ಯೋಹಾನ 2:1-25

2  ಮೂರನೆಯ ದಿನದಂದು ಗಲಿಲಾಯದ ಕಾನಾ ಊರಿನಲ್ಲಿ ಒಂದು ಮದುವೆಯ ಔತಣವು ನಡೆಯಿತು ಮತ್ತು ಯೇಸುವಿನ ತಾಯಿಯು ಅಲ್ಲಿದ್ದಳು.  ಯೇಸು ಮತ್ತು ಅವನ ಶಿಷ್ಯರು ಸಹ ಆ ಮದುವೆಯ ಔತಣಕ್ಕೆ ಆಮಂತ್ರಿಸಲ್ಪಟ್ಟಿದ್ದರು.  ಅಲ್ಲಿ ದ್ರಾಕ್ಷಾಮದ್ಯವು ಸಾಲದೆ ಹೋದಾಗ ಯೇಸುವಿನ ತಾಯಿಯು ಅವನಿಗೆ, “ಅವರ ಬಳಿ ದ್ರಾಕ್ಷಾಮದ್ಯವಿಲ್ಲ” ಎಂದಳು.  ಅದಕ್ಕೆ ಯೇಸು ಅವಳಿಗೆ, “ಸ್ತ್ರೀಯೇ, ನನ್ನ ಗೊಡವೆ ನಿನಗೇಕೆ? ನನ್ನ ಗಳಿಗೆ ಇನ್ನೂ ಬಂದಿಲ್ಲ” ಎಂದು ಹೇಳಿದನು.  ಆಗ ಅವನ ತಾಯಿಯು ಸೇವಕರಿಗೆ, “ಅವನು ನಿಮಗೆ ಏನು ಹೇಳುತ್ತಾನೋ ಅದನ್ನು ಮಾಡಿರಿ” ಎಂದಳು.  ಯೆಹೂದ್ಯರ ಶುದ್ಧೀಕರಣ ನಿಯಮಗಳು ಅಗತ್ಯಪಡಿಸಿದ ಪ್ರಕಾರ ಅಲ್ಲಿ ನೀರು ತುಂಬಿಡುವ ಕಲ್ಲಿನ ಆರು ಹಂಡೆಗಳಿದ್ದವು; ಪ್ರತಿಯೊಂದು ಹಂಡೆಯಲ್ಲಿ ಸುಮಾರು ನಲ್ವತ್ತನಾಲ್ಕರಿಂದ ಅರುವತ್ತಾರು ಲೀಟರ್‌ಗಳಷ್ಟು ನೀರು ಹಿಡಿಯುತ್ತಿತ್ತು.  ಯೇಸು ಅವರಿಗೆ, “ಹಂಡೆಗಳಿಗೆ ನೀರನ್ನು ತುಂಬಿಸಿರಿ” ಎಂದಾಗ ಅವರು ಕಂಠದ ತನಕ ಅವುಗಳನ್ನು ತುಂಬಿಸಿದರು.  ಅನಂತರ ಅವನು ಅವರಿಗೆ, “ಈಗ ಇದರಿಂದ ಸ್ವಲ್ಪವನ್ನು ತೋಡಿ ಔತಣದ ನಿರ್ದೇಶಕನಿಗೆ ಕೊಡಿರಿ” ಎಂದನು. ಅವರು ತೆಗೆದುಕೊಂಡು ಹೋದರು.  ಔತಣದ ನಿರ್ದೇಶಕನು ದ್ರಾಕ್ಷಾಮದ್ಯವಾಗಿ ಮಾರ್ಪಟ್ಟ ನೀರನ್ನು ರುಚಿನೋಡಿದಾಗ ಅದು ಎಲ್ಲಿಂದ ಬಂತೆಂದು ಅವನಿಗೆ ತಿಳಿದಿರಲಿಲ್ಲ; ಆದರೆ ನೀರನ್ನು ತೋಡಿದ್ದ ಸೇವಕರಿಗೆ ಅದು ತಿಳಿದಿತ್ತು; ಆದುದರಿಂದ ಔತಣದ ನಿರ್ದೇಶಕನು ಮದುಮಗನನ್ನು ಕರೆದು 10  ಅವನಿಗೆ, “ಪ್ರತಿಯೊಬ್ಬನು ಅತ್ಯುತ್ತಮವಾದ ದ್ರಾಕ್ಷಾಮದ್ಯವನ್ನು ಮೊದಲು ನೀಡಿ, ಜನರಿಗೆ ಅಮಲೇರಿದ ಬಳಿಕ ಕಡಮೆ ಗುಣಮಟ್ಟದ ದ್ರಾಕ್ಷಾಮದ್ಯವನ್ನು ನೀಡುತ್ತಾನೆ. ನೀನಾದರೋ ಅತ್ಯುತ್ತಮವಾದ ದ್ರಾಕ್ಷಾಮದ್ಯವನ್ನು ಇಷ್ಟರ ತನಕ ಇಟ್ಟುಕೊಂಡಿದ್ದೀ” ಎಂದು ಹೇಳಿದನು. 11  ಯೇಸು ಇದನ್ನು ತನ್ನ ಸೂಚಕ​ಕಾರ್ಯಗಳಲ್ಲಿ ಮೊದಲನೆಯದಾಗಿ ಗಲಿಲಾಯದ ಕಾನಾದಲ್ಲಿ ಮಾಡಿ ತನ್ನ ಮಹಿಮೆಯನ್ನು ತೋರ್ಪಡಿಸಿದನು ಮತ್ತು ಅವನ ಶಿಷ್ಯರು ಅವನಲ್ಲಿ ನಂಬಿಕೆಯಿಟ್ಟರು. 12  ಇದಾದ ಬಳಿಕ ಅವನ ತಾಯಿಯೂ ತಮ್ಮಂದಿರೂ ಅವನ ಶಿಷ್ಯರೂ ಕಪೆರ್ನೌಮಿಗೆ ಹೋದರು, ಆದರೆ ಅವರು ಅಲ್ಲಿ ಬಹಳ ದಿವಸ ತಂಗಲಿಲ್ಲ. 13  ಯೆಹೂದ್ಯರ ಪಸ್ಕಹಬ್ಬವು ಸಮೀಪಿಸಿತ್ತು ಮತ್ತು ಯೇಸು ಯೆರೂಸಲೇಮಿಗೆ ಹೋದನು. 14  ಅವನು ದೇವಾಲಯದಲ್ಲಿ ಜಾನುವಾರು, ಕುರಿ ಮತ್ತು ಪಾರಿವಾಳಗಳನ್ನು ಮಾರುತ್ತಿರುವವರನ್ನೂ ಹಣವಿನಿಮಯಗಾರರು ತಮ್ಮ ಆಸನಗಳಲ್ಲಿ ಕುಳಿತುಕೊಂಡಿರುವುದನ್ನೂ ಕಂಡನು. 15  ಆಗ ಅವನು ಹಗ್ಗಗಳಿಂದ ಕೊರಡೆಯನ್ನು ಮಾಡಿ ಕುರಿ ಮತ್ತು ಜಾನುವಾರುಗಳ ಸಮೇತ ಅವರೆಲ್ಲರನ್ನು ದೇವಾಲಯದಿಂದ ಹೊರಗಟ್ಟಿದನು ಮತ್ತು ಹಣವಿನಿಮಯಗಾರರ ನಾಣ್ಯಗಳನ್ನು ಚೆಲ್ಲಿ ಅವರ ಮೇಜುಗಳನ್ನು ಕೆಡವಿದನು. 16  ಪಾರಿವಾಳಗಳನ್ನು ಮಾರುತ್ತಿದ್ದವರಿಗೆ ಅವನು, “ಇವುಗಳನ್ನು ಇಲ್ಲಿಂದ ತೆಗೆದುಕೊಂಡುಹೋಗಿರಿ! ನನ್ನ ತಂದೆಯ ಆಲಯವನ್ನು ವ್ಯಾಪಾರದ ಸ್ಥಳವನ್ನಾಗಿ ಮಾಡುವುದನ್ನು ನಿಲ್ಲಿಸಿರಿ!” ಎಂದು ಹೇಳಿದನು. 17  ಆಗ ಅವನ ಶಿಷ್ಯರು, “ನಿನ್ನ ಆಲಯಕ್ಕಾಗಿರುವ ಅಭಿಮಾನವು ನನ್ನನ್ನು ದಹಿಸುವುದು” ಎಂದು ಬರೆದಿರುವುದನ್ನು ಮನಸ್ಸಿಗೆ ತಂದುಕೊಂಡರು. 18  ಆದುದರಿಂದ ಯೆಹೂದ್ಯರು ಅವನಿಗೆ, “ಇವುಗಳನ್ನು ಮಾಡುವ ಅಧಿಕಾರ ನಿನಗಿದೆ ಎಂಬುದಕ್ಕೆ ನಮಗೆ ಯಾವ ಸೂಚಕ​ಕಾರ್ಯವನ್ನು ತೋರಿಸುತ್ತೀ?” ಎಂದು ಕೇಳಿದರು. 19  ಅದಕ್ಕೆ ಯೇಸು, “ಈ ಆಲಯವನ್ನು ಕೆಡವಿರಿ, ಮೂರೇ ದಿನಗಳಲ್ಲಿ ನಾನು ಅದನ್ನು ಎಬ್ಬಿಸುವೆನು” ಎಂದು ಉತ್ತರಿಸಿದನು. 20  ಆಗ ಯೆಹೂದ್ಯರು, “ಈ ಆಲಯವನ್ನು ಕಟ್ಟಲು ನಲವತ್ತಾರು ವರ್ಷಗಳು ಹಿಡಿದವು; ನೀನು ಅದನ್ನು ಮೂರೇ ದಿನಗಳಲ್ಲಿ ಎಬ್ಬಿಸುವಿಯೋ?” ಎಂದು ಕೇಳಿದರು. 21  ಆದರೆ ಅವನು ತನ್ನ ದೇಹವೆಂಬ ಆಲಯದ ಕುರಿತು ಮಾತಾಡುತ್ತಿದ್ದನು. 22  ಹೀಗೆ ಅವನು ಸತ್ತವರೊಳಗಿಂದ ಎಬ್ಬಿಸಲ್ಪಟ್ಟಾಗ, ಅವನು ಈ ವಿಷಯವನ್ನು ಹೇಳುತ್ತಾ ಇದ್ದನು ಎಂಬುದನ್ನು ಅವನ ಶಿಷ್ಯರು ಮನಸ್ಸಿಗೆ ತಂದುಕೊಂಡರು; ಅವರು ಶಾಸ್ತ್ರಗ್ರಂಥವನ್ನೂ ಯೇಸು ಹೇಳಿದ ಮಾತನ್ನೂ ನಂಬಿದರು. 23  ಆದರೆ ಅವನು ಪಸ್ಕಹಬ್ಬದಂದು ಯೆರೂಸಲೇಮಿನಲ್ಲಿದ್ದಾಗ ಮಾಡುತ್ತಿದ್ದ ಸೂಚಕಕಾರ್ಯಗಳನ್ನು ನೋಡಿ ಅನೇಕರು ಅವನ ಹೆಸರಿನಲ್ಲಿ ನಂಬಿಕೆಯಿಟ್ಟರು. 24  ಆದರೆ ಯೇಸು ಅವರೆಲ್ಲರನ್ನು ಬಲ್ಲವನಾಗಿದ್ದುದರಿಂದ ಅವರಿಗೆ ತನ್ನನ್ನು ಒಪ್ಪಿಸಿಕೊಡಲಿಲ್ಲ; 25  ಮಾತ್ರವಲ್ಲದೆ ಮನುಷ್ಯನ ಕುರಿತು ಯಾವನೂ ಅವನಿಗೆ ಸಾಕ್ಷಿಕೊಡುವ ಅಗತ್ಯವಿರಲಿಲ್ಲ, ಏಕೆಂದರೆ ಮನುಷ್ಯನಲ್ಲಿ ಏನಿದೆ ಎಂಬುದನ್ನು ಅವನು ಸ್ವತಃ ಬಲ್ಲವನಾಗಿದ್ದನು.

ಪಾದಟಿಪ್ಪಣಿ