ಯೋಹಾನ 16:1-33

16  “ನೀವು ಎಡವದಂತೆ ನಾನು ಇವುಗಳನ್ನೆಲ್ಲ ನಿಮಗೆ ಹೇಳಿದ್ದೇನೆ.  ಜನರು ನಿಮ್ಮನ್ನು ಸಭಾಮಂದಿರದಿಂದ ಬಹಿಷ್ಕರಿಸುವರು. ವಾಸ್ತವದಲ್ಲಿ ನಿಮ್ಮನ್ನು ಕೊಲ್ಲುವ ಪ್ರತಿಯೊಬ್ಬನು ತಾನು ದೇವರಿಗೆ ಪವಿತ್ರ ಸೇವೆಯನ್ನು ಸಲ್ಲಿಸಿದ್ದೇನೆ ಎಂದು ನೆನಸುವ ಗಳಿಗೆಯು ಬರುತ್ತದೆ.  ಅವರು ತಂದೆಯನ್ನಾಗಲಿ ನನ್ನನ್ನಾಗಲಿ ತಿಳಿಯದಿರುವ ಕಾರಣ ಇದನ್ನೆಲ್ಲ ಮಾಡುವರು.  ಆದರೂ ಅವುಗಳು ಸಂಭವಿಸುವ ಗಳಿಗೆಯು ಬರುವಾಗ ನಾನು ಇದನ್ನೆಲ್ಲ ನಿಮಗೆ ಹೇಳಿದೆನೆಂಬುದನ್ನು ನೀವು ಜ್ಞಾಪಿಸಿಕೊಳ್ಳಲಿಕ್ಕಾಗಿ ಇದನ್ನೆಲ್ಲ ನಿಮಗೆ ತಿಳಿಸಿದ್ದೇನೆ. “ಆದರೆ ಇದನ್ನು ಮೊದಲು ನಾನು ನಿಮಗೆ ಹೇಳಲಿಲ್ಲ, ಏಕೆಂದರೆ ಆಗ ನಾನು ನಿಮ್ಮೊಂದಿಗೆ ಇದ್ದೆ.  ಈಗ ನಾನು ನನ್ನನ್ನು ಕಳುಹಿಸಿದಾತನ ಬಳಿಗೆ ಹೋಗುತ್ತಿದ್ದೇನೆ, ಆದರೆ ನಿಮ್ಮಲ್ಲಿ ಒಬ್ಬನೂ ‘ನೀನು ಎಲ್ಲಿಗೆ ಹೋಗುತ್ತಿದ್ದೀ?’ ಎಂದು ನನ್ನನ್ನು ಕೇಳುತ್ತಿಲ್ಲ.  ನಾನು ನಿಮಗೆ ಇದನ್ನೆಲ್ಲ ಹೇಳಿರುವುದರಿಂದ ನಿಮ್ಮ ​ಹೃದಯಗಳು ದುಃಖದಿಂದ ತುಂಬಿವೆ.  ಆದರೂ ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ, ನಿಮ್ಮ ಪ್ರಯೋಜನಕ್ಕಾಗಿಯೇ ನಾನು ಹೋಗುತ್ತಿದ್ದೇನೆ. ನಾನು ಹೋಗದಿದ್ದರೆ ಆ ಸಹಾಯಕ* ನಿಮ್ಮ ಬಳಿಗೆ ಬರುವುದೇ ಇಲ್ಲ; ನಾನು ಹೋದರೆ ಅವನನ್ನು ನಿಮ್ಮ ಬಳಿಗೆ ಕಳುಹಿಸುವೆನು.  ಅವನು ಬರುವಾಗ ಪಾಪದ ಕುರಿತೂ ನೀತಿಯ ಕುರಿತೂ ನ್ಯಾಯತೀರ್ಪಿನ ಕುರಿತೂ ಲೋಕಕ್ಕೆ ಮನದಟ್ಟಾಗುವ ಪುರಾವೆಯನ್ನು ಕೊಡುವನು.  ಅವರು ನನ್ನಲ್ಲಿ ನಂಬಿಕೆಯನ್ನು ಇಡದೇ ಇರುವುದರಿಂದ ಮೊದಲಾಗಿ ಪಾಪದ ಕುರಿತೂ, 10  ಬಳಿಕ ನಾನು ನನ್ನ ತಂದೆಯ ಬಳಿಗೆ ಹೋಗಿ ಇನ್ನು ಮೇಲೆ ನಿಮಗೆ ಕಾಣಿಸದೇ ಇರುವುದರಿಂದ ನೀತಿಯ ಕುರಿತೂ, 11  ಆ ಬಳಿಕ ಈ ಲೋಕದ ಅಧಿಪತಿಗೆ ನ್ಯಾಯತೀರ್ಪಾಗಿರುವುದರಿಂದ ನ್ಯಾಯತೀರ್ಪಿನ ಕುರಿತೂ ​ಮನದಟ್ಟು ಮಾಡಿಸುವನು. 12  “ನಾನು ನಿಮಗೆ ಇನ್ನೂ ಅನೇಕ ವಿಷಯಗಳನ್ನು ಹೇಳಲಿಕ್ಕಿದೆ, ಆದರೆ ಸದ್ಯಕ್ಕೆ ನೀವು ಅವುಗಳನ್ನು ಸಹಿಸಿಕೊಳ್ಳಲಾರಿರಿ. 13  ಆದರೂ ಆ ಒಬ್ಬನು,* ಸತ್ಯದ ಪವಿತ್ರಾತ್ಮ ಬರುವಾಗ ಅವನು ನಿಮ್ಮನ್ನು ಮಾರ್ಗದರ್ಶಿಸಿ ನೀವು ಸತ್ಯವನ್ನು ಪೂರ್ಣವಾಗಿ ಅರ್ಥಮಾಡಿಕೊಳ್ಳುವಂತೆ ನಿಮಗೆ ಸಹಾಯಮಾಡುವನು; ಅವನು ತನ್ನಷ್ಟಕ್ಕೆ ತಾನೇ ಮಾತಾಡದೆ ತಾನು ಕೇಳಿಸಿಕೊಳ್ಳುವ ವಿಷಯಗಳನ್ನೇ ಮಾತಾಡುವನು ಮತ್ತು ಬರಲಿರುವ ಸಂಗತಿಗಳನ್ನು ನಿಮಗೆ ಪ್ರಕಟಪಡಿಸುವನು. 14  ಅವನು ನನ್ನಿಂದ ಹೊಂದಿದ್ದನ್ನು ನಿಮಗೆ ಪ್ರಕಟಪಡಿಸುವುದರಿಂದ ನನ್ನನ್ನು ಮಹಿಮೆ​ಪಡಿಸುವನು. 15  ತಂದೆಯ ಬಳಿಯಿರುವುದೆಲ್ಲವೂ ನನ್ನದು. ಆದುದರಿಂದಲೇ ನನ್ನಿಂದ ಹೊಂದಿದ್ದನ್ನು ಅವನು ನಿಮಗೆ ಪ್ರಕಟಪಡಿಸುತ್ತಾನೆ ಎಂದು ನಾನು ಹೇಳಿದೆ. 16  ಇನ್ನು ಸ್ವಲ್ಪ ಸಮಯದ ಬಳಿಕ ನೀವು ನನ್ನನ್ನು ನೋಡುವುದೇ ಇಲ್ಲ ಮತ್ತು ಪುನಃ ಸ್ವಲ್ಪ ಸಮಯದ ಬಳಿಕ ನೀವು ನನ್ನನ್ನು ನೋಡುವಿರಿ.” 17  ಆದುದರಿಂದ ಅವನ ಶಿಷ್ಯರಲ್ಲಿ ಕೆಲವರು, “ ‘ಇನ್ನು ಸ್ವಲ್ಪ ಸಮಯದ ಬಳಿಕ ನೀವು ನನ್ನನ್ನು ನೋಡುವುದಿಲ್ಲ ಮತ್ತು ಪುನಃ ಸ್ವಲ್ಪ ಸಮಯದ ಬಳಿಕ ನೀವು ನನ್ನನ್ನು ನೋಡುವಿರಿ’ ಹಾಗೂ ‘ನಾನು ತಂದೆಯ ಬಳಿಗೆ ಹೋಗಲಿರುವುದರಿಂದ’ ಎಂದು ಅವನು ಹೇಳುವ ಮಾತುಗಳ ಅರ್ಥವೇನು?” ಎಂದು ತಮ್ಮತಮ್ಮೊಳಗೆ ಮಾತಾಡಿಕೊಂಡರು. 18  ಆದುದರಿಂದ ಅವರು, “ ‘ಸ್ವಲ್ಪ ಸಮಯದ ಬಳಿಕ’ ಎಂದು ಅವನು ನಮಗೆ ಹೇಳುತ್ತಿರುವುದರ ಅರ್ಥವೇನು? ಅವನು ಯಾವುದರ ಕುರಿತು ಮಾತಾಡುತ್ತಿದ್ದಾನೆ ಎಂಬುದು ನಮಗೆ ​ತಿಳಿಯುತ್ತಿಲ್ಲ” ಎಂದು ಹೇಳುತ್ತಿದ್ದರು. 19  ಅವರು ತನ್ನನ್ನು ಪ್ರಶ್ನಿಸಬೇಕೆಂದಿದ್ದಾರೆ ಎಂಬುದನ್ನು ತಿಳಿದಿದ್ದ ಯೇಸು ಅವರಿಗೆ, “ಇನ್ನು ಸ್ವಲ್ಪ ಸಮಯದ ಬಳಿಕ ನೀವು ನನ್ನನ್ನು ನೋಡುವುದಿಲ್ಲ ಮತ್ತು ಪುನಃ ಸ್ವಲ್ಪ ಸಮಯದ ಬಳಿಕ ನೀವು ನನ್ನನ್ನು ನೋಡುವಿರಿ ಎಂದು ನಾನು ಹೇಳಿದ್ದರಿಂದ ನೀವು ನಿಮ್ಮೊಳಗೆ ಇದರ ಕುರಿತು ವಿಚಾರಿಸಿಕೊಳ್ಳುತ್ತಿದ್ದೀರೊ? 20  ನಿಮಗೆ ನಿಜನಿಜವಾಗಿ ಹೇಳುತ್ತೇನೆ, ನೀವು ಅತ್ತು ಗೋಳಾಡುವಿರಿ, ಆದರೆ ಲೋಕವು ಹರ್ಷಿಸುವುದು; ನೀವು ದುಃಖಪಡುವಿರಿ, ಆದರೆ ನಿಮ್ಮ ದುಃಖವು ಸಂತೋಷವಾಗಿ ಮಾರ್ಪಡುವುದು. 21  ಒಬ್ಬ ಸ್ತ್ರೀ ಹೆರುವಾಗ ಅವಳ ಬೇನೆಯ ಸಮಯವು ಬಂದಿರುವುದರಿಂದ ಅವಳು ದುಃಖಪಡುತ್ತಾಳೆ; ಆದರೆ ಅವಳು ಮಗುವನ್ನು ಹೆತ್ತ ಬಳಿಕ ಒಬ್ಬ ಮನುಷ್ಯನು ಲೋಕದೊಳಗೆ ಹುಟ್ಟಿದ್ದಾನೆ ಎಂಬ ಸಂತೋಷದಿಂದಾಗಿ ಆ ಸಂಕಟವನ್ನು ಮುಂದೆ ಎಂದೂ ನೆನಪಿಸಿಕೊಳ್ಳುವುದಿಲ್ಲ. 22  ಹಾಗೆಯೇ ನೀವು ಸಹ ಈಗ ದುಃಖಿಸುತ್ತಿದ್ದೀರಿ; ಆದರೆ ನಾನು ನಿಮ್ಮನ್ನು ಪುನಃ ನೋಡುವೆನು, ಆಗ ನಿಮ್ಮ ​ಹೃದಯಗಳು ಹರ್ಷಿಸುವವು ಮತ್ತು ನಿಮ್ಮ ಸಂತೋಷವನ್ನು ಯಾರೂ ನಿಮ್ಮಿಂದ ತೆಗೆದುಬಿಡಲಾರರು. 23  ಆ ದಿನದಲ್ಲಿ ನೀವು ನನಗೆ ಯಾವುದೇ ಪ್ರಶ್ನೆಯನ್ನು ಕೇಳುವುದಿಲ್ಲ. ನಿಮಗೆ ನಿಜನಿಜವಾಗಿ ಹೇಳುತ್ತೇನೆ, ನೀವು ತಂದೆಯನ್ನು ಏನೇ ಬೇಡಿಕೊಳ್ಳುವುದಾದರೂ ಅದನ್ನು ಆತನು ನನ್ನ ಹೆಸರಿನಲ್ಲಿ ನಿಮಗೆ ಕೊಡುವನು. 24  ಇದುವರೆಗೂ ನೀವು ನನ್ನ ಹೆಸರಿನಲ್ಲಿ ಒಂದೇ ಒಂದು ವಿಷಯವನ್ನೂ ಬೇಡಿ​ಕೊಂಡಿಲ್ಲ. ಬೇಡಿಕೊಳ್ಳಿರಿ, ನಿಮಗೆ ಸಿಗುವುದು; ಆಗ ನಿಮ್ಮ ಸಂತೋಷವು ಪೂರ್ಣ​ವಾಗುವುದು. 25  “ನಾನು ಇವುಗಳನ್ನೆಲ್ಲ ನಿಮಗೆ ಉಪಮೆಗಳಲ್ಲಿ ಹೇಳಿದ್ದೇನೆ. ಆದರೆ ನಾನು ನಿಮ್ಮೊಂದಿಗೆ ಇನ್ನೆಂದೂ ಉಪಮೆಗಳ ಸಹಾಯದಿಂದ ಮಾತಾಡದೆ ತಂದೆಯ ಕುರಿತು ನಿಮಗೆ ಸ್ಪಷ್ಟವಾಗಿ ತಿಳಿಸುವ ಗಳಿಗೆ ಬರುತ್ತದೆ. 26  ಆ ದಿನದಲ್ಲಿ ನೀವು ನನ್ನ ಹೆಸರಿನಲ್ಲಿ ಬೇಡಿಕೊಳ್ಳುವಿರಿ; ಆದರೆ ನಾನು ತಂದೆಯ ಬಳಿ ನಿಮ್ಮ ಕುರಿತು ವಿನಂತಿಸಿಕೊಳ್ಳುವೆನೆಂದು ನಿಮಗೆ ಹೇಳುವುದಿಲ್ಲ. 27  ಏಕೆಂದರೆ ನಿಮಗೆ ನನ್ನ ಮೇಲೆ ಮಮತೆ ಇದೆ ಮತ್ತು ನಾನು ತಂದೆಯ ಪ್ರತಿನಿಧಿಯಾಗಿ ಬಂದಿದ್ದೇನೆಂದು ನೀವು ನಂಬಿರುವುದರಿಂದ ಸ್ವತಃ ತಂದೆಗೆ ನಿಮ್ಮ ಮೇಲೆ ಮಮತೆ ಇದೆ. 28  ನಾನು ತಂದೆಯ ಬಳಿಯಿಂದ ಹೊರಟು ಲೋಕಕ್ಕೆ ಬಂದಿದ್ದೇನೆ. ಇದಲ್ಲದೆ ನಾನು ಲೋಕವನ್ನು ಬಿಟ್ಟು ತಂದೆಯ ಬಳಿಗೆ ಹೋಗುತ್ತಿದ್ದೇನೆ” ಎಂದು ಹೇಳಿದನು. 29  ಅವನ ಶಿಷ್ಯರು, “ನೋಡು, ನೀನು ಈಗ ಉಪಮೆಗಳ ಮೂಲಕ ಮಾತಾಡದೆ ಸ್ಪಷ್ಟವಾಗಿ ಮಾತಾಡುತ್ತಿದ್ದೀ. 30  ನಿನಗೆ ಎಲ್ಲವೂ ತಿಳಿದಿದೆ ಮತ್ತು ಯಾರೂ ನಿನ್ನನ್ನು ಪ್ರಶ್ನಿಸುವ ಅಗತ್ಯವಿಲ್ಲ ಎಂಬುದನ್ನು ನಾವು ಈಗ ​ತಿಳಿದುಕೊಂಡೆವು. ಇದರಿಂದಾಗಿ ನೀನು ದೇವರ ಬಳಿಯಿಂದ ಬಂದವನೆಂದು ನಾವು ನಂಬುತ್ತೇವೆ” ಎಂದರು. 31  ಯೇಸು ಅವರಿಗೆ, “ಈಗ ನಂಬುತ್ತೀರೊ? 32  ನೋಡಿರಿ, ನಿಮ್ಮಲ್ಲಿ ಪ್ರತಿಯೊಬ್ಬನು ತನ್ನ ಸ್ವಂತ ಮನೆಗೆ ಚೆದರಿಹೋಗಿ ನನ್ನನ್ನು ಒಂಟಿಯಾಗಿ ಬಿಟ್ಟುಹೋಗುವ ಗಳಿಗೆಯು ಬರುತ್ತದೆ, ವಾಸ್ತವದಲ್ಲಿ ಅದು ​ಈಗಾಗಲೇ ಬಂದಿದೆ; ಆದರೂ ನಾನು ಒಂಟಿಯಾಗಿಲ್ಲ, ಏಕೆಂದರೆ ತಂದೆಯು ನನ್ನೊಂದಿ​ಗಿದ್ದಾನೆ. 33  ನೀವು ನನ್ನ ಮೂಲಕ ಶಾಂತಿಯನ್ನು ಪಡೆದುಕೊಳ್ಳುವಂತೆ ನಾನು ಇದನ್ನೆಲ್ಲ ನಿಮಗೆ ತಿಳಿಸಿದ್ದೇನೆ. ಲೋಕದಲ್ಲಿ ನಿಮಗೆ ಸಂಕಟವಿರುವುದು, ಆದರೆ ಧೈರ್ಯವಾಗಿರಿ! ನಾನು ಲೋಕವನ್ನು ಜಯಿಸಿದ್ದೇನೆ” ಎಂದು ​ಹೇಳಿದನು.

ಪಾದಟಿಪ್ಪಣಿ

ಯೋಹಾ 16:7 14:16ರ ಪಾದಟಿಪ್ಪಣಿಯನ್ನು ನೋಡಿ.
ಯೋಹಾ 16:13 14:16ರ ಪಾದಟಿಪ್ಪಣಿಯನ್ನು ನೋಡಿ.