು ಒಂದೇ ಅಂಗವಲ್ಲ, ಅನೇಕ ಅಂಗಗಳನ್ನು ಹೊಂದಿದೆ. 15  ಒಂದುವೇಳೆ ಪಾದವು, “ನಾನು ಕೈಯಲ್ಲದ ಕಾರಣ ದೇಹದ ಭಾಗವಲ್ಲ” ಎಂದು ಹೇಳುವುದಾದರೆ ಈ ಕಾರಣಕ್ಕಾಗಿ ಅದು ದೇಹದ ಭಾಗವಾಗದೆ ಇರುವುದಿಲ್ಲ. 16  ಒಂದುವೇಳೆ ಕಿವಿಯು, “ನಾನು ಕಣ್ಣಲ್ಲದ ಕಾರಣ ದೇಹದ ಭಾಗವಲ್ಲ” ಎಂದು ಹೇಳುವುದಾದರೆ ಈ ಕಾರಣಕ್ಕಾಗಿ ಅದು ದೇಹದ ಭಾಗವಾಗದೆ ಇರುವುದಿಲ್ಲ. 17  ಇಡೀ ದೇಹವೇ ಕಣ್ಣಾಗಿರುತ್ತಿದ್ದರೆ ಶ್ರವಣ​ಶಕ್ತಿಯು ಎಲ್ಲಿರುತ್ತಿತ್ತು? ಎಲ್ಲವೂ ಶ್ರವಣ​ಶಕ್ತಿಯಾಗಿರುತ್ತಿದ್ದರೆ ಘ್ರಾಣಶಕ್ತಿಯು ಎಲ್ಲಿರುತ್ತಿತ್ತು? 18  ಆದರೆ ದೇವರು ಆ ಅಂಗಗಳಲ್ಲಿ ಪ್ರತಿಯೊಂದನ್ನು ತನಗೆ ಇಷ್ಟಬಂದ ರೀತಿಯಲ್ಲಿ ದೇಹದಲ್ಲಿ ಇಟ್ಟಿದ್ದಾನೆ. 19  ಅವೆಲ್ಲವು ಒಂದೇ ಅಂಗ​ವಾಗಿರುತ್ತಿದ್ದರೆ ದೇಹವು ಎಲ್ಲಿರುತ್ತಿತ್ತು? 20  ಆದರೆ ಈಗ ಅನೇಕ ಅಂಗಗಳಾಗಿದ್ದರೂ ದೇಹವು ಒಂದೇ. 21  ಕಣ್ಣು ಕೈಗೆ, “ನೀನು ನನಗೆ ಅವಶ್ಯವಿಲ್ಲ” ಎಂದಾಗಲಿ ತಲೆಯು ಪಾದಗಳಿಗೆ, “ನೀವು ನನಗೆ ಅವಶ್ಯವಿಲ್ಲ” ಎಂದಾಗಲಿ ಹೇಳಲು ಸಾಧ್ಯವಿಲ್ಲ. 22  ಆದರೆ ದೇಹದಲ್ಲಿ ಬಲಹೀನವಾಗಿ ತೋರುವ ಅಂಗಗಳು ಆವಶ್ಯಕವಾದವುಗಳಾಗಿವೆ 23  ಮತ್ತು ನಾವು ದೇಹದಲ್ಲಿ ಕಡಮೆ ಮಾನವುಳ್ಳವುಗಳೆಂದು ನೆನಸುವ ಭಾಗಗಳಿಗೆ ಬಹಳಷ್ಟು ಮಾನವನ್ನು ಕೊಡುತ್ತೇವೆ; ಹೀಗೆ ಅಂದವಿಲ್ಲದ ಅಂಗಗಳಿಗೆ ಇನ್ನಷ್ಟು ಅಂದವುಂಟಾಗುತ್ತದೆ. 24  ಆದರೆ ನಮ್ಮ ಅಂದವಾದ ಭಾಗ​ಗಳಿಗೆ ಏನೂ ಅಗತ್ಯವಿಲ್ಲ. ಹಾಗಿದ್ದರೂ ಕಡಮೆ ಮಾನವಿರುವ ಭಾಗಕ್ಕೆ ದೇವರು ಹೆಚ್ಚು ಮಾನವನ್ನು ಕೊಟ್ಟು ದೇಹವನ್ನು ಸಂಯೋಗಗೊಳಿಸಿದ್ದಾನೆ. 25  ಆದುದರಿಂದ ದೇಹದಲ್ಲಿ ಭೇದವೇನೂ ಇರದೆ ಎಲ್ಲ ಅಂಗಗಳು ಪರಸ್ಪರ ಹಿತವನ್ನು ಚಿಂತಿಸುವಂತೆ ಮಾಡಿದ್ದಾನೆ. 26  ಒಂದು ಅಂಗವು ನೋವನ್ನು ಅನುಭವಿಸುವುದಾದರೆ ಬೇರೆಲ್ಲ ಅಂಗಗಳು ಅದರೊಂದಿಗೆ ನೋವನ್ನು ಅನುಭವಿಸುತ್ತವೆ; ಒಂದು ಅಂಗಕ್ಕೆ ಮಹಿಮೆ ಉಂಟಾಗುವುದಾದರೆ ಬೇರೆಲ್ಲ ಅಂಗಗಳು ಅದರೊಂದಿಗೆ ಹರ್ಷಿಸುತ್ತವೆ. 27  ನೀವು ಈಗ ಕ್ರಿಸ್ತನ ದೇಹ​ವಾಗಿದ್ದೀರಿ ಮತ್ತು ವ್ಯಕ್ತಿಗತವಾಗಿ ಅದಕ್ಕೆ ಅಂಗಗಳಾಗಿದ್ದೀರಿ. 28  ದೇವರು ವಿವಿಧ ಜನರನ್ನು ಸಭೆಯಲ್ಲಿಟ್ಟಿದ್ದಾನೆ: ಮೊದಲನೆಯದಾಗಿ ಅಪೊಸ್ತಲರು, ಎರಡನೆಯದಾಗಿ ಪ್ರವಾದಿಗಳು, ಮೂರನೆಯದಾಗಿ ಬೋಧಕರು, ಬಳಿಕ ಮಹತ್ಕಾರ್ಯಗಳು, ​ಅನಂತರ ರೋಗಗಳನ್ನು ವಾಸಿಮಾಡುವ ವರಗಳು, ಸಹಾಯಕ ಸೇವೆಗಳು, ನಿರ್ದೇಶಿಸುವ ಸಾಮರ್ಥ್ಯಗಳು, ವಿವಿಧ ಭಾಷೆಗಳಲ್ಲಿ ಮಾತಾಡುವ ವರಗಳು. 29  ಎಲ್ಲರೂ ಅಪೊಸ್ತಲರಲ್ಲ, ಅಲ್ಲವೆ? ಎಲ್ಲರೂ ಪ್ರವಾದಿಗಳಲ್ಲ, ಅಲ್ಲವೆ? ಎಲ್ಲರೂ ಬೋಧಕರಲ್ಲ, ಅಲ್ಲವೆ? ಎಲ್ಲರೂ ಮಹತ್ಕಾರ್ಯಗಳನ್ನು ಮಾಡುವುದಿಲ್ಲ, ಅಲ್ಲವೆ? 30  ಎಲ್ಲರಲ್ಲಿ ವಾಸಿಮಾಡುವ ವರಗಳು ಇಲ್ಲ, ಅಲ್ಲವೆ? ಎಲ್ಲರೂ ವಿವಿಧ ಭಾಷೆಗಳಲ್ಲಿ ಮಾತಾಡುವು​ದಿಲ್ಲ, ಅಲ್ಲವೆ? ಎಲ್ಲರೂ ಭಾಷಾಂತರ​ಕಾರರಲ್ಲ, ಅಲ್ಲವೆ? 31  ಹಾಗಿದ್ದರೂ ನೀವು ಹುರುಪಿನಿಂದ ಶ್ರೇಷ್ಠವಾದ ವರಗಳನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಾ ಇರಿ. ಆದರೆ ಇನ್ನೂ ಉತ್ಕೃಷ್ಟವಾದ ಮಾರ್ಗವನ್ನು ನಾನು ನಿಮಗೆ ತೋರಿಸುತ್ತೇನೆ.

ಪಾದಟಿಪ್ಪಣಿ

1ಕೊರಿಂ 12:⁠3  ಅಥವಾ, “ದೇವರ ಕಾರ್ಯಕಾರಿ ಶಕ್ತಿ.” ಪರಿಶಿಷ್ಟ 7 ನ್ನು ನೋಡಿ.