ಯಾಕೋಬ 5:1-20

5  ಐಶ್ವರ್ಯವಂತರೇ ಕೇಳಿರಿ; ನಿಮ್ಮ ಮೇಲೆ ಬರುತ್ತಿರುವ ದುರವಸ್ಥೆಗಳಿಗಾಗಿ ಗೋಳಾಡುತ್ತಾ ಕಣ್ಣೀರಿಡಿರಿ.  ನಿಮ್ಮ ಐಶ್ವರ್ಯವು ನಶಿಸಿಹೋಗಿದೆ ಮತ್ತು ನಿಮ್ಮ ಮೇಲಂಗಿಗಳಿಗೆ ಹುಳುಹಿಡಿದಿದೆ.  ನಿಮ್ಮ ಚಿನ್ನ ಬೆಳ್ಳಿಗಳಿಗೆ ತುಕ್ಕು ಹಿಡಿದಿದೆ ಮತ್ತು ಅವುಗಳ ತುಕ್ಕು ನಿಮ್ಮ ವಿರುದ್ಧವಾದ ಸಾಕ್ಷಿಯಂತಿದ್ದು ನಿಮ್ಮ ಮಾಂಸಲ ಭಾಗಗಳನ್ನು ತಿಂದುಬಿಡುವುದು. ಕಡೇ ದಿವಸಗಳಲ್ಲಿ ನೀವು ಬೆಂಕಿಯಂತಿರುವುದನ್ನೇ ಕೂಡಿಸಿಟ್ಟುಕೊಂಡಿದ್ದೀರಿ.  ಇಗೋ, ನಿಮ್ಮ ಹೊಲಗಳನ್ನು ಕೊಯ್ದ ಕೆಲಸಗಾರರಿಗೆ ಸೇರತಕ್ಕ ಕೂಲಿಯನ್ನು ನೀವು ಹಿಡಿದಿಟ್ಟುಕೊಂಡಿರುವುದರಿಂದ, ಆ ಕೂಲಿಯು ಕೂಗಿಕೊಳ್ಳುತ್ತಿದೆ ಮತ್ತು ಕೊಯ್ಲುಗಾರರು ಸಹಾಯಕ್ಕಾಗಿ ಕೂಗುತ್ತಿರುವುದು ಸೇನಾಧೀಶ್ವರನಾದ ಯೆಹೋವನ ಕಿವಿಗಳಿಗೆ ಬಿದ್ದಿದೆ.  ಭೂಮಿಯ ಮೇಲೆ ನೀವು ಐಷಾರಾಮವಾಗಿ ಜೀವಿಸಿದ್ದೀರಿ ಮತ್ತು ಇಂದ್ರಿಯ ಸುಖಭೋಗಗಳ ಹಿಂದೆ ಹೋಗಿದ್ದೀರಿ. ವಧೆಯ ದಿನದಂದು ನೀವು ನಿಮ್ಮ ಹೃದಯಗಳನ್ನು ಕೊಬ್ಬಿಸಿಕೊಂಡಿದ್ದೀರಿ.  ನೀವು ನೀತಿವಂತನನ್ನು ಖಂಡಿಸಿದ್ದೀರಿ, ಅವನನ್ನು ಕೊಂದುಹಾಕಿದ್ದೀರಿ. ಅವನು ನಿಮ್ಮನ್ನು ಎದುರಿಸುತ್ತಿಲ್ಲವೆ?  ಆದುದರಿಂದ ಸಹೋದರರೇ ಕರ್ತನ ಸಾನ್ನಿಧ್ಯದ ವರೆಗೆ ತಾಳ್ಮೆಯನ್ನು ಅಭ್ಯಸಿಸಿರಿ. ರೈತನನ್ನು ನೋಡಿರಿ. ಅವನು ಭೂಮಿಯ ಅಮೂಲ್ಯವಾದ ಫಲಕ್ಕಾಗಿ ಕಾಯುತ್ತಾ ಮುಂಗಾರು ಮತ್ತು ಹಿಂಗಾರು ಮಳೆಯು ಬರುವ ವರೆಗೆ ತಾಳ್ಮೆಯಿಂದಿರುತ್ತಾನೆ.  ನೀವು ಸಹ ತಾಳ್ಮೆಯನ್ನು ಅಭ್ಯಸಿಸಿರಿ; ಕರ್ತನ ಸಾನ್ನಿಧ್ಯವು ಹತ್ತಿರವಾಗಿರುವುದರಿಂದ ನಿಮ್ಮ ಹೃದಯಗಳನ್ನು ದೃಢಪಡಿಸಿಕೊಳ್ಳಿರಿ.  ಸಹೋದರರೇ, ನೀವು ತೀರ್ಪನ್ನು ಹೊಂದದಿರಲಿಕ್ಕಾಗಿ ಒಬ್ಬರು ಇನ್ನೊಬ್ಬರ ವಿರುದ್ಧ ಗೊಣಗಬೇಡಿರಿ. ಇಗೋ ನ್ಯಾಯಾಧಿಪತಿಯು ಬಾಗಿಲಿನ ಮುಂದೆ ನಿಂತಿದ್ದಾನೆ. 10  ಸಹೋದರರೇ, ​ಕೆಡುಕನ್ನು ಅನುಭವಿಸುವುದರಲ್ಲಿಯೂ ತಾಳ್ಮೆಯನ್ನು ಅಭ್ಯಸಿಸುವುದರಲ್ಲಿಯೂ ಯೆಹೋವನ ಹೆಸರಿನಲ್ಲಿ ಮಾತಾಡಿದ ಪ್ರವಾದಿಗಳನ್ನೇ ಮಾದರಿ ಮಾಡಿಕೊಳ್ಳಿರಿ. 11  ಇಗೋ, ತಾಳಿಕೊಂಡಿರುವವರನ್ನು ನಾವು ಸಂತೋಷಿತರೆಂದು ಹೇಳುತ್ತೇವೆ. ನೀವು ಯೋಬನ ತಾಳ್ಮೆಯ ಕುರಿತು ಕೇಳಿಸಿಕೊಂಡಿದ್ದೀರಿ ಮತ್ತು ಯೆಹೋವನು ಅವನಿಗೆ ಕೊಟ್ಟಂಥ ಪ್ರತಿಫಲವನ್ನು ನೋಡಿ, ಯೆಹೋವನು ಕೋಮಲವಾದ ಮಮತೆಯುಳ್ಳವನೂ ಕರುಣಾಳುವೂ ಆಗಿದ್ದಾನೆ ಎಂಬುದನ್ನು ತಿಳಿದಿದ್ದೀರಿ. 12  ಎಲ್ಲಕ್ಕಿಂತಲೂ ಮುಖ್ಯವಾಗಿ, ನನ್ನ ಸಹೋದರರೇ, ಆಣೆಯಿಡುವುದನ್ನು ನಿಲ್ಲಿಸಿರಿ. ಹೌದು, ಆಕಾಶದ ಹೆಸರಿನಲ್ಲಾಗಲಿ ಭೂಮಿಯ ಹೆಸರಿನಲ್ಲಾಗಲಿ ಇನ್ನಾವುದರ ಹೆಸರಿನಲ್ಲಾಗಲಿ ಆಣೆಯಿಡಬೇಡಿರಿ. ನೀವು ತೀರ್ಪಿಗೆ ಒಳಗಾಗದಂತೆ ನಿಮ್ಮ ಮಾತು ಹೌದಾದರೆ ಹೌದು, ಅಲ್ಲವಾದರೆ ಅಲ್ಲ ಎಂದಿರಲಿ. 13  ನಿಮ್ಮಲ್ಲಿ ಕೇಡನ್ನು ಅನುಭವಿಸುವವನು ಯಾವನಾದರೂ ಇದ್ದಾನೊ? ಅವನು ಪ್ರಾರ್ಥನೆಮಾಡುತ್ತಾ ಇರಲಿ. ನಿಮ್ಮಲ್ಲಿ ಉಲ್ಲಾಸದಿಂದಿರುವವನು ​ಯಾವನಾದರೂ ಇದ್ದಾನೊ? ಅವನು ಕೀರ್ತನೆಗಳನ್ನು ಹಾಡಲಿ. 14  ನಿಮ್ಮಲ್ಲಿ ಅಸ್ವಸ್ಥನು ಯಾವನಾದರೂ ಇದ್ದಾನೊ? ಅವನು ಸಭೆಯ ಹಿರೀಪುರುಷರನ್ನು ತನ್ನ ಬಳಿಗೆ ಕರೆಸಿ​ಕೊಳ್ಳಲಿ ಮತ್ತು ಅವರು ಯೆಹೋವನ ಹೆಸರಿನಲ್ಲಿ ಅವನಿಗೆ ಎಣ್ಣೆಯನ್ನು ಹಚ್ಚಿ ಅವನಿಗೋಸ್ಕರ ಪ್ರಾರ್ಥಿಸಲಿ. 15  ನಂಬಿಕೆಯಿಂದ ಮಾಡಿದ ಪ್ರಾರ್ಥನೆಯು ಅಸ್ವಸ್ಥನನ್ನು ಗುಣಪಡಿಸುವುದು ಮತ್ತು ಯೆಹೋವನು ಅವನನ್ನು ಎಬ್ಬಿಸುವನು. ಇದಲ್ಲದೆ ಅವನು ಪಾಪಗಳನ್ನು ಮಾಡಿರುವುದಾದರೆ ಅವು ಅವನಿಗೆ ಕ್ಷಮಿಸಲ್ಪ​ಡುವವು. 16  ಆದುದರಿಂದ ನೀವು ಗುಣಹೊಂದುವಂತೆ ನಿಮ್ಮ ಪಾಪಗಳನ್ನು ಒಬ್ಬರಿಗೊಬ್ಬರು ಮುಕ್ತಮನಸ್ಸಿನಿಂದ ನಿವೇದಿಸಿಕೊಂಡು ಒಬ್ಬರಿಗೋಸ್ಕರ ಒಬ್ಬರು ಪ್ರಾರ್ಥಿಸಿರಿ. ಒಬ್ಬ ನೀತಿವಂತನು ಮಾಡುವ ಯಾಚನೆಗೆ ಫಲಸಿಗುವಾಗ ಅದಕ್ಕೆ ಬಹಳ ಬಲವಿದೆ. 17  ಎಲೀಯನು ನಮ್ಮಂಥ ಭಾವನೆಗಳಿದ್ದ ಮನುಷ್ಯನಾಗಿದ್ದರೂ ಅವನು ಪ್ರಾರ್ಥನೆಯಲ್ಲಿ ಮಳೆ ಬರಬಾರದೆಂದು ಪ್ರಾರ್ಥಿಸಿದಾಗ ಮೂರು ವರ್ಷ ಆರು ತಿಂಗಳ ವರೆಗೆ ದೇಶದಲ್ಲಿ ಮಳೆ ಬೀಳಲಿಲ್ಲ. 18  ಅವನು ಪುನಃ ಪ್ರಾರ್ಥನೆ​ಮಾಡಿದಾಗ ಆಕಾಶವು ಮಳೆಗರೆಯಿತು ಮತ್ತು ಭೂಮಿಯು ಫಲವನ್ನು ಕೊಟ್ಟಿತು. 19  ನನ್ನ ಸಹೋದರರೇ, ನಿಮ್ಮಲ್ಲಿ ಯಾವನಾದರೂ ಸತ್ಯದಿಂದ ದಾರಿತಪ್ಪಿರುವುದಾದರೆ ಮತ್ತು ಇನ್ನೊಬ್ಬನು ಅವನನ್ನು ಸನ್ಮಾರ್ಗಕ್ಕೆ ತರುವುದಾದರೆ 20  ಅಂಥವನು ಆ ಪಾಪಿಯನ್ನು ಅವನ ತಪ್ಪು ಮಾರ್ಗದಿಂದ ತಿರುಗಿಸಿ ಅವನ ಪ್ರಾಣವನ್ನು ಮರಣದಿಂದ ತಪ್ಪಿಸುವನು ಮತ್ತು ಬಹು ಪಾಪಗಳನ್ನು ಮುಚ್ಚುವನು ಎಂಬುದನ್ನು ತಿಳಿದುಕೊಳ್ಳಿರಿ.

ಪಾದಟಿಪ್ಪಣಿ