ಲೂಕ 14:1-35

14  ಒಂದು ಸಂದರ್ಭದಲ್ಲಿ ಅವನು ಸಬ್ಬತ್‌ ದಿನದಂದು ಫರಿಸಾಯರ ಮುಖ್ಯಸ್ಥರಲ್ಲಿ ಒಬ್ಬನ ಮನೆಗೆ ಊಟಕ್ಕೆ ಹೋಗಿದ್ದಾಗ ಅವರು ಅವನನ್ನು ನಿಕಟವಾಗಿ ಗಮನಿಸುತ್ತಿದ್ದರು.  ಅಲ್ಲಿ ಜಲೋದರ ರೋಗವಿದ್ದ ಒಬ್ಬ ಮನುಷ್ಯನು ಅವನ ಮುಂದೆ ಇದ್ದನು.  ಆಗ ಯೇಸು ಧರ್ಮಶಾಸ್ತ್ರದಲ್ಲಿ ಪ್ರವೀಣರಾಗಿದ್ದವರಿಗೂ ಫರಿಸಾಯರಿಗೂ, “ಸಬ್ಬತ್‌ ದಿನದಲ್ಲಿ ವಾಸಿಮಾಡುವುದು ಧರ್ಮಸಮ್ಮತವೊ ಅಲ್ಲವೊ?” ಎಂದು ಕೇಳಿದನು.  ಆದರೆ ಅವರು ಸುಮ್ಮನಿದ್ದರು. ಆಗ ಅವನು ಆ ಮನುಷ್ಯನನ್ನು ಮುಟ್ಟಿ ವಾಸಿಮಾಡಿ ಕಳುಹಿಸಿಬಿಟ್ಟನು.  ಮತ್ತು ಅವನು ಅವರಿಗೆ, “ನಿಮ್ಮಲ್ಲಿ ಯಾವನು ತನ್ನ ಮಗನಾಗಲಿ ಎತ್ತಾಗಲಿ ಸಬ್ಬತ್‌ ದಿನದಂದು ಬಾವಿಯಲ್ಲಿ ಬೀಳುವುದಾದರೆ ತಕ್ಷಣವೇ ಅವನನ್ನು ಮೇಲಕ್ಕೆ ಎತ್ತದಿರುವನು?” ಎಂದು ಕೇಳಿದನು.  ಅವರಿಗೆ ಈ ವಿಷಯಗಳ ಕುರಿತು ಉತ್ತರ ಕೊಡಲು ಸಾಧ್ಯವಾಗಲಿಲ್ಲ.  ಊಟಕ್ಕೆ ಆಮಂತ್ರಿಸಲ್ಪಟ್ಟವರು ತಮಗಾಗಿ ಅತಿ ಶ್ರೇಷ್ಠ ಸ್ಥಾನಗಳನ್ನು ಆರಿಸಿಕೊಳ್ಳುತ್ತಿರುವುದನ್ನು ಅವನು ಗಮನಿಸಿದ್ದರಿಂದ ಅವರಿಗೆ ಒಂದು ದೃಷ್ಟಾಂತವನ್ನು ಹೇಳಲಾರಂಭಿಸಿದನು:  “ಯಾರಾದರೊಬ್ಬರು ನಿನ್ನನ್ನು ಮದುವೆಯ ಔತಣಕ್ಕೆ ಆಮಂತ್ರಿಸಿದಾಗ ಅತಿ ಶ್ರೇಷ್ಠ ಸ್ಥಾನದಲ್ಲಿ ಕುಳಿತುಕೊಳ್ಳಬೇಡ. ಒಂದುವೇಳೆ ನಿನಗಿಂತ ಹೆಚ್ಚು ಗೌರವಾರ್ಹನಾದ ಒಬ್ಬನನ್ನು ಅವನು ಆಮಂತ್ರಿಸಿರ​ಬಹುದು  ಮತ್ತು ನಿನ್ನನ್ನೂ ಅವನನ್ನೂ ಆಮಂತ್ರಿಸಿದವನು ಬಂದು, ‘ಈ ಮನುಷ್ಯನಿಗೆ ಆ ಸ್ಥಳವನ್ನು ಬಿಟ್ಟುಕೊಡು’ ಎಂದು ಹೇಳಿದರೆ ನೀನು ನಾಚಿಕೊಂಡು ಅತಿ ಕೆಳಗಿನ ಸ್ಥಾನದಲ್ಲಿ ಕುಳಿತುಕೊಳ್ಳಬೇಕಾಗುವುದು. 10  ಆದರೆ ನಿನ್ನನ್ನು ಆಮಂತ್ರಿಸಿದಾಗ ಹೋಗಿ ಅತಿ ಕೆಳಗಿನ ಸ್ಥಾನದಲ್ಲಿ ಕುಳಿತುಕೊ; ನಿನ್ನನ್ನು ಆಮಂತ್ರಿಸಿದವನು ಬಂದು, ‘ಸ್ನೇಹಿತನೇ, ನೀನು ಎದ್ದು ಮೇಲಿನ ಸ್ಥಾನಕ್ಕೆ ಹೋಗು’ ಎಂದು ಹೇಳಿದರೆ ಆಗ ನಿನ್ನ ಎಲ್ಲ ಜೊತೆ ಅತಿಥಿಗಳ ಮುಂದೆ ನಿನಗೆ ಗೌರವವುಂಟಾಗುವುದು. 11  ತನ್ನನ್ನು ಹೆಚ್ಚಿಸಿಕೊಳ್ಳುವ ಪ್ರತಿಯೊಬ್ಬನು ತಗ್ಗಿಸಲ್ಪಡುವನು ಮತ್ತು ತನ್ನನ್ನು ತಗ್ಗಿಸಿಕೊಳ್ಳುವವನು ಹೆಚ್ಚಿಸಲ್ಪಡುವನು.” 12  ಬಳಿಕ ಅವನು ತನ್ನನ್ನು ಆಮಂತ್ರಿಸಿದ ಮನುಷ್ಯನಿಗೆ, “ನೀನು ಮಧ್ಯಾಹ್ನದ ಊಟವನ್ನು ಅಥವಾ ಸಂಧ್ಯಾ ಭೋಜನವನ್ನು ಏರ್ಪಡಿಸುವಾಗ ನಿನ್ನ ಸ್ನೇಹಿತರನ್ನಾಗಲಿ ಸಹೋದರರನ್ನಾಗಲಿ ಸಂಬಂಧಿಕರನ್ನಾಗಲಿ ಇಲ್ಲವೆ ಐಶ್ವರ್ಯವಂತರಾದ ನೆರೆಯವರನ್ನಾಗಲಿ ಕರೆಯಬೇಡ. ಪ್ರಾಯಶಃ ಅವರು ಪ್ರತಿಯಾಗಿ ನಿನ್ನನ್ನೂ ಕರೆಯಬಹುದು ಮತ್ತು ಅದು ನಿನಗೆ ಪ್ರತ್ಯುಪಕಾರ ಮಾಡಿದಂತಾಗುವುದು. 13  ಆದರೆ ನೀನು ಔತಣವನ್ನು ಏರ್ಪಡಿಸುವಾಗ ಬಡವರನ್ನೂ ಊನವಾದವರನ್ನೂ ಕುಂಟರನ್ನೂ ಕುರುಡರನ್ನೂ ಆಮಂತ್ರಿಸು; 14  ನಿನಗೆ ಪ್ರತ್ಯುಪಕಾರ ಮಾಡಲು ಅವರ ಬಳಿ ಏನೂ ಇಲ್ಲದ ಕಾರಣ ನೀನು ಸಂತೋಷಿತನಾಗುವಿ. ಏಕೆಂದರೆ ನೀತಿವಂತರಿಗಾಗುವ ಪುನರುತ್ಥಾನದಲ್ಲಿ ನಿನಗೆ ಪ್ರತ್ಯುಪಕಾರ ದೊರೆಯುವುದು” ಎಂದು ಹೇಳಿದನು. 15  ಈ ಮಾತುಗಳನ್ನು ಕೇಳಿಸಿ​ಕೊಂಡಾಗ ಜೊತೆ ಅತಿಥಿಗಳಲ್ಲಿ ಒಬ್ಬನು ಅವನಿಗೆ, “ದೇವರ ರಾಜ್ಯದಲ್ಲಿ ಊಟಮಾಡುವವನೇ ಸಂತೋಷಿತನು” ಎಂದನು. 16  ಯೇಸು ಅವನಿಗೆ ಹೇಳಿದ್ದೇನೆಂದರೆ, “ಒಬ್ಬ ಮನುಷ್ಯನು ಒಂದು ದೊಡ್ಡ ಸಂಧ್ಯಾ ಔತಣವನ್ನು ಏರ್ಪಡಿಸಿ ಅನೇಕರನ್ನು ಆಮಂತ್ರಿಸಿದನು. 17  ಸಂಧ್ಯಾ ಭೋಜನದ ಸಮಯವಾದಾಗ ಆಮಂತ್ರಿಸಲ್ಪಟ್ಟವರ ಬಳಿಗೆ ಅವನು ತನ್ನ ಆಳನ್ನು ಕಳುಹಿಸಿ, ‘ಬನ್ನಿರಿ, ಈಗ ಎಲ್ಲವೂ ಸಿದ್ಧವಾಗಿದೆ’ ಎಂದು ಹೇಳಿಸಿದನು. 18  ಆದರೆ ಅವರೆಲ್ಲರೂ ನೆವ ಹೇಳಲಾರಂಭಿಸಿದರು. ಮೊದಲನೆಯವನು ಅವನಿಗೆ, ‘ನಾನು ಒಂದು ಹೊಲವನ್ನು ಖರೀದಿಸಿದ್ದೇನೆ, ಹೋಗಿ ಅದನ್ನು ನೋಡಬೇಕು. ನನ್ನನ್ನು ಕ್ಷಮಿಸು’ ಎಂದು ಹೇಳಿದನು. 19  ಮತ್ತೊಬ್ಬನು, ‘ನಾನು ಐದು ಜೊತೆ ಎತ್ತುಗಳನ್ನು ಖರೀದಿ​ಸಿದ್ದೇನೆ, ಅವುಗಳನ್ನು ಪರೀಕ್ಷಿಸಲು ಹೋಗುತ್ತಿದ್ದೇನೆ. ನನ್ನನ್ನು ಕ್ಷಮಿಸು’ ಎಂದನು. 20  ಇನ್ನೊಬ್ಬನು, ‘ನಾನು ಈಗಷ್ಟೇ ಮದುವೆಮಾಡಿ​ಕೊಂಡಿದ್ದೇನೆ; ಆದುದರಿಂದ ನನಗೆ ಬರಲಾಗುವುದಿಲ್ಲ’ ಎಂದು ಹೇಳಿದನು. 21  ಆ ಆಳು ಬಂದು ತನ್ನ ಯಜಮಾನನಿಗೆ ಈ ವಿಷಯಗಳನ್ನು ವರದಿಮಾಡಿದನು. ಆಗ ಮನೆಯ ಯಜಮಾನನು ಕ್ರೋಧಗೊಂಡು ತನ್ನ ಆಳಿಗೆ, ‘ಬೇಗನೆ ಪಟ್ಟಣದ ಅಗಲವಾದ ಬೀದಿಗಳಿಗೂ ಓಣಿಗಳಿಗೂ ಹೋಗಿ ಬಡವರನ್ನೂ ಊನವಾದವರನ್ನೂ ಕುರುಡರನ್ನೂ ಕುಂಟರನ್ನೂ ಕರೆದುಕೊಂಡು ಬಾ’ ಎಂದು ಹೇಳಿದನು. 22  ಸ್ವಲ್ಪ ಸಮಯದ ಬಳಿಕ ಆ ಆಳು ಬಂದು, ‘ಯಜಮಾನನೇ, ನೀನು ಅಪ್ಪಣೆಕೊಟ್ಟಂತೆಯೇ ಮಾಡಲಾಗಿದೆ; ಆದರೆ ಇನ್ನೂ ಸ್ಥಳವಿದೆ’ ಎಂದನು. 23  ಆಗ ಯಜಮಾನನು ಆ ಆಳಿಗೆ, ‘ದಾರಿಗಳಿಗೂ ಬೇಲಿಹಾಕಿದ ಸ್ಥಳಗಳ ಬಳಿಗೂ ಹೋಗಿ ಅಲ್ಲಿ ಸಿಕ್ಕಿದವರನ್ನು ಬರುವಂತೆ ಒತ್ತಾಯಿಸು; ನನ್ನ ಮನೆಯು ತುಂಬಲಿ. 24  ಆದರೆ ಆಮಂತ್ರಿಸಲ್ಪಟ್ಟ ಆ ಜನರಲ್ಲಿ ಒಬ್ಬನಾದರೂ ನನ್ನ ಸಂಧ್ಯಾ ಭೋಜನದ ರುಚಿಯನ್ನು ನೋಡುವುದಿಲ್ಲ ಎಂದು ನಿಮಗೆ ಹೇಳುತ್ತೇನೆ’ ಅಂದನು.” 25  ಬಳಿಕ ಜನರ ದೊಡ್ಡ ಗುಂಪು ಅವನೊಂದಿಗೆ ಪ್ರಯಾಣಿಸುತ್ತಿರುವಾಗ ಅವನು ಅವರ ಕಡೆಗೆ ತಿರುಗಿ ಅವರಿಗೆ, 26  “ಯಾವನಾದರೂ ನನ್ನ ಬಳಿಗೆ ಬಂದು ತನ್ನ ತಂದೆಯನ್ನು, ತಾಯಿಯನ್ನು, ಹೆಂಡತಿ​ಯನ್ನು, ಮಕ್ಕಳನ್ನು, ಸಹೋದರ ಸಹೋದರಿಯರನ್ನು ಮತ್ತು ತನ್ನ ಸ್ವಂತ ಪ್ರಾಣವನ್ನೇ ದ್ವೇಷಿಸದಿದ್ದರೆ ಅವನು ನನ್ನ ಶಿಷ್ಯನಾಗಿರಲಾರನು. 27  ಯಾವನಾದರೂ ತನ್ನ ಯಾತನಾ ಕಂಬವನ್ನು ಹೊತ್ತುಕೊಳ್ಳುತ್ತಾ ನನ್ನ ಹಿಂದೆ ಬರದಿದ್ದರೆ ಅವನು ನನ್ನ ಶಿಷ್ಯನಾಗಿರಲಾರನು. 28  ಉದಾಹರಣೆಗೆ, ನಿಮ್ಮಲ್ಲಿ ಯಾವನಾದರೂ ಒಂದು ಬುರುಜನ್ನು ಕಟ್ಟಲು ಬಯಸುವುದಾದರೆ, ಮೊದಲು ಕುಳಿತುಕೊಂಡು ಅದನ್ನು ಕಟ್ಟಿಮುಗಿಸಲು ಸಾಕಾಗುವಷ್ಟು ಹಣ ತನ್ನಲ್ಲಿದೆಯೋ ಎಂದು ಲೆಕ್ಕಮಾಡು​ವುದಿಲ್ಲವೆ? 29  ಇಲ್ಲವಾದರೆ ಅವನು ಅದರ ಅಸ್ತಿವಾರವನ್ನು ಹಾಕಿ ಆ ಕೆಲಸವನ್ನು ಮುಗಿಸಲಾರದೆ ಹೋಗುವನು ಮತ್ತು ನೋಡುವವರೆಲ್ಲರು, 30  ‘ಈ ಮನುಷ್ಯನು ಕಟ್ಟಲಾರಂಭಿಸಿದನು ಆದರೆ ಮುಗಿಸಲು ಶಕ್ತನಾಗಲಿಲ್ಲ’ ಎಂದು ಅಪಹಾಸ್ಯ ಮಾಡಲಾರಂಭಿಸ​ಬಹುದು. 31  ಅಥವಾ ಯಾವ ಅರಸನು ಮತ್ತೊಬ್ಬ ಅರಸನ ಮೇಲೆ ಯುದ್ಧಕ್ಕೆ ಹೋಗುವ ಮೊದಲು ಕುಳಿತುಕೊಂಡು ತನಗೆ ವಿರುದ್ಧವಾಗಿ ಇಪ್ಪತ್ತು ಸಾವಿರ ಸೈನಿಕರೊಂದಿಗೆ ಬರುವ ಆ ಅರಸನನ್ನು ಹತ್ತು ಸಾವಿರ ಸೈನಿಕರೊಂದಿಗೆ ಎದುರಿಸುವುದಕ್ಕೆ ಸಾಧ್ಯವೋ ಎಂದು ಸಮಾಲೋಚನೆ ಮಾಡುವುದಿಲ್ಲ? 32  ಅವನಿಂದ ಎದುರಿಸಲು ಸಾಧ್ಯವಿಲ್ಲದಿದ್ದರೆ ಆ ಅರಸನು ಇನ್ನೂ ದೂರದಲ್ಲಿರುವಾಗಲೇ ಇವನು ರಾಯಭಾರಿಗಳ ತಂಡವನ್ನು ಕಳುಹಿಸಿ ಶಾಂತಿಸಂಧಾನ​ವನ್ನು ಮಾಡಿಕೊಳ್ಳುವನು. 33  ಹೀಗೆ ನಿಮ್ಮಲ್ಲಿರುವ ಯಾವನಾದರೂ ತನ್ನ ಎಲ್ಲ ಆಸ್ತಿಗೆ ವಿದಾಯ ಹೇಳದಿದ್ದರೆ ನನ್ನ ಶಿಷ್ಯನಾಗಿರಲಾರನು ಎಂಬುದು ನಿಮಗೆ ನಿಶ್ಚಯ​ವಾಗಬಹುದು. 34  “ಉಪ್ಪು ಒಳ್ಳೆಯದೆಂಬುದು ನಿಜ. ಆದರೆ ಉಪ್ಪು ಸಹ ತನ್ನ ಸಾರವನ್ನು ಕಳೆದುಕೊಳ್ಳುವುದಾದರೆ ಇನ್ನಾವುದರಿಂದ ಅದಕ್ಕೆ ರುಚಿಬಂದೀತು? 35  ಅದು ಭೂಮಿಗಾಗಲಿ ಗೊಬ್ಬರಕ್ಕಾಗಲಿ ಪ್ರಯೋಜನಕ್ಕೆ ಬಾರದು. ಜನರು ಅದನ್ನು ಹೊರಗೆ ಬಿಸಾಡುತ್ತಾರೆ. ಆಲಿಸಲು ಕಿವಿಗಳಿರುವವನು ಆಲಿಸಲಿ” ಎಂದು ಹೇಳಿದನು.

ಪಾದಟಿಪ್ಪಣಿ