ರೋಮನ್ನರಿಗೆ 7:1-25

7  ಸಹೋದರರೇ, (ಧರ್ಮಶಾಸ್ತ್ರವನ್ನು ತಿಳಿದವರಿಗೆ ನಾನು ಮಾತಾಡು​ತ್ತಿದ್ದೇನೆ,) ಒಬ್ಬ ಮನುಷ್ಯನು ಜೀವದಿಂದಿರುವ ವರೆಗೆ ಮಾತ್ರ ಧರ್ಮಶಾಸ್ತ್ರವು ಅವನ ಮೇಲೆ ಅಧಿಕಾರ ನಡೆಸುತ್ತದೆ ಎಂಬುದು ನಿಮಗೆ ತಿಳಿದಿಲ್ಲವೊ?  ಉದಾಹರಣೆಗೆ, ಒಬ್ಬ ವಿವಾಹಿತ ಸ್ತ್ರೀಯು ಗಂಡನು ಜೀವದಿಂದಿರುವ ವರೆಗೆ ನಿಯಮ​ಕ್ಕನುಸಾರ ಅವನಿಗೆ ಬದ್ಧಳಾಗಿದ್ದಾಳೆ; ಆದರೆ ಗಂಡನು ಸತ್ತರೆ ಅವಳು ತನ್ನ ಗಂಡನ ನಿಯಮದಿಂದ ಮುಕ್ತಳಾಗುತ್ತಾಳೆ.  ಆದುದರಿಂದ, ಅವಳ ಗಂಡನು ಜೀವದಿಂದಿರುವಾಗ ಅವಳು ಮತ್ತೊಬ್ಬ ಪುರುಷ​ನವಳಾದರೆ ವ್ಯಭಿಚಾರಿಣಿ ಎನಿಸಿಕೊಳ್ಳುವಳು. ಆದರೆ ಅವಳ ಗಂಡನು ಸತ್ತರೆ ಅವಳು ಅವನ ನಿಯಮದಿಂದ ಮುಕ್ತಳಾಗಿರುವುದರಿಂದ ಮತ್ತೊಬ್ಬ ಪುರುಷನವಳಾದರೆ ಅವಳು ವ್ಯಭಿಚಾರಿಣಿ ಅಲ್ಲ.  ಹಾಗೆಯೇ ನನ್ನ ಸಹೋದರರೇ, ನೀವು ಇನ್ನೊಬ್ಬನಿಗೆ ಅಂದರೆ ಸತ್ತವರೊಳಗಿಂದ ಎಬ್ಬಿಸಲ್ಪಟ್ಟಿರುವ ಕ್ರಿಸ್ತನಿಗೆ ಸೇರಿದವರಾಗಿದ್ದು ಕ್ರಿಸ್ತನ ದೇಹದ ಮೂಲಕ ಧರ್ಮಶಾಸ್ತ್ರದ ಪಾಲಿಗೆ ಸತ್ತವರಾದಿರಿ. ಹೀಗೆ ನಾವು ದೇವರಿಗೆ ಫಲಕೊಡುವವರಾಗಬಲ್ಲೆವು.  ನಾವು ಶರೀರಭಾವಕ್ಕನುಸಾರ ಜೀವಿಸುತ್ತಿದ್ದಾಗ ಧರ್ಮಶಾಸ್ತ್ರದಿಂದ ಪ್ರಕಟಿಸಲ್ಪಟ್ಟ ಪಾಪಭರಿತ ಇಚ್ಛೆಗಳು ನಮ್ಮ ಅಂಗಗಳಲ್ಲಿ ಕಾರ್ಯನಡೆಸುತ್ತಿದ್ದವು; ಹೀಗೆ ನಾವು ಮರಣಕ್ಕೆ ನಡೆಸುವ ಫಲವನ್ನು ಉಂಟುಮಾಡುತ್ತಿದ್ದೆವು.  ಈ ಮುಂಚೆ ನಮ್ಮನ್ನು ಯಾವುದು ಬಂಧನದಲ್ಲಿರಿಸಿತ್ತೊ ಆ ಧರ್ಮಶಾಸ್ತ್ರದ ಪಾಲಿಗೆ ನಾವು ಸತ್ತಿರುವ ಕಾರಣ ಈಗ ನಾವು ಅದರಿಂದ ಮುಕ್ತರಾಗಿದ್ದೇವೆ; ಹೀಗೆ ನಾವು ಲಿಖಿತ ನಿಯಮಾವಳಿಯ ಮೂಲಕ ಹಳೆಯ ರೀತಿಯಲ್ಲಿ ಅಲ್ಲ, ದೇವರ ಆತ್ಮದ * ಮೂಲಕ ಹೊಸ ರೀತಿಯಲ್ಲಿ ಆತನಿಗೆ ದಾಸರಾದೆವು.  ಹಾಗಾದರೆ ನಾವು ಏನು ಹೇಳೋಣ? ಧರ್ಮಶಾಸ್ತ್ರವು ಪಾಪವಾಗಿದೆಯೊ? ಹಾಗೆ ಎಂದಿಗೂ ಆಗದಿರಲಿ! ಧರ್ಮಶಾಸ್ತ್ರವು ಇಲ್ಲದಿರುತ್ತಿದ್ದಲ್ಲಿ ಪಾಪ​ವೆಂದರೇನು ಎಂಬುದು ನನಗೆ ನಿಜವಾಗಿಯೂ ತಿಳಿಯುತ್ತಿರಲಿಲ್ಲ. ಉದಾಹರಣೆಗೆ, “ನೀನು ದುರಾಶೆಪಡಬಾರದು” ಎಂದು ಧರ್ಮಶಾಸ್ತ್ರವು ಹೇಳಿರದಿದ್ದರೆ ದುರಾಶೆ ಎಂದರೇನು ಎಂಬುದು ನನಗೆ ತಿಳಿಯುತ್ತಿರಲಿಲ್ಲ.  ಆಜ್ಞೆಯ ಮೂಲಕ ಪ್ರಚೋದಿಸಲ್ಪಟ್ಟ ಪಾಪವು ನನ್ನಲ್ಲಿ ಎಲ್ಲ ರೀತಿಯ ದುರಾಶೆಯನ್ನು ಹುಟ್ಟಿಸಿತು; ಧರ್ಮಶಾಸ್ತ್ರವಿಲ್ಲದಿದ್ದಾಗ ಪಾಪವು ಸತ್ತದ್ದಾಗಿತ್ತು.  ವಾಸ್ತವದಲ್ಲಿ ಧರ್ಮಶಾಸ್ತ್ರವಿಲ್ಲದಿದ್ದಾಗ ನಾನು ಜೀವದಿಂದಿದ್ದೆನು, ಆದರೆ ಆಜ್ಞೆಯು ಬಂದಾಗ ಪಾಪಕ್ಕೆ ಪುನಃ ಜೀವ ಬಂತು ಮತ್ತು ನಾನು ಸತ್ತೆನು. 10  ಜೀವಕ್ಕಾಗಿದ್ದ ಆಜ್ಞೆಯು ಮರಣಕ್ಕೆ ಕಾರಣವಾಯಿತು ಎಂಬುದನ್ನು ನಾನು ಕಂಡುಕೊಂಡೆ. 11  ಆಜ್ಞೆಯ ಮೂಲಕ ಪ್ರಚೋದಿಸಲ್ಪಟ್ಟ ಪಾಪವು ನನ್ನನ್ನು ವಂಚಿಸಿತು ಮತ್ತು ಅದರ ಮೂಲಕವೇ ನನ್ನನ್ನು ಕೊಂದು​ಹಾಕಿತು. 12  ಆದುದರಿಂದ, ಧರ್ಮಶಾಸ್ತ್ರವಾದರೋ ಪವಿತ್ರವಾದದ್ದಾಗಿದೆ ಮತ್ತು ಆಜ್ಞೆಯು ಪವಿತ್ರವೂ ನೀತಿಯುತವೂ ಒಳ್ಳೆಯದೂ ಆಗಿದೆ. 13  ಹಾಗಾದರೆ ಒಳ್ಳೆಯದೇ ನನಗೆ ಮರಣಕ್ಕೆ ಕಾರಣವಾಯಿತೊ? ಹಾಗೆಂದೂ ಆಗದಿರಲಿ! ಆದರೆ ಪಾಪವು ಮರಣಕ್ಕೆ ಕಾರಣವಾಯಿತು; ಪಾಪವು ಪಾಪವೆಂದು ತೋರಿಬರಲಿಕ್ಕಾಗಿ ಒಳ್ಳೇದರ ಮೂಲಕ ನನ್ನಲ್ಲಿ ಮರಣವನ್ನು ಉಂಟುಮಾಡಿತು; ಹೀಗೆ ಆಜ್ಞೆಯ ಮೂಲಕ ಪಾಪವು ಇನ್ನೂ ಹೆಚ್ಚು ಪಾಪಪೂರ್ಣವಾಯಿತು. 14  ಧರ್ಮಶಾಸ್ತ್ರವು ಆಧ್ಯಾತ್ಮಿಕವಾದದ್ದು ಎಂದು ನಮಗೆ ತಿಳಿದಿದೆ; ಆದರೆ ನಾನು ಶರೀರಭಾವದವನಾಗಿದ್ದು ಪಾಪಕ್ಕೆ ದಾಸನಾಗಿ ಮಾರಲ್ಪಟ್ಟವನು. 15  ನಾನು ಏನು ಮಾಡುತ್ತಿದ್ದೇನೆ ಎಂಬುದು ನನಗೆ ತಿಳಿಯದು. ನಾನು ಏನು ಬಯಸುತ್ತೇನೋ ಅದನ್ನು ಮಾಡದೆ, ಏನನ್ನು ದ್ವೇಷಿಸುತ್ತೇನೋ ಅದನ್ನೇ ಮಾಡುವವನಾಗಿದ್ದೇನೆ. 16  ನಾನು ಏನನ್ನು ಬಯಸುವುದಿಲ್ಲವೋ ಅದನ್ನೇ ಮಾಡುವುದಾದರೆ, ಧರ್ಮಶಾಸ್ತ್ರವು ಉತ್ತಮವಾದದ್ದೆಂದು ನಾನು ಒಪ್ಪಿಕೊಳ್ಳುತ್ತೇನೆ. 17  ಹಾಗಾದರೆ ಬಯಸದಿರುವುದನ್ನು ಮಾಡುವವನು ನಾನಲ್ಲ, ನನ್ನಲ್ಲಿ ನೆಲೆಗೊಂಡಿರುವ ಪಾಪವೇ ಆಗಿದೆ. 18  ಏಕೆಂದರೆ ನನ್ನಲ್ಲಿ ಅಂದರೆ ನನ್ನ ಶರೀರದಲ್ಲಿ ಒಳ್ಳೇದೇನೂ ನೆಲೆಸಿಲ್ಲವೆಂಬುದು ನನಗೆ ತಿಳಿದಿದೆ; ಒಳ್ಳೇದನ್ನು ಬಯಸುವ ಸಾಮರ್ಥ್ಯವು ನನ್ನಲ್ಲಿದೆ, ಆದರೆ ಒಳ್ಳೇದನ್ನು ಮಾಡುವ ಸಾಮರ್ಥ್ಯ ನನ್ನಲ್ಲಿಲ್ಲ. 19  ನಾನು ಬಯಸುವ ಒಳ್ಳೇದನ್ನು ಮಾಡದೆ ಬಯಸದಿರುವ ಕೆಟ್ಟದ್ದನ್ನೇ ಮಾಡುತ್ತಿದ್ದೇನೆ. 20  ಹಾಗಿರುವಾಗ, ನಾನು ಬಯಸದಿರುವುದನ್ನೇ ಮಾಡುತ್ತೇನಾದರೆ ಅದನ್ನು ಮಾಡುವವನು ಇನ್ನು ನಾನಲ್ಲ, ನನ್ನಲ್ಲಿ ನೆಲೆಗೊಂಡಿರುವ ಪಾಪವೇ ಆಗಿದೆ. 21  ಹೀಗಿರುವಾಗ ನಾನು ​ಒಳ್ಳೇದನ್ನು ಮಾಡಲು ಬಯಸುವುದಾದರೂ ಕೆಟ್ಟದ್ದೇ ನನ್ನಲ್ಲಿ ಇದೆ ಎಂಬ ​ನಿಯಮವು ನನಗೆ ಕಂಡುಬರುತ್ತದೆ. 22  ನನ್ನ ಹೃದಯದೊಳಗೆ ನಾನು ದೇವರ ನಿಯಮದಲ್ಲಿ ನಿಜವಾಗಿಯೂ ಆನಂದಿಸುವವನಾಗಿದ್ದೇನೆ. 23  ಆದರೆ ನನ್ನ ಅಂಗಗಳಲ್ಲಿ ಇನ್ನೊಂದು ನಿಯಮವಿರುವುದನ್ನು ನಾನು ನೋಡುತ್ತೇನೆ; ಅದು ನನ್ನ ಮನಸ್ಸಿನ ನಿಯಮಕ್ಕೆ ವಿರುದ್ಧವಾಗಿ ಹೋರಾಡಿ ನನ್ನ ಅಂಗಗಳಲ್ಲಿರುವ ಪಾಪದ ನಿಯಮಕ್ಕೆ ನನ್ನನ್ನು ಸೆರೆಯವನನ್ನಾಗಿ ಮಾಡುತ್ತಿದೆ. 24  ನಾನು ಎಂಥ ದುರವಸ್ಥೆಯಲ್ಲಿ ಬಿದ್ದಿರುವ ಮನುಷ್ಯನು! ಈ ಮರಣಕ್ಕೆ ಒಳಗಾಗುತ್ತಿರುವ ದೇಹದಿಂದ ನನ್ನನ್ನು ರಕ್ಷಿಸುವವರು ಯಾರು? 25  ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ ದೇವರೇ! ಹೀಗೆ ನನ್ನ ಮನಸ್ಸಿನಲ್ಲಿ ನಾನು ದೇವರ ನಿಯಮಕ್ಕೆ ದಾಸನಾಗಿದ್ದೇನೆ, ಆದರೆ ನನ್ನ ಶರೀರದಲ್ಲಿ ಪಾಪದ ನಿಯಮಕ್ಕೆ ದಾಸನು.

ಪಾದಟಿಪ್ಪಣಿ

ರೋಮ 7:6  ಅಥವಾ, “ದೇವರ ಕಾರ್ಯಕಾರಿ ಶಕ್ತಿ.” ಪರಿಶಿಷ್ಟ 7 ನ್ನು ನೋಡಿ.