ಮಾರ್ಕ 9:1-50

9  ಮತ್ತು ಅವನು ಮುಂದುವರಿಸಿ ಅವರಿಗೆ, “ಇಲ್ಲಿ ನಿಂತಿರುವವರಲ್ಲಿ ಕೆಲವರು ಮೊದಲು ದೇವರ ರಾಜ್ಯವು ಆಗಲೇ ಅಧಿಕಾರಕ್ಕೆ ಬಂದಿರುವುದನ್ನು ನೋಡುವ ವರೆಗೆ ಮರಣಹೊಂದುವುದೇ ಇಲ್ಲ ಎಂದು ನಿಮಗೆ ನಿಜವಾಗಿ ಹೇಳುತ್ತೇನೆ” ಅಂದನು.  ಅಂತೆಯೇ ಆರು ದಿನಗಳ ತರುವಾಯ ಯೇಸುವು ಪೇತ್ರ ಯಾಕೋಬ ಮತ್ತು ಯೋಹಾನರನ್ನು ಮಾತ್ರ ತನ್ನೊಂದಿಗೆ ಕರೆದುಕೊಂಡು ಎತ್ತರವಾದ ಒಂದು ಬೆಟ್ಟಕ್ಕೆ ಹೋದನು. ಅಲ್ಲಿ ಅವನು ಅವರ ಮುಂದೆ ರೂಪಾಂತರಗೊಂಡನು.  ಮತ್ತು ಅವನ ಮೇಲಂಗಿಗಳು ಭೂಮಿಯ ಮೇಲಿರುವ ಯಾವ ಅಗಸನೂ ಬಿಳುಪು ಮಾಡಲಾರದಷ್ಟು ಬೆಳ್ಳಗೆ ಹೊಳೆಯುತ್ತಿದ್ದವು.  ಮಾತ್ರವಲ್ಲದೆ ಎಲೀಯನೂ ಮೋಶೆಯೂ ಯೇಸುವಿನೊಂದಿಗೆ ಮಾತಾಡುತ್ತಿರುವುದನ್ನು ಅವರು ಕಂಡರು.  ಆಗ ಪೇತ್ರನು ಯೇಸುವಿಗೆ, “ರಬ್ಬಿಯೇ,* ನಾವು ಇಲ್ಲೇ ಇರುವುದು ಒಳ್ಳೇದು; ಆದುದರಿಂದ ​ನಿನಗೊಂದು ಮೋಶೆಗೊಂದು ಮತ್ತು ಎಲೀಯನಿಗೊಂದರಂತೆ ನಾವು ಮೂರು ಗುಡಾರಗಳನ್ನು ಕಟ್ಟೋಣ” ಎಂದು ಹೇಳಿದನು.  ವಾಸ್ತವದಲ್ಲಿ ಏನು ಹೇಳಬೇಕೆಂದು ತಿಳಿಯದೆ ಅವನು ಹೀಗೆ ಮಾತಾಡಿದನು; ಏಕೆಂದರೆ ಅವರು ಬಹಳವಾಗಿ ಹೆದರಿದ್ದರು.  ಅಷ್ಟರಲ್ಲಿ ಮೋಡವು ಅವರ ಮೇಲೆ ಕವಿಯಿತು. ಮತ್ತು ಆ ಮೋಡದೊಳಗಿಂದ, “ಇವನು ಪ್ರಿಯನಾಗಿರುವ ನನ್ನ ಮಗನು, ಇವನ ಮಾತಿಗೆ ಕಿವಿಗೊಡಿರಿ” ಎಂಬ ವಾಣಿಯು ಕೇಳಿಬಂತು.  ಆದರೂ ಕೂಡಲೆ ಅವರು ಸುತ್ತಲೂ ನೋಡಿದಾಗ ತಮ್ಮ ಸಂಗಡ ಯೇಸುವನ್ನೇ ಹೊರತು ಬೇರೆ ಯಾರನ್ನೂ ಕಾಣಲಿಲ್ಲ.  ಅವರು ಬೆಟ್ಟದಿಂದ ಇಳಿದು​ಬರುತ್ತಿದ್ದಾಗ, ಮನುಷ್ಯಕುಮಾರನು ಸತ್ತವರೊಳಗಿಂದ ಎದ್ದುಬರುವ ತನಕ ತಾವು ಕಂಡದ್ದನ್ನು ಯಾರಿಗೂ ತಿಳಿಸಬಾರದೆಂದು ಅವನು ಅವರಿಗೆ ಖಂಡಿತವಾಗಿ ಆಜ್ಞಾಪಿಸಿದನು. 10  ಅವರು ಈ ಮಾತನ್ನು ಹೃದಯಕ್ಕೆ ತೆಗೆದುಕೊಂಡರಾದರೂ ಸತ್ತುಜೀವಿತನಾಗಿ ಎದ್ದುಬರುವುದೆಂದರೆ ಏನು ಎಂದು ತಮ್ಮತಮ್ಮೊಳಗೆ ಚರ್ಚಿಸಿದರು. 11  ಇದಲ್ಲದೆ ಅವರು, “ಮೊದಲು ಎಲೀಯನು ಬರಬೇಕು ಎಂದು ಶಾಸ್ತ್ರಿಗಳು ಏಕೆ ಹೇಳುತ್ತಾರೆ?” ಎಂದು ಅವನನ್ನು ಪ್ರಶ್ನಿಸಿದರು. 12  ಅದಕ್ಕೆ ಅವನು ಅವರಿಗಂದದ್ದು: “ಎಲೀಯನು ಮೊದಲು ಬರುವನು ಮತ್ತು ಎಲ್ಲವನ್ನೂ ಪುನಸ್ಸ್ಥಾಪಿಸುವನು ನಿಜ; ಆದರೆ ಮನುಷ್ಯಕುಮಾರನು ಅನೇಕ ಕಷ್ಟಗಳನ್ನು ಅನುಭವಿಸಬೇಕು ಮತ್ತು ಹೀನೈಸಲ್ಪಡಬೇಕು ಎಂದು ಅವನ ವಿಷಯವಾಗಿ ಏಕೆ ಬರೆಯಲಾಗಿದೆ? 13  ನಾನು ನಿಮಗೆ ಹೇಳುವುದೇನೆಂದರೆ, ಎಲೀಯನು ಈಗಾಗಲೇ ಬಂದಿದ್ದಾನೆ ಮತ್ತು ಅವನ ಕುರಿತಾಗಿ ಬರೆದಿರುವ ಪ್ರಕಾರವೇ ಜನರು ತಮಗೆ ಇಷ್ಟಬಂದಂತೆ ಅನೇಕ ಸಂಗತಿ​ಗಳನ್ನು ಅವನಿಗೆ ಮಾಡಿದರು.” 14  ತರುವಾಯ ಅವರು ಇತರ ಶಿಷ್ಯರ ಬಳಿಗೆ ಬಂದಾಗ ಅವರ ಸುತ್ತಲೂ ಜನರ ದೊಡ್ಡ ಗುಂಪು ಇರುವುದನ್ನೂ ಶಾಸ್ತ್ರಿಗಳು ಅವರೊಂದಿಗೆ ವಾದಿಸುತ್ತಿರುವುದನ್ನೂ ಕಂಡರು. 15  ಜನರೆಲ್ಲರು ಅವನನ್ನು ನೋಡಿದ ಕೂಡಲೆ ಆಶ್ಚರ್ಯಪಟ್ಟು ಅವನ ಬಳಿಗೆ ಓಡಿ ಬಂದು ಅವನನ್ನು ವಂದಿಸಿದರು. 16  ಅವನು ಅವರನ್ನು, “ನೀವು ಅವರೊಂದಿಗೆ ಯಾವ ವಿಷಯವಾಗಿ ವಾದಿಸುತ್ತಿದ್ದೀರಿ?” ಎಂದು ಕೇಳಿದನು. 17  ಆ ಗುಂಪಿನಲ್ಲಿದ್ದ ಒಬ್ಬನು, “ಬೋಧಕನೇ, ನನ್ನ ಮಗನನ್ನು ನಾನು ನಿನ್ನ ಬಳಿಗೆ ಕರೆದುಕೊಂಡು ಬಂದೆ, ಏಕೆಂದರೆ ಅವನಿಗೆ ಮೂಕದೆವ್ವವು ಹಿಡಿದಿದೆ; 18  ಮತ್ತು ಅದು ಎಲ್ಲಿ ಅವನ ಮೇಲೆ ಬಂದರೂ ಅವನನ್ನು ನೆಲಕ್ಕೆ ಕೆಡವುತ್ತದೆ; ಆಗ ಅವನು ನೊರೆಕಾರುತ್ತಾ ಹಲ್ಲು ಕಡಿಯುತ್ತಾ ತನ್ನ ಬಲವನ್ನೆಲ್ಲ ಕಳೆದುಕೊಳ್ಳುತ್ತಾನೆ. ಅದನ್ನು ಬಿಡಿಸುವಂತೆ ನಾನು ನಿನ್ನ ಶಿಷ್ಯರಿಗೆ ಕೇಳಿಕೊಂಡೆ, ಆದರೆ ಅವರಿಂದ ಸಾಧ್ಯವಾಗಲಿಲ್ಲ” ಎಂದು ಹೇಳಿದನು. 19  ಅದಕ್ಕೆ ಅವನು ಅವರಿಗೆ, “ನಂಬಿಕೆಯಿಲ್ಲದ ಸಂತತಿಯೇ, ನಾನು ಇನ್ನೆಷ್ಟು ಸಮಯ ನಿಮ್ಮೊಂದಿಗಿರಬೇಕು? ಇನ್ನೆಷ್ಟು ಸಮಯ ನಿಮ್ಮನ್ನು ಸಹಿಸಿಕೊಳ್ಳಬೇಕು? ಅವನನ್ನು ನನ್ನ ಬಳಿಗೆ ತನ್ನಿರಿ” ಎಂದು ಹೇಳಿದನು. 20  ಆಗ ಅವರು ಆ ಹುಡುಗನನ್ನು ಅವನ ಬಳಿಗೆ ಕರೆ​ತಂದರು. ಆದರೆ ಅವನನ್ನು ನೋಡಿದ ಕೂಡಲೆ ದೆವ್ವವು ಆ ಹುಡುಗನನ್ನು ಒದ್ದಾಡಿಸಿದ್ದರಿಂದ ಅವನು ನೆಲಕ್ಕೆ ಬಿದ್ದು ನೊರೆಕಾರುತ್ತಾ ಹೊರಳಾಡಿದನು. 21  ಅವನು ಹುಡುಗನ ತಂದೆಗೆ, “ಎಷ್ಟು ಸಮಯದಿಂದ ಇವನಿಗೆ ಹೀಗಾಗುತ್ತಿದೆ?” ಎಂದು ಕೇಳಿದನು. ಅದಕ್ಕೆ ಅವನು, “ಬಾಲ್ಯದಿಂದಲೇ ಹೀಗಿದೆ; 22  ಅದು ಅವನನ್ನು ಕೊಲ್ಲಬೇಕೆಂದು ಆಗಾಗ ಬೆಂಕಿಯಲ್ಲಿಯೂ ನೀರಿನಲ್ಲಿಯೂ ಹಾಕುತ್ತಿತ್ತು. ನಿನ್ನಿಂದ ಏನಾದರೂ ಮಾಡಸಾಧ್ಯವಿರುವಲ್ಲಿ ನಮ್ಮ ಮೇಲೆ ಕನಿಕರಪಟ್ಟು ನಮಗೆ ಸಹಾಯಮಾಡು” ಎಂದು ಕೇಳಿಕೊಂಡನು. 23  ಯೇಸು ಅವನಿಗೆ, “ ‘ನಿನ್ನಿಂದ ಸಾಧ್ಯ​ವಿರುವಲ್ಲಿ’ ಎಂದು ಹೇಳುತ್ತೀಯೊ! ಒಬ್ಬನಿಗೆ ನಂಬಿಕೆ ಇರುವುದಾದರೆ ಎಲ್ಲವೂ ಸಾಧ್ಯ” ಎಂದು ಹೇಳಿದನು. 24  ಕೂಡಲೆ ಆ ಹುಡುಗನ ತಂದೆಯು, “ನನ್ನಲ್ಲಿ ನಂಬಿಕೆಯಿದೆ! ಅದನ್ನು ಇನ್ನಷ್ಟು ಬಲಗೊಳಿ​ಸಲು ಸಹಾಯಮಾಡು!” ಎಂದು ಕೂಗಿ ​ಹೇಳಿದನು. 25  ಜನರು ಗುಂಪುಗೂಡಿ ಓಡಿ​ಬರುವುದನ್ನು ಗಮನಿಸಿ ಯೇಸು ಆ ದೆವ್ವವನ್ನು ಗದರಿಸಿ, “ಎಲೈ ಬಾಯಿಬಾರದ ಕಿವುಡು ದೆವ್ವವೇ, ಅವನನ್ನು ಬಿಟ್ಟು ಹೊರಗೆ ಬರುವಂತೆ ಮತ್ತು ಇನ್ನೆಂದೂ ಅವನನ್ನು ಪ್ರವೇಶಿಸದಂತೆ ನಾನು ನಿನಗೆ ಅಪ್ಪಣೆ​ಕೊಡುತ್ತೇನೆ” ಎಂದು ಹೇಳಿದನು. 26  ಆಗ ಅದು ಕೂಗುತ್ತಾ ಅವನನ್ನು ಬಹಳವಾಗಿ ಒದ್ದಾಡಿಸಿ ಬಿಟ್ಟುಹೋಯಿತು; ಆ ಹುಡುಗನು ಸತ್ತವನಂತೆ ಬಿದ್ದಿದ್ದರಿಂದ ​ಅನೇಕರು, “ಅವನು ಸತ್ತಿದ್ದಾನೆ!” ಎಂದು ಹೇಳಿದರು. 27  ಆದರೆ ಯೇಸು ಅವನ ಕೈಹಿಡಿದು ಎಬ್ಬಿಸಿದಾಗ ಅವನು ಎದ್ದುನಿಂತನು. 28  ಅನಂತರ ಅವನು ಒಂದು ಮನೆಯನ್ನು ಪ್ರವೇಶಿಸಿದಾಗ ಅವನ ಶಿಷ್ಯರು ಅವನಿಗೆ ಪ್ರತ್ಯೇಕವಾಗಿ, “ನಮ್ಮಿಂದ ಯಾಕೆ ಅದನ್ನು ಬಿಡಿಸಲು ಆಗಲಿಲ್ಲ?” ಎಂದು ಕೇಳಿದರು. 29  ಅದಕ್ಕೆ ಅವನು ಅವರಿಗೆ, “ಈ ರೀತಿಯ ದೆವ್ವಗಳನ್ನು ಪ್ರಾರ್ಥನೆ​ಯಿಂದಲೇ ಹೊರತು ಬೇರೆ ಯಾವುದರಿಂದಲೂ ಬಿಡಿಸಲಾಗುವುದಿಲ್ಲ” ಎಂದು ಹೇಳಿದನು. 30  ಅವರು ಅಲ್ಲಿಂದ ಹೊರಟು ಗಲಿಲಾಯ ಮಾರ್ಗವಾಗಿ ಪ್ರಯಾಣ ​ಬೆಳೆಸಿದರು, ಆದರೆ ಇದು ಯಾರಿಗೂ ತಿಳಿಯ​ಬಾರದೆಂದು ಅವನು ಬಯಸಿದನು. 31  ಏಕೆಂದರೆ ಅವನು ತನ್ನ ಶಿಷ್ಯರಿಗೆ, “ಮನುಷ್ಯಕುಮಾರನನ್ನು ಜನರ ಕೈಗೆ ಒಪ್ಪಿಸಿಕೊಡಲಾಗುತ್ತದೆ ಮತ್ತು ಅವರು ಅವನನ್ನು ಕೊಲ್ಲುವರು; ಕೊಲ್ಲಲ್ಪಟ್ಟರೂ ಮೂರು ದಿನಗಳ ತರುವಾಯ ಏಳುವನು” ಎಂದು ಬೋಧಿಸುತ್ತಿದ್ದನು. 32  ಆದರೂ ಅವರು ಅವನ ಮಾತನ್ನು ಅರ್ಥಮಾಡಿಕೊಳ್ಳಲಿಲ್ಲ ಮತ್ತು ಅವನನ್ನು ಕೇಳುವುದಕ್ಕೆ ಅಂಜಿದರು. 33  ಮತ್ತು ಅವರು ಕಪೆರ್ನೌಮಿಗೆ ಬಂದರು. ಅವನು ಮನೆಯ ಒಳಗಿದ್ದಾಗ ಅವರಿಗೆ, “ನೀವು ದಾರಿಯಲ್ಲಿ ಯಾವುದರ ಕುರಿತು ವಾಗ್ವಾದ ಮಾಡುತ್ತಿದ್ದಿರಿ?” ಎಂದು ಕೇಳಿದನು. 34  ಅದಕ್ಕೆ ಅವರು ಏನೂ ಹೇಳದೆ ಸುಮ್ಮನಿದ್ದರು; ಏಕೆಂದರೆ ಅವರು ತಮ್ಮೊಳಗೆ ಯಾರು ದೊಡ್ಡವನೆಂದು ದಾರಿಯಲ್ಲಿ ವಾಗ್ವಾದ ಮಾಡಿಕೊಂಡಿದ್ದರು. 35  ಆದುದರಿಂದ ಅವನು ಕುಳಿತುಕೊಂಡು ಹನ್ನೆರಡು ಮಂದಿಯನ್ನು ಕರೆದು ಅವರಿಗೆ, “ಯಾವನಾದರೂ ಮೊದಲಿನವನಾಗಬೇಕೆಂದು ಬಯಸಿದರೆ ಅವನು ಎಲ್ಲರಿಗಿಂತ ಕಡೆಯವನೂ ಎಲ್ಲರ ಸೇವಕನೂ ಆಗಿರಬೇಕು” ಎಂದು ಹೇಳಿದನು. 36  ಮತ್ತು ಅವನು ಒಂದು ಚಿಕ್ಕ ಮಗುವನ್ನು ಕರೆದು ಅವರ ಮಧ್ಯದಲ್ಲಿ ನಿಲ್ಲಿಸಿ ಅದನ್ನು ಅಪ್ಪಿಕೊಂಡು, 37  “ಯಾವನಾದರೂ ನನ್ನ ಹೆಸರಿನಲ್ಲಿ ಇಂಥ ಚಿಕ್ಕ ಮಕ್ಕಳಲ್ಲಿ ಒಂದನ್ನು ಸೇರಿಸಿಕೊಂಡರೆ ನನ್ನನ್ನು ಸೇರಿಸಿ​ಕೊಂಡಂತಾಗುವುದು; ಮತ್ತು ಯಾವನಾದರೂ ನನ್ನನ್ನು ಸೇರಿಸಿಕೊಂಡರೆ ನನ್ನನ್ನು ಮಾತ್ರವಲ್ಲ ನನ್ನನ್ನು ಕಳುಹಿಸಿದಾತನನ್ನೂ ಸೇರಿಸಿಕೊಂಡಂತಾಗುವುದು” ಎಂದು ಹೇಳಿದನು. 38  ಆಗ ಯೋಹಾನನು, “ಬೋಧಕನೇ, ನಿನ್ನ ಹೆಸರನ್ನು ಉಪಯೋಗಿಸಿ ದೆವ್ವಗಳನ್ನು ಬಿಡಿಸುತ್ತಿದ್ದ ಒಬ್ಬ ಮನುಷ್ಯನನ್ನು ನಾವು ಕಂಡೆವು; ಅವನು ನಮ್ಮ ಜೊತೆಯವನಲ್ಲದ ಕಾರಣ ನಾವು ಅವನನ್ನು ತಡೆಯಲು ಪ್ರಯತ್ನಿಸಿದೆವು” ಎಂದು ಹೇಳಿದನು. 39  ಅದಕ್ಕೆ ಯೇಸು ಹೇಳಿದ್ದು: “ಅವನನ್ನು ತಡೆಯಲು ಪ್ರಯತ್ನಿಸಬೇಡಿ; ಏಕೆಂದರೆ ನನ್ನ ಹೆಸರಿನ ಆಧಾರದ ಮೇರೆಗೆ ಮಹತ್ಕಾರ್ಯವನ್ನು ಮಾಡಿ ನನ್ನನ್ನು ಒಡನೆ ದೂಷಿಸಲು ಶಕ್ತನಾಗುವವನು ಯಾವನೂ ಇರುವುದಿಲ್ಲ; 40  ನಮ್ಮನ್ನು ಎದುರಿಸದವನು ನಮ್ಮ ಪಕ್ಷದವನೇ. 41  ನೀವು ಕ್ರಿಸ್ತನವರಾಗಿರುವ ಕಾರಣ ನಿಮಗೆ ಯಾರಾದರೂ ಒಂದು ತಂಬಿಗೆ ನೀರನ್ನು ಕೊಟ್ಟರೂ, ಅವನು ಅದಕ್ಕೆ ತಕ್ಕ ಪ್ರತಿಫಲ​ವನ್ನು ಕಳೆದುಕೊಳ್ಳುವುದೇ ಇಲ್ಲ ಎಂದು ನಿಮಗೆ ನಿಜವಾಗಿ ಹೇಳುತ್ತೇನೆ. 42  ಆದರೆ ನಂಬುವ ಈ ಚಿಕ್ಕವರಲ್ಲಿ ಒಬ್ಬನನ್ನು ಯಾವನಾದರೂ ಎಡವಿಸುವುದಾದರೆ, ಅಂಥವನ ಕೊರಳಿಗೆ ಕತ್ತೆಯಿಂದ ಎಳೆಯಲ್ಪಡುವಂಥ ಬೀಸುವ ಕಲ್ಲನ್ನು ಕಟ್ಟಿ ಸಮುದ್ರದಲ್ಲಿ ಎಸೆಯುವುದೇ ಲೇಸು. 43  “ನಿನ್ನ ಕೈ ನಿನ್ನನ್ನು ಎಂದಾದರೂ ಎಡವಿಸುವುದಾದರೆ ಅದನ್ನು ಕತ್ತರಿಸಿಬಿಡು; ನೀನು ಎರಡು ಕೈಗಳುಳ್ಳವನಾಗಿ ಗೆಹೆನ್ನಕ್ಕೆ,* ಎಂದಿಗೂ ಆರಿಸಲಾಗದ ಬೆಂಕಿಗೆ ಹಾಕಲ್ಪಡುವ ಬದಲು ಕೈಕಳೆದುಕೊಂಡವನಾಗಿ ಜೀವವನ್ನು ಪಡೆಯುವುದೇ ಲೇಸು. 44  *​—⁠​—⁠ 45  ನಿನ್ನ ಪಾದವು ನಿನ್ನನ್ನು ಎಡವಿಸುವುದಾದರೆ ಅದನ್ನು ಕತ್ತರಿಸಿಬಿಡು; ನೀನು ಎರಡು ಪಾದಗಳುಳ್ಳವನಾಗಿ ಗೆಹೆನ್ನಕ್ಕೆ ಎಸೆಯಲ್ಪಡುವ ಬದಲು ಕುಂಟನಾಗಿ ಜೀವವನ್ನು ಪಡೆಯುವುದೇ ಲೇಸು. 46  *​—⁠​—⁠ 47  ನಿನ್ನ ಕಣ್ಣು ನಿನ್ನನ್ನು ಎಡವಿಸುವುದಾದರೆ ಅದನ್ನು ಕಿತ್ತು​ಬಿಸಾಡು; ನೀನು ಎರಡು ಕಣ್ಣುಗಳುಳ್ಳವನಾಗಿ ಗೆಹೆನ್ನಕ್ಕೆ ಎಸೆಯಲ್ಪಡುವ ಬದಲು ಒಂದೇ ಕಣ್ಣುಳ್ಳವನಾಗಿ ದೇವರ ರಾಜ್ಯವನ್ನು ಪ್ರವೇಶಿಸುವುದೇ ಲೇಸು. 48  ಅಲ್ಲಿ ಅವರನ್ನು ಕಡಿಯುವ ಮರಿಹುಳು ಸಾಯುವುದಿಲ್ಲ ಮತ್ತು ಬೆಂಕಿಯು ಆರುವುದಿಲ್ಲ. 49  “ಪ್ರತಿಯೊಬ್ಬನೂ ಬೆಂಕಿಯಿಂದ ಉಪ್ಪೂರಿಸಲ್ಪಡಬೇಕು. 50  ಉಪ್ಪು ಒಳ್ಳೆಯದು; ಆದರೆ ಉಪ್ಪು ತನ್ನ ಸಾರವನ್ನು ಕಳೆದುಕೊಳ್ಳುವುದಾದರೆ ಇನ್ನಾವುದರಿಂದ ನೀವು ಅದನ್ನು ರುಚಿಗೊಳಿಸುವಿರಿ? ನಿಮ್ಮೊಳಗೆ ಉಪ್ಪು ಇರುವವರಾಗಿರಿ, ಒಬ್ಬರೊಡನೊಬ್ಬರು ಶಾಂತಿಯಿಂದಿರಿ.”

ಪಾದಟಿಪ್ಪಣಿ

ಮಾರ್ಕ 9:5 ಮತ್ತಾ 23:7ರ ಪಾದಟಿಪ್ಪಣಿಯನ್ನು ನೋಡಿ.
ಮಾರ್ಕ 9:43 ಮತ್ತಾ 5:22ರ ಪಾದಟಿಪ್ಪಣಿಯನ್ನು ನೋಡಿ.
ಮಾರ್ಕ 9:44 ಮತ್ತಾ 17:21ರ ಪಾದಟಿಪ್ಪಣಿಯನ್ನು ನೋಡಿ.
ಮಾರ್ಕ 9:46 ಮತ್ತಾ 17:21ರ ಪಾದಟಿಪ್ಪಣಿಯನ್ನು ನೋಡಿ.