ಲೂಕ 20:1-47

20  ಅವನು ಒಂದು ದಿವಸ ದೇವಾಲಯದಲ್ಲಿ ಜನರಿಗೆ ಬೋಧಿಸುತ್ತಾ ಸುವಾರ್ತೆಯನ್ನು ಪ್ರಕಟಿಸುತ್ತಾ ಇದ್ದಾಗ ಮುಖ್ಯ ಯಾಜಕರೂ ಶಾಸ್ತ್ರಿಗಳೂ ಹಿರೀ​ಪುರುಷರೂ ಅವನ ಬಳಿಗೆ ಬಂದು  ಅವನಿಗೆ, “ನೀನು ಯಾವ ಅಧಿಕಾರದಿಂದ ಇವುಗಳನ್ನು ಮಾಡುತ್ತೀ? ಅಥವಾ ನಿನಗೆ ಈ ಅಧಿಕಾರವನ್ನು ಕೊಟ್ಟವರು ಯಾರು? ನಮಗೆ ಹೇಳು” ಎಂದು ಗಟ್ಟಿಯಾದ ಸ್ವರದಲ್ಲಿ ಕೇಳಿದರು.  ಅದಕ್ಕೆ ಯೇಸು ಅವರಿಗೆ, “ನಾನು ಸಹ ನಿಮಗೆ ಒಂದು ಪ್ರಶ್ನೆಯನ್ನು ಕೇಳುತ್ತೇನೆ. ನೀವು ನನಗೆ ಹೇಳಿ:  ಯೋಹಾನನು ಮಾಡಿಸಿದ ದೀಕ್ಷಾಸ್ನಾನವು ಸ್ವರ್ಗದಿಂದ ಬಂತೋ ಮನುಷ್ಯರಿಂದ ಬಂತೊ?” ಎಂದನು.  ಆಗ ಅವರು, “ ‘ಸ್ವರ್ಗದಿಂದ ಬಂತು’ ಎಂದು ನಾವು ಹೇಳಿದರೆ, ‘ಹಾಗಾದರೆ ನೀವೇಕೆ ಅವನನ್ನು ನಂಬಲಿಲ್ಲ?’ ಎಂದು ಹೇಳುವನು.  ಆದರೆ ‘ಮನುಷ್ಯರಿಂದ ಬಂತು’ ಎಂದು ನಾವು ಹೇಳಿದರೆ ಜನರೆಲ್ಲರು ನಮ್ಮನ್ನು ಕಲ್ಲೆಸೆದು ಕೊಲ್ಲುವರು; ಏಕೆಂದರೆ ಯೋಹಾನನು ಒಬ್ಬ ಪ್ರವಾದಿಯೆಂದು ಅವರು ಒಪ್ಪಿದ್ದಾರೆ” ಎಂದು ತಮ್ಮತಮ್ಮೊಳಗೆ ಮಾತಾಡಿ​ಕೊಂಡರು.  ಆದುದರಿಂದ ತಮಗೆ ಅದರ ಮೂಲವು ತಿಳಿದಿಲ್ಲ ಎಂದು ಅವರು ಉತ್ತರಿಸಿದರು.  ಆಗ ಯೇಸು ಅವರಿಗೆ, “ಹಾಗಾದರೆ ಯಾವ ಅಧಿಕಾರದಿಂದ ಇವುಗಳನ್ನು ಮಾಡುತ್ತೇನೆ ಎಂಬುದನ್ನು ನಾನೂ ನಿಮಗೆ ಹೇಳುವುದಿಲ್ಲ” ಎಂದನು.  ಬಳಿಕ ಅವನು ಜನರಿಗೆ ಈ ದೃಷ್ಟಾಂತವನ್ನು ಹೇಳತೊಡಗಿದನು: “ಒಬ್ಬ ಮನುಷ್ಯನು ಒಂದು ದ್ರಾಕ್ಷಿಯ ತೋಟವನ್ನು ಮಾಡಿ ಅದನ್ನು ವ್ಯವಸಾಯ​ಗಾರರಿಗೆ ವಹಿಸಿಕೊಟ್ಟು ವಿದೇಶಕ್ಕೆ ಹೊರಟುಹೋಗಿ ಅಲ್ಲಿ ಬಹುಕಾಲದ ವರೆಗೆ ಇದ್ದನು. 10  ತಕ್ಕ ಕಾಲ ಬಂದಾಗ ಆ ವ್ಯವಸಾಯಗಾರರು ದ್ರಾಕ್ಷಿಯ ತೋಟದ ಫಲದಲ್ಲಿ ಸ್ವಲ್ಪವನ್ನು ತನಗೆ ಕೊಡಬಹುದೆಂದು ಅವರ ಬಳಿಗೆ ಒಬ್ಬ ಆಳನ್ನು ಕಳುಹಿಸಿದನು. ಆದರೆ ವ್ಯವಸಾಯಗಾರರು ಅವನನ್ನು ಹೊಡೆದು ಬರಿಗೈಯಲ್ಲಿ ಕಳುಹಿಸಿಬಿಟ್ಟರು. 11  ಪುನಃ ಅವನು ಬೇರೊಬ್ಬ ಆಳನ್ನು ಅವರ ಬಳಿಗೆ ಕಳುಹಿಸಿದನು. ಅವರು ಅವನಿಗೂ ಹೊಡೆದು ಅವಮಾನ​ಪಡಿಸಿ ಬರಿಗೈಯಲ್ಲಿ ಕಳುಹಿಸಿಬಿಟ್ಟರು. 12  ಮತ್ತೊಮ್ಮೆ ಅವನು ಮೂರನೆಯವನನ್ನು ​ಕಳುಹಿಸಿದನು; ಅವರು ಅವನನ್ನೂ ಗಾಯಗೊಳಿಸಿ ಹೊರಗೆ ಅಟ್ಟಿದರು. 13  ಆಗ ದ್ರಾಕ್ಷಿಯ ತೋಟದ ಯಜಮಾನನು, ‘ನಾನೇನು ಮಾಡಲಿ? ಅತಿ ಪ್ರಿಯನಾಗಿರುವ ನನ್ನ ಮಗನನ್ನು ಕಳುಹಿಸುತ್ತೇನೆ. ಅವರು ಅವನಿಗೆ ಗೌರವ ತೋರಿಸಬಹುದು’ ಅಂದುಕೊಂಡನು. 14  ಆದರೆ ಆ ವ್ಯವಸಾಯಗಾರರು ಅವನನ್ನು ಕಂಡಾಗ, ‘ಇವನೇ ಬಾಧ್ಯಸ್ಥನು. ಇವನನ್ನು ಕೊಂದು​ಹಾಕೋಣ, ಆಗ ಆಸ್ತಿಯು ನಮ್ಮದಾಗಬಹುದು’ ಎಂದು ಪರಸ್ಪರ ತರ್ಕಿಸಿದರು. 15  ಹೀಗೆ ಅವರು ಅವನನ್ನು ದ್ರಾಕ್ಷಿಯ ತೋಟದ ಹೊರಗೆ ಎಸೆದು ಕೊಂದುಬಿಟ್ಟರು. ಹಾಗಾದರೆ ದ್ರಾಕ್ಷಿಯ ತೋಟದ ಯಜಮಾನನು ಅವರಿಗೆ ಏನು ಮಾಡುವನು? 16  ಅವನು ಬಂದು ಈ ವ್ಯವಸಾಯಗಾರರನ್ನು ಸಂಹಾರಮಾಡಿ ದ್ರಾಕ್ಷಿಯ ತೋಟವನ್ನು ಬೇರೆಯವರಿಗೆ ವಹಿಸಿಕೊಡುವನು.” ಅವರು ಇದನ್ನು ಕೇಳಿಸಿಕೊಂಡು, “ಹಾಗೆಂದೂ ಆಗದಿರಲಿ” ಎಂದರು. 17  ಆದರೆ ಅವನು ಅವರನ್ನು ದಿಟ್ಟಿಸಿ ನೋಡಿ, “ಹಾಗಾದರೆ ‘ಕಟ್ಟುವವರು ತಿರಸ್ಕರಿಸಿದ ಕಲ್ಲೇ ಮುಖ್ಯವಾದ ಮೂಲೆಗಲ್ಲಾಯಿತು’ ಎಂದು ಬರೆಯಲ್ಪಟ್ಟಿರುವುದರ ಅರ್ಥವೇನು? 18  ಆ ಕಲ್ಲಿನ ಮೇಲೆ ಬೀಳುವ ಪ್ರತಿಯೊಬ್ಬನು ಚೂರುಚೂರಾಗುವನು ಮತ್ತು ಇದು ಯಾವನ ಮೇಲೆ ಬೀಳುವುದೋ ಅವನನ್ನು ಪುಡಿಪುಡಿಮಾಡುವುದು” ಎಂದು ಹೇಳಿದನು. 19  ಅವನು ತಮ್ಮನ್ನು ಮನಸ್ಸಿನಲ್ಲಿಟ್ಟುಕೊಂಡೇ ಈ ದೃಷ್ಟಾಂತವನ್ನು ಹೇಳಿದನು ಎಂಬುದನ್ನು ಗ್ರಹಿಸಿದವರಾದ ಶಾಸ್ತ್ರಿಗಳು ಮತ್ತು ಮುಖ್ಯ ಯಾಜಕರು ಅದೇ ಗಳಿಗೆಯಲ್ಲಿ ಅವನನ್ನು ಹಿಡಿಯಲು ಬಯಸಿದರಾದರೂ ಜನರಿಗೆ ಭಯಪಟ್ಟರು. 20  ಅವನನ್ನು ನಿಕಟವಾಗಿ ಗಮನಿಸಿದ ಬಳಿಕ ಅವರು ಅವನನ್ನು ಮಾತಿನಲ್ಲಿ ಹಿಡಿದು ಸರಕಾರಕ್ಕೂ ರಾಜ್ಯಪಾಲನ ವಶಕ್ಕೂ ಒಪ್ಪಿಸಲಿಕ್ಕಾಗಿ ನೀತಿವಂತರಂತೆ ಸೋಗುಹಾಕಿಕೊಂಡಿದ್ದ ಪುರುಷರನ್ನು ಗುಟ್ಟಿನಲ್ಲಿ ಹಣಕ್ಕೆ ಗೊತ್ತುಪಡಿಸಿ ಕಳುಹಿಸಿದರು. 21  ಅವರು ಯೇಸುವಿಗೆ, “ಬೋಧಕನೇ, ನೀನು ಸರಿಯಾಗಿ ಮಾತಾಡುವವನೂ ಬೋಧಿಸುವವನೂ ಯಾವುದೇ ಪಕ್ಷಪಾತವನ್ನು ತೋರಿಸದವನೂ ಆಗಿದ್ದೀ; ನೀನು ದೇವರ ಮಾರ್ಗವನ್ನು ಸತ್ಯಕ್ಕೆ ಅನುಗುಣ​ವಾಗಿ ಬೋಧಿಸುತ್ತೀ ಎಂಬುದನ್ನು ಬಲ್ಲೆವು. 22  ಆದುದರಿಂದ ನಾವು ಕೈಸರನಿಗೆ ಕಂದಾಯವನ್ನು ನೀಡುವುದು ನ್ಯಾಯಸಮ್ಮತವೋ ಅಲ್ಲವೊ?” ಎಂದು ಕೇಳಿದರು. 23  ಆದರೆ ಅವನು ಅವರ ಕುಯುಕ್ತಿಯನ್ನು ಗ್ರಹಿಸಿದವನಾಗಿ ಅವರಿಗೆ, 24  “ನನಗೆ ಒಂದು ದಿನಾರ ನಾಣ್ಯವನ್ನು ತೋರಿಸಿರಿ. ಇದರಲ್ಲಿ ಯಾರ ಬಿಂಬವೂ ಮೇಲ್ಬರಹವೂ ಇದೆ?” ಎಂದು ಕೇಳಿದಾಗ, “ಕೈಸರನದು” ಎಂದು ಅವರು ಹೇಳಿದರು. 25  ಅದಕ್ಕೆ ಅವನು, “ಹಾಗಾದರೆ ಕೈಸರನದನ್ನು ಕೈಸರನಿಗೆ ಕೊಡಿರಿ, ಆದರೆ ದೇವರದನ್ನು ದೇವರಿಗೆ ಕೊಡಿರಿ” ಅಂದನು. 26  ಈ ಮಾತಿನಲ್ಲಿ ಅವರು ಜನರ ಮುಂದೆ ಅವನನ್ನು ಹಿಡಿಯಲು ಶಕ್ತರಾಗಲಿಲ್ಲ, ಆದರೆ ಅವನು ಕೊಟ್ಟ ಉತ್ತರದಿಂದ ಆಶ್ಚರ್ಯಪಟ್ಟು ಸುಮ್ಮನಾದರು. 27  ತರುವಾಯ ಪುನರುತ್ಥಾನವಿಲ್ಲವೆಂದು ಹೇಳುವ ಸದ್ದುಕಾಯರಲ್ಲಿ ಕೆಲವರು ಅವನ ಬಳಿಗೆ ಬಂದು, 28  “ಬೋಧಕನೇ, ‘ಒಬ್ಬ ಮನುಷ್ಯನ ಅಣ್ಣನು ಹೆಂಡತಿಯುಳ್ಳವನಾಗಿದ್ದು ಮಕ್ಕಳಿಲ್ಲದೆ ಸತ್ತರೆ ಅವನ ಹೆಂಡತಿಯನ್ನು ಅವನ ತಮ್ಮನು ಮದುವೆಮಾಡಿಕೊಂಡು ಅವಳಲ್ಲಿ ತನ್ನ ಅಣ್ಣನಿಗಾಗಿ ಸಂತಾನವನ್ನು ಪಡೆಯಬೇಕು’ ಎಂದು ಮೋಶೆಯು ನಮಗೆ ಬರೆದನು. 29  ಹೀಗೆ ಏಳು ಮಂದಿ ಅಣ್ಣತಮ್ಮಂದಿರಿದ್ದರು; ಮೊದಲನೆಯವನು ಮದುವೆ​ಮಾಡಿಕೊಂಡು ಸಂತಾನ​ವಿಲ್ಲದೆ ಸತ್ತನು. 30  ಅಂತೆಯೇ ಎರಡನೆಯವನೂ 31  ಬಳಿಕ ಮೂರನೆಯವನೂ ಅವಳನ್ನು ಮದುವೆಮಾಡಿ​ಕೊಂಡರು. ಹೀಗೆ ಏಳು ಮಂದಿಯೂ ಮದುವೆಮಾಡಿಕೊಂಡರು; ಆದರೆ ಅವರೆಲ್ಲರೂ ಸಂತಾನವಿಲ್ಲದೆ ಸತ್ತರು. 32  ಕೊನೆಗೆ ಆ ಸ್ತ್ರೀಯೂ ಸತ್ತಳು. 33  ಹಾಗಾದರೆ ಪುನರುತ್ಥಾನದಲ್ಲಿ ಅವಳು ಅವರಲ್ಲಿ ಯಾರಿಗೆ ಹೆಂಡತಿಯಾಗಿರುವಳು? ಏಕೆಂದರೆ ಏಳು ಮಂದಿಯೂ ಅವಳನ್ನು ಮದುವೆಮಾಡಿಕೊಂಡಿದ್ದರಲ್ಲಾ” ಎಂದು ಅವನನ್ನು ಪ್ರಶ್ನಿಸಿದರು. 34  ಯೇಸು ಅವರಿಗೆ, “ಈ ವಿಷಯಗಳ ವ್ಯವಸ್ಥೆಯ ಮಕ್ಕಳು ಮದುವೆಮಾಡಿಕೊಳ್ಳುತ್ತಾರೆ ಮತ್ತು ಮದುವೆಮಾಡಿಕೊಡುತ್ತಾರೆ; 35  ಆದರೆ ಬರಲಿರುವ ವಿಷಯಗಳ ವ್ಯವಸ್ಥೆಯಲ್ಲಿ ಜೀವವನ್ನು ಪಡೆದುಕೊಳ್ಳಲು ಮತ್ತು ಸತ್ತವರೊಳಗಿಂದ ಪುನರುತ್ಥಾನಹೊಂದಲು ಯೋಗ್ಯರಾಗಿ ಪರಿಗಣಿಸಲ್ಪಟ್ಟವರು ಮದುವೆಮಾಡಿಕೊಳ್ಳುವುದೂ ಇಲ್ಲ, ಮದುವೆಮಾಡಿಕೊಡುವುದೂ ಇಲ್ಲ; 36  ಅವರು ಇನ್ನೆಂದೂ ಸಾಯುವುದಿಲ್ಲ. ಏಕೆಂದರೆ ಅವರು ದೇವದೂತರಂತಿದ್ದಾರೆ ಮತ್ತು ಪುನರುತ್ಥಾನ ಹೊಂದುವುದರಿಂದ ದೇವರ ಮಕ್ಕಳಾಗುತ್ತಾರೆ. 37  ಮುಳ್ಳಿನ ಪೊದೆಯ ಕುರಿತಾದ ವೃತ್ತಾಂತದಲ್ಲಿ ಯೆಹೋವನನ್ನು, ‘ಅಬ್ರಹಾಮನ ದೇವರು, ಇಸಾಕನ ದೇವರು ಮತ್ತು ಯಾಕೋಬನ ದೇವರು’ ಎಂದು ಕರೆದಾಗ ಸತ್ತವರು ಎಬ್ಬಿಸಲ್ಪಡುತ್ತಾರೆ ಎಂದು ಮೋಶೆಯು ಸಹ ತಿಳಿಯಪಡಿಸಿದನು. 38  ಆತನು ಸತ್ತವರಿಗಲ್ಲ, ಜೀವಿತರಿಗೆ ದೇವರಾಗಿದ್ದಾನೆ. ಅವರೆಲ್ಲರೂ ಆತನಿಗೆ ಜೀವಿಸುವವರೇ” ಎಂದು ಹೇಳಿದನು. 39  ಅದಕ್ಕೆ ಶಾಸ್ತ್ರಿಗಳಲ್ಲಿ ಕೆಲವರು “ಬೋಧಕನೇ, ನೀನು ಚೆನ್ನಾಗಿ ಹೇಳಿದಿ” ಎಂದರು. 40  ಬಳಿಕ ಅವನಿಗೆ ಒಂದೇ ಒಂದು ಪ್ರಶ್ನೆಯನ್ನು ಕೇಳಲು ಸಹ ಅವರಿಗೆ ಧೈರ್ಯವಿರಲಿಲ್ಲ. 41  ಆಗ ಅವನು ಅವರಿಗೆ, “ಕ್ರಿಸ್ತನು ದಾವೀದನ ಮಗನೆಂದು ಅವರು ಏಕೆ ಹೇಳುತ್ತಾರೆ? 42  ದಾವೀದನು ತಾನೇ ಕೀರ್ತನೆಗಳ ಗ್ರಂಥದಲ್ಲಿ, ‘ “ನಾನು ನಿನ್ನ ವೈರಿಗಳನ್ನು ನಿನ್ನ ಪಾದಪೀಠವಾಗಿ ಮಾಡುವ ತನಕ 43  ನನ್ನ ಬಲಗಡೆಯಲ್ಲಿ ಕುಳಿತುಕೊಂಡಿರು” ಎಂದು ಯೆಹೋವನು ನನ್ನ ಕರ್ತನಿಗೆ ನುಡಿದನು’ ಎಂದು ಹೇಳುತ್ತಾನೆ. 44  ದಾವೀದನು ಅವನನ್ನು ‘ಕರ್ತನು’ ಎಂದು ಕರೆದರೆ ಅವನು ಅವನಿಗೆ ಮಗನಾಗುವುದು ಹೇಗೆ?” ಎಂದು ಕೇಳಿದನು. 45  ಬಳಿಕ ಜನರೆಲ್ಲರು ಕಿವಿಗೊಡು​ತ್ತಿದ್ದಾಗ ಅವನು ಶಿಷ್ಯರಿಗೆ, 46  “ಶಾಸ್ತ್ರಿ​ಗಳ ವಿಷಯದಲ್ಲಿ ಎಚ್ಚರಿಕೆಯಿಂದಿರಿ. ಅವರು ನಿಲುವಂಗಿಗಳನ್ನು ಧರಿಸಿಕೊಂಡು ತಿರುಗಾಡುತ್ತಾ ಮಾರುಕಟ್ಟೆಗಳಲ್ಲಿ ವಂದನೆಗಳನ್ನೂ ಸಭಾಮಂದಿರಗಳಲ್ಲಿ ಮುಖ್ಯ ಪೀಠಗಳನ್ನೂ ಸಂಧ್ಯಾ ಭೋಜನಗಳಲ್ಲಿ ಅತಿ ಶ್ರೇಷ್ಠ ಸ್ಥಾನಗಳನ್ನೂ ಇಷ್ಟ​ಪಡುತ್ತಾರೆ. 47  ಅವರು ವಿಧವೆಯರ ಮನೆಗಳನ್ನು ನುಂಗುವವರಾಗಿದ್ದಾರೆ ಮತ್ತು ನಟನೆಗಾಗಿ ಉದ್ದವಾದ ಪ್ರಾರ್ಥನೆಗಳನ್ನು ಮಾಡುತ್ತಾರೆ. ಇವರು ಹೆಚ್ಚು ತೀಕ್ಷ್ಣವಾದ ನ್ಯಾಯತೀರ್ಪನ್ನು ಹೊಂದುವರು” ಎಂದು ಹೇಳಿದನು.

ಪಾದಟಿಪ್ಪಣಿ