ರೋಮನ್ನರಿಗೆ 13:1-14

13  ಪ್ರತಿಯೊಬ್ಬನು ಮೇಲಧಿಕಾರಿಗಳಿಗೆ ಅಧೀನನಾಗಿರಲಿ; ಏಕೆಂದರೆ ದೇವರಿಂದ ಹೊರತು ಒಬ್ಬರಿಗೂ ಅಧಿಕಾರವಿರುವುದಿಲ್ಲ; ಇರುವ ಅಧಿಕಾರಿಗಳು ತಮ್ಮ ಸಾಪೇಕ್ಷ ಸ್ಥಾನಗಳಲ್ಲಿ ದೇವರಿಂದ ಇರಿಸಲ್ಪಟ್ಟಿದ್ದಾರೆ.  ಆದುದರಿಂದ ಅಧಿಕಾರವನ್ನು ಎದುರಿಸುವವನು ದೇವರ ಏರ್ಪಾಡಿಗೆ ಎದುರು ನಿಂತಿದ್ದಾನೆ; ಯಾರು ದೇವರ ಏರ್ಪಾಡಿಗೆ ಎದುರುನಿಂತಿದ್ದಾರೋ ಅವರು ತಮ್ಮನ್ನು ನ್ಯಾಯತೀರ್ಪಿಗೆ ಗುರಿ​ಪಡಿಸಿಕೊಳ್ಳುವರು.  ಕೆಟ್ಟದ್ದನ್ನು ಮಾಡುವವರಿಗೆ ಅಧಿಪತಿಯ ಭಯವಿರುತ್ತದೆಯೇ ಹೊರತು ಒಳ್ಳೇ ಕೆಲಸ ಮಾಡುವವರಿಗಲ್ಲ. ನೀನು ಅಧಿಕಾರಿಗೆ ಭಯಪಡದೇ ಇರಲು ಬಯಸುತ್ತಿಯೊ? ಹಾಗಾದರೆ ಒಳ್ಳೇದನ್ನೇ ಮಾಡುತ್ತಾ ಇರು ಮತ್ತು ಆಗ ನಿನಗೆ ಅವನಿಂದ ಹೊಗಳಿಕೆ ಸಿಗುವುದು.  ಅವನು ನಿನ್ನ ಹಿತಕ್ಕಾಗಿಯೇ ದೇವರ ಸೇವಕನಾಗಿದ್ದಾನೆ. ನೀನು ಕೆಟ್ಟದ್ದನ್ನು ಮಾಡುತ್ತಿರುವುದಾದರೆ ಭಯದಿಂದಿರು; ಏಕೆಂದರೆ ಅವನು ಯಾವುದೇ ಉದ್ದೇಶವಿಲ್ಲದೆ ಕತ್ತಿಯನ್ನು ಹಿಡಿದುಕೊಂಡಿಲ್ಲ; ಅವನು ದೇವರ ಸೇವಕನಾಗಿದ್ದು ಕೆಟ್ಟದ್ದನ್ನು ಆಚರಿಸುವವನ ಮೇಲೆ ದೇವರ ಕ್ರೋಧವನ್ನು ವಿಧಿಸುತ್ತಾನೆ.  ಆದುದರಿಂದ ಆ ಕ್ರೋಧದ ನಿಮಿತ್ತವಾಗಿ ಮಾತ್ರವಲ್ಲದೆ ನಿಮ್ಮ ಮನಸ್ಸಾಕ್ಷಿಯ ನಿಮಿತ್ತವಾಗಿಯೂ ನೀವು ಅಧಿಕಾರಿಗಳಿಗೆ ಅಧೀನರಾಗಿರುವ ಅಗತ್ಯವಿದೆ.  ಈ ಕಾರಣದಿಂದಲೇ ನೀವು ತೆರಿಗೆಯನ್ನು ಸಹ ಕಟ್ಟುತ್ತೀರಿ; ಏಕೆಂದರೆ ಅವರು ದೇವರ ಸಾರ್ವಜನಿಕ ಸೇವಕರಾಗಿದ್ದು ಇದೇ ಉದ್ದೇಶವನ್ನು ಪೂರೈಸುವುದರಲ್ಲಿ ನಿರತರಾಗಿದ್ದಾರೆ.  ಅವರವರಿಗೆ ಸಲ್ಲತಕ್ಕದ್ದನ್ನು ಸಲ್ಲಿಸಿರಿ; ಯಾರಿಗೆ ತೆರಿಗೆಯೋ ಅವರಿಗೆ ತೆರಿಗೆಯನ್ನು, ಯಾರಿಗೆ ಸುಂಕವೋ ಅವರಿಗೆ ಸುಂಕವನ್ನು, ಯಾರಿಗೆ ಭಯವೋ ಅವರಿಗೆ ಅಂಥ ಭಯವನ್ನು, ಯಾರಿಗೆ ಮರ್ಯಾದೆಯೋ ಅವರಿಗೆ ಅಂಥ ಮರ್ಯಾದೆಯನ್ನು ಸಲ್ಲಿಸಿರಿ.  ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬ ಸಾಲವೇ ಹೊರತು ಬೇರೆ ಯಾವ ಸಾಲವೂ ನಿಮಗೆ ಇರಬಾರದು; ತನ್ನ ಜೊತೆ​ಮಾನವ​ನನ್ನು ಪ್ರೀತಿಸುವವನು ಧರ್ಮಶಾಸ್ತ್ರವನ್ನು ನೆರವೇರಿಸಿದ್ದಾನೆ.  ಧರ್ಮಶಾಸ್ತ್ರದಲ್ಲಿ ತಿಳಿಸಿರುವ “ನೀನು ವ್ಯಭಿಚಾರ ಮಾಡಬಾರದು, ನರಹತ್ಯ ​ಮಾಡಬಾರದು, ಕದಿಯಬಾರದು, ದುರಾಶೆಪಡಬಾರದು” ಎಂಬ ಆಜ್ಞೆಗಳು ಮತ್ತು ಇತರ ಯಾವುದೇ ಆಜ್ಞೆಯು “ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು” ಎಂಬ ಒಂದೇ ಮಾತಿನಲ್ಲಿ ಅಡಕವಾಗಿದೆ. 10  ಪ್ರೀತಿಯು ಒಬ್ಬನ ನೆರೆಯವನಿಗೆ ​ಕೆಡುಕನ್ನು ಮಾಡುವುದಿಲ್ಲ, ಆದುದರಿಂದ ಪ್ರೀತಿಯು ಧರ್ಮಶಾಸ್ತ್ರದ ನೆರವೇರಿಕೆಯಾಗಿದೆ. 11  ನೀವು ಜೀವಿಸುತ್ತಿರುವ ಕಾಲದ ಕುರಿತು ನಿಮಗೆ ತಿಳಿದಿರುವುದರಿಂದಲೂ ಇದನ್ನು ಮಾಡಿರಿ; ನಿದ್ರೆಯಿಂದ ಎಚ್ಚತ್ತು​ಕೊಳ್ಳುವ ಗಳಿಗೆಯು ಈಗಲೇ ಬಂದಿರುತ್ತದೆ. ಏಕೆಂದರೆ ನಮ್ಮ ರಕ್ಷಣೆಯು ನಾವು ವಿಶ್ವಾಸಿಗಳಾದಾಗಿನ ಸಮಯಕ್ಕಿಂತ ಈಗ ಹೆಚ್ಚು ಹತ್ತಿರವಾಗಿದೆ. 12  ರಾತ್ರಿಯು ಬಹಳ ಮಟ್ಟಿಗೆ ಕಳೆದಿದೆ, ಹಗಲು ಹತ್ತಿರವಾಗಿದೆ. ಆದುದರಿಂದ ನಾವು ಕತ್ತಲೆಗೆ ಸಂಬಂಧಿಸಿದ ಕೃತ್ಯಗಳನ್ನು ತೆಗೆದುಹಾಕಿ ಬೆಳಕಿನ ಆಯುಧಗಳನ್ನು ಧರಿಸಿಕೊಳ್ಳೋಣ. 13  ಭಾರೀ ಮೋಜು, ಕುಡಿದು ಮತ್ತೇರಿದ ಸರದಿಗಳು, ನಿಷಿದ್ಧ ಸಂಭೋಗ, ಸಡಿಲು ನಡತೆ, ಜಗಳ ಮತ್ತು ಹೊಟ್ಟೆಕಿಚ್ಚು ಮುಂತಾದವುಗಳಲ್ಲಿ ನಿರತರಾಗಿರದೆ ಹಗಲಿಗೆ ತಕ್ಕಹಾಗೆ ಸಭ್ಯತೆ​ಯಿಂದ ನಡೆಯೋಣ. 14  ಕರ್ತನಾದ ಯೇಸು ಕ್ರಿಸ್ತನನ್ನು ಧರಿಸಿಕೊಳ್ಳಿರಿ; ಶಾರೀರಿಕ ಇಚ್ಛೆಗಳನ್ನು ಪೂರೈಸಲು ಮುಂದಾಗಿಯೇ ಯೋಜಿಸುವವರಾಗಬೇಡಿರಿ.

ಪಾದಟಿಪ್ಪಣಿ