ಯೋಹಾನ 5:1-47

5  ಇದಾದ ಬಳಿಕ ಯೆಹೂದ್ಯರ ಒಂದು ಹಬ್ಬವು ಇದ್ದುದರಿಂದ ಯೇಸು ಯೆರೂಸಲೇಮಿಗೆ ಹೋದನು.  ಯೆರೂಸಲೇಮಿನಲ್ಲಿ ಕುರಿಬಾಗಿಲ ಬಳಿ ಒಂದು ಕೊಳವಿದೆ; ಇದನ್ನು ಹೀಬ್ರು ಭಾಷೆಯಲ್ಲಿ ಬೇತ್ಸಥಾ ಎಂದು ಕರೆಯಲಾಗುತ್ತದೆ; ಅದಕ್ಕೆ ಐದು ಮಂಟಪಗಳಿದ್ದವು.  ಇವುಗಳಲ್ಲಿ ಅಸ್ವಸ್ಥರೂ ಕುರುಡರೂ ಕುಂಟರೂ ಕೈಕಾಲು ಬತ್ತಿಹೋದವರೂ ಆಗಿದ್ದವರ ದೊಡ್ಡ ಸಮೂಹವೇ ಮಲಗಿಕೊಂಡಿರುತ್ತಿತ್ತು.  * ​—⁠​—⁠  ಅಲ್ಲಿ ಮೂವತ್ತೆಂಟು ವರ್ಷಗಳಿಂದ ರೋಗಿಯಾಗಿದ್ದ ಒಬ್ಬ ಮನುಷ್ಯನಿದ್ದನು.  ಈ ಮನುಷ್ಯನು ಮಲಗಿಕೊಂಡಿರುವುದನ್ನು ಯೇಸು ನೋಡಿ, ಅವನು ಈಗಾಗಲೇ ಬಹುಕಾಲದಿಂದ ರೋಗಿಯಾಗಿದ್ದನೆಂಬುದನ್ನು ಅರಿತವನಾಗಿ ಅವನಿಗೆ, “ನೀನು ಸ್ವಸ್ಥನಾಗಲು ಬಯಸುತ್ತೀಯೊ?” ಎಂದು ಕೇಳಿದನು.  ಅದಕ್ಕೆ ಆ ಅಸ್ವಸ್ಥನು, “ಸ್ವಾಮಿ, ನೀರು ಉಕ್ಕುವಾಗ ನನ್ನನ್ನು ಕೊಳದೊಳಗೆ ಇಳಿಸಲು ನನಗೆ ಯಾರೂ ಇಲ್ಲ; ನಾನು ಬರುವುದರೊಳಗೆ ನನಗಿಂತ ಮುಂಚೆ ಇನ್ನೊಬ್ಬನು ಕೊಳಕ್ಕಿಳಿಯುತ್ತಾನೆ” ಎಂದು ಹೇಳಿದನು.  ಯೇಸು ಅವನಿಗೆ, “ಎದ್ದು ನಿನ್ನ ಮಂಚವನ್ನು ಎತ್ತಿಕೊಂಡು ನಡೆ” ಎಂದನು.  ಆ ಕೂಡಲೆ ಆ ಮನುಷ್ಯನು ಸ್ವಸ್ಥನಾಗಿ ತನ್ನ ಮಂಚವನ್ನು ಎತ್ತಿಕೊಂಡು ನಡೆಯಲಾರಂಭಿಸಿದನು. ಅದು ಸಬ್ಬತ್‌ ದಿನವಾಗಿತ್ತು. 10  ಆದುದ​ರಿಂದ ಯೆಹೂದ್ಯರು ವಾಸಿ​ಯಾದ ಆ ಮನುಷ್ಯನಿಗೆ, “ಇದು ಸಬ್ಬತ್‌ ದಿನವಾಗಿದೆ; ನೀನು ಮಂಚವನ್ನು ಎತ್ತಿಕೊಂಡು ಹೋಗುವುದು ಧರ್ಮಸಮ್ಮತವಲ್ಲ” ಎಂದು ಹೇಳಿದರು. 11  ಆದರೆ ಅವನು ಅವರಿಗೆ, “ನನ್ನನ್ನು ಸ್ವಸ್ಥಪಡಿಸಿದವನೇ ನನಗೆ, ‘ನಿನ್ನ ಮಂಚವನ್ನು ಎತ್ತಿಕೊಂಡು ನಡೆ’ ಎಂದು ಹೇಳಿದನು” ಅಂದನು. 12  ಅವರು ಅವನಿಗೆ, “‘ಅದನ್ನು ಎತ್ತಿಕೊಂಡು ನಡೆ’ ಎಂದು ನಿನಗೆ ಹೇಳಿದವನು ಯಾರು?” ಎಂದು ಕೇಳಿದರು. 13  ಆದರೆ ಅವನು ಯಾರೆಂಬುದು ವಾಸಿಯಾಗಿದ್ದ ಆ ಮನುಷ್ಯನಿಗೆ ತಿಳಿದಿರಲಿಲ್ಲ; ಆ ಸ್ಥಳದಲ್ಲಿ ಜನರ ಗುಂಪು ಇದ್ದುದರಿಂದ ಯೇಸು ಅಲ್ಲಿಂದ ಹೊರಟುಹೋಗಿದ್ದನು. 14  ಇದಾದ ಮೇಲೆ ಯೇಸು ಅವನನ್ನು ದೇವಾಲಯದಲ್ಲಿ ಕಂಡು ಅವನಿಗೆ, “ನೋಡು, ನೀನು ಸ್ವಸ್ಥನಾಗಿದ್ದಿ. ನಿನಗೆ ಇನ್ನೂ ಹೆಚ್ಚಿನ ಕೆಡುಕು ಸಂಭವಿಸದಿರಲಿಕ್ಕಾಗಿ ಇನ್ನು ಮುಂದೆ ಪಾಪಮಾಡಬೇಡ” ಎಂದು ಹೇಳಿದನು. 15  ಆ ಮನುಷ್ಯನು ಹೊರಟುಹೋಗಿ ತನ್ನನ್ನು ಸ್ವಸ್ಥಪಡಿಸಿದವನು ಯೇಸುವೇ ಎಂದು ಯೆಹೂದ್ಯರಿಗೆ ಹೇಳಿದನು. 16  ಯೇಸು ಸಬ್ಬತ್‌ ದಿನದಂದು ಇದನ್ನೆಲ್ಲ ಮಾಡುತ್ತಿದ್ದುದರಿಂದ ಯೆಹೂದ್ಯರು ಯೇಸುವನ್ನು ಹಿಂಸಿಸುತ್ತ ಹೋದರು. 17  ಅವನು ಅವರಿಗೆ, “ನನ್ನ ತಂದೆಯು ಇಂದಿನ ವರೆಗೂ ಕೆಲಸ​ಮಾಡುತ್ತಾ ಇದ್ದಾನೆ ಮತ್ತು ನಾನೂ ಕೆಲಸಮಾಡುತ್ತಿದ್ದೇನೆ” ಎಂದನು. 18  ವಾಸ್ತವದಲ್ಲಿ, ಅವನು ಸಬ್ಬತ್ತನ್ನು ಮುರಿದದ್ದಲ್ಲದೆ ದೇವರನ್ನು ತನ್ನ ಸ್ವಂತ ತಂದೆ ಎಂದು ಕರೆಯುವ ಮೂಲಕ ತನ್ನನ್ನು ದೇವರಿಗೆ ಸರಿಸಮಾನನಾಗಿ ಮಾಡಿಕೊಂಡನೆಂದು ಸಹ ಯೆಹೂದ್ಯರು ಅವನನ್ನು ಕೊಲ್ಲಲು ಇನ್ನಷ್ಟು ಹೆಚ್ಚು ಪ್ರಯತ್ನಿಸಿದರು. 19  ಆದುದರಿಂದ, ಉತ್ತರವಾಗಿ ಯೇಸು ಅವರಿಗೆ ಮುಂದುವರಿಸುತ್ತಾ ಹೇಳಿದ್ದು: “ನಿಮಗೆ ನಿಜನಿಜವಾಗಿ ಹೇಳು​ತ್ತೇನೆ, ತಂದೆಯು ಮಾಡುವುದನ್ನು ಕಂಡು ಮಗನು ಮಾಡುತ್ತಾನೆಯೇ ಹೊರತು ಸ್ವಪ್ರೇರಣೆಯಿಂದ ಒಂದೇ ಒಂದು ವಿಷಯವನ್ನೂ ಮಾಡಲಾರನು. ಆತನು ಮಾಡುವುದನ್ನೆಲ್ಲ ಮಗನು ಸಹ ಅದೇ ರೀತಿಯಲ್ಲಿ ಮಾಡುತ್ತಾನೆ. 20  ಏಕೆಂದರೆ ತಂದೆಗೆ ಮಗನ ಮೇಲೆ ಮಮತೆಯಿದೆ ಮತ್ತು ತಾನು ಮಾಡುವವುಗಳನ್ನೆಲ್ಲ ಆತನು ಅವನಿಗೆ ತೋರಿಸುತ್ತಾನೆ; ಮತ್ತು ನಿಮ್ಮನ್ನು ಆಶ್ಚರ್ಯಪಡಿಸುವುದಕ್ಕಾಗಿ ಆತನು ಅವನಿಗೆ ಇವುಗಳಿಗಿಂತ ಹೆಚ್ಚು ಮಹತ್ತಾದ ಕಾರ್ಯಗಳನ್ನು ತೋರಿಸುವನು. 21  ತಂದೆಯು ಮೃತರನ್ನು ಎಬ್ಬಿಸಿ ಅವರನ್ನು ಬದುಕಿಸುವಂತೆಯೇ ಮಗನು ಸಹ ತನಗೆ ಬೇಕಾದವರನ್ನು ಬದುಕಿಸುತ್ತಾನೆ. 22  ತಂದೆಯು ಯಾರಿಗೂ ತೀರ್ಪುಮಾಡುವುದಿಲ್ಲ; ಆದರೆ ನ್ಯಾಯತೀರ್ಪಿನ ಕೆಲಸವನ್ನೆಲ್ಲ ಆತನು ಮಗನಿಗೆ ಒಪ್ಪಿಸಿದ್ದಾನೆ. 23  ಎಲ್ಲರೂ ತಂದೆಯನ್ನು ಗೌರವಿಸುವಂತೆ ಮಗನನ್ನೂ ಗೌರವಿಸ​ಬೇಕೆಂದು ಹೀಗೆ ಮಾಡಿದನು. ಮಗನನ್ನು ಗೌರವಿಸದವನು ಅವನನ್ನು ಕಳುಹಿಸಿದ ತಂದೆಯನ್ನೂ ಗೌರವಿಸದವನಾಗಿದ್ದಾನೆ. 24  ನಾನು ನಿಮಗೆ ನಿಜನಿಜವಾಗಿ ಹೇಳುವುದೇನೆಂದರೆ, ನನ್ನ ವಾಕ್ಯವನ್ನು ಕೇಳಿಸಿಕೊಂಡು ನನ್ನನ್ನು ಕಳುಹಿಸಿದಾತನನ್ನು ನಂಬುವವನಿಗೆ ನಿತ್ಯಜೀವವಿದೆ; ಅವನು ತೀರ್ಪಿಗೆ ಒಳಗಾಗುವುದಿಲ್ಲ, ಬದಲಾಗಿ ಮರಣದಿಂದ ಜೀವಕ್ಕೆ ಪಾರಾಗಿದ್ದಾನೆ. 25  “ನಿಮಗೆ ನಿಜನಿಜವಾಗಿ ಹೇಳು​ತ್ತೇನೆ, ಸತ್ತವರು ದೇವಕುಮಾರನ ಸ್ವರವನ್ನು ಕೇಳುವ ಕಾಲ ಬರುತ್ತದೆ, ಅದು ಈಗಲೇ ಬಂದಿದೆ ಮತ್ತು ಅದಕ್ಕೆ ಗಮನಕೊಟ್ಟವರು ಬದುಕುವರು. 26  ತಂದೆಯು ತನ್ನಲ್ಲೇ ಜೀವವುಳ್ಳವನಾಗಿರುವಂತೆಯೇ ಮಗನು ಸಹ ತನ್ನಲ್ಲಿ ಜೀವವುಳ್ಳವನಾಗಿರುವಂತೆ ಆತನು ಅನುಗ್ರಹಿಸಿದ್ದಾನೆ. 27  ಮತ್ತು ಅವನು ಮನುಷ್ಯಕುಮಾರನಾಗಿರುವುದರಿಂದ ನ್ಯಾಯತೀರ್ಪನ್ನು ಮಾಡುವ ಅಧಿಕಾರವನ್ನು ಆತನು ಅವನಿಗೆ ಕೊಟ್ಟಿದ್ದಾನೆ. 28  ಇದಕ್ಕೆ ಆಶ್ಚರ್ಯಪಡಬೇಡಿರಿ, ಏಕೆಂದರೆ ಸ್ಮರಣೆಯ ಸಮಾಧಿಗಳಲ್ಲಿ ಇರುವವರೆಲ್ಲರೂ ಅವನ ಸ್ವರವನ್ನು ಕೇಳಿ 29  ಹೊರಗೆ ಬರುವ ಕಾಲ ಬರುತ್ತದೆ; ಒಳ್ಳೇದನ್ನು ಮಾಡಿದವರು ಜೀವಕ್ಕಾಗಿ ಪುನರುತ್ಥಾನವನ್ನು ಹೊಂದುವರು, ದುಷ್ಕೃತ್ಯಗಳನ್ನು ನಡೆಸಿದವರು ನ್ಯಾಯತೀರ್ಪಿಗಾಗಿ ಪುನರುತ್ಥಾನವನ್ನು ಹೊಂದುವರು. 30  ನನ್ನ ಸ್ವಪ್ರೇರಣೆಯಿಂದ ನಾನು ಏನನ್ನೂ ಮಾಡಲಾರೆ, ನನ್ನ ತಂದೆಯು ಹೇಳುವಂತೆಯೇ ತೀರ್ಪುಮಾಡುತ್ತೇನೆ; ನಾನು ನನ್ನ ಚಿತ್ತವನ್ನಲ್ಲ, ನನ್ನನ್ನು ಕಳುಹಿಸಿದಾತನ ಚಿತ್ತವನ್ನು ಮಾಡಲು ಬಯಸುವುದರಿಂದ ನಾನು ನೀಡುವ ತೀರ್ಪು ನೀತಿಯುಳ್ಳದ್ದಾಗಿದೆ. 31  “ನನ್ನ ಕುರಿತು ನಾನೊಬ್ಬನೇ ಸಾಕ್ಷಿಹೇಳುವಲ್ಲಿ ನನ್ನ ಸಾಕ್ಷಿಯು ಸತ್ಯವಲ್ಲ. 32  ನನ್ನ ಕುರಿತು ಸಾಕ್ಷಿಹೇಳುವಾತನು ಇನ್ನೊಬ್ಬನಿದ್ದಾನೆ ಮತ್ತು ನನ್ನ ಕುರಿತು ಆತನು ಹೇಳುವ ಸಾಕ್ಷಿಯು ಸತ್ಯವಾದದ್ದು ಎಂದು ನಾನು ಬಲ್ಲೆನು. 33  ನೀವು ಯೋಹಾನನ ಬಳಿಗೆ ಜನರನ್ನು ಕಳುಹಿಸಿದಿರಿ ಮತ್ತು ಅವನು ಸತ್ಯಕ್ಕೆ ಸಾಕ್ಷಿಹೇಳಿದ್ದಾನೆ. 34  ನಾನು ಮನುಷ್ಯರಿಂದ ಸಾಕ್ಷಿ​ಯನ್ನು ಸ್ವೀಕರಿಸುವುದಿಲ್ಲ; ಆದರೆ ನೀವು ರಕ್ಷಿಸಲ್ಪಡುವಂತೆ ಈ ವಿಷಯಗಳನ್ನು ಹೇಳುತ್ತೇನೆ. 35  ಆ ಮನುಷ್ಯನು ಉರಿಯುತ್ತಾ ಪ್ರಕಾಶಿಸುವ ದೀಪವಾಗಿದ್ದನು ಮತ್ತು ನೀವು ಸ್ವಲ್ಪಕಾಲ ಅವನ ಬೆಳಕಿನಲ್ಲಿ ಅಧಿಕವಾಗಿ ಆನಂದಿಸಲು ಮನಸ್ಸುಮಾಡಿದಿರಿ. 36  ಆದರೆ ನನಗೆ ಯೋಹಾನನಿಗಿಂತಲೂ ಹೆಚ್ಚು ಬಲವಾದ ಸಾಕ್ಷಿ ಉಂಟು; ಏಕೆಂದರೆ ನಾನು ಪೂರೈಸಲಿಕ್ಕಾಗಿ ನನ್ನ ತಂದೆಯು ನನಗೆ ನೇಮಿಸಿರುವ ಕೆಲಸಗಳು, ಅಂದರೆ ನಾನು ಮಾಡುತ್ತಿರುವ ಕೆಲಸಗಳೇ ತಂದೆಯು ನನ್ನನ್ನು ಕಳುಹಿಸಿದ್ದಾನೆ ಎಂದು ನನ್ನ ಕುರಿತು ಸಾಕ್ಷಿಹೇಳುತ್ತವೆ. 37  ಇದಲ್ಲದೆ, ನನ್ನನ್ನು ಕಳುಹಿಸಿದ ತಂದೆಯು ತಾನೇ ನನ್ನ ಕುರಿತು ಸಾಕ್ಷಿಹೇಳಿದ್ದಾನೆ. ನೀವು ಎಂದೂ ಆತನ ಸ್ವರವನ್ನು ಕೇಳಿಸಿಕೊಂಡದ್ದೂ ಇಲ್ಲ ಆತನ ರೂಪವನ್ನು ನೋಡಿದ್ದೂ ಇಲ್ಲ. 38  ಆತನು ಕಳುಹಿಸಿರುವವನನ್ನೇ ನೀವು ನಂಬದಿರುವ ಕಾರಣ ಆತನ ವಾಕ್ಯವು ನಿಮ್ಮಲ್ಲಿ ನೆಲೆಗೊಂಡಿರುವುದಿಲ್ಲ. 39  “ನೀವು ಶಾಸ್ತ್ರಗ್ರಂಥವನ್ನು ಪರಿಶೋಧಿಸುತ್ತೀರಿ, ಏಕೆಂದರೆ ಅದರ ಮೂಲಕ ನಿಮಗೆ ನಿತ್ಯಜೀವ ಸಿಗುತ್ತದೆಂದು ನೀವು ನೆನಸುತ್ತೀರಿ; ಅದು ತಾನೇ ನನ್ನ ಕುರಿತು ಸಾಕ್ಷಿಹೇಳುತ್ತದೆ. 40  ಆದರೂ ಜೀವವನ್ನು ಹೊಂದುವುದಕ್ಕಾಗಿ ನನ್ನ ಬಳಿಗೆ ಬರಲು ನಿಮಗೆ ಮನಸ್ಸಿಲ್ಲ. 41  ನಾನು ಮನುಷ್ಯರಿಂದ ಮಹಿಮೆಯನ್ನು ಸ್ವೀಕರಿಸುವುದಿಲ್ಲ, 42  ಆದರೆ ನಿಮ್ಮಲ್ಲಿ ದೇವರ ಪ್ರೀತಿಯಿಲ್ಲ ಎಂಬುದನ್ನು ನಾನು ಚೆನ್ನಾಗಿ ಬಲ್ಲೆ. 43  ನಾನು ನನ್ನ ತಂದೆಯ ಹೆಸರಿನಲ್ಲಿ ಬಂದಿದ್ದೇನೆ, ಆದರೆ ನೀವು ನನ್ನನ್ನು ಸ್ವೀಕರಿಸುತ್ತಿಲ್ಲ; ಬೇರೆ ಯಾವನಾದರೂ ತನ್ನ ಸ್ವಂತ ಹೆಸರಿನಲ್ಲಿ ಬಂದರೆ ನೀವು ಅವನನ್ನು ಸ್ವೀಕರಿಸುವಿರಿ. 44  ನೀವು ಒಬ್ಬರಿಂದ ಇನ್ನೊಬ್ಬ​ರಿಗೆ ಸಿಗುವ ಮಹಿಮೆಯನ್ನು ಸ್ವೀಕರಿಸುತ್ತಿದ್ದು, ಒಬ್ಬನೇ ದೇವರಿಂದ ಬರುವ ಮಹಿಮೆಯನ್ನು ಪಡೆಯಲು ಪ್ರಯತ್ನಿಸದಿರುವಾಗ ನೀವು ನಂಬುವುದಾದರೂ ಹೇಗೆ? 45  ನಾನು ತಂದೆಯ ಮುಂದೆ ನಿಮ್ಮ ವಿಷಯದಲ್ಲಿ ತಪ್ಪುಹೊರಿಸುವೆನೆಂದು ನೆನಸ​ಬೇಡಿ; ನಿಮ್ಮ ಮೇಲೆ ತಪ್ಪುಹೊರಿಸುವ ಒಬ್ಬನಿದ್ದಾನೆ; ನೀವು ಯಾರ ಮೇಲೆ ನಿರೀಕ್ಷೆಯಿಟ್ಟಿದ್ದೀರೊ ಆ ಮೋಶೆಯೇ ಅವನು. 46  ವಾಸ್ತವದಲ್ಲಿ, ನೀವು ಮೋಶೆಯನ್ನು ನಂಬಿದ್ದರೆ ನನ್ನನ್ನೂ ನಂಬುತ್ತಿದ್ದಿರಿ, ಏಕೆಂದರೆ ಅವನು ನನ್ನ ವಿಷಯವಾಗಿ ಬರೆದನು. 47  ನೀವು ಅವನು ಬರೆದ ಮಾತುಗಳನ್ನೇ ನಂಬದಿರುವುದಾದರೆ, ನನ್ನ ಮಾತುಗಳನ್ನು ಹೇಗೆ ನಂಬುವಿರಿ?”

ಪಾದಟಿಪ್ಪಣಿ

ಯೋಹಾ 5:4 ಮತ್ತಾ 17:21ರ ಪಾದಟಿಪ್ಪಣಿಯನ್ನು ನೋಡಿ.