ಲೂಕ 4:1-44

4  ಯೇಸು ಪವಿತ್ರಾತ್ಮಭರಿತನಾಗಿ ಯೋರ್ದನ್‌ ನದಿಯಿಂದ ಹಿಂದಿರುಗಿ ಆ ಆತ್ಮದಿಂದ* ಅರಣ್ಯಕ್ಕೆ ನಡೆಸಲ್ಪಟ್ಟು  ನಲವತ್ತು ದಿನಗಳ ವರೆಗೆ ಪಿಶಾಚನಿಂದ ಪ್ರಲೋಭಿಸಲ್ಪಡುತ್ತಾ ಇದ್ದನು. ಇದಲ್ಲದೆ ಆ ದಿನಗಳಲ್ಲಿ ಅವನು ಏನನ್ನೂ ತಿನ್ನಲಿಲ್ಲ; ಆದಕಾರಣ ಅವು ಕಳೆದ ಮೇಲೆ ಅವನಿಗೆ ಹಸಿವಾಯಿತು.  ಆಗ ಪಿಶಾಚನು ಅವನಿಗೆ, “ನೀನು ದೇವರ ಮಗನಾಗಿರುವಲ್ಲಿ ಈ ಕಲ್ಲಿಗೆ ರೊಟ್ಟಿಯಾಗುವಂತೆ ಹೇಳು” ಅಂದನು.  ಅದಕ್ಕೆ ಪ್ರತ್ಯುತ್ತರವಾಗಿ ಯೇಸು ಅವನಿಗೆ, “ ‘ಮನುಷ್ಯನು ರೊಟ್ಟಿ ತಿಂದ ಮಾತ್ರಕ್ಕೆ ಬದುಕುವುದಿಲ್ಲ’ ಎಂದು ಬರೆದಿದೆ” ಅಂದನು.  ಬಳಿಕ ಪಿಶಾಚನು ಅವನನ್ನು ಮೇಲಕ್ಕೆ ಕರೆದುಕೊಂಡು ಹೋಗಿ ನಿವಾಸಿತ ಭೂಮಿಯ ಎಲ್ಲ ರಾಜ್ಯಗಳನ್ನು ಕ್ಷಣಮಾತ್ರದಲ್ಲೇ ಅವನಿಗೆ ತೋರಿಸಿದನು.  ಮತ್ತು ಪಿಶಾಚನು ಅವನಿಗೆ, “ಈ ಎಲ್ಲ ಅಧಿಕಾರವನ್ನೂ ಇವುಗಳ ವೈಭವವನ್ನೂ ನಾನು ನಿನಗೆ ಕೊಡುವೆನು; ಏಕೆಂದರೆ ಇದನ್ನು ನನ್ನ ವಶಕ್ಕೆ ಕೊಡಲಾಗಿದೆ ಮತ್ತು ನನಗೆ ಮನಸ್ಸು ಬಂದವನಿಗೆ ನಾನು ಅದನ್ನು ಕೊಡುತ್ತೇನೆ.  ಆದುದರಿಂದ, ನೀನು ನನ್ನ ಮುಂದೆ ಒಂದು ಆರಾಧನಾ ಕ್ರಿಯೆಯನ್ನು ಮಾಡುವಲ್ಲಿ ಇದೆಲ್ಲವೂ ನಿನ್ನದಾಗುವುದು” ಎಂದನು.  ಅದಕ್ಕೆ ಉತ್ತರವಾಗಿ ಯೇಸು ಅವನಿಗೆ, “ ‘ನಿನ್ನ ದೇವರಾಗಿರುವ ಯೆಹೋವನನ್ನೇ ನೀನು ಆರಾಧಿಸಬೇಕು ಮತ್ತು ಆತನೊಬ್ಬನಿಗೇ ನೀನು ಪವಿತ್ರ ಸೇವೆಯನ್ನು ಸಲ್ಲಿಸಬೇಕು’ ಎಂದು ಬರೆದಿದೆ” ಅಂದನು.  ಅನಂತರ ಪಿಶಾಚನು ಅವನನ್ನು ಯೆರೂಸಲೇಮಿಗೆ ಕರೆದುಕೊಂಡು ಹೋಗಿ ದೇವಾಲಯದ ಕೈಪಿಡಿ ಗೋಡೆಯ ಮೇಲೆ ನಿಲ್ಲಿಸಿ ಅವನಿಗೆ, “ನೀನು ದೇವರ ಮಗನಾಗಿರುವಲ್ಲಿ ಇಲ್ಲಿಂದ ಕೆಳಕ್ಕೆ ಧುಮುಕು; 10  ಏಕೆಂದರೆ ‘ಆತನು ನಿನ್ನ ವಿಷಯವಾಗಿ ನಿನ್ನನ್ನು ಕಾಪಾಡುವಂತೆ ತನ್ನ ದೂತರಿಗೆ ಅಪ್ಪಣೆಕೊಡುವನು’ 11  ಮತ್ತು ‘ನಿನ್ನ ಪಾದವು ಎಂದೂ ಕಲ್ಲಿಗೆ ಬಡಿಯದಂತೆ ಅವರು ನಿನ್ನನ್ನು ತಮ್ಮ ಕೈಗಳಲ್ಲಿ ಎತ್ತಿಕೊಳ್ಳುವರು’ ಎಂದು ಬರೆದಿದೆ” ಅಂದನು. 12  ಅದಕ್ಕೆ ಯೇಸು ಅವನಿಗೆ, “ ‘ನಿನ್ನ ದೇವರಾಗಿರುವ ಯೆಹೋವನನ್ನು ಪರೀಕ್ಷಿಸಬಾರದು’ ಎಂದು ಹೇಳಲಾಗಿದೆ” ಎಂದು ಉತ್ತರಕೊಟ್ಟನು. 13  ಹೀಗೆ ಪಿಶಾಚನು ಎಲ್ಲ ಪ್ರಲೋಭನೆಯನ್ನು ಮುಗಿಸಿ ಇನ್ನೊಂದು ಅನುಕೂಲವಾದ ಸಂದರ್ಭ ಸಿಗುವ ತನಕ ಅವನನ್ನು ಬಿಟ್ಟುಹೋದನು. 14  ತರುವಾಯ ಯೇಸು ಪವಿತ್ರಾತ್ಮದ ಶಕ್ತಿಯಿಂದ ಕೂಡಿದವನಾಗಿ ಗಲಿಲಾಯಕ್ಕೆ ಹಿಂದಿರುಗಿದನು. ಅವನ ಕುರಿತಾದ ಒಳ್ಳೆಯ ಸುದ್ದಿಯು ಸುತ್ತಲಿನ ಊರುಗಳಲ್ಲೆಲ್ಲಾ ಹಬ್ಬಿತು. 15  ಇದಲ್ಲದೆ ಅವನು ಅವರ ಸಭಾಮಂದಿರಗಳಲ್ಲಿ* ಬೋಧಿಸತೊಡಗಿದನು; ಎಲ್ಲರೂ ಅವನನ್ನು ಗೌರವದಿಂದ ಕಾಣುತ್ತಿದ್ದರು. 16  ಬಳಿಕ ಅವನು ತಾನು ಬೆಳೆದ ಊರಾದ ನಜರೇತಿಗೆ ಬಂದು ತನ್ನ ವಾಡಿಕೆಯ ಪ್ರಕಾರ ಸಬ್ಬತ್‌ ದಿನದಂದು ಸಭಾಮಂದಿರಕ್ಕೆ ಹೋಗಿ ಓದುವುದಕ್ಕಾಗಿ ಎದ್ದುನಿಂತನು. 17  ಆಗ ಪ್ರವಾದಿಯಾದ ಯೆಶಾಯನ ಗ್ರಂಥದ ಸುರುಳಿಯನ್ನು ಅವನಿಗೆ ಕೊಡಲಾಯಿತು. ಅವನು ಆ ಸುರುಳಿಯನ್ನು ತೆರೆದು, 18  “ಯೆಹೋವನ ಆತ್ಮವು* ನನ್ನ ಮೇಲೆ ಇದೆ. ಆತನು ನನ್ನನ್ನು ಬಡವರಿಗೆ ಸುವಾರ್ತೆಯನ್ನು ಪ್ರಕಟಿಸುವುದಕ್ಕಾಗಿ ಅಭಿಷೇಕಿಸಿದನು; ಬಂದಿಗಳಿಗೆ ಬಿಡುಗಡೆಯನ್ನು ಸಾರುವುದಕ್ಕೂ ಕುರುಡರಿಗೆ ದೃಷ್ಟಿಯನ್ನು ಕೊಡುವುದಕ್ಕೂ ಜಜ್ಜಲ್ಪಟ್ಟವರನ್ನು ಬಿಡುಗಡೆಮಾಡಿ ಕಳುಹಿಸುವುದಕ್ಕೂ 19  ಯೆಹೋವನ ಸ್ವೀಕೃತ ವರ್ಷವನ್ನು ಸಾರುವುದಕ್ಕೂ ನನ್ನನ್ನು ಕಳುಹಿಸಿದ್ದಾನೆ” ಎಂದು ಬರೆದಿರುವ ಸ್ಥಳವನ್ನು ಕಂಡು ಓದಿದನು. 20  ಓದಿದ ಬಳಿಕ ಆ ಸುರುಳಿಯನ್ನು ಸುತ್ತಿ ಪರಿಚಾರಕನ ಕೈಗೆ ಕೊಟ್ಟು ಕುಳಿತುಕೊಂಡನು; ಸಭಾಮಂದಿರದಲ್ಲಿದ್ದ ಎಲ್ಲರ ಕಣ್ಣುಗಳು ಅವನ ಮೇಲೆಯೇ ನಾಟಿದ್ದವು. 21  ಅವನು ಅವರಿಗೆ, “ಈಗಷ್ಟೇ ನೀವು ಕೇಳಿಸಿಕೊಂಡ ಈ ಶಾಸ್ತ್ರವಚನವು ಇಂದು ನೆರವೇರಿತು” ಎಂದು ಹೇಳಲಾರಂಭಿಸಿದನು. 22  ಆಗ ಅವರೆಲ್ಲರು ಅವನ ಕುರಿತು ಮೆಚ್ಚಿಗೆಯ ಮಾತುಗಳನ್ನಾಡುತ್ತಾ ಅವನ ಬಾಯಿಂದ ಬರುತ್ತಿದ್ದ ಮನವೊಲಿಸುವ ಮಾತುಗಳಿಗೆ ಆಶ್ಚರ್ಯಪಡುತ್ತಾ, “ಇವನು ಯೋಸೇಫನ ಮಗನಲ್ಲವೊ?” ಎಂದು ಹೇಳುತ್ತಿದ್ದರು. 23  ಆಗ ಅವನು ಅವರಿಗೆ, “ ‘ವೈದ್ಯನೇ ನಿನ್ನನ್ನು ವಾಸಿಮಾಡಿಕೊ’ ಎಂಬ ಗಾದೆಯನ್ನು ನೀವು ನಿಸ್ಸಂದೇಹವಾಗಿ ನನಗೆ ಅನ್ವಯಿಸಿ, ‘ಕಪೆರ್ನೌಮಿನಲ್ಲಿ ನಡೆದಿವೆ ಎಂದು ನಾವು ಕೇಳಿಸಿಕೊಂಡಿರುವಂಥ ಕಾರ್ಯಗಳನ್ನು ಈ ನಿನ್ನ ಸ್ವಂತ ಊರಿನಲ್ಲಿಯೂ ಮಾಡಿ ತೋರಿಸು’ ಎಂದು ಹೇಳುವಿರಿ” ಎಂದನು. 24  ಅವನು ಮುಂದುವರಿಸುತ್ತಾ, “ನಾನು ನಿಮಗೆ ನಿಜವಾಗಿಯೂ ಹೇಳುವುದೇನೆಂದರೆ, ಯಾವ ಪ್ರವಾದಿಯೂ ತನ್ನ ಸ್ವಂತ ಪ್ರದೇಶದಲ್ಲಿ ಸ್ವೀಕರಿಸಲ್ಪಡುವುದಿಲ್ಲ. 25  ಉದಾಹರಣೆಗೆ, ಎಲೀಯನ ದಿನಗಳಲ್ಲಿ ಆಕಾಶವು ಮೂರು ವರ್ಷ ಆರು ತಿಂಗಳು ಮುಚ್ಚಲ್ಪಟ್ಟು ದೇಶದಲ್ಲೆಲ್ಲಾ ದೊಡ್ಡ ಬರವುಂಟಾದಾಗ ಇಸ್ರಾಯೇಲಿನಲ್ಲಿ ಅನೇಕ ವಿಧವೆಯರಿದ್ದರು ನಿಜ; 26  ಆದರೂ ಆ ಸ್ತ್ರೀಯರಲ್ಲಿ ಯಾರ ಬಳಿಗೂ ಎಲೀಯನು ಕಳುಹಿಸಲ್ಪಡದೆ ಸೀದೋನಿನ ಸರೆಪ್ತ ಊರಿನಲ್ಲಿದ್ದ ಒಬ್ಬ ವಿಧವೆಯ ಬಳಿಗೆ ಮಾತ್ರ ಕಳುಹಿಸಲ್ಪಟ್ಟನು. 27  ಇದಲ್ಲದೆ, ಪ್ರವಾದಿಯಾದ ಎಲೀಷನ ಕಾಲದಲ್ಲಿ ಇಸ್ರಾಯೇಲಿನಲ್ಲಿ ಅನೇಕ ಕುಷ್ಠರೋಗಿಗಳು ಇದ್ದರಾದರೂ ಅವರಲ್ಲಿ ಯಾರೊಬ್ಬನೂ ಶುದ್ಧಮಾಡಲ್ಪಡಲಿಲ್ಲ, ಸಿರಿಯದವನಾದ ನಾಮಾನನು ಮಾತ್ರ ಶುದ್ಧಮಾಡಲ್ಪಟ್ಟನು” ಎಂದನು. 28  ಆಗ ಸಭಾಮಂದಿರದಲ್ಲಿ ಈ ವಿಷಯಗಳನ್ನು ಕೇಳಿಸಿಕೊಳ್ಳುತ್ತಿದ್ದವರೆಲ್ಲರು ಬಹಳ ಕೋಪಗೊಂಡರು. 29  ಅವರು ಎದ್ದು ಅವನನ್ನು ಊರಹೊರಗೆ ಅಟ್ಟಿ, ತಮ್ಮ ಊರು ಯಾವುದರ ಮೇಲೆ ಕಟ್ಟಲ್ಪಟ್ಟಿತ್ತೊ ಆ ಗುಡ್ಡದ ಕಡಿದಾದ ಸ್ಥಳಕ್ಕೆ ಕರೆದುಕೊಂಡು ಹೋದರು ಮತ್ತು ಅವನನ್ನು ಅಲ್ಲಿಂದ ಜೋರಾಗಿ ಕೆಳಗೆ ದೊಬ್ಬಬೇಕೆಂದಿದ್ದರು. 30  ಆದರೆ ಅವನು ಅವರ ಮಧ್ಯದಿಂದ ಹಾದು ತನ್ನ ದಾರಿಹಿಡಿದು ಹೊರಟು​ಹೋದನು. 31  ಬಳಿಕ ಅವನು ಗಲಿಲಾಯದ ಕಪೆರ್ನೌಮೆಂಬ ಊರಿಗೆ ಬಂದು ಸಬ್ಬತ್‌ ದಿನದಲ್ಲಿ ಅವರಿಗೆ ಬೋಧಿಸುತ್ತಿದ್ದನು. 32  ಅವನ ಮಾತು ಅಧಿಕಾರವುಳ್ಳದ್ದಾಗಿ ಇದ್ದುದರಿಂದ ಅವರು ಅವನು ಬೋಧಿಸುವ ರೀತಿಯನ್ನು ಕಂಡು ಅತ್ಯಾಶ್ಚರ್ಯಪಟ್ಟರು. 33  ಆ ಸಭಾಮಂದಿರದಲ್ಲಿ ದೆವ್ವಹಿಡಿದಿದ್ದ ಒಬ್ಬ ಮನುಷ್ಯನಿದ್ದನು. ಅವನು ಗಟ್ಟಿಯಾಗಿ ಕಿರಿಚುತ್ತಾ, 34  “ಹಾ! ನಜರೇತಿನ ಯೇಸುವೇ, ನಮ್ಮ ಗೊಡವೆ ನಿನಗೇಕೆ? ನಮ್ಮನ್ನು ನಾಶಮಾಡಲು ಬಂದೆಯಾ? ನೀನು ಯಾರೆಂಬುದು ನನಗೆ ಚೆನ್ನಾಗಿ ಗೊತ್ತು; ನೀನು ದೇವರ ಪವಿತ್ರನು” ಎಂದು ಹೇಳಿದನು. 35  ಆದರೆ ಯೇಸು ಅದನ್ನು ಗದರಿಸುತ್ತಾ, “ಸುಮ್ಮನಿರು, ಅವನನ್ನು ಬಿಟ್ಟು ಹೊರಗೆ ಬಾ!” ಎಂದು ಹೇಳಿದನು. ದೆವ್ವವು ಆ ಮನುಷ್ಯನನ್ನು ಅವರ ನಡುವೆ ಕೆಡವಿ ಅವನಿಗೆ ಯಾವ ಹಾನಿಯನ್ನೂ ಮಾಡದೆ ಅವನಿಂದ ಹೊರಗೆ ಬಂತು. 36  ಇದನ್ನು ನೋಡಿ ಎಲ್ಲರೂ ಬೆರಗಾದರು ಮತ್ತು “ಇದೆಂಥ ಮಾತು? ಇವನು ಅಧಿಕಾರದಿಂದಲೂ ಶಕ್ತಿ​ಯಿಂದಲೂ ದೆವ್ವಗಳಿಗೆ ಅಪ್ಪಣೆಕೊಡುತ್ತಾನೆ, ಅವು ಹೊರಗೆ ಬರುತ್ತವೆ” ಎಂದು ಪರಸ್ಪರ ಮಾತಾಡಿಕೊಂಡರು. 37  ಹೀಗೆ ಅವನ ಕುರಿತಾದ ಸುದ್ದಿಯು ಸುತ್ತಲಿನ ಪ್ರಾಂತದ ಪ್ರತಿಯೊಂದು ಮೂಲೆಗೂ ಹಬ್ಬುತ್ತಾ ಹೋಯಿತು. 38  ಅವನು ಸಭಾಮಂದಿರದಿಂದ ಎದ್ದು ಸೀಮೋನನ ಮನೆಗೆ ಹೋದನು. ಆಗ ಸೀಮೋನನ ಅತ್ತೆ ವಿಪರೀತ ಜ್ವರದಿಂದ ನರಳುತ್ತಾ ಇದ್ದುದರಿಂದ ಅವಳ ವಿಷಯದಲ್ಲಿ ಅವರು ಅವನನ್ನು ಬೇಡಿಕೊಂಡರು. 39  ಆಗ ಅವನು ಅವಳ ಬಳಿ ನಿಂತು ಬಾಗಿ ಜ್ವರವನ್ನು ಗದರಿಸಿದಾಗ ಅದು ಅವಳನ್ನು ಬಿಟ್ಟುಹೋಯಿತು. ಆ ಕೂಡಲೆ ಅವಳು ಎದ್ದು ಅವರನ್ನು ಉಪಚರಿಸತೊಡಗಿದಳು. 40  ಸಂಜೆ ಸೂರ್ಯನು ಅಸ್ತಮಿಸುತ್ತಿದ್ದಾಗ ಬೇರೆ ಬೇರೆ ರೀತಿಯ ರೋಗಗಳಿಂದ ಅಸ್ವಸ್ಥರಾಗಿದ್ದವರನ್ನು ಜನರು ಯೇಸುವಿನ ಬಳಿಗೆ ಕರೆದುಕೊಂಡು ಬಂದರು. ಅವನು ಅವರಲ್ಲಿ ಪ್ರತಿಯೊಬ್ಬರ ಮೇಲೆ ತನ್ನ ಕೈಗಳನ್ನಿಟ್ಟು ಗುಣಪಡಿಸುತ್ತಿದ್ದನು. 41  ದೆವ್ವಗಳು ಸಹ, “ನೀನು ದೇವರ ಮಗನು” ಎಂದು ಕೂಗಿಹೇಳುತ್ತಾ ಅನೇಕರೊಳಗಿಂದ ಹೊರಬರುತ್ತಿದ್ದವು. ಆದರೆ ಅವುಗಳಿಗೆ ಅವನು ಕ್ರಿಸ್ತನೆಂದು ತಿಳಿದಿದ್ದ ಕಾರಣ ಅವನು ಅವುಗಳನ್ನು ಗದರಿಸಿ ಅವುಗಳಿಗೆ ಮಾತಾಡಲು ಬಿಡುತ್ತಿರಲಿಲ್ಲ. 42  ಬೆಳಗಾದಾಗ ಅವನು ಹೊರಗೆ ಬಂದು ಒಂದು ಏಕಾಂತವಾದ ಸ್ಥಳಕ್ಕೆ ಹೋದನು. ಆದರೆ ಜನರು ಅವನನ್ನು ಹುಡುಕಿಕೊಂಡು ಅವನಿದ್ದಲ್ಲಿಗೆ ಬಂದು ಅವನು ತಮ್ಮನ್ನು ಬಿಟ್ಟುಹೋಗದಿರುವಂತೆ ಅವನನ್ನು ತಡೆಯಲು ಪ್ರಯತ್ನಿಸಿದರು. 43  ಆದರೆ ಅವನು ಅವರಿಗೆ, “ನಾನು ದೇವರ ರಾಜ್ಯದ ಸುವಾರ್ತೆಯನ್ನು ಬೇರೆ ಊರುಗಳಿಗೂ ಪ್ರಕಟಿಸಬೇಕಾಗಿದೆ; ನಾನು ಇದಕ್ಕಾಗಿಯೇ ಕಳುಹಿಸಲ್ಪಟ್ಟಿದ್ದೇನೆ” ಎಂದು ಹೇಳಿದನು. 44  ಅಂತೆಯೇ ಅವನು ಯೂದಾಯದ ಸಭಾಮಂದಿರಗಳಲ್ಲಿ ಸಾರುತ್ತಾ ಹೋದನು.

ಪಾದಟಿಪ್ಪಣಿ

ಲೂಕ 4:⁠1 ಅಥವಾ, “ದೇವರ ಕಾರ್ಯಕಾರಿ ಶಕ್ತಿ.” ಪರಿಶಿಷ್ಟ 7ನ್ನು ನೋಡಿ.
ಲೂಕ 4:15 ಮತ್ತಾ 4:23ರ ಪಾದಟಿಪ್ಪಣಿಯನ್ನು ನೋಡಿ.
ಲೂಕ 4:⁠18 ಅಥವಾ, “ದೇವರ ಕಾರ್ಯಕಾರಿ ಶಕ್ತಿ.” ಪರಿಶಿಷ್ಟ 7ನ್ನು ನೋಡಿ.