ರೋಮನ್ನರಿಗೆ 10:1-21

10  ಸಹೋದರರೇ, ಅವರು ರಕ್ಷಣೆಹೊಂದಬೇಕೆಂಬುದೇ ನನ್ನ ಹೃದಯದ ಸದಿಚ್ಛೆಯೂ ದೇವರಿಗೆ ನಾನು ಮಾಡುವ ಯಾಚನೆಯೂ ಆಗಿದೆ.  ಅವರಿಗೆ ದೇವರ ವಿಷಯದಲ್ಲಿ ಹುರುಪಿದೆ ಎಂದು ನಾನು ಸಾಕ್ಷಿನೀಡುತ್ತೇನೆ; ಆದರೆ ಅವರ ಹುರುಪು ನಿಷ್ಕೃಷ್ಟ ಜ್ಞಾನಕ್ಕನುಸಾರವಾದುದಲ್ಲ;  ಅವರು ದೇವರ ನೀತಿಯನ್ನು ತಿಳಿಯದೆ ತಮ್ಮ ಸ್ವಂತ ನೀತಿಯನ್ನು ಸ್ಥಾಪಿಸಲು ಪ್ರಯತ್ನಿಸುತ್ತಾ ಇದ್ದುದರಿಂದ ದೇವರ ನೀತಿಗೆ ತಮ್ಮನ್ನು ಅಧೀನಪಡಿಸಿಕೊಳ್ಳಲಿಲ್ಲ.  ನಂಬಿಕೆಯಿಡುವ ಪ್ರತಿಯೊಬ್ಬನಿಗೆ ನೀತಿಯು ದೊರಕುವಂತೆ ಕ್ರಿಸ್ತನು ಧರ್ಮಶಾಸ್ತ್ರವನ್ನು ಕೊನೆಗಾಣಿಸಿದ್ದಾನೆ.  ಧರ್ಮಶಾಸ್ತ್ರದಲ್ಲಿ ಬರೆದಿರುವ ನೀತಿಯನ್ನು ಕೈಗೊಂಡು ನಡೆಯುವವನು ಅದರಿಂದಲೇ ಬದುಕುವನು ಎಂದು ಮೋಶೆಯು ಬರೆದನು.  ಆದರೆ ನಂಬಿಕೆಯಿಂದ ಫಲಿಸುವ ನೀತಿಯ ​ಕುರಿತಾಗಿ, “ಕ್ರಿಸ್ತನನ್ನು ಕೆಳಗೆ ಕರೆದುಕೊಂಡು ಬರಲಿಕ್ಕಾಗಿ ‘ಯಾರು ಸ್ವರ್ಗಕ್ಕೆ ಏರಿಹೋಗುವರು?’ ಎಂದಾಗಲಿ  ಕ್ರಿಸ್ತನನ್ನು ಸತ್ತವರೊಳಗಿಂದ ಮೇಲಕ್ಕೆ ಕರೆದುಕೊಂಡು ಬರಲಿಕ್ಕಾಗಿ ‘ಯಾರು ಅಗಾಧ ಸ್ಥಳಕ್ಕೆ ಇಳಿದುಹೋಗುವರು?’ ಎಂದಾಗಲಿ ನಿನ್ನ ಹೃದಯದಲ್ಲಿ ಅಂದುಕೊಳ್ಳಬೇಡ” ಎಂದು ಬರೆದಿದೆ.  ಆದರೆ ಶಾಸ್ತ್ರಗ್ರಂಥವು ಏನು ಹೇಳಿತು? “ವಾಕ್ಯವು ನಿನ್ನ ಸಮೀಪದಲ್ಲಿದೆ, ನಿನ್ನ ಬಾಯಲ್ಲಿಯೂ ನಿನ್ನ ಹೃದಯದಲ್ಲಿಯೂ ಇದೆ”; ಆ “ವಾಕ್ಯವು” ನಾವು ಸಾರುತ್ತಿರುವ ನಂಬಿಕೆಯ ವಾಕ್ಯವೇ.  ಕ್ರಿಸ್ತನೇ ಕರ್ತನೆಂದು ‘ನಿಮ್ಮ ಬಾಯಿಂದಲೇ ಆ ವಾಕ್ಯವನ್ನು’ ಬಹಿರಂಗವಾಗಿ ಪ್ರಕಟಿಸಿ, ದೇವರು ಅವನನ್ನು ಸತ್ತವರೊಳಗಿಂದ ಎಬ್ಬಿಸಿದನೆಂದು ನಿಮ್ಮ ಹೃದಯದಲ್ಲಿ ನಂಬಿಕೆಯಿಡುವುದಾದರೆ ನೀವು ರಕ್ಷಿಸಲ್ಪಡುವಿರಿ. 10  ಏಕೆಂದರೆ ಒಬ್ಬನು ನೀತಿಗಾಗಿ ಹೃದಯದಿಂದ ನಂಬಿಕೆಯನ್ನು ಅಭ್ಯಾಸಿಸುತ್ತಾನೆ; ಆದರೆ ರಕ್ಷಣೆಗಾಗಿ ಬಾಯಿಂದ ಬಹಿರಂಗವಾಗಿ ಪ್ರಕಟಿಸುತ್ತಾನೆ. 11  “ಅವನಲ್ಲಿ ನಂಬಿಕೆಯಿಡುವ ಯಾವನೂ ಆಶಾಭಂಗಪಡುವುದಿಲ್ಲ” ಎಂದು ಶಾಸ್ತ್ರಗ್ರಂಥವು ತಿಳಿಸುತ್ತದೆ. 12  ಯೆಹೂದ್ಯನಿಗೂ ಗ್ರೀಕನಿಗೂ ಯಾವುದೇ ತಾರತಮ್ಯವಿಲ್ಲ; ಏಕೆಂದರೆ ಎಲ್ಲರಿಗೂ ಒಬ್ಬನೇ ಕರ್ತನಿದ್ದಾನೆ ಮತ್ತು ತನ್ನನ್ನು ಕೋರುವವರಿಗೆ ಅವನು ಹೇರಳವಾಗಿ ಕೊಡುತ್ತಾನೆ. 13  “ಯೆಹೋವನ ನಾಮದಲ್ಲಿ ಕೋರುವ ಪ್ರತಿಯೊಬ್ಬನೂ ರಕ್ಷಿಸಲ್ಪಡುವನು” ಎಂದು ಬರೆದಿದೆ. 14  ಆದರೆ ತಾವು ಯಾರ ಮೇಲೆ ನಂಬಿಕೆಯಿಟ್ಟಿಲ್ಲವೋ ಆತನನ್ನು ಕೋರುವುದು ಹೇಗೆ? ತಾವು ಯಾರ ಕುರಿತು ಕೇಳಿಸಿಕೊಂಡಿಲ್ಲವೋ ಆತನಲ್ಲಿ ನಂಬಿಕೆಯಿಡುವುದು ಹೇಗೆ? ಸಾರಿಹೇಳುವವನಿಲ್ಲದೆ ಕೇಳಿಸಿಕೊಳ್ಳುವುದು ಹೇಗೆ? 15  ಕಳುಹಿಸಲ್ಪಟ್ಟ ಹೊರತು ಅವರು ಸಾರುವುದು ಹೇಗೆ? “ಒಳ್ಳೇ ವಿಷಯಗಳ ಕುರಿತಾದ ಸುವಾರ್ತೆಯನ್ನು ಸಾರುವವರ ಪಾದಗಳು ಎಷ್ಟು ಅಂದ!” ಎಂದು ಬರೆದಿದೆ. 16  ಹಾಗಿದ್ದರೂ ಸುವಾರ್ತೆಗೆ ಅವರೆಲ್ಲರೂ ವಿಧೇಯರಾಗಲಿಲ್ಲ. “ಯೆಹೋವನೇ, ನಮ್ಮಿಂದ ಕೇಳಿಸಿಕೊಂಡ ವಿಷಯದಲ್ಲಿ ಯಾರು ನಂಬಿಕೆಯಿಟ್ಟಿದ್ದಾರೆ?” ಎಂದು ಯೆಶಾಯನು ಹೇಳುತ್ತಾನೆ. 17  ಹೀಗೆ ಕೇಳಿಸಿಕೊಂಡ ವಿಷಯದಿಂದ ನಂಬಿಕೆಯು ಬರುತ್ತದೆ; ಕೇಳಿಸಿಕೊಂಡ ಸಂಗತಿಯು ಕ್ರಿಸ್ತನ ಕುರಿತಾದ ವಾಕ್ಯದ ಮೂಲಕವಾಗಿದೆ. 18  ಆದರೂ ಅವರು ಕೇಳಲು ತಪ್ಪಿಹೋಗಲಿಲ್ಲ, ಅಲ್ಲವೆ? ಎಂದು ಕೇಳುತ್ತೇನೆ. ವಾಸ್ತವದಲ್ಲಿ, “ಅವರ ಧ್ವನಿಯು ಭೂಮಿಯಾದ್ಯಂತವೂ ಅವರ ನುಡಿಗಳು ನಿವಾಸಿತ ಭೂಮಿಯ ಕಟ್ಟಕಡೆಯ ವರೆಗೂ ಪ್ರಸರಿಸಿದವು.” 19  ಆದರೂ ಇಸ್ರಾಯೇಲ್ಯರು ತಿಳಿದುಕೊಳ್ಳಲು ತಪ್ಪಿಹೋಗಲಿಲ್ಲ, ಅಲ್ಲವೆ? ಎಂದು ನಾನು ಕೇಳುತ್ತೇನೆ. ಮೊದಲಾಗಿ ಮೋಶೆಯು, “ಜನಾಂಗವಲ್ಲದವರ ಮೂಲಕ ನಾನು ನಿಮ್ಮಲ್ಲಿ ಅಸೂಯೆಯನ್ನು ಹುಟ್ಟಿಸುತ್ತೇನೆ; ಒಂದು ಮೂರ್ಖ ಜನಾಂಗದ ಮೂಲಕ ನಾನು ನಿಮ್ಮಲ್ಲಿ ಕಡುಕೋಪವನ್ನು ಕೆರಳಿಸುತ್ತೇನೆ” ಎಂದು ಹೇಳಿದನು. 20  ಆದರೆ ಯೆಶಾಯನು ಬಹಳ ಧೈರ್ಯದಿಂದ, “ನನ್ನನ್ನು ಹುಡುಕದವರಿಗೆ ನಾನು ಸಿಕ್ಕಿದೆನು; ನನ್ನನ್ನು ವಿಚಾರಿಸದವರಿಗೆ ನಾನು ತೋರಿಸಿಕೊಂಡೆನು” ಎಂದು ಹೇಳಿದನು. 21  ಆದರೆ ಇಸ್ರಾಯೇಲ್ಯರ ಕುರಿತು ಅವನು, “ಅವಿಧೇಯರಾಗಿರುವ ಮತ್ತು ನನಗೆ ಎದುರುಮಾತಾಡುವ ಜನರನ್ನು ನಾನು ದಿನವೆಲ್ಲ ಕೈಚಾಚಿ ಕರೆದೆನು” ಎಂದು ಹೇಳಿದನು.

ಪಾದಟಿಪ್ಪಣಿ