ಯೋಹಾನ 12:1-50

12  ಪಸ್ಕಕ್ಕೆ ಆರು ದಿನಗಳಿಗೆ ಮುಂಚೆ ಯೇಸು ಬೇಥಾನ್ಯಕ್ಕೆ ಬಂದನು. ಯೇಸು ಸತ್ತವರೊಳಗಿಂದ ಎಬ್ಬಿಸಿದ ಲಾಜರನು ಅಲ್ಲಿದ್ದನು. 2   ಆದುದರಿಂದ ಅವರು ಅವನಿಗಾಗಿ ಸಂಧ್ಯಾ ಭೋಜನ​ವನ್ನು ಏರ್ಪಡಿಸಿದರು ಮತ್ತು ಮಾರ್ಥಳು ಉಪಚರಿಸುತ್ತಿದ್ದಳು; ಅವನೊಂದಿಗೆ ಊಟಕ್ಕೆ ಕುಳಿತುಕೊಂಡಿದ್ದವರಲ್ಲಿ ಲಾಜರನು ಒಬ್ಬನಾಗಿದ್ದನು.  ಆಗ ಮರಿಯಳು ಸುಮಾರು ಅರ್ಧ ಲೀಟರಿನಷ್ಟು ಬಹು ಬೆಲೆಯುಳ್ಳ ಶುದ್ಧವಾದ ಜಟಮಾಂಸಿ ಸುಗಂಧ ತೈಲವನ್ನು ತೆಗೆದುಕೊಂಡು ಬಂದು ಯೇಸುವಿನ ಪಾದಗಳಿಗೆ ಹಚ್ಚಿ ತನ್ನ ತಲೇಗೂದಲಿನಿಂದ ಅವನ ಪಾದಗಳನ್ನು ಒರಸಿದಳು. ಆ ಮನೆಯು ಸುಗಂಧ ತೈಲದ ಪರಿಮಳದಿಂದ ತುಂಬಿತು.  ಆದರೆ ಅವನ ಶಿಷ್ಯರಲ್ಲಿ ಒಬ್ಬನಾಗಿದ್ದು ಅವನನ್ನು ದ್ರೋಹದಿಂದ ಹಿಡಿದುಕೊಡಲಿಕ್ಕಿದ್ದ ಇಸ್ಕರಿಯೋತ ಯೂದನು,  “ಈ ಸುಗಂಧ ತೈಲವನ್ನು ಮುನ್ನೂರು ದಿನಾರುಗಳಿಗೆ ಮಾರಿ ಬಡವರಿಗೆ ಏಕೆ ಕೊಡಲಿಲ್ಲ?” ಎಂದನು.  ಆದರೆ ಅವನು ಬಡವರ ಕುರಿತು ಚಿಂತಿಸುತ್ತಿದ್ದುದರಿಂದ ಹೀಗೆ ಹೇಳಲಿಲ್ಲ, ಬದಲಾಗಿ ಅವನೊಬ್ಬ ಕಳ್ಳನಾಗಿದ್ದನು ಮತ್ತು ಅವನ ಬಳಿ ಹಣದ ಪೆಟ್ಟಿಗೆ ಇದ್ದು ಅದರಲ್ಲಿ ಹಾಕಿದ ಹಣವನ್ನು ಅವನು ತೆಗೆದುಕೊಳ್ಳುತ್ತಿದ್ದನು.  ಆದುದ​ರಿಂದ ಯೇಸು, “ನನ್ನನ್ನು ಹೂಣಿಡುವ ದಿವಸವನ್ನು ಮನಸ್ಸಿನಲ್ಲಿಟ್ಟವಳಾಗಿ ಅವಳು ಇದನ್ನು ಮಾಡಲಿ ಬಿಡಿ.  ಏಕೆಂದರೆ ಬಡವರು ಯಾವಾಗಲೂ ನಿಮ್ಮ ಬಳಿ ಇರುತ್ತಾರೆ; ಆದರೆ ನಾನು ಯಾವಾಗಲೂ ನಿಮ್ಮ ಬಳಿ ಇರುವುದಿಲ್ಲ” ಎಂದನು.  ಅವನು ಅಲ್ಲಿದ್ದಾನೆ ಎಂಬುದನ್ನು ತಿಳಿದುಕೊಂಡ ಯೆಹೂದ್ಯರ ದೊಡ್ಡ ಗುಂಪು, ಯೇಸುವನ್ನು ಮಾತ್ರವಲ್ಲದೆ ಅವನು ಸತ್ತವರೊಳಗಿಂದ ಎಬ್ಬಿಸಿದ ಲಾಜರನನ್ನೂ ನೋಡಲಿಕ್ಕಾಗಿ ಅಲ್ಲಿಗೆ ಬಂತು. 10  ಆಗ ಮುಖ್ಯ ಯಾಜಕರು ಲಾಜರನನ್ನೂ ಕೊಂದುಹಾಕಲು ಸಮಾಲೋಚನೆ ಮಾಡಿದರು; 11  ಏಕೆಂದರೆ ಅವನ ನಿಮಿತ್ತವಾಗಿ ಯೆಹೂದ್ಯರಲ್ಲಿ ಅನೇಕರು ಅಲ್ಲಿಗೆ ಹೋಗಿ ಯೇಸುವಿನಲ್ಲಿ ನಂಬಿಕೆಯಿಡುತ್ತಿದ್ದರು. 12  ಮರುದಿನ ಹಬ್ಬಕ್ಕಾಗಿ ಬಂದಿದ್ದ ಜನಸಮೂಹದವರು ಯೇಸು ಯೆರೂಸಲೇಮಿಗೆ ಬರುತ್ತಾನೆಂಬುದನ್ನು ಕೇಳಿಸಿಕೊಂಡು, 13  ಖರ್ಜೂರದ ಮರಗಳ ಗರಿಗಳನ್ನು ತೆಗೆದುಕೊಂಡು ಅವನನ್ನು ಎದುರುಗೊಳ್ಳಲು ಹೋದರು. ಅವರು “ರಕ್ಷಣೆಯನ್ನು ಕೋರುತ್ತೇವೆ! ಯೆಹೋವನ ನಾಮದಲ್ಲಿ ಇಸ್ರಾಯೇಲ್ಯರ ಅರಸನಾಗಿ ಬರುವವನು ಆಶೀರ್ವದಿತನು!” ಎಂದು ಗಟ್ಟಿಯಾಗಿ ಕೂಗತೊಡಗಿದರು. 14  ಆಗ ಯೇಸು ಒಂದು ಕತ್ತೇಮರಿಯನ್ನು ಕಂಡು ಅದರ ಮೇಲೆ ಕುಳಿತುಕೊಂಡನು. ಹೀಗೆ, 15  “ಚೀಯೋನ್‌ ನಗರಿಯೇ ಭಯಪಡ​ಬೇಡ. ಇಗೋ! ನಿನ್ನ ಅರಸನು ಕತ್ತೇಮರಿಯ ಮೇಲೆ ಕುಳಿತುಕೊಂಡವನಾಗಿ ಬರುತ್ತಿದ್ದಾನೆ” ಎಂದು ಬರೆದಿರುವ ಮಾತು ನೆರವೇರಿತು. 16  ಈ ವಿಷಯಗಳನ್ನು ಅವನ ಶಿಷ್ಯರು ಆರಂಭದಲ್ಲಿ ಮನಸ್ಸಿಗೆ ತೆಗೆದುಕೊಳ್ಳಲಿಲ್ಲ; ಆದರೆ ಯೇಸು ಮಹಿಮೆಗೊಳಿಸಲ್ಪಟ್ಟಾಗ ಈ ವಿಷಯಗಳು ಅವನ ಕುರಿತು ಬರೆಯಲ್ಪಟ್ಟಿದ್ದವು ಎಂಬುದನ್ನೂ ತಾವು ಅವುಗಳನ್ನೆಲ್ಲ ಅವನಿಗೆ ಮಾಡಿದೆವು ಎಂಬುದನ್ನೂ ಅವರು ಮನಸ್ಸಿಗೆ ತಂದುಕೊಂಡರು. 17  ಯೇಸು ಲಾಜರನನ್ನು ಸ್ಮರಣೆಯ ಸಮಾಧಿಯಿಂದ ಕರೆದು ಸತ್ತವರೊಳಗಿಂದ ಎಬ್ಬಿಸಿದಾಗ ಅವನೊಂದಿಗಿದ್ದ ಜನರು ತಾವು ನೋಡಿದ ವಿಷಯಗಳ ಕುರಿತು ಸಾಕ್ಷಿಕೊಡುತ್ತಾ ಇದ್ದರು. 18  ಅವನು ಈ ಸೂಚಕಕಾರ್ಯವನ್ನು ಮಾಡಿದನೆಂದು ಕೇಳಿಸಿಕೊಂಡಿದ್ದರಿಂದಲೂ ಜನಸಮೂಹದವರು ಅವನನ್ನು ಸಂಧಿಸಲು ಹೋದರು. 19  ಆದುದರಿಂದ ಫರಿಸಾಯರು, “ನೋಡಿ, ನೀವು ಏನನ್ನೂ ಸಾಧಿಸುತ್ತಿಲ್ಲ; ಇಡೀ ಲೋಕವೇ ಅವನ ಹಿಂದೆ ಹೋಗಿದೆಯಲ್ಲಾ” ಎಂದು ತಮ್ಮತಮ್ಮೊಳಗೆ ಮಾತಾಡಿಕೊಂಡರು. 20  ಹಬ್ಬದಲ್ಲಿ ಆರಾಧನೆಗಾಗಿ ಬಂದಿದ್ದವರಲ್ಲಿ ಕೆಲವು ಮಂದಿ ಗ್ರೀಕರೂ ಇದ್ದರು. 21  ಇವರು ಗಲಿಲಾಯದ ಬೇತ್ಸಾಯಿದ ಊರಿನವನಾದ ಫಿಲಿಪ್ಪನ ಬಳಿಗೆ ಬಂದು, “ಸ್ವಾಮಿ, ನಾವು ಯೇಸುವನ್ನು ನೋಡಲು ಬಯಸುತ್ತೇವೆ” ಎಂದು ಅವನನ್ನು ಬೇಡಿಕೊಳ್ಳಲಾರಂಭಿಸಿದರು. 22  ಫಿಲಿಪ್ಪನು ಬಂದು ಅಂದ್ರೆಯನಿಗೆ ಹೇಳಿದನು. ಅಂದ್ರೆಯ ಮತ್ತು ಫಿಲಿಪ್ಪರು ಬಂದು ಯೇಸುವಿಗೆ ತಿಳಿಸಿದರು. 23  ಆಗ ಯೇಸು ಅವರಿಗೆ, “ಮನುಷ್ಯಕುಮಾರನು ಮಹಿಮೆಗೇರಿಸಲ್ಪಡುವ ಗಳಿಗೆ ಬಂದಿದೆ. 24  ನಿಮಗೆ ನಿಜನಿಜವಾಗಿ ಹೇಳುತ್ತೇನೆ, ಗೋದಿಯ ಒಂದು ಕಾಳು ಭೂಮಿಗೆ ಬಿದ್ದು ಸಾಯದಿದ್ದರೆ ಅದು ಒಂದೇ ಕಾಳಾಗಿ ಉಳಿಯುತ್ತದೆ; ಅದು ಸಾಯುವಲ್ಲಿ ಅಧಿಕ ಫಲವನ್ನು ಕೊಡುತ್ತದೆ. 25  ತನ್ನ ಪ್ರಾಣವನ್ನು ಪ್ರೀತಿಸುವವನು ಅದನ್ನು ನಾಶಮಾಡಿಕೊಳ್ಳುತ್ತಾನೆ, ಆದರೆ ಈ ಲೋಕದಲ್ಲಿ ತನ್ನ ಪ್ರಾಣವನ್ನು ದ್ವೇಷಿಸುವವನು ಅದನ್ನು ನಿತ್ಯಜೀವಕ್ಕಾಗಿ ಕಾಪಾಡಿಕೊಳ್ಳುವನು. 26  ಯಾವನಾದರೂ ನನ್ನ ಸೇವೆಮಾಡಲು ಬಯಸುವುದಾದರೆ ಅವನು ನನ್ನನ್ನು ಹಿಂಬಾಲಿಸಲಿ ಮತ್ತು ನಾನು ಇರುವಲ್ಲಿಯೇ ನನ್ನ ಸೇವಕನೂ ಇರುವನು. ಯಾವನಾದರೂ ನನ್ನ ಸೇವೆಮಾಡುವಲ್ಲಿ ತಂದೆಯು ಅವನನ್ನು ಗೌರವಿಸುವನು. 27  ಈಗ ನನ್ನ ಪ್ರಾಣವು ಕಳವಳಗೊಂಡಿದೆ, ನಾನೇನು ಹೇಳಲಿ? ತಂದೆಯೇ, ಈ ಗಳಿಗೆಯಿಂದ ನನ್ನನ್ನು ಕಾಪಾಡು. ಆದರೆ ನಾನು ಈ ಗಳಿಗೆಗಾಗಿಯೇ ಬಂದಿದ್ದೇನೆ. 28  ತಂದೆಯೇ, ನಿನ್ನ ಹೆಸರನ್ನು ಮಹಿಮೆಪಡಿಸು” ಎಂದು ಹೇಳಿದನು. ಆಗ ಸ್ವರ್ಗದಿಂದ, “ಮಹಿಮೆಪಡಿಸಿದ್ದೇನೆ ಮತ್ತು ಪುನಃ ಮಹಿಮೆಪಡಿಸುವೆನು” ಎಂಬ ಧ್ವನಿಯು ಕೇಳಿಬಂತು. 29  ಅಲ್ಲಿ ನಿಂತುಕೊಂಡು ಇದನ್ನು ಕೇಳಿಸಿಕೊಂಡವರು ‘ಗುಡುಗಿತು’ ಎಂದು ಹೇಳತೊಡಗಿದರು. ಇತರರು, “ಒಬ್ಬ ದೇವದೂತನು ಅವನೊಂದಿಗೆ ಮಾತಾಡಿದನು” ಎಂದು ಹೇಳಿದರು. 30  ಅದಕ್ಕೆ ಯೇಸು, “ಈ ಧ್ವನಿಯು ನನಗೋಸ್ಕರವಲ್ಲ, ನಿಮಗೋಸ್ಕರವೇ ಕೇಳಿಬಂತು. 31  ಈಗ ಈ ಲೋಕಕ್ಕೆ ನ್ಯಾಯತೀರ್ಪಾಗುತ್ತಿದೆ; ಈಗ ಈ ಲೋಕದ ಅಧಿಪತಿಯು ಹೊರಗೆ ಹಾಕಲ್ಪಡುವನು. 32  ಆದರೂ ನಾನು ಭೂಮಿಯಿಂದ ಮೇಲಕ್ಕೆ ಎತ್ತಲ್ಪಟ್ಟರೆ ಎಲ್ಲ ರೀತಿಯ ಜನರನ್ನು ನನ್ನ ಕಡೆಗೆ ಸೆಳೆದುಕೊಳ್ಳುವೆನು” ಎಂದನು. 33  ತಾನು ಯಾವ ವಿಧವಾದ ಮರಣವನ್ನು ಬೇಗನೆ ಅನುಭವಿಸಲಿದ್ದೇನೆ ಎಂಬುದನ್ನು ಸೂಚಿಸಲಿಕ್ಕಾಗಿ ಅವನು ಇದನ್ನು ಹೇಳಿದನು. 34  ಆದುದರಿಂದ ಜನರು ಅವನಿಗೆ, “ಕ್ರಿಸ್ತನು ಸದಾಕಾಲ ಉಳಿಯುತ್ತಾನೆ ಎಂದು ನಾವು ಧರ್ಮಶಾಸ್ತ್ರದಿಂದ ಕೇಳಿಸಿಕೊಂಡಿದ್ದೇವೆ; ಹೀಗಿರುವಾಗ ಮನುಷ್ಯಕುಮಾರನು ಮೇಲಕ್ಕೆ ಎತ್ತಲ್ಪಡಬೇಕೆಂದು ನೀನು ಹೇಳುವುದು ಹೇಗೆ? ಆ ಮನುಷ್ಯಕುಮಾರನು ಯಾರು?” ಎಂದು ಕೇಳಿದರು. 35  ಅದಕ್ಕೆ ಯೇಸು ಅವರಿಗೆ, “ಇನ್ನು ಸ್ವಲ್ಪ ಕಾಲ ಮಾತ್ರ ಬೆಳಕು ನಿಮ್ಮ ಮಧ್ಯೆ ಇರುವುದು. ಕತ್ತಲೆಯು ನಿಮ್ಮನ್ನು ಜಯಿಸದಂತೆ ಬೆಳಕು ನಿಮ್ಮಲ್ಲಿ ಇರುವಾಗಲೇ ನೀವು ನಡೆದಾಡಿರಿ; ಕತ್ತಲೆ​ಯಲ್ಲಿ ನಡೆಯುವವನಿಗೆ ತಾನು ಎಲ್ಲಿಗೆ ಹೋಗುತ್ತಿದ್ದೇನೆ ಎಂಬುದು ತಿಳಿಯದು. 36  ಬೆಳಕಿನ ಪುತ್ರರಾಗಲಿಕ್ಕಾಗಿ ಬೆಳಕು ಇರುವಾಗಲೇ ಬೆಳಕಿನಲ್ಲಿ ನಂಬಿಕೆಯನ್ನು ತೋರಿಸಿರಿ” ಎಂದು ಹೇಳಿದನು. ಯೇಸು ಈ ವಿಷಯಗಳನ್ನು ಹೇಳಿದ ಬಳಿಕ ಅವರಿಂದ ಹೊರಟುಹೋಗಿ ಅಡಗಿಕೊಂಡನು. 37  ಅವನು ಅವರ ಮುಂದೆ ಅಷ್ಟೊಂದು ಸೂಚಕಕಾರ್ಯಗಳನ್ನು ಮಾಡಿದ್ದರೂ ಅವರು ಅವನಲ್ಲಿ ನಂಬಿಕೆ ಇಡುತ್ತಿರಲಿಲ್ಲ; 38  ಹೀಗೆ “ಯೆಹೋವನೇ, ನಮ್ಮಿಂದ ಕೇಳಿಸಿಕೊಂಡ ವಿಷಯದಲ್ಲಿ ಯಾರು ನಂಬಿಕೆಯಿಟ್ಟಿದ್ದಾರೆ? ಯೆಹೋವನ ಬಾಹು ಯಾರಿಗೆ ತೋರಿಸಲ್ಪಟ್ಟಿತು?” ಎಂದು ಪ್ರವಾದಿಯಾದ ಯೆಶಾಯನ ಮೂಲಕ ತಿಳಿಸಲ್ಪಟ್ಟ ಮಾತು ನೆರವೇರಿತು. 39  ಅವರು ಏಕೆ ನಂಬಲಿಲ್ಲ ಎಂಬುದಕ್ಕೆ ಕಾರಣವನ್ನು ಕೊಡುತ್ತಾ ಪುನಃ ಯೆಶಾಯನು, 40  “ಅವರು ತಮ್ಮ ಕಣ್ಣುಗಳಿಂದ ಕಾಣದೆ, ತಮ್ಮ ಹೃದಯಗಳಿಂದ ಗ್ರಹಿಸದೆ, ತಿರುಗಿಕೊಂಡು ತನ್ನಿಂದ ಸ್ವಸ್ಥತೆಯನ್ನು ಹೊಂದದೇ ಇರಲಿಕ್ಕಾಗಿ ಆತನು ಅವರ ಕಣ್ಣುಗಳನ್ನು ಕುರುಡು​ಮಾಡಿದ್ದಾನೆ ಮತ್ತು ಅವರ ಹೃದಯಗಳನ್ನು ಕಠಿನಗೊಳಿಸಿದ್ದಾನೆ” ಎಂದು ಹೇಳಿ​ದನು. 41  ಯೆಶಾಯನು ಅವನ ಮಹಿಮೆಯನ್ನು ನೋಡಿದ್ದರಿಂದ ಈ ಮಾತುಗಳನ್ನು ಹೇಳಿದನು ಮತ್ತು ಅವನು ಕ್ರಿಸ್ತನ ಕುರಿತು ಮಾತಾಡಿದನು. 42  ಆಗ ಅಧಿಪತಿಗಳಲ್ಲಿಯೂ ಅನೇಕರು ಅವನಲ್ಲಿ ನಂಬಿಕೆಯಿಟ್ಟರು, ಆದರೆ ಫರಿಸಾಯರ ನಿಮಿತ್ತ ಸಭಾಮಂದಿರದಿಂದ ಬಹಿಷ್ಕರಿಸಲ್ಪಡದಿರಲಿಕ್ಕಾಗಿ ಅವರು ಅವನಲ್ಲಿ ನಂಬಿಕೆಯಿಟ್ಟಿದ್ದೇವೆ ಎಂದು ಬಹಿರಂಗವಾಗಿ ಒಪ್ಪಿಕೊಳ್ಳಲಿಲ್ಲ; 43  ಏಕೆಂದರೆ ಅವರು ದೇವರಿಂದ ಬರುವ ಮಹಿಮೆ​ಗಿಂತಲೂ ಹೆಚ್ಚಾಗಿ ಮನುಷ್ಯರ ಮಹಿಮೆಯನ್ನು ಇಷ್ಟಪಟ್ಟರು. 44  ಆದರೆ ಯೇಸು ಗಟ್ಟಿಯಾದ ಧ್ವನಿ​ಯಲ್ಲಿ, “ನನ್ನಲ್ಲಿ ನಂಬಿಕೆಯಿಡುವವನು ನನ್ನಲ್ಲಿ ಮಾತ್ರವಲ್ಲ ನನ್ನನ್ನು ಕಳುಹಿಸಿದಾತನಲ್ಲಿಯೂ ನಂಬಿಕೆಯಿಡುವವನಾಗಿದ್ದಾನೆ; 45  ನನ್ನನ್ನು ನೋಡುವವನು ನನ್ನನ್ನು ಕಳುಹಿಸಿದಾತನನ್ನೂ ನೋಡುವವನಾಗಿದ್ದಾನೆ. 46  ನನ್ನಲ್ಲಿ ನಂಬಿಕೆಯಿಡುವ ಪ್ರತಿಯೊಬ್ಬನು ಕತ್ತಲೆಯಲ್ಲೇ ಉಳಿಯಬಾರದೆಂದು ನಾನು ಲೋಕಕ್ಕೆ ಬೆಳಕಾಗಿ ಬಂದಿದ್ದೇನೆ. 47  ಆದರೆ ಯಾವ​ನಾದರೂ ನನ್ನ ಮಾತುಗಳನ್ನು ಕೇಳಿಸಿ​ಕೊಂಡು ಅವುಗಳಿಗೆ ಅನುಸಾರವಾಗಿ ನಡೆಯದಿದ್ದರೆ ನಾನು ಅವನಿಗೆ ತೀರ್ಪುಮಾಡುವುದಿಲ್ಲ; ಏಕೆಂದರೆ ನಾನು ಲೋಕಕ್ಕೆ ತೀರ್ಪುಮಾಡಲಿಕ್ಕಾಗಿ ಅಲ್ಲ, ಲೋಕವನ್ನು ರಕ್ಷಿಸಲಿಕ್ಕಾಗಿ ಬಂದಿದ್ದೇನೆ. 48  ನನ್ನನ್ನು ಅಗೌರ​ವಿಸಿ ನನ್ನ ಮಾತುಗಳನ್ನು ಅಂಗೀಕರಿಸದೇ ಇರುವವನಿಗೆ ತೀರ್ಪುಮಾಡುವಂಥದು ಒಂದು ಇದೆ. ನಾನು ಆಡಿರುವ ಮಾತೇ ಕಡೇ ದಿನದಲ್ಲಿ ಅವನಿಗೆ ತೀರ್ಪುಮಾಡುವುದು; 49  ಏಕೆಂದರೆ ನನ್ನ ಸ್ವಂತ ಪ್ರೇರಣೆ​ಯಿಂದ ನಾನು ಮಾತಾಡಲಿಲ್ಲ; ಏನು ಹೇಳಬೇಕು ಮತ್ತು ಏನು ಮಾತಾಡಬೇಕು ಎಂದು ನನ್ನನ್ನು ಕಳುಹಿಸಿರುವ ತಂದೆಯೇ ನನಗೆ ಆಜ್ಞೆಯನ್ನು ಕೊಟ್ಟಿದ್ದಾನೆ. 50  ಇದಲ್ಲದೆ, ಆತನ ಆಜ್ಞೆಯು ನಿತ್ಯ​ಜೀವವಾಗಿದೆ ಎಂದು ನಾನು ಬಲ್ಲೆನು. ಆದುದರಿಂದ, ನಾನು ಮಾತಾಡುವ ವಿಷಯ​ಗಳನ್ನು ತಂದೆಯು ನನಗೆ ತಿಳಿಸಿರುವಂತೆಯೇ ನಾನು ಮಾತಾಡುತ್ತೇನೆ” ಎಂದು ಹೇಳಿದನು.

ಪಾದಟಿಪ್ಪಣಿ