ಯೋಹಾನ 13:1-38

13  ಪಸ್ಕಹಬ್ಬಕ್ಕೆ ಮುಂಚೆ ಯೇಸು ತಾನು ಈ ಲೋಕವನ್ನು ಬಿಟ್ಟು ತಂದೆಯ ಬಳಿಗೆ ಹೋಗುವ ಗಳಿಗೆಯು ಬಂತೆಂಬುದನ್ನು ತಿಳಿದುಕೊಂಡದ್ದರಿಂದ, ಲೋಕದಲ್ಲಿದ್ದ ತನ್ನ ಸ್ವಂತದವರನ್ನು ಪ್ರೀತಿಸಿದ ಅವನು ಕೊನೆಯ ವರೆಗೂ ಅವರನ್ನು ಪ್ರೀತಿಸಿದನು.  ಪಿಶಾಚನು ಈಗಾಗಲೇ ಸೀಮೋನನ ಮಗನಾದ ಇಸ್ಕರಿಯೋತ ಯೂದನ ಹೃದಯದಲ್ಲಿ ಅವನನ್ನು ದ್ರೋಹದಿಂದ ಹಿಡಿದುಕೊಡುವ ಆಲೋಚನೆಯನ್ನು ಹಾಕಿದ್ದನು. ಆದುದರಿಂದ ಅವರು ಸಂಧ್ಯಾ ಭೋಜನವನ್ನು ಮಾಡುತ್ತಿದ್ದಾಗ,  ತಂದೆಯು ಎಲ್ಲವನ್ನೂ ತನ್ನ ಕೈಗೆ ಒಪ್ಪಿಸಿಕೊಟ್ಟಿದ್ದಾನೆ ಎಂದೂ ತಾನು ದೇವರ ಬಳಿಯಿಂದ ಬಂದವನಾಗಿದ್ದು ದೇವರ ಬಳಿಗೆ ಹಿಂದಿರುಗಿ ಹೋಗಲಿದ್ದೇನೆ ಎಂದೂ ತಿಳಿದವನಾಗಿದ್ದ ಯೇಸು  ಸಂಧ್ಯಾ ಭೋಜನವನ್ನು ಬಿಟ್ಟು ಎದ್ದು ತನ್ನ ಮೇಲಂಗಿಯನ್ನು ತೆಗೆದಿಟ್ಟು ಒಂದು ಕೈಪಾವುಡವನ್ನು ತೆಗೆದುಕೊಂಡು ನಡುವಿಗೆ ಕಟ್ಟಿಕೊಂಡನು.  ಅನಂತರ ಅವನು ಒಂದು ಬೋಗುಣಿಗೆ ನೀರನ್ನು ಹಾಕಿ ಶಿಷ್ಯರ ಪಾದಗಳನ್ನು ತೊಳೆದು ತನ್ನ ನಡುವಿಗೆ ಕಟ್ಟಿಕೊಂಡಿದ್ದ ಕೈಪಾವುಡದಿಂದ ಅವುಗಳನ್ನು ಒರಸ​ತೊಡಗಿದನು.  ಹೀಗೆ ಅವನು ಸೀಮೋನ ಪೇತ್ರನ ಬಳಿಗೆ ಬಂದಾಗ ಅವನು, “ಕರ್ತನೇ, ನೀನು ನನ್ನ ಪಾದಗಳನ್ನು ತೊಳೆಯುತ್ತೀಯೊ?” ಎಂದನು.  ಅದಕ್ಕೆ ಯೇಸು ಅವನಿಗೆ, “ನಾನು ಏನು ಮಾಡು​ತ್ತಿದ್ದೇನೋ ಅದು ಈಗ ನಿನಗೆ ಅರ್ಥವಾಗುವುದಿಲ್ಲ, ಆದರೆ ​ಇವುಗಳಾದ ಮೇಲೆ ನಿನಗೆ ಅರ್ಥವಾಗುವುದು” ಎಂದು ಹೇಳಿದನು.  ಪೇತ್ರನು ಅವನಿಗೆ, “ನೀನು ನನ್ನ ಪಾದಗಳನ್ನು ಖಂಡಿತವಾಗಿ ಎಂದಿಗೂ ತೊಳೆಯಬಾರದು” ಎಂದು ಹೇಳಿದನು. ಆಗ ಯೇಸು ಅವನಿಗೆ, “ನಾನು ನಿನ್ನನ್ನು ತೊಳೆದ ಹೊರತು ನಿನಗೆ ನನ್ನ ಸಂಗಡ ಪಾಲಿಲ್ಲ” ಎಂದನು.  ಆಗ ಸೀಮೋನ ಪೇತ್ರನು ಅವನಿಗೆ, “ಕರ್ತನೇ, ಹಾಗಾದರೆ ನನ್ನ ಪಾದಗಳನ್ನು ಮಾತ್ರವೇ ಅಲ್ಲ ನನ್ನ ಕೈಗಳನ್ನೂ ತಲೆಯನ್ನೂ ತೊಳೆ” ಎಂದು ಹೇಳಿದನು. 10  ಯೇಸು ಅವನಿಗೆ, “ಸ್ನಾನಮಾಡಿದವನು ಪಾದಗಳನ್ನು ಮಾತ್ರ ತೊಳೆದು​ಕೊಂಡರೆ ಸಾಕು, ಅವನು ಸಂಪೂರ್ಣವಾಗಿ ಶುದ್ಧನಾಗಿದ್ದಾನೆ. ನೀವು ಶುದ್ಧರಾಗಿದ್ದೀರಿ, ಆದರೆ ನಿಮ್ಮಲ್ಲಿ ಎಲ್ಲರೂ ಶುದ್ಧರಲ್ಲ” ಎಂದು ಹೇಳಿದನು. 11  ವಾಸ್ತವದಲ್ಲಿ ತನ್ನನ್ನು ದ್ರೋಹದಿಂದ ಹಿಡಿದುಕೊಡುವವನ ಕುರಿತು ಅವನಿಗೆ ತಿಳಿದಿತ್ತು. ಆದುದರಿಂದಲೇ, “ನಿಮ್ಮಲ್ಲಿ ಎಲ್ಲರೂ ಶುದ್ಧರಲ್ಲ” ಎಂದು ಅವನು ಹೇಳಿದನು. 12  ಅವರ ಪಾದಗಳನ್ನು ತೊಳೆದ ಬಳಿಕ ಅವನು ತನ್ನ ಮೇಲಂಗಿಯನ್ನು ಹಾಕಿಕೊಂಡು ಪುನಃ ಅವರೊಂದಿಗೆ ಊಟಕ್ಕೆ ಕುಳಿತುಕೊಂಡು ಅವರಿಗೆ, “ನಾನು ನಿಮಗೆ ಮಾಡಿದ್ದು ಏನೆಂದು ನಿಮಗೆ ತಿಳಿಯಿತೊ? 13  ನೀವು ನನ್ನನ್ನು ‘ಬೋಧಕನು’ ಮತ್ತು ‘ಕರ್ತನು’ ಎಂದು ಸಂಬೋಧಿಸುತ್ತೀರಿ; ನೀವು ಹೇಳುವುದು ಸರಿಯೇ, ಏಕೆಂದರೆ ನಾನು ಅಂಥವನೇ. 14  ಹಾಗಾದರೆ ಕರ್ತನೂ ಬೋಧಕನೂ ಆಗಿರುವ ನಾನು ನಿಮ್ಮ ಪಾದಗಳನ್ನು ತೊಳೆದಿರಲಾಗಿ ನೀವು ಸಹ ಒಬ್ಬರು ಇನ್ನೊಬ್ಬರ ಪಾದಗಳನ್ನು ತೊಳೆಯಲೇಬೇಕು. 15  ನಾನು ಮಾಡಿದಂತೆಯೇ ನೀವೂ ಮಾಡಬೇಕೆಂದು ನಾನು ನಿಮಗೆ ಒಂದು ಮಾದರಿಯನ್ನು ಇಟ್ಟಿದ್ದೇನೆ. 16  ಒಬ್ಬ ಆಳು ತನ್ನ ಯಜಮಾನನಿಗಿಂತ ದೊಡ್ಡವನಲ್ಲ, ಹಾಗೆಯೇ ಕಳುಹಿಸಲ್ಪಟ್ಟವನು ಕಳುಹಿಸಿದಾತನಿಗಿಂತ ದೊಡ್ಡವ​ನಲ್ಲ ಎಂದು ನಿಮಗೆ ನಿಜನಿಜವಾಗಿ ಹೇಳುತ್ತೇನೆ. 17  ನೀವು ಈ ವಿಷಯಗಳನ್ನು ತಿಳಿದು ಅವುಗಳನ್ನು ಕೈಕೊಂಡು ನಡೆಯುವುದಾದರೆ ಸಂತೋಷಿತರು. 18  ನಾನು ನಿಮ್ಮೆಲ್ಲರ ಕುರಿತು ಮಾತಾಡುತ್ತಿಲ್ಲ; ನಾನು ಆರಿಸಿಕೊಂಡವರ ಬಗ್ಗೆ ನನಗೆ ತಿಳಿದಿದೆ. ಆದರೆ ‘ನನ್ನೊಂದಿಗೆ ರೊಟ್ಟಿಯನ್ನು ತಿನ್ನುತ್ತಿದ್ದವನೇ ನನಗೆ ಕಾಲನ್ನು ಅಡ್ಡಹಾಕಿದ್ದಾನೆ’ ಎಂಬ ಶಾಸ್ತ್ರವಚನವು ನೆರವೇರಬೇಕು. 19  ಈ ಗಳಿಗೆಯಿಂದ ನಡೆಯಲಿರುವ ಸಂಗತಿಯನ್ನು ನಾನು ಮುಂಚಿತವಾಗಿಯೇ ನಿಮಗೆ ತಿಳಿಸುತ್ತೇನೆ, ಏಕೆಂದರೆ ಅದು ಸಂಭವಿಸುವಾಗ ನಾನೇ ಅವನು ಎಂಬುದನ್ನು ನೀವು ನಂಬುವಿರಿ. 20  ನಿಮಗೆ ನಿಜನಿಜವಾಗಿ ಹೇಳುತ್ತೇನೆ, ನಾನು ಕಳುಹಿಸಿಕೊಡುವವನನ್ನು ಅಂಗೀಕರಿಸುವವನು ನನ್ನನ್ನೂ ಅಂಗೀಕರಿಸುವವನಾಗಿದ್ದಾನೆ. ನನ್ನನ್ನು ಅಂಗೀಕರಿಸುವವನು ನನ್ನನ್ನು ಕಳುಹಿಸಿದಾತನನ್ನೂ ಅಂಗೀಕರಿಸುವವನಾಗಿದ್ದಾನೆ” ಎಂದು ಹೇಳಿದನು. 21  ಇದನ್ನು ಹೇಳಿದ ಬಳಿಕ ಯೇಸು ಆಂತರ್ಯದಲ್ಲಿ ಕಳವಳಪಟ್ಟು, “ನಿಮ್ಮಲ್ಲಿ ಒಬ್ಬನು ನನಗೆ ನಂಬಿಕೆ ದ್ರೋಹಮಾಡುವನು ಎಂದು ನಿಮಗೆ ನಿಜನಿಜವಾಗಿ ಹೇಳುತ್ತೇನೆ” ಎಂದನು. 22  ಅವನು ಯಾರ ಕುರಿತು ಹೀಗೆ ಹೇಳುತ್ತಿದ್ದಾನೆ ಎಂಬುದನ್ನು ತಿಳಿಯದೆ ಶಿಷ್ಯರು ಒಬ್ಬರನ್ನೊಬ್ಬರು ನೋಡಲಾರಂಭಿಸಿದರು. 23  ಯೇಸುವಿಗೆ ಪ್ರಿಯನಾಗಿದ್ದ ಅವನ ಶಿಷ್ಯರಲ್ಲಿ ಒಬ್ಬನು ಯೇಸುವಿನ ಎದೆಯ ಬಳಿ ಒರಗಿಕೊಂಡಿದ್ದನು. 24  ಆದುದರಿಂದ ಸೀಮೋನ ಪೇತ್ರನು ಅವನಿಗೆ ಸನ್ನೆಮಾಡುತ್ತಾ, “ಅವನು ಇದನ್ನು ಯಾರ ಕುರಿತು ಹೇಳುತ್ತಿದ್ದಾನೆ ತಿಳಿಸು” ಎಂದು ಕೇಳಿದನು. 25  ಆಗ ಯೋಹಾನನು ಯೇಸುವಿನ ಎದೆಗೆ ಹಿಂದೆ ಒರಗುತ್ತ ಅವನಿಗೆ, “ಕರ್ತನೇ, ಅವನು ಯಾರು?” ಎಂದು ಕೇಳಿದನು. 26  ಅದಕ್ಕೆ ಯೇಸು, “ನಾನು ಈ ರೊಟ್ಟಿಯ ತುಂಡನ್ನು ಅದ್ದಿ ಯಾರಿಗೆ ಕೊಡುತ್ತೇನೋ ಅವನೇ” ಎಂದು ಉತ್ತರಿಸಿದನು. ಅನಂತರ ರೊಟ್ಟಿಯ ತುಂಡನ್ನು ಅದ್ದಿ ತೆಗೆದು ಅದನ್ನು ​ಇಸ್ಕರಿಯೋತ ಸೀಮೋನನ ಮಗನಾದ ಯೂದನಿಗೆ ಕೊಟ್ಟನು. 27  ಅವನು ಆ ತುಂಡನ್ನು ತೆಗೆದುಕೊಂಡಾಗ ಸೈತಾನನು ಅವನೊಳಗೆ ಪ್ರವೇಶಿಸಿದನು. ಆಗ ಯೇಸು ಅವನಿಗೆ, “ನೀನು ಏನು ಮಾಡಲಿದ್ದೀಯೋ ಅದನ್ನು ಬೇಗ ಮಾಡಿಮುಗಿಸು” ಎಂದು ಹೇಳಿದನು. 28  ಆದರೆ ಯಾವ ಉದ್ದೇಶ​ಕ್ಕಾಗಿ ಅವನು ಇದನ್ನು ಹೇಳಿದ​ನೆಂಬುದು ಊಟಕ್ಕೆ ಕುಳಿತುಕೊಂಡಿದ್ದವರಲ್ಲಿ ಯಾರಿಗೂ ತಿಳಿಯಲಿಲ್ಲ. 29  ವಾಸ್ತವದಲ್ಲಿ ಅವರಲ್ಲಿ ಕೆಲವರು ಯೂದನ ಬಳಿ ಹಣದ ಪೆಟ್ಟಿಗೆ ಇದ್ದುದರಿಂದ ಯೇಸು ಅವನಿಗೆ, “ಹಬ್ಬಕ್ಕಾಗಿ ನಮಗೆ ಅಗತ್ಯವಿರುವ ವಸ್ತುಗಳನ್ನು ಕೊಂಡುಕೊ” ಎಂಬುದಾಗಿಯೊ ಬಡವರಿಗೆ ಏನಾದರೂ ಕೊಡು ಎಂಬುದಾಗಿಯೊ ಹೇಳುತ್ತಿದ್ದಾನೆಂದು ನೆನಸಿದರು. 30  ಆದುದರಿಂದ ಅವನು ಆ ರೊಟ್ಟಿಯ ತುಂಡನ್ನು ತೆಗೆದುಕೊಂಡ ಬಳಿಕ ಕೂಡಲೆ ಹೊರಗೆ ಹೋದನು. ಆಗ ರಾತ್ರಿಯಾಗಿತ್ತು. 31  ಅವನು ಹೊರಗೆ ಹೋದ ಬಳಿಕ ಯೇಸು, “ಈಗ ಮನುಷ್ಯಕುಮಾರನು ಮಹಿಮೆಗೊಳಿಸಲ್ಪಡುತ್ತಾನೆ ಮತ್ತು ದೇವರು ಅವನಿಂದಾಗಿ ಮಹಿಮೆಗೊಳಿಸಲ್ಪಡುತ್ತಾನೆ. 32  ದೇವರು ತಾನೇ ಅವನನ್ನು ಮಹಿಮೆಪಡಿಸುವನು ಮತ್ತು ಆತನು ಅವನನ್ನು ಕೂಡಲೆ ಮಹಿಮೆಪಡಿಸುವನು. 33  ಎಳೆಯ ಮಕ್ಕಳೇ, ನಾನು ಇನ್ನು ಸ್ವಲ್ಪಕಾಲವೇ ನಿಮ್ಮೊಂದಿಗಿರುತ್ತೇನೆ. ನೀವು ನನಗಾಗಿ ಹುಡುಕುವಿರಿ; ಆದರೆ ‘ನಾನು ಎಲ್ಲಿಗೆ ಹೋಗುತ್ತೇನೋ ಅಲ್ಲಿಗೆ ನೀವು ಬರಲಾರಿರಿ’ ಎಂದು ನಾನು ಯೆಹೂದ್ಯರಿಗೆ ಹೇಳಿದಂತೆಯೇ ಈಗ ನಿಮಗೂ ಹೇಳು​ತ್ತೇನೆ. 34  ನಾನು ನಿಮಗೆ ಒಂದು ಹೊಸ ಆಜ್ಞೆಯನ್ನು ಕೊಡುತ್ತೇನೆ; ಅದೇನೆಂದರೆ ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕು. ನಾನು ನಿಮ್ಮನ್ನು ಪ್ರೀತಿಸಿದಂತೆಯೇ ನೀವು ಸಹ ಒಬ್ಬರನ್ನೊಬ್ಬರು ಪ್ರೀತಿಸಬೇಕು. 35  ನಿಮ್ಮ ಮಧ್ಯೆ ಪ್ರೀತಿಯಿರುವುದಾದರೆ ನೀವು ನನ್ನ ಶಿಷ್ಯರೆಂದು ಎಲ್ಲರೂ ತಿಳಿದುಕೊಳ್ಳುವರು” ಎಂದು ಹೇಳಿದನು. 36  ಸೀಮೋನ ಪೇತ್ರನು ಅವನಿಗೆ, “ಕರ್ತನೇ, ನೀನು ಎಲ್ಲಿಗೆ ಹೋಗುತ್ತೀ?” ಎಂದು ಕೇಳಿದನು. ಅದಕ್ಕೆ ಯೇಸು, “ನಾನು ಎಲ್ಲಿಗೆ ಹೋಗುತ್ತಿದ್ದೇನೋ ಅಲ್ಲಿಗೆ ನೀನು ಈಗ ನನ್ನ ಹಿಂದೆ ಬರಲು ಸಾಧ್ಯವಿಲ್ಲ; ಆದರೆ ಅನಂತರ ಬರುವಿ” ಎಂದು ಹೇಳಿದನು. 37  ಪೇತ್ರನು ಅವನಿಗೆ, “ಕರ್ತನೇ, ನಾನೇಕೆ ಈಗ ನಿನ್ನ ಹಿಂದೆ ಬರಲು ಸಾಧ್ಯವಿಲ್ಲ? ನಾನು ನಿನಗಾಗಿ ನನ್ನ ಪ್ರಾಣವನ್ನೇ ಕೊಡುವೆನು” ಎಂದು ಹೇಳಿದನು. 38  ಅದಕ್ಕೆ ಯೇಸು, “ನನಗಾಗಿ ನೀನು ಪ್ರಾಣವನ್ನೇ ಕೊಡುವಿಯೊ? ನೀನು ನನ್ನನ್ನು ಮೂರು ಸಾರಿ ಅಲ್ಲಗಳೆಯುವ ತನಕ ಹುಂಜವು ಕೂಗುವುದೇ ಇಲ್ಲ ಎಂದು ನಿನಗೆ ನಿಜನಿಜವಾಗಿ ಹೇಳುತ್ತೇನೆ” ಎಂದು ಉತ್ತರಿಸಿದನು.

ಪಾದಟಿಪ್ಪಣಿ