ಲೂಕ 6:1-49

6  ಒಂದು ಸಬ್ಬತ್‌ ದಿನದಂದು ಅವನು ಪೈರಿನ ಹೊಲಗಳ ಮಧ್ಯದಿಂದ ಹಾದುಹೋಗುತ್ತಿರುವಾಗ, ಅವನ ಶಿಷ್ಯರು ತೆನೆಗಳನ್ನು ಕಿತ್ತು ಕೈಗಳಲ್ಲಿ ಹೊಸಕಿಕೊಂಡು ತಿನ್ನುತ್ತಿದ್ದರು.  ಆಗ ಫರಿಸಾಯರಲ್ಲಿ ಕೆಲವರು, “ನೀವು ಸಬ್ಬತ್‌ ದಿನದಲ್ಲಿ ಧರ್ಮಸಮ್ಮತವಲ್ಲದ್ದನ್ನು ಏಕೆ ಮಾಡುತ್ತಿದ್ದೀರಿ?” ಎಂದು ಕೇಳಿದರು.  ಯೇಸು ಅವರಿಗೆ ಉತ್ತರವಾಗಿ, “ದಾವೀದನು ತಾನೂ ತನ್ನೊಂದಿಗಿದ್ದವರೂ ಹಸಿದಾಗ ಅವನು ಏನು ಮಾಡಿದನೆಂಬುದನ್ನು ನೀವು ಎಂದೂ ಓದಲಿಲ್ಲವೊ?  ಅವನು ದೇವಾಲಯವನ್ನು ಪ್ರವೇಶಿಸಿ ಯಾಜಕರೇ ಹೊರತು ಬೇರೆ ಯಾರೂ ತಿನ್ನುವುದು ಧರ್ಮಸಮ್ಮತವಾಗಿದ್ದಿರದ ನೈವೇದ್ಯದ ರೊಟ್ಟಿಗಳನ್ನು ತೆಗೆದುಕೊಂಡು ತಿಂದು ತನ್ನ ಸಂಗಡ ಇದ್ದವರಿಗೂ ಕೊಟ್ಟನಲ್ಲವೆ?” ಎಂದನು.  ಅವನು ಮುಂದುವರಿಸುತ್ತಾ, “ಮನುಷ್ಯಕುಮಾರನು ಸಬ್ಬತ್ತಿನ ಒಡೆಯನಾಗಿದ್ದಾನೆ” ಎಂದು ಹೇಳಿದನು.  ಇನ್ನೊಂದು ಸಬ್ಬತ್‌ ದಿನದಂದು ಅವನು ಸಭಾಮಂದಿರಕ್ಕೆ ಹೋಗಿ ಬೋಧಿಸಲಾರಂಭಿಸಿದನು. ಅಲ್ಲಿ ಬಲಗೈ ಬತ್ತಿ​ಹೋಗಿದ್ದ ಒಬ್ಬ ಮನುಷ್ಯನಿದ್ದನು.  ಸಬ್ಬತ್‌ ದಿನದಲ್ಲಿ ಯೇಸು ವಾಸಿಮಾಡುವನೋ ಏನೋ ಎಂದು ಶಾಸ್ತ್ರಿಗಳೂ ಫರಿಸಾಯರೂ ಅವನನ್ನು ನಿಕಟವಾಗಿ ಗಮನಿಸುತ್ತಿದ್ದರು; ಅವನ ಮೇಲೆ ಆರೋಪ ಹೊರಿಸಲು ಕಾರಣವನ್ನು ಕಂಡುಕೊಳ್ಳುವುದೇ ಅವರ ಉದ್ದೇಶವಾಗಿತ್ತು.  ಅವನಿಗೆ ಅವರ ಆಲೋಚನೆ ತಿಳಿಯಿತಾದರೂ ಅವನು ಕೈಬತ್ತಿಹೋಗಿದ್ದ ಆ ಮನುಷ್ಯನಿಗೆ, “ಎದ್ದು ನಡುವೆ ಬಂದು ನಿಂತುಕೋ” ಎಂದು ಹೇಳಿದನು. ಅವನು ಎದ್ದು ನಿಂತುಕೊಂಡನು.  ಅನಂತರ ಯೇಸು ಅವರಿಗೆ, “ನಾನು ನಿಮಗೆ ಒಂದು ಮಾತನ್ನು ಕೇಳುತ್ತೇನೆ: ಸಬ್ಬತ್‌ ದಿನದಲ್ಲಿ ಏನು ಮಾಡುವುದು ಧರ್ಮಸಮ್ಮತ? ಒಳ್ಳೆಯದನ್ನು ಮಾಡುವುದೊ ಕೇಡನ್ನು ಮಾಡುವುದೊ? ಪ್ರಾಣವನ್ನು ಉಳಿಸುವುದೊ, ನಾಶಮಾಡುವುದೊ?” ಎಂದು ಕೇಳಿದನು. 10  ಬಳಿಕ ಅವನು ತನ್ನ ಸುತ್ತಲೂ ಇದ್ದವರನ್ನು ನೋಡಿ, ಆ ಮನುಷ್ಯನಿಗೆ “ನಿನ್ನ ಕೈಚಾಚು” ಎಂದು ಹೇಳಿದನು. ಅವನು ಹಾಗೆಯೇ ಮಾಡಿದನು ಮತ್ತು ಅವನ ಕೈ ವಾಸಿಯಾಯಿತು. 11  ಆದರೆ ಅವರು ಕೋಪಭರಿತರಾಗಿ ಯೇಸುವಿಗೆ ಏನು ಮಾಡೋಣ ಎಂದು ತಮ್ಮತಮ್ಮೊಳಗೆ ಮಾತಾಡಿಕೊಳ್ಳತೊಡಗಿದರು. 12  ಆ ದಿವಸಗಳಲ್ಲಿ ಅವನು ಪ್ರಾರ್ಥನೆ​ಮಾಡುವುದಕ್ಕಾಗಿ ಬೆಟ್ಟಕ್ಕೆ ಹೋದನು ಮತ್ತು ಇಡೀ ರಾತ್ರಿ ದೇವರಿಗೆ ಪ್ರಾರ್ಥನೆಮಾಡುತ್ತಾ ಕಳೆದನು. 13  ಬೆಳಗಾದಾಗ ಅವನು ತನ್ನ ಶಿಷ್ಯರನ್ನು ಬಳಿಗೆ ಕರೆದು ಅವರಲ್ಲಿ ಹನ್ನೆರಡು ಮಂದಿಯನ್ನು ಆರಿಸಿಕೊಂಡು, ಅವರಿಗೆ “ಅಪೊಸ್ತಲರು” ಎಂದು ಹೆಸರಿಟ್ಟನು. 14  ಅವರು ಯಾರೆಂದರೆ ಅವನಿಂದ ಪೇತ್ರನೆಂದೂ ಹೆಸರು ಪಡೆದ ಸೀಮೋನ, ಅವನ ತಮ್ಮನಾದ ಅಂದ್ರೆಯ, ಯಾಕೋಬ, ಯೋಹಾನ, ಫಿಲಿಪ್ಪ, ಬಾರ್ತೊಲೊಮಾಯ, 15  ಮತ್ತಾಯ, ತೋಮ, ಅಲ್ಫಾಯನ ಮಗನಾದ ಯಾಕೋಬ, “ಅತ್ಯಭಿಮಾನಿ” ಎಂದು ಕರೆಯಲ್ಪಟ್ಟ ಸೀಮೋನ, 16  ಯಾಕೋಬನ ಮಗನಾದ ಯೂದ ಮತ್ತು ದ್ರೋಹಿಯಾಗಿ ಪರಿಣಮಿಸಿದ ಇಸ್ಕರಿಯೋತ ಯೂದ. 17  ಅವನು ಅವರೊಂದಿಗೆ ಕೆಳಗಿಳಿದು ಸಮತಟ್ಟಾದ ಪ್ರದೇಶಕ್ಕೆ ಬಂದಾಗ ಅವನ ಶಿಷ್ಯರ ದೊಡ್ಡ ಗುಂಪು ಮತ್ತು ಯೂದಾಯದಿಂದಲೂ ಯೆರೂಸಲೇಮಿನಿಂದಲೂ ತೂರ್‌ ಹಾಗೂ ಸೀದೋನ್‌ ಪಟ್ಟಣಗಳ ಸಮುದ್ರತೀರದಿಂದಲೂ ಬಂದಿದ್ದ ದೊಡ್ಡ ಜನಸಮೂಹವು ಅಲ್ಲಿತ್ತು; ಅವರೆಲ್ಲರೂ ಅವನ ಮಾತುಗಳನ್ನು ಕೇಳಿಸಿಕೊಳ್ಳುವುದಕ್ಕೂ ತಮ್ಮ ರೋಗಗಳನ್ನು ಗುಣಪಡಿಸಿಕೊಳ್ಳುವುದಕ್ಕೂ ಬಂದಿದ್ದರು. 18  ದೆವ್ವಗಳಿಂದ ತೊಂದರೆಗೊಳಗಾದವರು ಸಹ ವಾಸಿಮಾಡಲ್ಪಟ್ಟರು. 19  ಅವನೊಳಗಿಂದ ಶಕ್ತಿಯು ಹೊರಟು ಜನರೆಲ್ಲರನ್ನು ವಾಸಿಮಾಡುತ್ತಿದ್ದ ಕಾರಣ ಜನಸಮೂಹದವರೆಲ್ಲರೂ ಅವನನ್ನು ಮುಟ್ಟಲು ಪ್ರಯತ್ನಿಸುತ್ತಿದ್ದರು. 20  ಅನಂತರ ಅವನು ತನ್ನ ಶಿಷ್ಯರ ಕಡೆಗೆ ಕಣ್ಣೆತ್ತಿ ನೋಡಿ ಹೇಳಿದ್ದು: “ಬಡವರಾದ ನೀವು ಸಂತೋಷಿತರು; ದೇವರ ರಾಜ್ಯವು ನಿಮ್ಮದು. 21  “ಈಗ ಹಸಿದವರಾದ ನೀವು ಸಂತೋಷಿತರು; ನೀವು ತೃಪ್ತರಾಗುವಿರಿ. “ಈಗ ಅಳುವವರಾದ ನೀವು ಸಂತೋಷಿತರು; ನೀವು ನಗುವಿರಿ. 22  “ಮನುಷ್ಯಕುಮಾರನ ನಿಮಿತ್ತ ಜನರು ನಿಮ್ಮನ್ನು ದ್ವೇಷಿಸಿ ನಿಮ್ಮನ್ನು ಬಹಿಷ್ಕರಿಸಿ, ನಿಂದಿಸಿ, ನಿಮ್ಮ ಹೆಸರನ್ನು ಕೆಟ್ಟದ್ದೆಂದು ತೆಗೆದುಹಾಕುವುದಾದರೆ ನೀವು ಸಂತೋಷಿತರು. 23  ಆ ದಿನದಲ್ಲಿ ಉಲ್ಲಾಸಪಡಿರಿ, ಕುಣಿದಾಡಿರಿ; ಸ್ವರ್ಗದಲ್ಲಿ ನಿಮಗೆ ಬಹಳ ಪ್ರತಿಫಲವಿದೆ; ಏಕೆಂದರೆ ಅವರ ಪೂರ್ವಜರು ಪ್ರವಾದಿಗಳಿಗೂ ಇದೇ ರೀತಿ ಮಾಡುತ್ತಿದ್ದರು. 24  “ಐಶ್ವರ್ಯವಂತರೇ ನಿಮ್ಮ ಗತಿಯನ್ನು ಏನು ಹೇಳಲಿ! ಏಕೆಂದರೆ ನೀವು ನಿಮ್ಮ ಆದರಣೆಯನ್ನು ಪೂರ್ಣವಾಗಿ ಹೊಂದುತ್ತಿದ್ದೀರಿ. 25  “ಈಗ ಹೊಟ್ಟೆತುಂಬಿರುವವರೇ ನಿಮ್ಮ ಗತಿಯನ್ನು ಏನು ಹೇಳಲಿ! ಏಕೆಂದರೆ ನೀವು ಹಸಿವೆಯಿಂದಿರುವಿರಿ. “ಈಗ ನಗುತ್ತಿರುವವರೇ ನಿಮ್ಮ ಗತಿಯನ್ನು ಏನು ಹೇಳಲಿ! ಏಕೆಂದರೆ ನೀವು ಅತ್ತು ಗೋಳಾಡುವಿರಿ. 26  “ಜನರೆಲ್ಲರೂ ನಿಮ್ಮ ಕುರಿತು ಒಳ್ಳೆಯದನ್ನು ಮಾತಾಡಿದರೆ ನಿಮ್ಮ ಗತಿಯನ್ನು ಏನು ಹೇಳಲಿ! ಏಕೆಂದರೆ ಅವರ ಪೂರ್ವಜರೂ ಸುಳ್ಳು ಪ್ರವಾದಿಗಳಿಗೆ ಇಂಥದನ್ನೇ ಮಾಡಿದರು. 27  “ಕೇಳಿಸಿಕೊಳ್ಳುತ್ತಿರುವ ನಿಮಗೆ ನಾನು ಹೇಳುವುದೇನೆಂದರೆ, ನಿಮ್ಮ ವೈರಿಗಳನ್ನು ಪ್ರೀತಿಸುತ್ತಾ ಇರಿ, ನಿಮ್ಮನ್ನು ಹಗೆಮಾಡುವವರಿಗೆ ಒಳ್ಳೆಯದನ್ನು ಮಾಡಿರಿ, 28  ನಿಮ್ಮನ್ನು ಶಪಿಸುವವರನ್ನು ಆಶೀರ್ವದಿಸಿರಿ, ನಿಮ್ಮನ್ನು ಅವಮಾನಿಸುವವರಿಗಾಗಿ ಪ್ರಾರ್ಥಿಸಿರಿ. 29  ನಿನ್ನ ಒಂದು ಕೆನ್ನೆಯ ಮೇಲೆ ಹೊಡೆಯುವವನಿಗೆ ಇನ್ನೊಂದು ಕೆನ್ನೆಯನ್ನೂ ಒಡ್ಡು; ನಿನ್ನ ಮೇಲಂಗಿಯನ್ನು ತೆಗೆದುಕೊಳ್ಳುವವನಿಂದ ಒಳಉಡುಪನ್ನೂ ತಡೆದಿಟ್ಟುಕೊಳ್ಳಬೇಡ. 30  ನಿನ್ನನ್ನು ಕೇಳುವ ಪ್ರತಿಯೊಬ್ಬನಿಗೆ ಕೊಡು; ನಿನ್ನ ವಸ್ತುಗಳನ್ನು ತೆಗೆದುಕೊಳ್ಳುವವನಿಂದ ಅವುಗಳನ್ನು ಹಿಂದೆ ಕೇಳಬೇಡ. 31  “ಇದಲ್ಲದೆ ಜನರು ನಿಮಗೆ ಏನು ಮಾಡಬೇಕೆಂದು ನೀವು ಬಯಸುತ್ತೀರೋ ಅದನ್ನೇ ನೀವು ಸಹ ಅವರಿಗೆ ಮಾಡಿರಿ. 32  “ನಿಮ್ಮನ್ನು ಪ್ರೀತಿಸುವವರನ್ನೇ ನೀವು ಪ್ರೀತಿಸುವುದಾದರೆ ನಿಮಗೆ ಏನು ಪ್ರಯೋಜನ? ಪಾಪಿಗಳು ಸಹ ತಮ್ಮನ್ನು ಪ್ರೀತಿಸುವವರನ್ನು ಪ್ರೀತಿಸುತ್ತಾರಲ್ಲ. 33  ನಿಮಗೆ ಒಳ್ಳೆಯದನ್ನು ಮಾಡುವವರಿಗೇ ನೀವು ಒಳ್ಳೆಯದನ್ನು ಮಾಡಿದರೆ ನಿಮಗೆ ಏನು ಪ್ರಯೋಜನ? ಪಾಪಿಗಳು ಸಹ ಇದನ್ನೇ ಮಾಡುತ್ತಾರಲ್ಲ. 34  ನೀವು ಯಾರಿಂದ ಹಿಂದೆ ಪಡೆಯಲು ನಿರೀಕ್ಷಿಸುತ್ತೀರೋ ಅಂಥವರಿಗೇ ಬಡ್ಡಿಯಿಲ್ಲದೆ ಸಾಲವನ್ನು ಕೊಡುವುದಾದರೆ ನಿಮಗೆ ಏನು ಪ್ರಯೋಜನ? ಪಾಪಿಗಳು ಸಹ ತಾವು ಕೊಟ್ಟಷ್ಟು ತಮಗೆ ಹಿಂದೆ ಸಿಗಬಹುದೆಂದು ಬಡ್ಡಿಯಿಲ್ಲದೆ ಪಾಪಿಗಳಿಗೆ ಸಾಲಕೊಡುತ್ತಾರಲ್ಲ. 35  ಇದಕ್ಕೆ ವ್ಯತಿರಿಕ್ತವಾಗಿ, ನೀವಾದರೋ ನಿಮ್ಮ ವೈರಿಗಳನ್ನು ಪ್ರೀತಿಸುತ್ತಾ ಒಳ್ಳೆಯದನ್ನು ಮಾಡುತ್ತಾ ಇರಿ; ಬಡ್ಡಿಯಿಲ್ಲದೆ, ಏನನ್ನೂ ತಿರುಗಿ ನಿರೀಕ್ಷಿಸದೆ ಸಾಲಕೊಡಿರಿ. ಆಗ ನಿಮಗೆ ಬಹಳ ಪ್ರತಿಫಲ ಸಿಗುವುದು ಮತ್ತು ನೀವು ಮಹೋನ್ನತನ ಮಕ್ಕಳಾಗುವಿರಿ, ಏಕೆಂದರೆ ಆತನು ಉಪಕಾರನೆನಸದವರಿಗೂ ಕೆಟ್ಟವರಿಗೂ ದಯೆತೋರಿಸುವವನಾಗಿದ್ದಾನೆ. 36  ನಿಮ್ಮ ತಂದೆಯು ಕರುಣೆಯುಳ್ಳವನಾಗಿರುವಂತೆಯೇ ನೀವೂ ಕರುಣೆಯುಳ್ಳವರಾಗಿರಿ. 37  “ಇದಲ್ಲದೆ, ತೀರ್ಪುಮಾಡುವುದನ್ನು ನಿಲ್ಲಿಸಿರಿ, ಆಗ ನಿಮಗೂ ಎಂದೂ ತೀರ್ಪಾಗುವುದಿಲ್ಲ. ಖಂಡಿಸುವುದನ್ನು ನಿಲ್ಲಿಸಿರಿ, ಆಗ ನೀವು ಎಂದಿಗೂ ಖಂಡಿಸಲ್ಪಡುವುದಿಲ್ಲ. ಬಿಡುಗಡೆಮಾಡುತ್ತಾ ಇರಿ, ಆಗ ನಿಮ್ಮನ್ನೂ ಬಿಡುಗಡೆಮಾಡಲಾಗುವುದು. 38  ಕೊಡುವುದನ್ನು ರೂಢಿಮಾಡಿಕೊಳ್ಳಿರಿ, ಆಗ ಜನರು ನಿಮಗೆ ಕೊಡುವರು. ಅವರು ಒಳ್ಳೆಯ ಅಳತೆಯಲ್ಲಿ ಅಳೆದು, ಒತ್ತಿ, ಅಲ್ಲಾಡಿಸಿ, ತುಂಬಿತುಳುಕುತ್ತಿರುವಾಗ ಅದನ್ನು ನಿಮ್ಮ ಮಡಿಲಿಗೆ ಹಾಕುವರು. ಏಕೆಂದರೆ ನೀವು ಅಳೆಯುತ್ತಿರುವ ಅಳತೆಯಿಂದಲೇ ಅವರು ನಿಮಗೆ ಅಳೆದುಕೊಡುವರು.” 39  ಬಳಿಕ ಅವನು ಅವರಿಗೆ ಒಂದು ದೃಷ್ಟಾಂತವನ್ನು ಹೇಳಿದನು. ಅದೇನೆಂದರೆ, “ಒಬ್ಬ ಕುರುಡನು ಇನ್ನೊಬ್ಬ ಕುರುಡನಿಗೆ ದಾರಿತೋರಿಸಲಾರನು, ಅಲ್ಲವೆ? ಅವರಿಬ್ಬರೂ ಹೊಂಡದಲ್ಲಿ ಬೀಳುವರಲ್ಲವೆ? 40  ಬೋಧಕನಿಗಿಂತ ವಿದ್ಯಾರ್ಥಿಯು ದೊಡ್ಡವನಲ್ಲ, ಆದರೆ ಪೂರ್ಣವಾಗಿ ಉಪದೇಶಿಸಲ್ಪಟ್ಟ ಪ್ರತಿಯೊಬ್ಬನು ತನ್ನ ಬೋಧಕನಂತಿರುವನು. 41  ನೀನು ನಿನ್ನ ಸ್ವಂತ ಕಣ್ಣಿನಲ್ಲಿರುವ ಮರದ ದಿಮ್ಮಿಯನ್ನು ಗಮನಿಸದೆ ನಿನ್ನ ಸಹೋದರನ ಕಣ್ಣಿನಲ್ಲಿರುವ ಮರದ ಚೂರನ್ನು ನೋಡುವುದೇಕೆ? 42  ನಿನ್ನ ಕಣ್ಣಿನಲ್ಲಿರುವ ಮರದ ದಿಮ್ಮಿಯನ್ನು ನೀನು ನೋಡದೆ, ‘ನಿನ್ನ ಕಣ್ಣಿನಿಂದ ಮರದ ಚೂರನ್ನು ತೆಗೆಯುತ್ತೇನೆ ಬಾ’ ಎಂದು ನಿನ್ನ ಸಹೋದರನಿಗೆ ನೀನು ಹೇಗೆ ಹೇಳಬಲ್ಲೆ? ಕಪಟಿಯೇ! ಮೊದಲು ನಿನ್ನ ಕಣ್ಣಿನಿಂದ ಮರದ ದಿಮ್ಮಿಯನ್ನು ತೆಗೆದು​ಹಾಕು; ಆಮೇಲೆ ನಿನ್ನ ಸಹೋದರನ ಕಣ್ಣಿನಲ್ಲಿರುವ ಮರದ ಚೂರನ್ನು ಹೇಗೆ ತೆಗೆಯುವುದೆಂಬುದು ನಿನಗೆ ಸ್ಪಷ್ಟವಾಗಿ ಕಾಣಿಸುವುದು. 43  “ಒಳ್ಳೆಯ ಮರವು ಕೆಟ್ಟ ಫಲವನ್ನು ಕೊಡುವುದಿಲ್ಲ; ಕೆಟ್ಟ ಮರವು ಒಳ್ಳೆಯ ಫಲವನ್ನು ಕೊಡುವುದಿಲ್ಲ. 44  ಪ್ರತಿಯೊಂದು ಮರವನ್ನು ಅದರ ಫಲದಿಂದಲೇ ತಿಳಿದುಕೊಳ್ಳಲಾಗುತ್ತದೆ. ಉದಾಹರಣೆಗೆ, ಜನರು ಮುಳ್ಳುಗಿಡಗಳಿಂದ ಅಂಜೂರಗಳನ್ನು ಕೀಳುವುದಿಲ್ಲ ಅಥವಾ ಮುಳ್ಳುಕಳ್ಳಿಗಳಿಂದ ದ್ರಾಕ್ಷಿಹಣ್ಣುಗಳನ್ನು ಕೊಯ್ಯುವುದಿಲ್ಲ. 45  ಒಬ್ಬ ಒಳ್ಳೆಯ ಮನುಷ್ಯನು ತನ್ನ ಹೃದಯದ ಒಳ್ಳೆಯ ಬೊಕ್ಕಸದೊಳಗಿಂದ ಒಳ್ಳೆಯದನ್ನು ಹೊರತರುತ್ತಾನೆ; ಆದರೆ ಕೆಟ್ಟ ಮನುಷ್ಯನು ತನ್ನ ಕೆಟ್ಟ ಬೊಕ್ಕಸದೊಳಗಿಂದ ಕೆಟ್ಟದ್ದನ್ನು ಹೊರತರುತ್ತಾನೆ. ಹೃದಯದಲ್ಲಿ ತುಂಬಿರುವುದನ್ನೇ ಅವನ ಬಾಯಿ ಮಾತಾಡುತ್ತದೆ. 46  “ಹಾಗಾದರೆ ನೀವು ನನ್ನನ್ನು ‘ಕರ್ತನೇ! ಕರ್ತನೇ!’ ಎಂದು ಕರೆದು ನಾನು ಹೇಳುವುದನ್ನು ಮಾಡದೇ ಇರುವುದು ಏಕೆ? 47  ನನ್ನ ಬಳಿಗೆ ಬಂದು, ನನ್ನ ಮಾತುಗಳನ್ನು ಕೇಳಿಸಿಕೊಂಡು ಅವುಗಳಂತೆ ಮಾಡುವ ಪ್ರತಿಯೊಬ್ಬನು ಯಾರಂತಿದ್ದಾನೆ ಎಂಬುದನ್ನು ನಾನು ನಿಮಗೆ ತೋರಿಸುತ್ತೇನೆ. 48  ಅವನು ಆಳವಾಗಿ ಅಗೆದು ದೊಡ್ಡ ಬಂಡೆಯ ಮೇಲೆ ಅಸ್ತಿವಾರವನ್ನು ಹಾಕಿ ಮನೆಯನ್ನು ಕಟ್ಟಿದ ಮನುಷ್ಯನಿಗೆ ಹೋಲಿಕೆಯಾಗಿದ್ದಾನೆ. ನೆರೆಯು ಬಂದಾಗ ನದಿಯು ಆ ಮನೆಗೆ ಬಡಿಯಲಾಗಿ, ದೃಢವಾಗಿ ಕಟ್ಟಲ್ಪಟ್ಟಿದ್ದ ಅದನ್ನು ಅದು ಕದಲಿಸುವಷ್ಟು ಬಲಶಾಲಿಯಾಗಿರಲಿಲ್ಲ. 49  ಆದರೆ ನನ್ನ ಮಾತುಗಳನ್ನು ಕೇಳಿಸಿಕೊಂಡು ಅವುಗಳಂತೆ ಮಾಡದಿರುವವನು, ನೆಲದ ಮೇಲೆ ಅಸ್ತಿವಾರವಿಲ್ಲದೆ ಮನೆಯನ್ನು ಕಟ್ಟಿದ ಮನುಷ್ಯನಿಗೆ ಹೋಲಿಕೆಯಾಗಿದ್ದಾನೆ. ನದಿಯು ಅದಕ್ಕೆ ಎದುರಾಗಿ ಬಡಿದಾಗ ಅದು ಒಡನೆ ಕುಸಿದು ಬಿತ್ತು ಮತ್ತು ಅದರ ಧ್ವಂಸವು ಭಾರಿಯಾಗಿತ್ತು.”

ಪಾದಟಿಪ್ಪಣಿ