ಯೂದ 1:1-25

1  ಯೇಸು ಕ್ರಿಸ್ತನ ದಾಸನೂ ಯಾಕೋಬನ ಸಹೋದರನೂ ಆಗಿರುವ ಯೂದನು ತಂದೆಯಾದ ದೇವರೊಂದಿಗಿನ ಸಂಬಂಧದಲ್ಲಿ ಪ್ರಿಯರಾದವರೂ ಯೇಸು ಕ್ರಿಸ್ತನಿಗಾಗಿ ಸಂರಕ್ಷಿಸಲ್ಪಟ್ಟವರೂ ಆಗಿರುವ ಕರೆಯಲ್ಪಟ್ಟವರಿಗೆ ಬರೆಯುವುದೇನೆಂದರೆ,  ನಿಮಗೆ ಕರುಣೆಯೂ ಶಾಂತಿಯೂ ಪ್ರೀತಿಯೂ ಹೆಚ್ಚಾಗಲಿ.  ಪ್ರಿಯರೇ, ನಾವು ಸಮಾನವಾಗಿ ಹೊಂದಿರುವ ರಕ್ಷಣೆಯ ವಿಷಯದಲ್ಲಿ ನಿಮಗೆ ಬರೆಯಲು ನಾನು ಸಕಲ ಪ್ರಯತ್ನವನ್ನು ಮಾಡುತ್ತಿದ್ದೆನಾದರೂ ಪವಿತ್ರ ಜನರಿಗೆ ಎಲ್ಲ ಕಾಲಕ್ಕಾಗಿ ಒಂದೇ ಸಾರಿ ಒಪ್ಪಿಸಲ್ಪಟ್ಟ ನಂಬಿಕೆಗಾಗಿ ನೀವು ಕಠಿನ ಹೋರಾಟವನ್ನು ಮಾಡುವಂತೆ ನಿಮಗೆ ಬುದ್ಧಿಹೇಳಿ ಬರೆಯುವುದು ಅಗತ್ಯವೆಂದು ನನಗೆ ತೋರಿತು.  ನಮ್ಮ ದೇವರ ಅಪಾತ್ರ ದಯೆಯನ್ನು * ನೆವಮಾಡಿಕೊಂಡು ಸಡಿಲು ನಡತೆಯನ್ನು ನಡಿಸುವವರೂ ನಮ್ಮ ಏಕೈಕ ಒಡೆಯನು ಮತ್ತು ಕರ್ತನು ಆಗಿರುವ ಯೇಸು ಕ್ರಿಸ್ತನಿಗೆ ಅಪನಂಬಿಗಸ್ತರೂ ಆಗಿರುವ ಕೆಲವು ಭಕ್ತಿಹೀನ ಜನರು ನಮ್ಮ ಮಧ್ಯೆ ನುಸುಳಿದ್ದಾರೆ; ಇಂಥವರು ಬಹಳ ಸಮಯಕ್ಕೆ ಮುಂಚೆಯೇ ಈ ನ್ಯಾಯತೀರ್ಪಿಗೆ ಶಾಸ್ತ್ರಗ್ರಂಥದಿಂದ ನೇಮಿತರಾಗಿದ್ದಾರೆ.  ಎಲ್ಲ ವಿಷಯಗಳನ್ನು ನೀವು ನಿರ್ಣಾಯಕವಾಗಿ ತಿಳಿದಿರುವುದಾದರೂ ಅದನ್ನು ನಾನು ನಿಮಗೆ ಪುನಃ ಜ್ಞಾಪಕ ಹುಟ್ಟಿಸಲು ಬಯಸುತ್ತೇನೆ; ಅದೇನೆಂದರೆ, ಯೆಹೋವನು ಈಜಿಪ್ಟ್‌ ದೇಶದೊಳಗಿಂದ ತನ್ನ ಜನರನ್ನು ರಕ್ಷಿಸಿದನಾದರೂ ಅನಂತರ ಅವರೊಳಗೆ ನಂಬಿಕೆಯನ್ನು ತೋರಿಸದವರನ್ನು ನಾಶಮಾಡಿದನು.  ತಮ್ಮ ಮೂಲಸ್ಥಾನವನ್ನು ಕಾಪಾಡಿಕೊಳ್ಳದೆ ತಮ್ಮ ಸೂಕ್ತವಾದ ವಾಸಸ್ಥಳವನ್ನು ಬಿಟ್ಟುಬಂದ ದೇವದೂತರಿಗೆ ಆತನು ನಿತ್ಯವಾದ ಬೇಡಿಗಳನ್ನು ಹಾಕಿ ಮಹಾ ದಿನದಲ್ಲಾಗುವ ನ್ಯಾಯತೀರ್ಪಿಗಾಗಿ ದಟ್ಟವಾದ ಕತ್ತಲೆಯಲ್ಲಿ ಇಟ್ಟಿದ್ದಾನೆ.  ಇವರಂತೆಯೇ ಸೊದೋಮ್‌ ಗೊಮೋರಗಳ ಪಟ್ಟಣಗಳವರೂ ಅವುಗಳ ಸುತ್ತಮುತ್ತಲ ಪಟ್ಟಣಗಳವರೂ ವಿಪರೀತ ಜಾರತ್ವವನ್ನು ನಡಿಸಿ ಶಾರೀರಿಕವಾಗಿ ಅಸ್ವಾಭಾವಿಕವಾದದ್ದನ್ನು ಬೆನ್ನಟ್ಟಿದ್ದರಿಂದ ನಿತ್ಯ ಬೆಂಕಿಯ ದಂಡನೆಯ ತೀರ್ಪನ್ನು ಅನುಭವಿಸುವ ಮೂಲಕ ನಮ್ಮ ಮುಂದೆ ಎಚ್ಚರಿಕೆಯ ಒಂದು ಉದಾಹರಣೆಯಾಗಿ ಇಡಲ್ಪಟ್ಟಿದ್ದಾರೆ.  ಹಾಗಿದ್ದರೂ, ಈ ಪುರುಷರು ಸಹ ಅದೇ ರೀತಿ ತಮ್ಮನ್ನು ಹತೋಟಿಯಲ್ಲಿಟ್ಟುಕೊಳ್ಳದೆ ಸ್ವಪ್ನಗಳಲ್ಲಿ ತಲ್ಲೀನರಾಗಿ ಶರೀರ​ವನ್ನು ಮಲಿನಮಾಡಿಕೊಳ್ಳುತ್ತಾರೆ ಮತ್ತು ಪ್ರಭುತ್ವವನ್ನು ಅಸಡ್ಡೆಮಾಡುತ್ತಾ ಮಹಿಮಾನ್ವಿತರ ವಿಷಯದಲ್ಲಿ ದೂಷಣಾತ್ಮಕ ಮಾತುಗಳನ್ನು ಆಡುತ್ತಿದ್ದಾರೆ.  ಆದರೆ ಪ್ರಧಾನ ದೇವದೂತನಾದ ಮೀಕಾಯೇಲನು ಮೋಶೆಯ ದೇಹದ ವಿಷಯದಲ್ಲಿ ಪಿಶಾಚನೊಂದಿಗೆ ಭಿನ್ನಾಭಿಪ್ರಾಯದ ಕಾರಣ ವಾಗ್ವಾದಮಾಡುತ್ತಿದ್ದಾಗ ಅವನು ಪಿಶಾಚನ ವಿರುದ್ಧ ದೂಷಣಾತ್ಮಕ ಮಾತುಗಳಲ್ಲಿ ನ್ಯಾಯತೀರ್ಪನ್ನು ಬರ​ಮಾಡಲು ಧೈರ್ಯಮಾಡದೆ, “ಯೆಹೋವನು ನಿನ್ನನ್ನು ಖಂಡಿಸಲಿ” ಎಂದು ಹೇಳಿದನು. 10  ಆದರೆ ಈ ಪುರುಷರು ತಮಗೆ ನಿಜವಾಗಿಯೂ ಗೊತ್ತಿಲ್ಲದಿರುವಂಥ ಎಲ್ಲ ವಿಷಯಗಳ ಕುರಿತು ದೂಷಣಾತ್ಮಕವಾಗಿ ಮಾತಾಡುತ್ತಿದ್ದಾರೆ; ಆದರೆ ವಿವೇಕಹೀನ ಪ್ರಾಣಿಗಳಂತೆ ಸ್ವಾಭಾವಿಕವಾಗಿ ತಮಗೆ ತಿಳಿದಿರುವ ವಿಷಯಗಳಲ್ಲಿಯೇ ತಮ್ಮನ್ನು ಭ್ರಷ್ಟಗೊಳಿಸಿಕೊಳ್ಳುತ್ತಾ ಇರುತ್ತಾರೆ. 11  ಅವರು ಕಾಯಿನನ ಮಾರ್ಗದಲ್ಲಿ ಸಾಗಿರುವುದರಿಂದಲೂ ಪ್ರತಿಫಲಕ್ಕಾಗಿ ಬಿಳಾಮನ ತಪ್ಪಾದ ಮಾರ್ಗದಲ್ಲಿ ಮುನ್ನುಗ್ಗಿರುವುದರಿಂದಲೂ ಕೋರಹನ ದಂಗೆಕೋರ ಮಾತುಗಳಲ್ಲಿ ನಾಶವಾಗಿ ಹೋಗಿರುವುದರಿಂದಲೂ ಅವರ ಗತಿಯನ್ನು ಏನೆಂದು ಹೇಳಲಿ! 12  ಇವರು ನಿಮ್ಮ ಪ್ರೇಮಭೋಜನಗಳಲ್ಲಿ ನಿಮ್ಮೊಂದಿಗೆ ಭೋಜನಮಾಡುವಾಗ ನೀರಿನೊಳಗಿರುವ ಅಗೋಚರ​ವಾದ ಬಂಡೆಗಳು, ಭಯರಹಿತವಾಗಿ ಸ್ವತಃ ತಮ್ಮನ್ನೇ ಉಣಿಸಿಕೊಳ್ಳುವ ಕುರುಬರು, ಗಾಳಿಯಿಂದ ಅತ್ತಿತ್ತ ಬಡಿಸಿಕೊಂಡು ಹೋಗುವ ನೀರಿಲ್ಲದ ಮೋಡಗಳು, ತಕ್ಕಕಾಲದಲ್ಲಿ ಹಣ್ಣುಬಿಡದೆ ಎರಡು ಬಾರಿ ಸತ್ತು ಬೇರುಸಹಿತ ಕಿತ್ತು ಬಿದ್ದಿರುವ ಮರಗಳು; 13  ಅವಮಾನಕ್ಕಾಗಿರುವ ತಮ್ಮ ಸ್ವಂತ ಕಾರಣಗಳ ನೊರೆಯನ್ನು ಕಾರುವ ಸಮುದ್ರದ ಹುಚ್ಚು ಅಲೆಗಳು; ಯಾರ ಪಾಲಿಗೆ ಕಾರ್ಗತ್ತಲೆಯು ಸದಾಕಾಲಕ್ಕೂ ಕಾದಿರಿಸಲ್ಪಟ್ಟಿದೆಯೋ ಅಂಥ ನಿಗದಿತ ಪಥವಿಲ್ಲದ ನಕ್ಷತ್ರಗಳು ಆಗಿದ್ದಾರೆ. 14  ಹೌದು, ಆದಾಮನಿಗೆ ಏಳನೆಯ ತಲೆಯವನಾದ ಹನೋಕನು ಇಂಥವರ ವಿಷಯದಲ್ಲಿ ಸಹ ಪ್ರವಾದಿಸುತ್ತಾ, “ಇಗೋ, ಯೆಹೋವನು ಅಸಂಖ್ಯಾತರಾದ ತನ್ನ ಪವಿತ್ರ ದೂತರೊಂದಿಗೆ 15  ಎಲ್ಲರ ವಿರುದ್ಧ ನ್ಯಾಯತೀರ್ಪನ್ನು ವಿಧಿಸುವುದಕ್ಕೂ ಭಕ್ತಿಹೀನ ಜನರೆಲ್ಲರೂ ಭಕ್ತಿಹೀನವಾದ ರೀತಿಯಲ್ಲಿ ನಡಿಸಿದ ಭಕ್ತಿಹೀನ ಕೃತ್ಯಗಳ ವಿಷಯವಾಗಿ ಮತ್ತು ಭಕ್ತಿಹೀನ ಪಾಪಿಗಳು ಆತನಿಗೆ ವಿರುದ್ಧವಾಗಿ ನುಡಿದ ಆಘಾತಕರ ಸಂಗತಿಗಳ ವಿಷಯವಾಗಿ ಅವರನ್ನು ಖಂಡಿಸುವುದಕ್ಕೂ ಬಂದನು” ಎಂದು ಹೇಳಿದನು. 16  ಈ ಪುರುಷರು ಗುಣುಗುಟ್ಟುವವರೂ ಜೀವನದಲ್ಲಿನ ತಮ್ಮ ಗತಿಯ ಕುರಿತು ದೂರುವವರೂ ತಮ್ಮ ಸ್ವಂತ ಇಚ್ಛೆಗಳಿಗನುಸಾರ ನಡೆಯುವವರೂ ಆಗಿದ್ದಾರೆ; ಇವರು ತಮ್ಮ ಸ್ವಂತ ಪ್ರಯೋಜನಕ್ಕಾಗಿ ವ್ಯಕ್ತಿತ್ವಗಳನ್ನು ಹೊಗಳುವಾಗ ಇವರ ಬಾಯಿಗಳು ದೊಡ್ಡ ದೊಡ್ಡ ಮಾತುಗಳನ್ನಾಡುತ್ತವೆ. 17  ಪ್ರಿಯರೇ, ನೀವಾದರೋ ನಮ್ಮ ಕರ್ತನಾದ ಯೇಸು ಕ್ರಿಸ್ತನ ಅಪೊಸ್ತಲರು ಈ ಮೊದಲು ಹೇಳಿದ ವಿಷಯಗಳನ್ನು ಮನಸ್ಸಿಗೆ ತಂದುಕೊಳ್ಳಿರಿ; 18  “ಕಡೇ ಕಾಲದಲ್ಲಿ ಭಕ್ತಿಹೀನ ವಿಷಯಗಳಿಗಾಗಿ ತಮ್ಮ ಸ್ವಂತ ಇಚ್ಛೆಗಳನ್ನು ಅನುಸರಿಸಿ ನಡೆಯುವ ಕುಚೋದ್ಯಗಾರರು ಇರುವರು” ಎಂದು ಅವರು ನಿಮಗೆ ಹೇಳುತ್ತಿದ್ದರಲ್ಲಾ. 19  ಇವರು ವಿಭಜನೆಗಳನ್ನು ಉಂಟುಮಾಡುವವರೂ ​ಮೃಗೀಯರೂ ಆಧ್ಯಾತ್ಮಿಕತೆಯಿಲ್ಲದವರೂ ಆಗಿದ್ದಾರೆ. 20  ಪ್ರಿಯರೇ, ನೀವಾದರೋ ನಿಮ್ಮ ಅತಿ ಪವಿತ್ರವಾದ ನಂಬಿಕೆಯಲ್ಲಿ ನಿಮ್ಮನ್ನು ಬಲಪಡಿಸಿಕೊಳ್ಳುತ್ತಾ ಪವಿತ್ರಾತ್ಮದೊಂದಿಗೆ * ಪ್ರಾರ್ಥನೆಮಾಡುತ್ತಾ 21  ನಿತ್ಯ​ಜೀವವನ್ನು ದೃಷ್ಟಿಯಲ್ಲಿಟ್ಟವರಾಗಿ ನಮ್ಮ ಕರ್ತನಾದ ಯೇಸು ಕ್ರಿಸ್ತನ ಕರುಣೆಗಾಗಿ ಕಾಯುತ್ತಾ ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ. 22  ಇದಲ್ಲದೆ ಸಂದೇಹಗಳಿರುವ ಕೆಲವರಿಗೆ ಕರುಣೆಯನ್ನು ತೋರಿಸುತ್ತಾ ಇರಿ. 23  ಅವರನ್ನು ಬೆಂಕಿಯಿಂದ ಹೊರಗೆಳೆದು ರಕ್ಷಿಸಿರಿ. ಆದರೆ ಇತರರಿಗೆ ಭಯದಿಂದ ಕರುಣೆ ತೋರಿಸುತ್ತಾ ಇರಿ; ಅದೇ ಸಮಯದಲ್ಲಿ ಶರೀರಭಾವದಿಂದ ಕಲೆಗೊಂಡಿರುವ ಒಳ ಅಂಗಿಯನ್ನು ಸಹ ದ್ವೇಷಿಸಿರಿ. 24  ಎಡವಿಬೀಳುವುದರಿಂದ ನಿಮ್ಮನ್ನು ಕಾಪಾಡುವುದಕ್ಕೂ ತನ್ನ ಮಹಿಮೆಯ ಸನ್ನಿಧಿಯಲ್ಲಿ ನಿಮ್ಮನ್ನು ಮಹಾ ಆನಂದದೊಂದಿಗೆ ನಿರ್ದೋಷಿಗಳನ್ನಾಗಿ ನಿಲ್ಲಿಸುವುದಕ್ಕೂ ಶಕ್ತನಾಗಿರುವ 25  ನಮ್ಮ ರಕ್ಷಕನಾದ ಏಕಮಾತ್ರ ದೇವರಿಗೆ ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ ಮಹಿಮೆಯೂ ಘನತೆಯೂ ಶಕ್ತಿಯೂ ಅಧಿಕಾರವೂ ಗತಕಾಲದಿಂದಲೂ ಇದ್ದಂತೆ ಈಗಲೂ ನಿತ್ಯತೆಗೂ ಇರಲಿ. ಆಮೆನ್‌.

ಪಾದಟಿಪ್ಪಣಿ

ಯೂದ 4  ಅಥವಾ, “ಅಪಾರ ದಯೆಯನ್ನು.”
ಯೂದ 20  ಅಥವಾ, “ದೇವರ ಕಾರ್ಯಕಾರಿ ಶಕ್ತಿ.” ಪರಿಶಿಷ್ಟ 7 ನ್ನು ನೋಡಿ.