ರೋಮನ್ನರಿಗೆ 12:1-21

12  ಆದುದರಿಂದ ಸಹೋದರರೇ, ದೇವರ ಕನಿಕರದ ಮೂಲಕ ನಾನು ನಿಮ್ಮನ್ಮು ಬೇಡಿಕೊಳ್ಳುವುದೇನೆಂದರೆ, ನೀವು ನಿಮ್ಮ ದೇಹಗಳನ್ನು ಸಜೀವ​ವಾಗಿಯೂ ಪವಿತ್ರವಾಗಿಯೂ ದೇವರಿಗೆ ಸ್ವೀಕೃತವಾಗಿಯೂ ಇರುವ ಯಜ್ಞವಾಗಿ ಅರ್ಪಿಸಿರಿ; ಇದೇ ನೀವು ವಿವೇಚನಾಶಕ್ತಿಯೊಂದಿಗೆ ಅರ್ಪಿಸುವ ಪವಿತ್ರ ಸೇವೆಯಾಗಿದೆ.  ಈ ವಿಷಯಗಳ ವ್ಯವಸ್ಥೆಯ ಪ್ರಕಾರ ರೂಪಿಸಿಕೊಳ್ಳಲ್ಪಡುವುದನ್ನು ಬಿಟ್ಟು, ದೇವರ ಉತ್ತಮವಾದ, ಸ್ವೀಕೃತವಾದ ಮತ್ತು ಪರಿಪೂರ್ಣವಾದ ಚಿತ್ತವು ಯಾವುದೆಂದು ಪರಿಶೋಧಿಸಿ ತಿಳಿದುಕೊಳ್ಳುವಂತೆ ನಿಮ್ಮ ಮನಸ್ಸನ್ನು ಮಾರ್ಪಡಿಸಿ ನವೀಕರಿಸಿಕೊಳ್ಳಿರಿ.  ನನಗೆ ಕೊಡಲ್ಪಟ್ಟಿರುವ ಅಪಾತ್ರ ದಯೆಯಿಂದ ನಾನು ನಿಮ್ಮಲ್ಲಿ ಪ್ರತಿ​ಯೊಬ್ಬರಿಗೂ ಹೇಳುವುದೇನೆಂದರೆ, ನಿಮ್ಮಲ್ಲಿ ಯಾವನೂ ತನ್ನ ಕುರಿತು ಅಗತ್ಯಕ್ಕಿಂತ ಹೆಚ್ಚಾಗಿ ಭಾವಿಸಿಕೊಳ್ಳ​ಬಾರದು; ಅದಕ್ಕೆ ಬದಲಾಗಿ ​ಪ್ರತಿಯೊಬ್ಬನು ತನಗೆ ದೇವರು ಹಂಚಿಕೊಟ್ಟಿರುವ ನಂಬಿಕೆಯ ಪರಿಮಾಣಕ್ಕೆ ಅನುಸಾರವಾಗಿ ಸ್ವಸ್ಥಬುದ್ಧಿಯುಳ್ಳವನಾಗಿರುವಂತೆ ಭಾವಿಸಿಕೊಳ್ಳಬೇಕು.  ಒಂದು ​ದೇಹದಲ್ಲಿ ಅನೇಕ ಅಂಗಗಳಿದ್ದರೂ ಆ ಅಂಗಗಳಿಗೆಲ್ಲ ಹೇಗೆ ಒಂದೇ ಕೆಲಸವಿರುವುದಿಲ್ಲವೋ  ಹಾಗೆಯೇ ನಾವು ಸಹ ಅನೇಕರಿರುವುದಾದರೂ ಕ್ರಿಸ್ತನೊಂದಿಗೆ ಐಕ್ಯದಲ್ಲಿ ಒಂದೇ ದೇಹವಾಗಿದ್ದು ಪ್ರತಿಯೊಬ್ಬರು ಒಬ್ಬರಿಗೊಬ್ಬರು ಪರಸ್ಪರ ಅಂಗಗಳಾಗಿದ್ದೇವೆ.  ನಮಗೆ ಕೊಡಲ್ಪಟ್ಟಿರುವ ಅಪಾತ್ರ ದಯೆಗನುಸಾರ ನಾವು ವಿಭಿನ್ನವಾದ ವರಗಳನ್ನು ಹೊಂದಿದ್ದೇವೆ; ಅದು ಪ್ರವಾದನೆಯ ವರವಾಗಿದ್ದರೆ ನಮಗೆ ಕೊಡಲ್ಪಟ್ಟಿರುವ ನಂಬಿಕೆಯ ಪರಿಮಾಣಕ್ಕನುಸಾರ ಪ್ರವಾದಿಸೋಣ;  ಶುಶ್ರೂಷೆಯ ವರವಾಗಿರುವುದಾದರೆ ಈ ಶುಶ್ರೂಷೆಯಲ್ಲಿ ನಿರತರಾಗಿರೋಣ; ಬೋಧಿಸುವವನು ಬೋಧಿಸುತ್ತಾ ಇರಲಿ;  ಬುದ್ಧಿಹೇಳು​ವವನು ಬುದ್ಧಿಹೇಳುವುದರಲ್ಲಿ ನಿರತನಾಗಿರಲಿ; ದಾನಕೊಡುವವನು ಧಾರಾಳವಾಗಿ ಕೊಡಲಿ; ಅಧ್ಯಕ್ಷತೆ ವಹಿಸುವವನು ಅದನ್ನು ನಿಜವಾದ ಶ್ರದ್ಧೆಯಿಂದ ಮಾಡಲಿ; ಕರುಣೆ ತೋರಿಸುವವನು ಅದನ್ನು ಉಲ್ಲಾಸದಿಂದ ತೋರಿಸಲಿ.  ನಿಮ್ಮ ಪ್ರೀತಿಯು ನಿಷ್ಕಪಟವಾಗಿರಲಿ. ಕೆಟ್ಟದ್ದನ್ನು ಹೇಸಿರಿ, ಒಳ್ಳೇದನ್ನು ಬಿಗಿಯಾಗಿ ಹಿಡಿದುಕೊಳ್ಳಿರಿ. 10  ಸಹೋದರ ಪ್ರೀತಿಯಲ್ಲಿ ಒಬ್ಬರಿಗೊಬ್ಬರು ಕೋಮಲ ಮಮತೆಯುಳ್ಳವರಾಗಿರಿ. ಗೌರವ ತೋರಿಸುವುದರಲ್ಲಿ ಒಬ್ಬರಿಗಿಂತ ಒಬ್ಬರು ಮುಂದಾಗಿರಿ. 11  ನಿಮ್ಮ ಕೆಲಸದಲ್ಲಿ ಆಲಸಿಗಳಾಗಿರಬೇಡಿ. ಪವಿತ್ರಾತ್ಮದಿಂದ ಪ್ರಜ್ವಲಿಸಿರಿ. ಯೆಹೋವನಿಗಾಗಿ ದುಡಿದು ಸೇವೆಸಲ್ಲಿಸಿರಿ. 12  ನಿರೀಕ್ಷೆಯಲ್ಲಿ ಆನಂದಿಸಿರಿ. ಸಂಕಟದಲ್ಲಿರುವಾಗ ತಾಳಿಕೊಳ್ಳಿರಿ. ಪಟ್ಟುಹಿಡಿದು ಪ್ರಾರ್ಥಿಸಿರಿ. 13  ಪವಿತ್ರ ಜನರ ಅಗತ್ಯಗಳಿಗನುಸಾರ ನಿಮಗಿರುವುದನ್ನು ಅವರೊಂದಿಗೆ ಹಂಚಿಕೊಳ್ಳಿರಿ. ಅತಿಥಿಸತ್ಕಾರದ ಪಥವನ್ನು ​ಅನುಸರಿಸಿರಿ. 14  ಹಿಂಸಿಸುವವರನ್ನು ಆಶೀ​ರ್ವದಿಸುತ್ತಾ ಇರಿ; ಅವರನ್ನು ಶಪಿಸದೆ ಆಶೀರ್ವದಿಸಿರಿ. 15  ಆನಂದಿಸುವವರೊಂದಿಗೆ ಆನಂದಿಸಿರಿ; ಅಳುವವರೊಂದಿಗೆ ಅಳಿರಿ. 16  ನಿಮ್ಮ ಬಗ್ಗೆ ನಿಮಗಿರುವ ಮನೋಭಾವವನ್ನೇ ಇತರರ ಕಡೆಗೂ ತೋರಿಸಿರಿ; ಅಹಂಭಾವದ ವಿಷಯಗಳನ್ನು ಯೋಚಿಸುತ್ತಿರದೆ ದೀನತೆಯಿಂದ ನಡೆಸಲ್ಪಡಿರಿ. ನಿಮ್ಮ ಸ್ವಂತ ದೃಷ್ಟಿಯಲ್ಲಿ ವಿವೇಕಿಗಳಾಗಬೇಡಿರಿ. 17  ಯಾರಿಗೂ ಕೆಟ್ಟದ್ದಕ್ಕೆ ಪ್ರತಿಯಾಗಿ ಕೆಟ್ಟದ್ದನ್ನು ಮಾಡಬೇಡಿ. ಎಲ್ಲರ ದೃಷ್ಟಿಯಲ್ಲಿ ಒಳ್ಳೇದಾಗಿರುವುದನ್ನೇ ಮಾಡಿರಿ. 18  ಸಾಧ್ಯವಾದರೆ ನಿಮ್ಮಿಂದಾಗುವ ಮಟ್ಟಿಗೆ ಎಲ್ಲರೊಂದಿಗೆ ಶಾಂತಿಶೀಲರಾಗಿರಿ. 19  ಪ್ರಿಯರೇ ನೀವು ಮುಯ್ಯಿಗೆ ಮುಯ್ಯಿ ತೀರಿಸದೆ ದೇವರ ಕ್ರೋಧಕ್ಕೆ ಎಡೆಮಾಡಿಕೊಡಿರಿ; “ಮುಯ್ಯಿಗೆ ಮುಯ್ಯಿ ತೀರಿಸುವುದು ನನ್ನ ಕೆಲಸ, ನಾನೇ ​ಪ್ರತಿಫಲವನ್ನು ಕೊಡುವೆನು ಎಂದು ಯೆಹೋವನು ಹೇಳುತ್ತಾನೆ” ಎಂದು ಬರೆದಿದೆ. 20  ಆದರೆ “ನಿನ್ನ ವೈರಿಯು ಹಸಿದಿರುವುದಾದರೆ ಅವನಿಗೆ ಊಟಕ್ಕೆ ಕೊಡು; ಅವನು ಬಾಯಾರಿದ್ದರೆ ಅವನಿಗೆ ಏನನ್ನಾದರೂ ಕುಡಿಯಲು ಕೊಡು; ಹೀಗೆ ಮಾಡುವ ಮೂಲಕ ನೀನು ಅವನ ತಲೆಯ ಮೇಲೆ ಕೆಂಡವನ್ನು ಹೇರಿದಂತಾಗುವುದು.” 21  ಕೆಟ್ಟದ್ದು ನಿನ್ನನ್ನು ಜಯಿಸುವಂತೆ ಬಿಡಬೇಡ, ಒಳ್ಳೇದರಿಂದ ಕೆಟ್ಟದ್ದನ್ನು ಜಯಿಸುತ್ತಾ ಇರು.

ಪಾದಟಿಪ್ಪಣಿ