ಯೋಹಾನ 3:1-36

3  ಫರಿಸಾಯರಲ್ಲಿ ನಿಕೊದೇಮನೆಂಬ ಹೆಸರಿನ ಒಬ್ಬ ಮನುಷ್ಯನಿದ್ದನು; ಅವನು ಯೆಹೂದ್ಯರ ಅಧಿಕಾರಿಯಾಗಿದ್ದನು.  ಇವನು ರಾತ್ರಿಯಲ್ಲಿ ಯೇಸುವಿನ ಬಳಿಗೆ ಬಂದು ಅವನಿಗೆ, “ರಬ್ಬೀ, ನೀನು ದೇವರ ಬಳಿಯಿಂದ ಬಂದಿರುವ ಬೋಧಕನು ಎಂಬುದನ್ನು ನಾವು ಬಲ್ಲೆವು; ಏಕೆಂದರೆ ದೇವರು ಒಬ್ಬನೊಂದಿಗೆ ಇರದಿದ್ದಲ್ಲಿ, ನೀನು ಮಾಡುವಂಥ ಸೂಚಕ​ಕಾರ್ಯಗಳನ್ನು ಯಾವನೂ ಮಾಡಲಾರನು” ಎಂದು ಹೇಳಿದನು.  ಅದಕ್ಕೆ ಯೇಸು ಅವನಿಗೆ, “ಒಬ್ಬನು ಪುನಃ ಹುಟ್ಟದಿದ್ದರೆ ಅವನು ದೇವರ ರಾಜ್ಯವನ್ನು ನೋಡಲು ಸಾಧ್ಯವಿಲ್ಲ ಎಂದು ನಿನಗೆ ನಿಜನಿಜವಾಗಿ ಹೇಳುತ್ತೇನೆ” ಎಂದು ಉತ್ತರಕೊಟ್ಟನು.  ನಿಕೊದೇಮನು ಅವನಿಗೆ, “ಒಬ್ಬ ಮನುಷ್ಯನು ಮುದುಕನಾದ ಮೇಲೆ ಹುಟ್ಟುವುದು ಹೇಗೆ? ಅವನು ಎರಡನೆಯ ಬಾರಿ ತನ್ನ ತಾಯಿಯ ಗರ್ಭವನ್ನು ಸೇರಿ ಹುಟ್ಟಲಾರನು, ಅಲ್ಲವೆ?” ಎಂದು ಹೇಳಿದನು.  ಅದಕ್ಕೆ ಯೇಸು, “ಒಬ್ಬನು ನೀರಿನಿಂದಲೂ ಪವಿತ್ರಾತ್ಮದಿಂದಲೂ ಹುಟ್ಟದಿದ್ದರೆ ಅವನು ದೇವರ ರಾಜ್ಯವನ್ನು ಪ್ರವೇಶಿಸಲು ಸಾಧ್ಯವಿಲ್ಲ ಎಂದು ನಿನಗೆ ನಿಜನಿಜವಾಗಿ ಹೇಳುತ್ತೇನೆ.  ದೇಹದಿಂದ ಹುಟ್ಟಿದ್ದು ದೈಹಿಕವೇ ಮತ್ತು ಪವಿತ್ರಾತ್ಮದಿಂದ ಹುಟ್ಟಿದ್ದು ಆತ್ಮಿಕವೇ.  ನೀವು ಪುನಃ ಹುಟ್ಟಲೇಬೇಕು ಎಂದು ನಾನು ನಿನಗೆ ಹೇಳಿದ್ದರಿಂದ ಆಶ್ಚರ್ಯಪಡಬೇಡ.  ಗಾಳಿಯು ಇಷ್ಟ ಬಂದ ಕಡೆ ಬೀಸುತ್ತದೆ ಮತ್ತು ನೀವು ಅದರ ಶಬ್ದವನ್ನು ಕೇಳಿಸಿಕೊಳ್ಳುತ್ತೀರಾದರೂ ಅದು ಎಲ್ಲಿಂದ ಬರುತ್ತದೆ ಹಾಗೂ ಎಲ್ಲಿಗೆ ಹೋಗುತ್ತದೆ ಎಂಬುದು ನಿಮಗೆ ತಿಳಿಯದು. ಪವಿತ್ರಾತ್ಮದಿಂದ* ಹುಟ್ಟಿದ ಪ್ರತಿಯೊಬ್ಬನೂ ಹೀಗೆಯೇ ಇದ್ದಾನೆ” ಎಂದು ​ಉತ್ತರಿಸಿದನು.  ಅದಕ್ಕೆ ನಿಕೊದೇಮನು ಅವನಿಗೆ, “ಇದೆಲ್ಲ ಹೇಗೆ ಆಗುತ್ತದೆ?” ಎಂದು ಕೇಳಿದಾಗ 10  ಯೇಸು ಅವನಿಗೆ, “ನೀನು ಇಸ್ರಾಯೇಲ್ಯರಿಗೆ ಬೋಧಕನಾಗಿರುವುದಾದರೂ ನಿನಗೆ ಈ ವಿಷಯಗಳು ತಿಳಿದಿಲ್ಲವೊ? 11  ನಾವು ನಮಗೆ ತಿಳಿದಿರುವುದನ್ನು ಮಾತಾಡುತ್ತೇವೆ ಮತ್ತು ನೋಡಿರುವುದರ ಕುರಿತು ಸಾಕ್ಷಿಕೊಡುತ್ತೇವೆ, ಆದರೆ ನಾವು ಕೊಡುವ ಸಾಕ್ಷಿಯನ್ನು ನೀವು ಸ್ವೀಕರಿಸುವುದಿಲ್ಲ ಎಂದು ನಿನಗೆ ನಿಜನಿಜವಾಗಿ ಹೇಳುತ್ತೇನೆ. 12  ನಾನು ಭೂಮಿಗೆ ಸಂಬಂಧಿಸಿದ ವಿಷಯ​ಗಳನ್ನು ನಿಮಗೆ ಹೇಳಿದಾಗ ನೀವು ಅದನ್ನು ನಂಬದೇ ಇರುವುದಾದರೆ, ನಾನು ಸ್ವರ್ಗಕ್ಕೆ ಸಂಬಂಧಿಸಿದ ವಿಷಯಗಳನ್ನು ಹೇಳುವಾಗ ನೀವದನ್ನು ಹೇಗೆ ನಂಬುವಿರಿ? 13  ಮಾತ್ರವಲ್ಲದೆ ಸ್ವರ್ಗದಿಂದ ಇಳಿದು ಬಂದಿರುವ ಮನುಷ್ಯಕುಮಾರನೇ ಹೊರತು ಬೇರೆ ಯಾವ ಮನುಷ್ಯನೂ ಸ್ವರ್ಗಕ್ಕೆ ಏರಿಹೋಗಲಿಲ್ಲ. 14  ಅರಣ್ಯದಲ್ಲಿ ಮೋಶೆಯು ಸರ್ಪವನ್ನು ಮೇಲಕ್ಕೆತ್ತಿದಂತೆಯೇ ಮನುಷ್ಯಕುಮಾರನೂ ಮೇಲ​ಕ್ಕೆತ್ತಲ್ಪಡಬೇಕು; 15  ಹೀಗೆ ಅವನಲ್ಲಿ ನಂಬಿಕೆಯಿಡುವ ಪ್ರತಿಯೊಬ್ಬನೂ ನಿತ್ಯ​ಜೀವವನ್ನು ಪಡೆದುಕೊಳ್ಳಬಹುದು. 16  “ದೇವರು ಲೋಕವನ್ನು ಎಷ್ಟೊಂದು ಪ್ರೀತಿಸಿದನೆಂದರೆ ಆತನು ತನ್ನ ಏಕೈಕಜಾತ ಪುತ್ರನನ್ನು ಕೊಟ್ಟನು; ಅವನಲ್ಲಿ ನಂಬಿಕೆಯಿಡುವ ಯಾವನೂ ನಾಶವಾಗದೆ ನಿತ್ಯಜೀವವನ್ನು ಪಡೆದುಕೊಳ್ಳಬೇಕೆಂದು ಅವನನ್ನು ಕೊಟ್ಟನು. 17  ದೇವರು ತನ್ನ ಮಗನನ್ನು ಈ ಲೋಕಕ್ಕೆ ಕಳುಹಿಸಿಕೊಟ್ಟದ್ದು ಅವನು ಲೋಕಕ್ಕೆ ತೀರ್ಪು ನೀಡಲಿಕ್ಕಾಗಿ ಅಲ್ಲ, ಬದಲಾಗಿ ಅವನ ಮೂಲಕ ಲೋಕವನ್ನು ರಕ್ಷಿಸುವುದ​ಕ್ಕಾಗಿಯೇ. 18  ಅವನಲ್ಲಿ ನಂಬಿಕೆಯಿಡುವವನಿಗೆ ತೀರ್ಪು ಆಗುವುದಿಲ್ಲ. ಅವನಲ್ಲಿ ನಂಬಿಕೆಯಿಡದವನಿಗೆ ಈಗಾಗಲೇ ತೀರ್ಪು ಆಗಿರುತ್ತದೆ, ಏಕೆಂದರೆ ಅವನು ದೇವರ ಏಕೈಕಜಾತ ಪುತ್ರನ ಹೆಸರಿನಲ್ಲಿ ನಂಬಿಕೆಯಿಡಲಿಲ್ಲ. 19  ಇದೇ ನ್ಯಾಯತೀರ್ಪಿಗೆ ಆಧಾರ: ಬೆಳಕು ಲೋಕಕ್ಕೆ ಬಂದಿದೆ, ಆದರೆ ಜನರ ಕೃತ್ಯಗಳು ಕೆಟ್ಟವುಗಳಾಗಿರುವುದರಿಂದ ಅವರು ಬೆಳಕಿಗಿಂತ ಕತ್ತಲೆ​ಯನ್ನೇ ಪ್ರೀತಿಸಿದ್ದಾರೆ. 20  ದುಷ್ಟ ವಿಷಯಗಳನ್ನು ಮಾಡುತ್ತಾ ಇರುವವನು ಬೆಳಕನ್ನು ದ್ವೇಷಿಸುತ್ತಾನೆ ಮತ್ತು ತನ್ನ ಕೃತ್ಯಗಳು ಖಂಡಿಸಲ್ಪಡದಿರುವಂತೆ ಅವನು ಬೆಳಕಿಗೆ ಬರುವುದಿಲ್ಲ. 21  ಆದರೆ ಸತ್ಯವನ್ನು ಅನುಸರಿಸಿ ನಡೆಯುವವನು ತನ್ನ ಕಾರ್ಯಗಳು ದೇವರಿಗೆ ಹೊಂದಿಕೆಯಲ್ಲಿ ನಡೆಸಲ್ಪಟ್ಟಿವೆ ಎಂಬುದನ್ನು ತೋರಿಸಲಿಕ್ಕಾಗಿ ಬೆಳಕಿಗೆ ಬರುತ್ತಾನೆ” ಎಂದು ಹೇಳಿದನು. 22  ಇದಾದ ಬಳಿಕ ಯೇಸು ತನ್ನ ಶಿಷ್ಯರೊಂದಿಗೆ ಯೂದಾಯದ ಒಂದು ಪ್ರಾಂತಕ್ಕೆ ಬಂದು ಅವರೊಂದಿಗೆ ಸ್ವಲ್ಪ ಸಮಯ ಇದ್ದು ದೀಕ್ಷಾಸ್ನಾನ ಮಾಡಿಸುತ್ತಿದ್ದನು. 23  ಆದರೆ ಯೋಹಾನನು ಸಹ ಸಲೀಮಿನ ಸಮೀಪದಲ್ಲಿದ್ದ ಐನೋನದಲ್ಲಿ ದೀಕ್ಷಾಸ್ನಾನ ಮಾಡಿಸುತ್ತಿದ್ದನು; ಏಕೆಂದರೆ ಅಲ್ಲಿ ತುಂಬ ನೀರಿತ್ತು; ಮತ್ತು ಜನರು ಅಲ್ಲಿಗೆ ಬಂದು ದೀಕ್ಷಾಸ್ನಾನ ಮಾಡಿಸಿಕೊಳ್ಳುತ್ತಾ ಇದ್ದರು. 24  ಆಗ ಯೋಹಾನನು ಇನ್ನೂ ಸೆರೆ​ಮನೆಗೆ ಹಾಕಲ್ಪಟ್ಟಿರಲಿಲ್ಲ. 25  ಆದುದರಿಂದ ಯೋಹಾನನ ಶಿಷ್ಯರಿಗೂ ಒಬ್ಬ ಯೆಹೂದ್ಯನಿಗೂ ಶುದ್ಧೀಕರಣದ ವಿಷಯದಲ್ಲಿ ವಿವಾದ ಉಂಟಾಯಿತು. 26  ಅವರು ಯೋಹಾನನ ಬಳಿಗೆ ಬಂದು ಅವನಿಗೆ, “ರಬ್ಬೀ, ಯೋರ್ದನ್‌ ನದಿಯ ಆಚೇದಡದಲ್ಲಿ ನಿನ್ನೊಂದಿಗಿದ್ದ ಒಬ್ಬ ಮನುಷ್ಯನ ಕುರಿತು ನೀನು ಸಾಕ್ಷಿಕೊಟ್ಟಿಯಲ್ಲಾ; ಅವನು ದೀಕ್ಷಾಸ್ನಾನ ಮಾಡಿಸುತ್ತಿದ್ದಾನೆ ಮತ್ತು ಎಲ್ಲರೂ ಅವನ ಬಳಿಗೆ ಹೋಗುತ್ತಿದ್ದಾರೆ” ಎಂದು ಹೇಳಿದರು. 27  ಅದಕ್ಕೆ ಉತ್ತರವಾಗಿ ಯೋಹಾನನು, “ಸ್ವರ್ಗದಿಂದ ಒಬ್ಬನಿಗೆ ಅನುಗ್ರಹಿಸಲ್ಪಟ್ಟ ಹೊರತು ಅವನು ಏನನ್ನೂ ಹೊಂದಲಾರನು. 28  ನಾನು ಕ್ರಿಸ್ತನಲ್ಲ, ನಾನು ಅವನಿಗಿಂತ ಮುಂದಾಗಿ ಕಳುಹಿಸಲ್ಪಟ್ಟಿದ್ದೇನೆ ಎಂದು ನಾನು ಹೇಳಿದ್ದಕ್ಕೆ ನೀವೇ ಸಾಕ್ಷಿಗಳಾಗಿದ್ದೀರಿ. 29  ಮದುಮಗಳನ್ನು ಹೊಂದಿರುವವನೇ ಮದುಮಗನಾಗಿದ್ದಾನೆ. ಆದರೆ ಮದುಮಗನ ಸ್ನೇಹಿತನು ನಿಂತುಕೊಂಡು ಅವನು ಮಾತಾಡುವುದನ್ನು ಕೇಳಿಸಿಕೊಳ್ಳುವಾಗ, ಮದುಮಗನ ಸ್ವರದ ನಿಮಿತ್ತ ತುಂಬ ಸಂತೋಷಪಡುತ್ತಾನೆ. ಆದುದರಿಂದ ನನ್ನ ಈ ಸಂತೋಷವು ಪೂರ್ಣವಾಗಿದೆ. 30  ಅವನು ಹೆಚ್ಚುತ್ತಾ ಹೋಗಬೇಕು, ಆದರೆ ನಾನು ಕಡಮೆಯಾಗುತ್ತಾ ಹೋಗಬೇಕು” ಎಂದನು. 31  ಮೇಲಣಿಂದ ಬರುವವನು ಎಲ್ಲರಿಗಿಂತ ಮೇಲಿನವನಾಗಿದ್ದಾನೆ. ಭೂಮಿಯಿಂದ ಬಂದವನು ಭೂಮಿಗೆ ಸೇರಿದವನಾಗಿದ್ದಾನೆ ಮತ್ತು ಭೂಸಂಬಂಧವಾದ ವಿಷಯಗಳನ್ನು ಮಾತಾಡುತ್ತಾನೆ. ಸ್ವರ್ಗದಿಂದ ಬರುವವನು ಎಲ್ಲರಿಗಿಂತ ಮೇಲಿನವನಾಗಿದ್ದಾನೆ. 32  ಅವನು ಕಂಡು ಕೇಳಿ​ದ್ದರ ಕುರಿತು ಸಾಕ್ಷಿಕೊಡುತ್ತಾನೆ, ಆದರೆ ಯಾವ ಮನುಷ್ಯನೂ ಅವನ ಸಾಕ್ಷಿಯನ್ನು ಅಂಗೀಕರಿಸುತ್ತಿಲ್ಲ. 33  ಅವನ ಸಾಕ್ಷಿಯನ್ನು ಅಂಗೀಕರಿಸಿರುವವನು ದೇವರು ಸತ್ಯವಂತನೆಂಬ ಮಾತಿಗೆ ತನ್ನ ಮುದ್ರೆಯೊತ್ತಿದ್ದಾನೆ. 34  ದೇವರಿಂದ ಕಳುಹಿಸಲ್ಪಟ್ಟಿರುವವನಿಗೆ ದೇವರು ಪವಿತ್ರಾತ್ಮವನ್ನು ಅಳತೆಮಾಡಿ ನೀಡುವುದಿಲ್ಲವಾದ್ದರಿಂದ ಅವನು ದೇವರ ಮಾತುಗಳನ್ನು ಆಡುತ್ತಾನೆ.  35  ತಂದೆಯು ಮಗನನ್ನು ಪ್ರೀತಿಸುತ್ತಾನೆ ಮತ್ತು ಎಲ್ಲವನ್ನೂ ಅವನ ಕೈಗೆ ಒಪ್ಪಿಸಿಕೊಟ್ಟಿದ್ದಾನೆ. 36  ಮಗ​ನಲ್ಲಿ ನಂಬಿಕೆಯಿಡುವವನಿಗೆ ನಿತ್ಯಜೀವ ಉಂಟು; ಮಗನಿಗೆ ಅವಿಧೇಯನಾಗುವವನು ಜೀವವನ್ನು ಕಾಣುವುದಿಲ್ಲ, ಆದರೆ ದೇವರ ಕ್ರೋಧವು ಅವನ ಮೇಲೆ ನೆಲೆಗೊಳ್ಳುತ್ತದೆ.

ಪಾದಟಿಪ್ಪಣಿ

ಯೋಹಾ 3:8 ಅಥವಾ, “ದೇವರ ಕಾರ್ಯಕಾರಿ ಶಕ್ತಿ.” ಪರಿಶಿಷ್ಟ 7ನ್ನು ನೋಡಿ.