ರೋಮನ್ನರಿಗೆ 16:1-27

16  ಕೆಂಕ್ರೆಯಲ್ಲಿರುವ ಸಭೆಯ ಸೇವಕಿಯಾಗಿರುವ ನಮ್ಮ ಸಹೋದರಿಯಾದ ಫೊಯಿಬೆಯನ್ನು ನಾನು ನಿಮಗೆ ಪರಿಚಯಿಸುತ್ತಿದ್ದೇನೆ.  ನೀವು ​ಅವಳನ್ನು ಪವಿತ್ರ ಜನರಿಗೆ ತಕ್ಕ ಹಾಗೆ ಕರ್ತನಲ್ಲಿ ಬರಮಾಡಿಕೊಂಡು ಅವಳಿಗೆ ಅಗತ್ಯವಿರುವ ಯಾವುದೇ ಸಹಾಯವನ್ನು ಮಾಡಿರಿ; ಏಕೆಂದರೆ ಅವಳು ನನಗೂ ಇತರ ಅನೇಕರಿಗೂ ಸಂರಕ್ಷಕಳಾಗಿ ಕಾರ್ಯನಡಿಸಿದವಳಾಗಿದ್ದಾಳೆ.  ಕ್ರಿಸ್ತ ಯೇಸುವಿನಲ್ಲಿ ನನ್ನ ಜೊತೆ ಕೆಲಸಗಾರರಾಗಿರುವ ಪ್ರಿಸ್ಕಳಿಗೂ ಅಕ್ವಿಲನಿಗೂ ನನ್ನ ವಂದನೆಗಳನ್ನು ತಿಳಿಸಿರಿ.  ಅವರು ನನ್ನ ಪ್ರಾಣವನ್ನು ಉಳಿಸುವುದಕ್ಕಾಗಿ ತಮ್ಮನ್ನೇ ಅಪಾಯಕ್ಕೊಡ್ಡಿದರು. ಅವರಿಗೆ ನಾನು ಮಾತ್ರವಲ್ಲ ಅನ್ಯಜನಾಂಗಗಳ ಸಭೆಗಳವರೆಲ್ಲರೂ ಕೃತಜ್ಞತೆಯನ್ನು ಸಲ್ಲಿಸುತ್ತಾರೆ.  ಅವರ ಮನೆಯಲ್ಲಿ ಕೂಡಿಬರುವ ಸಭೆಯವರಿಗೆ ನನ್ನ ವಂದನೆಯನ್ನು ತಿಳಿಸಿರಿ. ಏಷ್ಯಾ ಸೀಮೆಯಲ್ಲಿ ಕ್ರಿಸ್ತನಿಗೆ ಪ್ರಥಮ​ಫಲವಾಗಿರುವ ನನ್ನ ಪ್ರಿಯ ಎಪೈನೆತನಿಗೂ ನನ್ನ ವಂದನೆ.  ನಿಮಗೋಸ್ಕರ ಬಹಳ ಪ್ರಯಾಸಪಟ್ಟಿರುವ ಮರಿಯಳಿಗೂ ನನ್ನ ವಂದನೆಯನ್ನು ತಿಳಿಸಿರಿ.  ನನ್ನ ಸಂಬಂಧಿಕರೂ ನನ್ನ ಜೊತೆಸೆರೆಯವರೂ ಆಗಿರುವ ಆಂದ್ರೋನಿಕನಿಗೂ ಯೂನ್ಯನಿಗೂ ವಂದನೆ; ಅವರು ಅಪೊಸ್ತಲರಿಂದ ಬಹಳವಾಗಿ ಮಾನ್ಯಮಾಡಲ್ಪಟ್ಟವರೂ ನನಗಿಂತಲೂ ಹೆಚ್ಚು ಸಮಯದಿಂದ ಕ್ರಿಸ್ತನಲ್ಲಿ ಐಕ್ಯರಾಗಿ ನಡೆಯುತ್ತಿರುವವರೂ ಆಗಿದ್ದಾರೆ.  ಕರ್ತನಲ್ಲಿ ನನ್ನ ಪ್ರಿಯನಾಗಿರುವ ಅಂಪ್ಲಿಯಾತನಿಗೆ ವಂದನೆ.  ಕ್ರಿಸ್ತನೊಂದಿಗೆ ನಮ್ಮ ಜೊತೆ ಕೆಲಸಗಾರನಾಗಿರುವ ಉರ್ಬಾನನಿಗೂ ನನ್ನ ಪ್ರಿಯನಾದ ಸ್ತಾಖುಯನಿಗೂ ವಂದನೆಗಳು. 10  ಕ್ರಿಸ್ತನಲ್ಲಿ ಅಂಗೀಕೃತನಾಗಿರುವ ಅಪೆಲ್ಲನಿಗೆ ವಂದನೆ. ಅರಿಸ್ತೊಬೂಲನ ಮನೆಯವರಿಗೆ ವಂದನೆಗಳು. 11  ನನ್ನ ಸಂಬಂಧಿಕನಾದ ಹೆರೊಡಿ​ಯೋನನಿಗೆ ವಂದನೆ. ನಾರ್ಕಿಸ್ಸನ ಮನೆಯವರಲ್ಲಿ ಕರ್ತನನ್ನು ನಂಬಿದವರಿಗೆ ವಂದನೆಗಳು. 12  ಕರ್ತನ ಸೇವೆಯಲ್ಲಿ ಪ್ರಯಾಸಪಟ್ಟು ಕೆಲಸಮಾಡುತ್ತಿರುವ ತ್ರುಫೈನ​ಳಿಗೂ ತ್ರುಫೋಸಳಿಗೂ ವಂದನೆಗಳು. ಕರ್ತನ ಸೇವೆಯಲ್ಲಿ ಬಹಳವಾಗಿ ಪ್ರಯಾಸಪಟ್ಟಿರುವ ನಮ್ಮ ಪ್ರಿಯ ಪೆರ್ಸೀಸಳಿಗೂ ವಂದನೆ. 13  ಕರ್ತನಲ್ಲಿ ಆಯ್ಕೆಯಾಗಿರುವ ರೂಫನಿಗೂ ನನಗೆ ತಾಯಿಯಂತಿರುವ ಅವನ ತಾಯಿಗೂ ವಂದನೆಗಳು. 14  ಅಸುಂಕ್ರಿತನಿಗೂ ಪ್ಲೆಗೋನ​ನಿಗೂ ಹೆರ್ಮೇಯನಿಗೂ ಪತ್ರೋಬನಿಗೂ ಹೆರ್ಮಾನನಿಗೂ ಅವರೊಂದಿಗಿರುವ ಸಹೋದರರಿಗೂ ವಂದನೆಗಳು. 15  ಫಿಲೊಲೊಗನಿಗೂ ಯೂಲ್ಯಳಿಗೂ ನೇರ್ಯನಿಗೂ ಅವನ ಸಹೋದರಿಗೂ ಒಲುಂಪನಿಗೂ ಅವರೊಂದಿಗಿರುವ ಪವಿತ್ರ ಜನರೆಲ್ಲರಿಗೂ ವಂದನೆಗಳು. 16  ಪವಿತ್ರವಾದ ಮುದ್ದಿನಿಂದ ಒಬ್ಬರನ್ನೊಬ್ಬರು ವಂದಿಸಿರಿ. ಕ್ರಿಸ್ತನ ಎಲ್ಲ ಸಭೆಗಳು ನಿಮ್ಮನ್ನು ವಂದಿಸುತ್ತವೆ. 17  ಸಹೋದರರೇ, ನೀವು ಕಲಿತು​ಕೊಂಡಿರುವ ಬೋಧನೆಗೆ ​ವಿರುದ್ಧವಾಗಿ ನಿಮ್ಮಲ್ಲಿ ಭೇದಗಳನ್ನು ಮತ್ತು ಎಡವಲು ಸಂದರ್ಭಗಳನ್ನು ಉಂಟುಮಾಡುವವರನ್ನು ಗುರುತಿಸಿ ಅವರಿಂದ ದೂರವಿರಿ ಎಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ. 18  ಅಂಥ ಜನರು ನಮ್ಮ ಕರ್ತನಾದ ಕ್ರಿಸ್ತನ ಸೇವೆಮಾಡುವವರಾಗಿರುವ ಬದಲು ತಮ್ಮ ಹೊಟ್ಟೆಯ ಸೇವೆಮಾಡುವವರಾಗಿದ್ದಾರೆ ಮತ್ತು ಅವರು ತಮ್ಮ ನಯವಾದ ನುಡಿಗಳಿಂದಲೂ ಹೊಗಳಿಕೆಯ ಮಾತುಗಳಿಂದಲೂ ನಿಷ್ಕಪಟಿಗಳ ಹೃದಯಗಳನ್ನು ವಂಚಿಸುತ್ತಾರೆ. 19  ನಿಮ್ಮ ವಿಧೇಯತೆಯು ಎಲ್ಲರ ಗಮನಕ್ಕೆ ಬಂದಿದೆ. ಆದುದರಿಂದ ನಾನು ನಿಮ್ಮ ವಿಷಯದಲ್ಲಿ ಹರ್ಷಿಸುತ್ತೇನೆ. ನೀವು ಒಳ್ಳೇದರ ವಿಷಯದಲ್ಲಿ ವಿವೇಕಿಗಳಾಗಿದ್ದು ಕೆಟ್ಟದ್ದರ ವಿಷಯದಲ್ಲಿ ಮುಗ್ಧರಾಗಿರಬೇಕೆಂದು ಬಯಸುತ್ತೇನೆ. 20  ಶಾಂತಿಯನ್ನು ಒದಗಿಸುವ ದೇವರು ಬೇಗನೆ ಸೈತಾನನನ್ನು ನಿಮ್ಮ ಪಾದಗಳ ಕೆಳಗೆ ಹಾಕಿ ಜಜ್ಜಿಬಿಡುವನು. ನಮ್ಮ ಕರ್ತನಾದ ಯೇಸುವಿನ ಅಪಾತ್ರ ದಯೆಯು ನಿಮ್ಮೊಂದಿಗಿರಲಿ. 21  ನನ್ನ ಜೊತೆಕೆಲಸಗಾರನಾದ ತಿಮೊಥೆಯನೂ ನನ್ನ ಸಂಬಂಧಿಕರಾದ ಲೂಕ್ಯನೂ ಯಾಸೋನನೂ ಸೋಸಿಪತ್ರನೂ ನಿಮಗೆ ವಂದನೆಗಳನ್ನು ಹೇಳುತ್ತಾರೆ. 22  ಈ ಪತ್ರವನ್ನು ಬರೆದ ತೆರ್ತ್ಯನೆಂಬ ನಾನು ನಿಮ್ಮನ್ನು ಕರ್ತನಲ್ಲಿ ವಂದಿಸುತ್ತೇನೆ. 23  ನನಗೂ ಸಮಸ್ತ ಸಭೆಗೂ ಅತಿಥಿ​ಸತ್ಕಾರವನ್ನು ಮಾಡುತ್ತಿರುವ ಗಾಯನು ನಿಮ್ಮನ್ನು ವಂದಿಸುತ್ತಾನೆ. ಈ ಪಟ್ಟಣದ ಖಜಾನೆಯ ಮೇಲ್ವಿಚಾರಕನಾಗಿರುವ ಎರಸ್ತನೂ ಅವನ ಸಹೋದರನಾದ ಕ್ವರ್ತನೂ ನಿಮಗೆ ವಂದನೆಗಳನ್ನು ಹೇಳು​ತ್ತಾರೆ. 24  *​—⁠​—⁠ 25  ದೀರ್ಘಕಾಲದಿಂದ ಗುಪ್ತವಾಗಿದ್ದ ಪವಿತ್ರ ರಹಸ್ಯದ ಬಯಲುಪಡಿಸುವಿಕೆಗೆ ಹೊಂದಿಕೆಯಲ್ಲಿ ನಾನು ಪ್ರಕಟಿಸುವ ಸುವಾರ್ತೆ ಮತ್ತು ಯೇಸು ಕ್ರಿಸ್ತನ ಕುರಿತಾದ ಸಾರುವಿಕೆಯ ವಿಷಯದಲ್ಲಿ ನಿಮ್ಮನ್ನು ಬಲಪಡಿಸಶಕ್ತನಾಗಿರುವ ನಿತ್ಯನಾದ ದೇವರಿಗೆ 26  ಅಂದರೆ ಈಗ ಎಲ್ಲ ಜನಾಂಗಗಳವರು ನಂಬಿಕೆಯ ಮೂಲಕ ಆತನಿಗೆ ವಿಧೇಯರಾಗುವಂತೆ ಪ್ರವಾದನಾ ಗ್ರಂಥದಲ್ಲಿ ಆ ಪವಿತ್ರ ರಹಸ್ಯವನ್ನು ಪ್ರಕಟಪಡಿಸಿರುವ ಮತ್ತು ತಿಳಿಯಪಡಿಸಿರುವ 27  ವಿವೇಕಿಯಾದ ಏಕಮಾತ್ರ ದೇವರಿಗೆ ಯೇಸು ಕ್ರಿಸ್ತನ ಮೂಲಕ ಸದಾಕಾಲ ಮಹಿಮೆಯು ಸಲ್ಲಲಿ. ಆಮೆನ್‌.

ಪಾದಟಿಪ್ಪಣಿ

ರೋಮ 16:24  ಮತ್ತಾ 17:21 ರ ಪಾದಟಿಪ್ಪಣಿಯನ್ನು ನೋಡಿ.