ರೋಮನ್ನರಿಗೆ 9:1-33

9  ಕ್ರಿಸ್ತನಲ್ಲಿ ನಾನು ಸತ್ಯವನ್ನು ಹೇಳು​ತ್ತಿದ್ದೇನೆ; ಪವಿತ್ರಾತ್ಮಕ್ಕೆ ಸಹಮತದಲ್ಲಿ ನನ್ನ ಮನಸ್ಸಾಕ್ಷಿಯು ನನ್ನೊಂದಿಗೆ ಸಾಕ್ಷಿನೀಡುವುದರಿಂದ ನಾನು ಸುಳ್ಳು ಹೇಳುತ್ತಿಲ್ಲ.  ನನ್ನ ಹೃದಯದಲ್ಲಿ ಅತಿಯಾದ ದುಃಖವೂ ನಿರಂತರವಾದ ವೇದನೆಯೂ ಇದೆ.  ನನ್ನ ಸಹೋದರರು, ಅಂದರೆ ಶರೀರ ಸಂಬಂಧವಾಗಿ ನನ್ನ ಬಂಧುಗಳಾಗಿರುವವರ ಪರವಾಗಿ ನಾನೇ ಶಾಪಗ್ರಸ್ತನಾಗಿ ಕ್ರಿಸ್ತನಿಂದ ಅಗಲಿದ್ದರೆ ಒಳ್ಳೇದಿತ್ತು.  ಅವರು ಇಸ್ರಾಯೇಲ್ಯರಾಗಿದ್ದು ದತ್ತುಪುತ್ರರಾಗಿ ತೆಗೆದುಕೊಳ್ಳಲ್ಪಡುವುದೂ ಮಹಿಮೆಯೂ ​ಒಡಂಬಡಿಕೆಗಳೂ ಧರ್ಮಶಾಸ್ತ್ರದ ಕೊಡೋಣವೂ ಪವಿತ್ರ ಸೇವೆಯೂ ವಾಗ್ದಾನಗಳೂ ಅವರಿಗೆ ಸೇರಿದ್ದಾಗಿವೆ.  ನಮ್ಮ ಪೂರ್ವಜರು ಅವರಿಗೆ ಸೇರಿದವರಾಗಿದ್ದಾರೆ ಮತ್ತು ಕ್ರಿಸ್ತನು ಮನುಷ್ಯನಾಗಿ ಅವರ ವಂಶದಲ್ಲಿಯೇ ಹುಟ್ಟಿದನು. ಎಲ್ಲವುಗಳ ಮೇಲೆ ಇರುವಾತನಾದ ದೇವರು ಸದಾಕಾಲ ಸ್ತುತಿಸಲ್ಪಡಲಿ. ಆಮೆನ್‌.  ದೇವರ ಮಾತು ವಿಫಲಗೊಂಡಿತೆಂದು ಇದರ ಅರ್ಥವಲ್ಲ. ಇಸ್ರಾಯೇಲ​ನಿಂದ ಹುಟ್ಟಿದವರೆಲ್ಲರೂ ನಿಜವಾಗಿ ಇಸ್ರಾಯೇಲ್ಯರಲ್ಲ.  ಅಥವಾ ಅಬ್ರಹಾಮನ ಸಂತತಿಯವರಾಗಿ ಹುಟ್ಟಿದ ಮಾತ್ರಕ್ಕೆ ಅವರೆಲ್ಲರು ಮಕ್ಕಳೆಂದು ಎಣಿಸಲ್ಪಡುವುದಿಲ್ಲ; ಆದರೆ “ಇಸಾಕನ ಮೂಲಕ ಹುಟ್ಟುವವರೇ ‘ನಿನ್ನ ಸಂತತಿ’ ಎಂದು ಕರೆಯಲ್ಪಡುವರು” ಎಂದು ಬರೆದಿದೆ.  ಅಂದರೆ ಶರೀರ ಸಂಬಂಧವಾಗಿ ಹುಟ್ಟಿದ ಮಕ್ಕಳು ವಾಸ್ತವದಲ್ಲಿ ದೇವರ ಮಕ್ಕಳಾಗಿರುವುದಿಲ್ಲ, ಬದಲಿಗೆ ವಾಗ್ದಾನದ ಮೂಲಕ ಹುಟ್ಟಿದ ಮಕ್ಕಳು ಆ ಸಂತತಿಯಾಗಿ ಎಣಿಸಲ್ಪಡುತ್ತಾರೆ.  “ಮುಂದಿನ ವರ್ಷ ನಾನು ಇದೇ ಸಮಯದಲ್ಲಿ ಬರುವಾಗ ಸಾರಳಿಗೆ ಒಬ್ಬ ಮಗನಿರುವನು” ಎಂಬುದು ವಾಗ್ದಾನವಾಗಿತ್ತು. 10  ಆದರೆ ಆ ಸಂಗತಿ ಮಾತ್ರವಲ್ಲ ರೆಬೆಕ್ಕಳು ಸಹ ನಮ್ಮ ಪೂರ್ವಜನಾದ ಇಸಾಕನ ಮೂಲಕ ಅವಳಿ ಮಕ್ಕಳ ಗರ್ಭಧರಿಸಿದಾಗ, 11  ಅವರಿನ್ನೂ ಹುಟ್ಟದೆಯೂ ಒಳ್ಳೇದನ್ನಾಗಲಿ ಕೆಟ್ಟದ್ದನ್ನಾಗಲಿ ಮಾಡದೆಯೂ ಇದ್ದಾಗಲೇ ಅವರ ಆಯ್ಕೆಗೆ ಸಂಬಂಧಪಟ್ಟ ದೇವರ ಉದ್ದೇಶವು ಕೃತ್ಯಗಳ ಮೇಲಲ್ಲ, ಅವರನ್ನು ಕರೆದಾತನ ಮೇಲೆ ಹೊಂದಿಕೊಂಡಿರುವಂತೆ 12  “ಹಿರಿಯವನು ಕಿರಿಯವನಿಗೆ ದಾಸನಾಗಿರುವನು” ಎಂದು ಅವಳಿಗೆ ಹೇಳಲಾಯಿತು. 13  “ನಾನು ಯಾಕೋಬನನ್ನು ಪ್ರೀತಿಸಿದೆ, ಏಸಾವನನ್ನು ದ್ವೇಷಿಸಿದೆ” ಎಂದು ಬರೆದಿರುವಂತೆಯೇ ಹೀಗಾಯಿತು. 14  ಹಾಗಾದರೆ ನಾವು ಏನು ಹೇಳೋಣ? ದೇವರಲ್ಲಿ ಅನ್ಯಾಯವಿದೆಯೊ? ಹಾಗೆ ಎಂದಿಗೂ ಆಗದಿರಲಿ! 15  ಏಕೆಂದರೆ ಆತನು ಮೋಶೆಗೆ, “ನನಗೆ ಯಾರ ಮೇಲೆ ಕರುಣೆಯಿದೆಯೋ ಅವರನ್ನು ಕರುಣಿಸುವೆನು ಮತ್ತು ನನಗೆ ಯಾರ ಮೇಲೆ ಕನಿಕರವಿದೆಯೋ ಅವರಿಗೆ ಕನಿಕರವನ್ನು ತೋರಿಸುವೆನು” ಎಂದು ಹೇಳಿರುತ್ತಾನೆ. 16  ಆದುದರಿಂದ ಅದು ಇಚ್ಛಿಸುವವನ ಮೇಲಾಗಲಿ ಪ್ರಯತ್ನಿಸುವವನ ಮೇಲಾಗಲಿ ಹೊಂದಿಕೊಂಡಿರದೆ ಕರುಣೆಯುಳ್ಳಾತನಾದ ದೇವರ ಮೇಲೆ ಹೊಂದಿಕೊಂಡಿದೆ. 17  ಏಕೆಂದರೆ ಶಾಸ್ತ್ರಗ್ರಂಥವು ಫರೋಹನಿಗೆ, “ನಾನು ನಿನಗೆ ನನ್ನ ಶಕ್ತಿಯನ್ನು ತೋರಿಸುವಂತೆ ಮತ್ತು ನನ್ನ ನಾಮವು ಭೂಮಿಯಾದ್ಯಂತ ಪ್ರಕಟಿಸಲ್ಪಡುವಂತೆ ನಿನ್ನನ್ನು ಉಳಿಯುವಂತೆ ಬಿಟ್ಟಿದ್ದೇನೆ” ಎಂದು ಹೇಳಿತು. 18  ಆದುದರಿಂದ ಆತನು ತನಗೆ ಇಷ್ಟವಾದವರನ್ನು ಕರುಣಿಸುತ್ತಾನೆ, ಆದರೆ ಯಾರನ್ನು ಕಠಿಣಪಡಿಸಲು ಬಯಸುತ್ತಾನೋ ಅವರನ್ನು ಕಠಿಣಪಡಿಸಿಕೊಳ್ಳಲು ಬಿಡುತ್ತಾನೆ. 19  ಆದಕಾರಣ ನೀನು, “ಆತನು ಇನ್ನೂ ತಪ್ಪು ಕಂಡುಹಿಡಿಯುವುದು ಏಕೆ? ಆತನ ಪ್ರಕಟಿತ ಚಿತ್ತವನ್ನು ಯಾರು ಎದುರಿಸಿ ನಿಂತಿದ್ದಾರೆ?” ಎಂದು ನನ್ನನ್ನು ಕೇಳುವಿ. 20  ಎಲೈ ಮನುಷ್ಯನೇ, ದೇವರಿಗೆ ಎದುರುತ್ತರ ಕೊಡಲು ನೀನು ಎಷ್ಟರವನು? ರೂಪಿಸಲ್ಪಟ್ಟದ್ದು ​ರೂಪಿಸಿದಾತನಿಗೆ “ನೀನು ಏಕೆ ನನ್ನನ್ನು ಹೀಗೆ ಮಾಡಿದಿ” ಎಂದು ಕೇಳಬಹುದೊ? 21  ಒಂದೇ ಮಣ್ಣಿನ ಮುದ್ದೆಯಿಂದ ಒಂದು ಪಾತ್ರೆಯನ್ನು ಗೌರವಾರ್ಹವಾದ ಬಳಕೆಗಾಗಿಯೂ ಇನ್ನೊಂದು ಪಾತ್ರೆಯನ್ನು ಗೌರವ​ಹೀನವಾದ ಬಳಕೆಗಾಗಿಯೂ ಮಾಡುವುದಕ್ಕೆ ಕುಂಬಾರನಿಗೆ ಅಧಿಕಾರವಿಲ್ಲವೊ? 22  ದೇವರು ತನ್ನ ಕ್ರೋಧವನ್ನು ತೋರಿಸಿ ತನ್ನ ಶಕ್ತಿಯನ್ನು ಪ್ರದರ್ಶಿಸುವ ಇಚ್ಛೆಯುಳ್ಳವನಾಗಿರುವುದಾದರೂ ನಾಶನಕ್ಕೆ ಯೋಗ್ಯವಾದ ಕ್ರೋಧದ ಪಾತ್ರೆಗಳನ್ನು ದೀರ್ಘ ಸಹನೆಯಿಂದ ತಾಳಿಕೊಂಡಿದ್ದಾನಾದರೆ ಅದರಿಂದೇನು? 23  ಮಹಿಮೆಹೊಂದು​ವುದಕ್ಕೆ ಆತನು ಮುಂದಾಗಿಯೇ ಸಿದ್ಧಪಡಿಸಿದ ಕರುಣೆಯ ಪಾತ್ರೆಗಳ ಮೇಲೆ ತನ್ನ ಮಹಿಮೆಯ ಐಶ್ವರ್ಯವನ್ನು ತೋರ್ಪಡಿಸಲಿಕ್ಕಾಗಿ 24  ಅಂದರೆ ಆತನು ಯೆಹೂದ್ಯರೊಳಗಿಂದ ಮಾತ್ರವಲ್ಲದೆ ಅನ್ಯಜನಾಂಗಗಳೊಳಗಿಂದಲೂ ಕರೆಯಲ್ಪಟ್ಟವರಾದ ನಮ್ಮ ಮೇಲೆ ತನ್ನ ಮಹಿಮೆಯ ಐಶ್ವರ್ಯವನ್ನು ತೋರ್ಪಡಿಸಲಿಕ್ಕಾಗಿ ಇದನ್ನು ಮಾಡಿದರೆ ಅದರಿಂದೇನು? 25  ಇದು ಹೋಶೇಯನ ಗ್ರಂಥದಲ್ಲಿ, “ನನ್ನ ಜನರಲ್ಲದವರನ್ನು ‘ನನ್ನ ಜನರು’ ಎಂದೂ ಪ್ರಿಯಳಲ್ಲದವಳನ್ನು ‘ಪ್ರಿಯಳು’ ಎಂದೂ ಕರೆಯುವೆನು; 26  ಮತ್ತು ‘ನೀವು ನನ್ನ ಜನರಲ್ಲ’ ಎಂದು ಹೇಳಲ್ಪಟ್ಟ ಸ್ಥಳದಲ್ಲಿಯೇ ಅವರು ‘ಜೀವವುಳ್ಳ ದೇವರ ಪುತ್ರರು’ ಎಂದು ಕರೆಯಲ್ಪಡುವರು” ಎಂದು ಬರೆಯಲ್ಪಟ್ಟಿರುವಂತೆಯೇ ಇದೆ. 27  ಮಾತ್ರವಲ್ಲದೆ, ಯೆಶಾಯನು ಇಸ್ರಾಯೇಲ್‌ ಜನರ ಕುರಿತು, “ಇಸ್ರಾಯೇಲ್ಯರ ಸಂಖ್ಯೆಯು ಸಮುದ್ರದ ಮರಳಿನಷ್ಟಿರುವುದಾದರೂ ಅವರಲ್ಲಿ ಉಳಿಕೆಯವರಾದ ಕೆಲವರು ಮಾತ್ರ ರಕ್ಷಿಸಲ್ಪಡುವರು. 28  ಏಕೆಂದರೆ ಯೆಹೋವನು ಭೂಮಿಯಲ್ಲಿ ಜೀವಿಸುವವರಿಂದ ಅಂತಿಮವಾಗಿ ಲೆಕ್ಕಕೇಳುವನು ಮತ್ತು ಅದನ್ನು ಬೇಗನೆ ಮುಗಿಸುವನು” ಎಂದು ಕೂಗಿಹೇಳುತ್ತಾನೆ. 29  ಇದಲ್ಲದೆ ಯೆಶಾಯನು ಈ ಮುಂಚೆಯೇ, “ಸೇನಾಧೀಶ್ವರನಾದ ಯೆಹೋವನು ನಮಗಾಗಿ ಸಂತತಿಯನ್ನು ಉಳಿಸದೇ ಇರುತ್ತಿದ್ದರೆ ನಾವು ಸೊದೋಮಿನಂತೆ ಆಗುತ್ತಿದ್ದೆವು ಮತ್ತು ಗೊಮೋರದಂತೆ ಮಾಡಲ್ಪಡುತ್ತಿದ್ದೆವು” ಎಂದು ಹೇಳಿದಂತೆಯೇ ಇದು ಇದೆ. 30  ಹಾಗಾದರೆ ನಾವು ಏನು ಹೇಳೋಣ? ಅನ್ಯಜನಾಂಗಗಳವರು ನೀತಿಯನ್ನು ಅನುಸರಿಸಿ ನಡೆಯುತ್ತಿರಲಿಲ್ಲ​ವಾದರೂ ನಂಬಿಕೆಯಿಂದ ದೊರೆಯುವ ನೀತಿಯನ್ನು ಹೊಂದಿದರು. 31  ಆದರೆ ಇಸ್ರಾಯೇಲ್ಯರು ನೀತಿಯ ನಿಯಮವನ್ನು ಬೆನ್ನಟ್ಟಿದರೂ ನಿಯಮದ ಗುರಿಯನ್ನು ತಲಪಲಿಲ್ಲ. 32  ಯಾವ ಕಾರಣಕ್ಕಾಗಿ? ಏಕೆಂದರೆ ಅವರು ಅದನ್ನು ನಂಬಿಕೆಯಿಂದಲ್ಲ, ನೇಮನಿಷ್ಠೆಗಳ ಮೂಲಕ ಅನುಸರಿಸಿದರು. ಅವರು “ಎಡವುವ ಕಲ್ಲಿನ” ಮೇಲೆ ಎಡವಿದರು. 33  “ಇಗೋ, ನಾನು ಚೀಯೋನಿನಲ್ಲಿ ಒಂದು ಎಡವುವ ಕಲ್ಲನ್ನೂ ಮುಗ್ಗರಿಸುವ ಬಂಡೆಯನ್ನೂ ಇಡುವೆನು; ಅದರಲ್ಲಿ ನಂಬಿಕೆಯಿಡುವವನು ಆಶಾಭಂಗಪಡುವುದಿಲ್ಲ” ಎಂದು ಬರೆದಂತಿದೆ.

ಪಾದಟಿಪ್ಪಣಿ